ಬೆಂಗಳೂರು: ಕುಡಿಯಲು ನೀರು ಕೊಡಲಿಲ್ಲ ಎಂಬ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಲಾರಿ ಕ್ಲೀನರ್ವೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಆರ್ಎಂಸಿ ಯಾರ್ಡ್ನಲ್ಲಿರುವ ಫ್ಯಾಕ್ಟರಿಯೊಂದರ ಬಳಿ ನಡೆದಿದೆ.
ಹತ್ಯೆಯಾದ ದುರ್ದೈವಿಯನ್ನು ಆಂಧ್ರಪ್ರದೇಶ ಮೂಲದ ಬರ್ಕತ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿ ಮೂಲದ ಸೀನಪ್ಪ ಎಂಬಾತನನ್ನು ಆರ್ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಬರ್ಕತ್ ಹಾಗೂ ಸೀನಪ್ಪ ಇಬ್ಬರೂ ಲಾರಿ ಕ್ಲೀನರ್ಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಧ್ಯಾಹ್ನ ಊಟದ ಬಳಿಕ ಸೀನಪ್ಪ, ಬರ್ಕತ್ ಬಳಿ ಕುಡಿಯಲು ನೀರು ಕೇಳಿದ್ದಾನೆ. ಆದರೆ ಬರ್ಕತ್ ನೀರು ನೀಡಲು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸೀನಪ್ಪ ಚಾಕುವಿನಿಂದ ಬರ್ಕತ್ಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಪರಿಣಾಮ ಬರ್ಕತ್ ಮೃತಪಟ್ಟಿದ್ದಾನೆ.
ಕೊಲೆ ಬಳಿಕ ಆರೋಪಿ ಸೀನಪ್ಪ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಕುರಿತು ಲಾರಿ ಚಾಲಕರಿಂದ ಮಾಹಿತಿ ಪಡೆದ ಆರ್ಎಂಸಿ ಯಾರ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



