HomeCrime Newsಶೇಂಗಾ ಮಾರಾಟದ ₹48 ಸಾವಿರ ಕಳ್ಳರ ಪಾಲು: ಕಣ್ಣೀರಿಟ್ಟ ರೈತ

ಶೇಂಗಾ ಮಾರಾಟದ ₹48 ಸಾವಿರ ಕಳ್ಳರ ಪಾಲು: ಕಣ್ಣೀರಿಟ್ಟ ರೈತ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ; ಬರದ ನಡುವೆಯೂ ಎರಡು ಎಕರೆ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದ ಶೇಂಗಾವನ್ನು ಮಾರಾಟ ಮಾಡಿ ಬಂದ ₹48 ಸಾವಿರ ಹಣವನ್ನು ಕಳ್ಳರು ದೋಚಿದ ಘಟನೆ ಶುಕ್ರವಾರ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಣ ಕಳೆದುಕೊಂಡ ರೈತ, ಹಣವನ್ನು ಪತ್ತೆಹಚ್ಚಿ ಕೊಡಿಸುವಂತೆ ಪೊಲೀಸ್ ಠಾಣೆಗೆ ಬಂದು ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

ಹಾವೇರಿ ತಾಲೂಕಿನ ಕುರಗುಂದ ಗ್ರಾಮದ ರೈತ ಹನಮಂತಪ್ಪ ಗೂಳಪ್ಪ ಅನ್ನಿ ಹಣ ಕಳೆದುಕೊಂಡವರು. ಎರಡು ಎಕರೆ ಜಮೀನಿನಲ್ಲಿ ಬೆಳೆದ 18 ಚೀಲ ಶೇಂಗಾವನ್ನು ಗುರುವಾರ ಲಕ್ಷ್ಮೇಶ್ವರ ಎಪಿಎಂಸಿಯಲ್ಲಿ ಮಾರಾಟ ಮಾಡಿದ್ದರು. ಇದರಿಂದ ಬಂದ ಸುಮಾರು ₹48 ಸಾವಿರವನ್ನು ಕೃಷಿಗಾಗಿ ಮಾಡಿದ್ದ ಸಾಲ ತೀರಿಸುವುದು ಹಾಗೂ ಕುಟುಂಬ ನಿರ್ವಹಣೆಗೆ ಬಳಸಿಕೊಳ್ಳುವ ಉದ್ದೇಶದಿಂದ ಜೋಪಾನವಾಗಿ ಇಟ್ಟುಕೊಂಡಿದ್ದರು.

ಎಪಿಎಂಸಿಯಿಂದ ಹಣ ಪಡೆದು ಊರಿಗೆ ತೆರಳಲು ಲಕ್ಷ್ಮೇಶ್ವರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ಹತ್ತುವ ವೇಳೆ ಕಳ್ಳರು ಹೊಂಚು ಹಾಕಿ ಅವರ ಕಿಸೆ ಕತ್ತರಿಸಿ ಹಣ ದೋಚಿದ್ದಾರೆ ಎನ್ನಲಾಗಿದೆ. ಟಿಕೆಟ್ ಪಡೆಯುವ ಸಂದರ್ಭದಲ್ಲಿ ಕಿಸೆಗೆ ಕೈಹಾಕಿದಾಗ ಹಣ ಕಾಣಿಸದಿರುವುದು ಗಮನಕ್ಕೆ ಬಂದಿದೆ. ಕಿಸೆ ಕತ್ತರಿಸಿರುವುದು ಕಂಡು ಆಘಾತಕ್ಕೊಳಗಾದ ಅವರು ಬಸ್‌ನಲ್ಲೇ ಕುಸಿದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ರೈತನ ಸ್ಥಿತಿ ಕಂಡು ಸಹ ಪ್ರಯಾಣಿಕರು ಹಾಗೂ ಶೇಂಗಾ ಮಾರಾಟಕ್ಕೆ ಬಂದಿದ್ದ ಮತ್ತೊಬ್ಬ ರೈತ ಸಮಾಧಾನಪಡಿಸಿ ಧೈರ್ಯ ತುಂಬಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಿ ಬಂದ ಹಣ ಕಳೆದುಕೊಂಡ ನೋವಿನಿಂದ ಹನಮಂತಪ್ಪ ತೀವ್ರ ಬೇಸರಗೊಂಡಿದ್ದಾರೆ.

ಹಣ ಕಳೆದುಕೊಂಡ ಬಳಿಕ ಮನೆಗೆ ತೆರಳಿದ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದ್ದು, ಕುಟುಂಬಸ್ಥರು ಸಮಾಧಾನಪಡಿಸಿದ್ದಾರೆ. ಶುಕ್ರವಾರ ಪೊಲೀಸ್ ಠಾಣೆಗೆ ಆಗಮಿಸಿದ ಹನಮಂತಪ್ಪ, ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಕಳ್ಳರು ದೋಚಿದ್ದಾರೆ. ಹಣವನ್ನು ಪತ್ತೆಹಚ್ಚಿ ವಾಪಸ್ ಕೊಡಿಸಬೇಕು ಎಂದು ಪೊಲೀಸರ ಮುಂದೆ ಕಣ್ಣೀರಿಟ್ಟು ಮನವಿ ಮಾಡಿದರು.

ಪೊಲೀಸರು ರೈತನಿಂದ ಘಟನೆಯ ಮಾಹಿತಿ ಪಡೆದು, ಕಳ್ಳರ ಪತ್ತೆಗೆ ಕ್ರಮ ಕೈಗೊಂಡು ಹಣ ಹುಡುಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಹಣ, ಸರ, ಮೊಬೈಲ್ ಸೇರಿದಂತೆ ಪ್ರಯಾಣಿಕರ ಬೆಲೆಬಾಳುವ ವಸ್ತುಗಳ ಕಳ್ಳತನದ ಘಟನೆಗಳು ಪದೇಪದೇ ನಡೆಯುತ್ತಿವೆ. ಬಸ್ ಹತ್ತುವ ಹಾಗೂ ಇಳಿಯುವ ವೇಳೆ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳ್ಳತನ ನಡೆಸುವವರ ಮೇಲೆ ಪೊಲೀಸರು ನಿಗಾ ವಹಿಸಬೇಕು. ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸುವುದು, ಸಿಸಿಟಿವಿ ಕ್ಯಾಮೆರಾಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ರೈತರು ಹಾಗೂ ನಾಗರಿಕರು ಒತ್ತಾಯಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img