ಪಾಟ್ನಾ: ಬಿಹಾರದ ನವಾಡಾ ಜಿಲ್ಲೆಯಲ್ಲಿ ತಾಯಿ ಹಾಗೂ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮನೆಯ ಕೋಣೆಯಲ್ಲಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಅವರ ನಾಲ್ಕು ಹಾಗೂ ಎರಡು ವರ್ಷದ ಹೆಣ್ಣುಮಕ್ಕಳು ಹಾಸಿಗೆಯ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ಮಹಿಳೆಯನ್ನು ನಿದಾ ಖಾತೂನ್ (37) ಎಂದು ಗುರುತಿಸಲಾಗಿದೆ. ಅವರ ನಾಲ್ಕು ವರ್ಷದ ಪುತ್ರಿ ಸರಿಯಾ ಖಾತೂನ್ ಹಾಗೂ ಎರಡು ವರ್ಷದ ಪುತ್ರಿ ಸಿದ್ರಾ ಖಾತೂನ್ ಮೃತಪಟ್ಟಿದ್ದಾರೆ.
ಬಾಗಿಲು ತೆರೆಯದಿದ್ದಾಗ ಬೆಳಕಿಗೆ:
ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ. ಮನೆಯ ಕೋಣೆಯ ಬಾಗಿಲು ಬಹಳ ಸಮಯದಿಂದ ಒಳಗಿನಿಂದ ಮುಚ್ಚಿದ್ದನ್ನು ಕುಟುಂಬಸ್ಥರು ಗಮನಿಸಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕಿಟಕಿಯ ಮೂಲಕ ನೋಡಿದಾಗ, ಹಾಸಿಗೆಯ ಮೇಲೆ ಇಬ್ಬರು ಮಕ್ಕಳು ಮೃತಪಟ್ಟಿರುವುದು ಹಾಗೂ ನಿದಾ ಖಾತೂನ್ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೂವರು ಮೃತಪಟ್ಟಿರುವ ರೀತಿ ಅನುಮಾನಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಹಾಗೂ ಆತ್ಮಹತ್ಯೆ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ನಿದಾ ಖಾತೂನ್ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಅವರನ್ನು ಮೊದಲು ಹತ್ಯೆ ಮಾಡಿ ಬಳಿಕ ನೇಣು ಹಾಕಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅವರ ದೇಹದ ಕೆಲವು ಭಾಗಗಳು ಹಾಸಿಗೆಯನ್ನು ಸ್ಪರ್ಶಿಸುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸಾವಿನ ಸಂದರ್ಭದ ಕುರಿತು ಹಲವು ಅನುಮಾನಗಳು ಮೂಡಿವೆ.
ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮಕ್ಕಳ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿದಾ ಖಾತೂನ್ ಅವರ ಪತಿ ಮೊಹಮ್ಮದ್ ಶಾಹಿದ್ ಕಳೆದ ಒಂದು ವರ್ಷದಿಂದ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದು, ಅಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ನಿದಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಅತ್ತೆ-ಮಾವನ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಮೂವರ ಮೃತದೇಹಗಳನ್ನು ವಶಕ್ಕೆ ಪಡೆದು, ವಿಧಿವಿಜ್ಞಾನ ತಜ್ಞರ ಮೂಲಕ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸದ್ಯ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಮೂವರ ಸಾವಿನ ಹಿಂದಿರುವ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.



