ಬೆಂಗಳೂರು: ರಾಜ್ಯ ಸರ್ಕಾರದ ನೂರು ದಿನಗಳ ಕಾರ್ಯಕ್ರಮದ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಶತದಿನೋತ್ಸವವಲ್ಲ, ಸರ್ಕಾರದ ಸಾಧನೆಯ ಶೂನ್ಯತೆಯನ್ನು ದೀಪಾಲಂಕಾರದ ಹಿಂದೆ ಮುಚ್ಚುವ ವ್ಯರ್ಥ ಪ್ರದರ್ಶನ ಎಂದು ಅವರು ಟೀಕಿಸಿದ್ದಾರೆ.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಸರ್ಕಾರದ ಸಾಧನೆಯ ಖಾತೆ ಖಾಲಿಯಾಗಿದೆ. ಆದರೆ ಸಂಭ್ರಮದ ಖರ್ಚು ಮಾತ್ರ ಭಾರಿಯಾಗಿದೆ ಎಂದು ಆರೋಪಿಸಿದ್ದಾರೆ. 100 ದಿನಗಳ ಆಡಳಿತಕ್ಕೆ ಬ್ಯಾಂಕ್ವೆಟ್ ಹಾಲ್, ಭರ್ಜರಿ ವೇದಿಕೆ, ವಿದ್ಯುತ್ ದೀಪಾಲಂಕಾರ ಹಾಗೂ ಕೋಟ್ಯಂತರ ರೂಪಾಯಿ ಪ್ರಚಾರಕ್ಕೆ ಖರ್ಚು ಮಾಡಲಾಗುತ್ತಿದೆ. ಇಷ್ಟೆಲ್ಲಾ ಸಂಭ್ರಮ ಯಾವ ಸಾಧನೆಗಾಗಿ ಎಂದು ಪ್ರಶ್ನಿಸಿದ್ದಾರೆ.
ಜನರಿಗೆ ತೋರಿಸಲು ಒಂದೇ ಒಂದು ದೊಡ್ಡ ಸಾಧನೆಯೂ ಇಲ್ಲದಿರುವಾಗ, ಸರ್ಕಾರದ ವೈಫಲ್ಯಗಳನ್ನೇ ಸಾಧನೆಗಳೆಂದು ಬಿಂಬಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆಯೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಯುವಜನರಿಗೆ ಉದ್ಯೋಗ ಸಿಗಬೇಕಾದರೆ ಅರ್ಹತೆಗಿಂತ ಲಂಚವೇ ಮುಖ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಮಯಕ್ಕೆ ಪಠ್ಯಪುಸ್ತಕಗಳು ಸಿಗುತ್ತಿಲ್ಲ. ಶಾಲಾ ಕೊಠಡಿಗಳು ಸೋರುತ್ತಿದ್ದು, ಕೆಲವು ಕಡೆ ಕುಸಿಯುವ ಸ್ಥಿತಿಯಲ್ಲಿವೆ. ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್ಗಳು ಒಂದೇ ದಿನದಲ್ಲಿ ಹರಿದುಹೋಗುತ್ತಿವೆ ಎಂದು ಟೀಕಿಸಿದ್ದಾರೆ.
