ಚಾಮರಾಜನಗರ: ಜಿಲ್ಲೆಯ ಹನೂರು ಪಟ್ಟಣದ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ನಡುವೆ ಉಂಟಾದ ಮುಖಾಮುಖಿ ಢಿಕ್ಕಿಯಲ್ಲಿ 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹನೂರು ಪಟ್ಟಣದ ಹೊರವಲಯದಲ್ಲಿರುವ ಮಹದೇಶ್ವರ ಐಟಿಐ ಕಾಲೇಜಿನ ಸಮೀಪ ಈ ದುರಂತ ನಡೆದಿದೆ. ಅಪಘಾತದಲ್ಲಿ ಸುವರ್ಣ, ಲೋಕೇಶ್, ಶ್ರೇಯಾ, ರುಕ್ಮಿಣಿ, ಮಂಜೇಶ್, ಭಾಗ್ಯಮ್ಮ, ಮಹಾದೇವ, ಮನ್ಸೂರ್, ಮಹಮ್ಮದ್ ದೊಫಿ ಹಾಗೂ ನಿಜಾವುದ್ದಿನ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಒಂದು ಕಾರಿನಲ್ಲಿದ್ದ ಪ್ರಯಾಣಿಕರು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದತ್ತ ತೆರಳುತ್ತಿದ್ದರು. ಮತ್ತೊಂದು ಕಾರಿನಲ್ಲಿದ್ದವರು ಕೊಳ್ಳೇಗಾಲದ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಎರಡೂ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಕಾರುಗಳು ತೀವ್ರವಾಗಿ ಜಜ್ಜಲ್ಪಟ್ಟಿದ್ದು, ಗಾಯಾಳುಗಳ ಪೈಕಿ ಏಳು ಜನರ ಕೈಕಾಲುಗಳು ಮುರಿದು ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



