ನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ (Social Media) ಇದೀಗ ಭಾರಿ ಸದ್ದು ಮಾಡುತ್ತಿರುವ ’80ರ ದಶಕದ ಫೋಟೋ ಎಡಿಟಿಂಗ್’ (80s Photo Editing) ಟ್ರೆಂಡ್ ಕುರಿತು ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವಂತೆ ನೆಲಮಂಗಲ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸರು (Madanayakanahalli Police) ಸೂಚಿಸಿದ್ದಾರೆ. ಫೋಟೋ ಎಡಿಟಿಂಗ್ ಹೆಸರಿನಲ್ಲಿ ಸೈಬರ್ ವಂಚಕರು (Cyber Fraudsters) ಸಾರ್ವಜನಿಕರನ್ನು ವಂಚಿಸುವ ಭಾರಿ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕೆಂದು ಸೈಬರ್ ಸುರಕ್ಷತೆಯ ಜಾಗೃತಿ ಮೂಡಿಸಿದ್ದಾರೆ.
ಅಪರಿಚಿತ ಆ್ಯಪ್ ಹಾಗೂ ಲಿಂಕ್‌ಗಳ ಬಗ್ಗೆ ತೀವ್ರ ಎಚ್ಚರ: 80ರ ದಶಕದ ಫೋಟೋಗಳ ಮಾದರಿಯಲ್ಲಿ ತಮ್ಮ ಫೋಟೋಗಳನ್ನು ಎಡಿಟ್ ಮಾಡಿಸಿಕೊಳ್ಳಲು ಸಾರ್ವಜನಿಕರು ವಿವಿಧ ಆ್ಯಪ್‌ಗಳು ಹಾಗೂ ಆನ್‌ಲೈನ್ ಲಿಂಕ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಇಂತಹ ಸಂದರ್ಭಗಳನ್ನು ಬಂಡವಾಳ ಮಾಡಿಕೊಳ್ಳುವ ಸೈಬರ್ ಅಪರಾಧಿಗಳು ಅಪರಿಚಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಸುವುದು ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯುವಂತೆ ಮಾಡಿ ಸೈಬರ್ ವಂಚನೆ ಎಸಗುವ ಅಪಾಯವಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಖಾಸಗಿ ಮಾಹಿತಿ ಹಾಗೂ ಬ್ಯಾಂಕ್ ವಿವರ ಹಂಚಿಕೊಳ್ಳಬೇಡಿ: ಫೋಟೋ ಎಡಿಟಿಂಗ್ ಅಥವಾ ಹೊಸ ಮಾದರಿಯ ಫೋಟೋ ಸೃಷ್ಟಿಸುವ ನೆಪದಲ್ಲಿ ಕೆಲ ಆ್ಯಪ್‌ಗಳು ಹಾಗೂ ಅಪರಿಚಿತ ವ್ಯಕ್ತಿಗಳು ವೈಯಕ್ತಿಕ ಮಾಹಿತಿ ಮತ್ತು ಅಧಿಕೃತ ದಾಖಲೆಗಳ ವಿವರಗಳನ್ನು ಕೇಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾಸ್‌ವರ್ಡ್, ಬ್ಯಾಂಕ್ ಖಾತೆ ಸೇರಿದಂತೆ ಯಾವುದೇ ರೀತಿಯ ಸೂಕ್ಷ್ಮ ಹಾಗೂ ಖಾಸಗಿ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳು ಅಥವಾ ಅಧಿಕೃತವಲ್ಲದ ಆ್ಯಪ್‌ಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಪೊಲೀಸ್ ಠಾಣೆಯಿಂದ ಜಾಗೃತಿ ಪ್ರಕಟಣೆ: ಯಾವುದೇ ಆನ್‌ಲೈನ್ ಸೇವೆಗಳನ್ನು ಬಳಸುವ ಮುನ್ನ ಆ ಆ್ಯಪ್ ಅಥವಾ ವೆಬ್‌ಸೈಟ್‌ನ ವಿಶ್ವಾಸಾರ್ಹತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿಬರುವ ಟ್ರೆಂಡಿಂಗ್ ವಿಷಯಗಳನ್ನು ಆಮಿಷವಾಗಿ ಬಳಸಿಕೊಂಡು ಸೈಬರ್ ವಂಚಕರು ಜನರನ್ನು ಸೆಳೆಯುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಬೇಕು. ಈ ಕುರಿತು ಮಾದನಾಯಕನಹಳ್ಳಿ ಪೊಲೀಸರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ತಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೋರಿದ್ದಾರೆ.