ಬೆಳೆನಷ್ಟದಿಂದ ಕಂಗಾಲಾಗಿರುವ ರೈತರಿಗೆ ಬರ ಪರಿಹಾರವೂ ಇಲ್ಲ, ಸರ್ಕಾರದ ಸಮರ್ಪಕ ಸ್ಪಂದನೆಯೂ ಇಲ್ಲ. ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಆಸರೆಯಾಗಿರುವ ಪಿಂಚಣಿಗೂ ಕತ್ತರಿ ಹಾಕಲಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಹಾಗೂ ತೆರಿಗೆಗಳ ಹೊರೆಯಿಂದ ಸಾಮಾನ್ಯ ಜನರ ಬದುಕು ದುಬಾರಿಯಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳು ಹಾಗೂ ರಸ್ತೆಯಂಚಿನಲ್ಲಿರುವ ಕಸದ ರಾಶಿಯನ್ನು ಉಲ್ಲೇಖಿಸಿ, ‘ಬ್ರ್ಯಾಂಡ್ ಬೆಂಗಳೂರು’ ಎಂದು ಹೇಳಿ ‘ಬ್ರೋಕನ್ ಬೆಂಗಳೂರು’ ನೀಡಲಾಗಿದೆ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಜನರ ಬದುಕು ಕತ್ತಲಲ್ಲಿದ್ದರೆ, ಬ್ಯಾಂಕ್ವೆಟ್ ಹಾಲ್ನಲ್ಲಿ ಮಾತ್ರ ದೀಪಾಲಂಕಾರ ಮಾಡಲಾಗಿದೆ. ರಾಜ್ಯಕ್ಕೆ ಬೇಕಾಗಿರುವುದು ಅಭಿವೃದ್ಧಿಯ ಬೆಳಕು, ಆದರೆ ಸರ್ಕಾರ ವೇದಿಕೆಯ ಥಳಕನ್ನು ತೋರಿಸುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ಯುವಕರಿಗೆ ಉದ್ಯೋಗ ಬೇಕಾಗಿದ್ದು, ಸರ್ಕಾರ ಜಾಹೀರಾತು ನೀಡುತ್ತಿದೆ. ರೈತರಿಗೆ ಪರಿಹಾರ ಬೇಕಾಗಿದ್ದು, ಸಮಾವೇಶ ನಡೆಸಲಾಗುತ್ತಿದೆ. ಮಹಿಳೆಯರಿಗೆ ಸಮಯಕ್ಕೆ ಹಣ ಬೇಕಾಗಿದ್ದು, ಸರ್ಕಾರ ಫೋಟೋಶೂಟ್ನಲ್ಲಿ ತೊಡಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸಾಧನೆ ತೋರಿಸಲು ಆಗಲಿಲ್ಲ, ಸಿಂಗಾರ ತೋರಿಸುತ್ತಿದ್ದಾರೆ. ಅಭಿವೃದ್ಧಿ ತೋರಿಸಲು ಆಗಲಿಲ್ಲ, ದೀಪಾಲಂಕಾರ ತೋರಿಸುತ್ತಿದ್ದಾರೆ. ಆಡಳಿತ ತೋರಿಸಲು ಆಗಲಿಲ್ಲ, ಆಡಂಬರ ತೋರಿಸುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ.
‘ಕೆಲಸ ಶೂನ್ಯ, ಪ್ರಚಾರ ಭರಪೂರ. ಸಾಧನೆ ಶೂನ್ಯ, ಸಡಗರ ಭರ್ಜರಿ. ಜನರ ಸಂಕಷ್ಟ ಅಪಾರ, ಸರ್ಕಾರದ ಸಂಭ್ರಮ ಅದ್ದೂರಿ’ ಎಂದು ಆರ್. ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಬೆಳಗಲಿಲ್ಲ, ಸರ್ಕಾರದ ವೇದಿಕೆ ಮಾತ್ರ ಬೆಳಗಿದೆ. ಜನರ ಬದುಕು ಬದಲಾಗಲಿಲ್ಲ, ಸರ್ಕಾರದ ಪ್ರಚಾರ ಮಾತ್ರ ಕಂಗೊಳಿಸಿದೆ. ಹೀಗಾಗಿ ಇದು ಶತದಿನೋತ್ಸವವಲ್ಲ, ಸಾಧನೆಯ ಶೂನ್ಯತೆಯನ್ನು ದೀಪಾಲಂಕಾರದ ಹಿಂದೆ ಮುಚ್ಚುವ ವ್ಯರ್ಥ ಪ್ರದರ್ಶನ ಎಂದು ಕಾಂಗ್ರೆಸ್ ಸರ್ಕಾರವನ್ನು ಆರ್. ಅಶೋಕ್ ಟೀಕಿಸಿದ್ದಾರೆ.



