ಬೆಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ ಅವರು ಎಪಿಎಂಸಿಗೆ ದಿಢೀರ್ ಭೇಟಿ ನೀಡಿ ಬಾಲಕಾರ್ಮಿಕರ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಬೆಂಗಳೂರು ಪೊಲೀಸರು ನಗರದಾದ್ಯಂತ ಸ್ಪೆಷಲ್ ಡ್ರೈವ್ ಆರಂಭಿಸಿದ್ದಾರೆ. ಹೋಟೆಲ್, ಅಂಗಡಿ, ಗ್ಯಾರೇಜ್, ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧೆಡೆ ವ್ಯಾಪಕ ಪರಿಶೀಲನೆ ನಡೆಸಲಾಗಿದೆ.
ಈ ವೇಳೆ ಹಲವು ಕಡೆಗಳಲ್ಲಿ ಬಾಲಕಾರ್ಮಿಕರು ಪತ್ತೆಯಾಗಿದ್ದು, ಇದುವರೆಗೆ 17 ಬಾಲಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಉತ್ತರ ವಿಭಾಗವೊಂದರಲ್ಲೇ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ನ್ಯಾಮಗೌಡ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಎಪಿಎಂಸಿಗೆ ದಿಢೀರ್ ಭೇಟಿ ನೀಡಿದ್ದ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬಾಲಕಾರ್ಮಿಕನೊಬ್ಬ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿತ್ತು. ಈ ವೇಳೆ ಸ್ಥಳೀಯ ಪೊಲೀಸರನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದರು.
ಇದರ ಜೊತೆಗೆ, ಮಹಿಳಾ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನೇ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಕೆಲವರು ಸಿಎಂ ಗಮನಕ್ಕೆ ತಂದಿದ್ದರು. ಈ ದೂರಿನ ಬೆನ್ನಲ್ಲೇ ಇಡೀ ಬೆಂಗಳೂರಿನಲ್ಲಿ ಬಾಲಕಾರ್ಮಿಕರ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸುವಂತೆ ಸಿಎಂ ಸೂಚನೆ ನೀಡಿದ್ದರು.
ಸಿಎಂ ಸೂಚನೆ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ನಗರದ ವಿವಿಧೆಡೆ ಬಾಲಕಾರ್ಮಿಕ ಪದ್ಧತಿ ಇನ್ನೂ ಮುಂದುವರಿದಿರುವುದು ಬೆಳಕಿಗೆ ಬಂದಿದೆ.



