ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಾತಿ, ಧರ್ಮ ಹಾಗೂ ಭೇದಭಾವಗಳನ್ನು ಮೀರಿ ಪ್ರತಿಯೊಬ್ಬರಲ್ಲೂ ‘ನಾನೊಬ್ಬ ಭಾರತೀಯ’ ಎಂಬ ಹೆಮ್ಮೆ ಮೂಡಬೇಕು. ಭಾರತೀಯತೆ ನಮ್ಮೆಲ್ಲರ ಮೊದಲ ಗುರುತಾಗಬೇಕು ಎಂದು ವಿಶೇಷ ವಕ್ತಾರ ಪ್ರಥಿಕ್ ಕುಂದಗೋಳ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವ ಸೇವಾ ಸಂಘದ ವತಿಯಿಂದ ಆ. ೧೪ರ ಮಧ್ಯರಾತ್ರಿ ೧೨ ಗಂಟೆಗೆ ಆಯೋಜಿಸಿದ್ದ ೮೦ನೇ ಸ್ವಾತಂತ್ರ್ಯೋತ್ಸವದ ವಿಶಿಷ್ಟ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ದೊರೆತು ಎಂಟು ದಶಕಗಳು ಕಳೆದರೂ ಜಕ್ಕಲಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಕಾಲದಷ್ಟೇ ಉತ್ಸಾಹ ಹಾಗೂ ದೇಶಭಕ್ತಿಯ ವಾತಾವರಣ ಕಂಡುಬರುತ್ತಿರುವುದು ಹೆಮ್ಮೆಯ ಸಂಗತಿ. ‘ನಾನು ಇರಲಿ, ಇಲ್ಲದಿರಲಿ ನನ್ನ ಭಾರತ ಬೆಳಗುತ್ತಿರಲಿ’ ಎಂಬ ಧ್ಯೇಯದೊಂದಿಗೆ ಯುವಕರು ನಿರಂತರವಾಗಿ ರಾಷ್ಟ್ರಭಕ್ತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಗ್ರಾಮದ ಸೌಭಾಗ್ಯವಾಗಿದೆ ಎಂದರು.
ದೇಶಭಕ್ತಿ ಎಂದರೆ ಕೇವಲ ಘೋಷಣೆ ಕೂಗುವುದಲ್ಲ. ದೇಶಕ್ಕಾಗಿ ಬದುಕನ್ನೇ ತ್ಯಾಗ ಮಾಡಿದ ಭಗತ್ಸಿಂಗ್, ಮದನ್ಲಾಲ್ ಧಿಂಗ್ರಾ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸುಭಾಷ್ಚಂದ್ರ ಬೋಸ್ ಸೇರಿದಂತೆ ಅನೇಕ ಮಹನೀಯರ ತ್ಯಾಗ, ಹೋರಾಟ ಹಾಗೂ ಆದರ್ಶಗಳನ್ನು ಅರಿತುಕೊಂಡು ದೇಶದ ಒಳಿತಿಗಾಗಿ ಬದುಕುವುದು ನಿಜವಾದ ದೇಶಭಕ್ತಿ ಎಂದು ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ಬ್ರಿಟಿಷರು ನೀಡಿದ ಭಿಕ್ಷೆಯಲ್ಲ. ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರೆತಿದೆ. ಇಂದು ಗಡಿಯಲ್ಲಿ ಸೈನಿಕರು ತಮ್ಮ ಎದೆಯನ್ನು ಗುಂಡಿಗೆ ಒಡ್ಡಿ ದೇಶವನ್ನು ಕಾಯುತ್ತಿದ್ದಾರೆ. ಅವರ ತ್ಯಾಗದಿಂದಲೇ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರುತ್ತಿದೆ ಎಂದರು.
ಜಕ್ಕಲಿ ಗ್ರಾಮದ ದೇಶಭಕ್ತಿಯ ಕಿಚ್ಚು ಮುಂದೊಂದು ದಿನ ದೆಹಲಿಯವರೆಗೂ ಮೊಳಗುವಂತಾಗಲಿ. ಯುವಕರು ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ಪ್ರಥಿಕ್ ಆಶಿಸಿದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದ ಮಕ್ಕಳ ಶಿಕ್ಷಣಕ್ಕಾಗಿ ಎರಡು ಎಕರೆ ಜಮೀನು ಭೂದಾನ ಮಾಡಿದ ಸಮಾಜಸೇವಕಿ ಹುಚ್ಚಮ್ಮ ಚೌದ್ರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಮಲ್ಲಪ್ಪ ಮುಗಳಿ, ಬಸವರಾಜ ಕೋರಿ, ನಿವೃತ್ತ ಗ್ರಾಮ ವಿದ್ಯುತ್ ಪ್ರತಿನಿಧಿ ಮಹೇಶ್ವರಯ್ಯ ಹಿರೇಮಠ ಹಾಗೂ ಯುವ ಸಾಧಕಿಯರಾದ ಪ್ರೀತಿ ಬುಳ್ಳಾ ಮತ್ತು ಸೃಷ್ಟಿ ಮೇಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಿವನಾಗಪ್ಪ ದೊಡ್ಡಮೇಟಿ ವಹಿಸಿದ್ದರು. ಶಿವರಾಜ ಮುಗಳಿ, ಮುತ್ತಣ್ಣ ಕಡಗದ, ಉಮೇಶ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಕ್ಕಳಿಂದ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನ್ಯಾಯವಾದಿ ವಿದ್ಯಾಧರ ಶಿರಗುಂಪಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ಬುಳ್ಳಾ ನಿರೂಪಿಸಿದರು.
ಮಧ್ಯರಾತ್ರಿಯಲ್ಲಿ ಮೊಳಗಿದ ದೇಶಭಕ್ತಿಯ ಘೋಷಣೆ
ಮಧ್ಯರಾತ್ರಿ ನಡೆದ ಈ ವಿಶಿಷ್ಟ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಗ್ರಾಮದ ೨ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ವಿಶೇಷ ಮೆರುಗು ನೀಡಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಹೆಸರುಗಳು, ‘ಭಾರತ ಮಾತಾ ಕೀ ಜೈ’, ‘ವಂದೇ ಮಾತರಂ’ ಘೋಷಣೆಗಳು ಮೊಳಗಿದವು.
ಮಧ್ಯರಾತ್ರಿಯ ನಿಶ್ಶಬ್ದತೆಯನ್ನು ದೇಶಭಕ್ತಿಯ ಘೋಷಣೆಗಳು ಭೇದಿಸಿದವು. ತ್ರಿವರ್ಣ ಧ್ವಜದ ಬೆಳಕಿನಲ್ಲಿ ಇಡೀ ಜಕ್ಕಲಿ ಗ್ರಾಮವೇ ರಾಷ್ಟ್ರಭಕ್ತಿಯ ಸಂಭ್ರಮದಲ್ಲಿ ಮಿಂದೆದ್ದ ದೃಶ್ಯ



