ಚೆನ್ನೈ: ಟಿವಿಕೆ ನೇತೃತ್ವದ ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ಎರಡು ಸ್ಥಳಗಳನ್ನು ಶಾರ್ಟ್ಲಿಸ್ಟ್ ಮಾಡಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪರಂದೂರು ಏರ್ಪೋರ್ಟ್ ಯೋಜನೆಯನ್ನು ಅಧಿಕೃತವಾಗಿ ಕೈಬಿಟ್ಟ ನಂತರ ಈ ಬೆಳವಣಿಗೆ ನಡೆದಿದೆ ಎಂದು ಉನ್ನತ ಮೂಲಗಳನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಹೊಸ ವಿಮಾನ ನಿಲ್ದಾಣಕ್ಕಾಗಿ ಸಿಎಂ ವಿಜಯ್ ನೇತೃತ್ವದ ಸರ್ಕಾರ ಮಾನೆಲ್ಲೂರು ಹಾಗೂ ಚೆಯ್ಯೂರು ಸ್ಥಳಗಳನ್ನು ಶಾರ್ಟ್ಲಿಸ್ಟ್ ಮಾಡಿದೆ. ಪರಂದೂರು ಯೋಜನೆ ಕೈಬಿಟ್ಟ ಒಂದೇ ವಾರದಲ್ಲಿ ಈ ಎರಡೂ ಸ್ಥಳಗಳನ್ನು ಗುರುತಿಸಲಾಗಿದೆ.
ಮಾನೆಲ್ಲೂರು ಚೆನ್ನೈನಿಂದ ಸುಮಾರು 60 ಕಿ.ಮೀ. ದೂರದಲ್ಲಿದ್ದರೆ, ಚೆಯ್ಯೂರು ನಗರದಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಪ್ರಸ್ತಾವಿತ ವಿಮಾನ ನಿಲ್ದಾಣ ಚೆನ್ನೈ ಮಹಾನಗರ ಪ್ರದೇಶಕ್ಕೆ (ಸಿಎಂಎ) ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ.
ಚೆನ್ನೈ ಬಳಿಯ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ಕೈಬಿಟ್ಟ ನಿರ್ಧಾರ ಘೋಷಿಸಿದ ನಂತರ ವಿಜಯ್ ಸರ್ಕಾರ ವಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿದೆ.



