ಹಗರಿಬೊಮ್ಮನಹಳ್ಳಿ: ಮೀನು ಹಿಡಿಯಲು ತುಂಗಭದ್ರಾ ನದಿಗೆ ತೆರಳಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದ ಬಳಿ ನಡೆದಿದೆ.
ನಾಪತ್ತೆಯಾಗಿದ್ದ ಮೂವರ ಪೈಕಿ ಓರ್ವನ ಶವ ಇದೀಗ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ನಾಪತ್ತೆಯಾದವರನ್ನು ರಾಜ (22), ಯಮನಪ್ಪ (20) ಹಾಗೂ ಅಜ್ಜಪ್ಪ (26) ಎಂದು ಗುರುತಿಸಲಾಗಿದೆ. ಮೂವರು ಮಂಗಳವಾರ ಮಧ್ಯಾಹ್ನ ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದರು ಎನ್ನಲಾಗಿದೆ.
ಆದರೆ ಸಂಜೆಯಾದರೂ ಮೂವರು ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಬಳಿಕ ಸಂಬಂಧಿಕರು ಹಾಗೂ ಕುಟುಂಬಸ್ಥರು ನದಿಯ ಸುತ್ತಮುತ್ತ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಹಗರಿಬೊಮ್ಮನಹಳ್ಳಿ ಪೊಲೀಸರು ಹಾಗೂ ಸ್ಥಳೀಯರು ನದಿಯ ಬಳಿ ತೆರಳಿ ಶೋಧ ಕಾರ್ಯ ಆರಂಭಿಸಿದ್ದಾರೆ. ಬಳಿಕ ಎಸ್ಡಿಆರ್ಎಫ್ ತಂಡವೂ ಸ್ಥಳಕ್ಕೆ ಆಗಮಿಸಿ ತುಂಗಭದ್ರಾ ನದಿ ಹಿನ್ನೀರಿನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಈ ವೇಳೆ ನಾಪತ್ತೆಯಾಗಿದ್ದ ಮೂವರ ಪೈಕಿ ಓರ್ವ ಯುವಕನ ಶವ ಪತ್ತೆಯಾಗಿದೆ. ಉಳಿದ ಇಬ್ಬರು ಯುವಕರಿಗಾಗಿ ಎಸ್ಡಿಆರ್ಎಫ್ ತಂಡ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ನಾಪತ್ತೆಯಾದ ಯುವಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕರು ನಾಪತ್ತೆಯಾಗಿರುವ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

