ಬೆಂಗಳೂರು: ಡೈನಾಮಿಕ್ ಸ್ಟಾರ್ ದೇವರಾಜ್ ಕುಟುಂಬದಲ್ಲಿ ಮತ್ತೊಂದು ಸಂಭ್ರಮ ಮನೆಮಾಡಿದೆ. ದೇವರಾಜ್ ಅವರ ಕಿರಿಯ ಪುತ್ರ ಹಾಗೂ ನಟ ಪ್ರಣಮ್ ದೇವರಾಜ್ ಅವರು ತಮ್ಮ ಪ್ರೇಯಸಿ ನಮಿತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಆಪ್ತರು, ಕುಟುಂಬದ ಹಿರಿಯರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಣಮ್ ಮತ್ತು ನಮಿತಾ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ತಮ್ಮ ಸಂಬಂಧವನ್ನು ವೈವಾಹಿಕ ಜೀವನದತ್ತ ಕೊಂಡೊಯ್ಯುವ ಅಧಿಕೃತ ಹೆಜ್ಜೆ ಇಟ್ಟಿದ್ದಾರೆ.
ಈ ವಿಶೇಷ ಸಮಾರಂಭದ ಉಸ್ತುವಾರಿಯನ್ನು ಪ್ರಣಮ್ ಅವರ ಸಹೋದರ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ವಹಿಸಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಆತ್ಮೀಯರು ನವಜೋಡಿಗೆ ಶುಭ ಹಾರೈಸಿದರು.
ಪ್ರಣಮ್ ಮತ್ತು ನಮಿತಾ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಎಂದು ಮೂಲಗಳು ತಿಳಿಸಿದ್ದು, ವಿವಾಹದ ದಿನಾಂಕ ಇನ್ನಷ್ಟೇ ಅಧಿಕೃತವಾಗಿ ಪ್ರಕಟವಾಗಬೇಕಿದೆ.
ಪ್ರಣಮ್ ದೇವರಾಜ್ ‘ಕುಮಾರಿ 21 ಎಫ್’ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದರು. ಬಳಿಕ ‘ಸನ್ ಆಫ್ ಮುತ್ತಣ್ಣ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಕಮರ್ಷಿಯಲ್ ಯಶಸ್ಸಿನ ನಿರೀಕ್ಷೆಯಲ್ಲಿರುವ ಪ್ರಣಮ್, ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಿದ್ದಾರೆ.
ಇದೀಗ ಸಿನಿಮಾದಾಚೆಗಿನ ಬದುಕಿನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿರುವ ಪ್ರಣಮ್ ದೇವರಾಜ್ ಮತ್ತು ನಮಿತಾ ಜೋಡಿಗೆ ಅಭಿಮಾನಿಗಳು ಹಾಗೂ ಸ್ಯಾಂಡಲ್‌ವುಡ್‌ನಿಂದ ಶುಭಾಶಯಗಳು ಹರಿದುಬರುತ್ತಿವೆ.



