HomeCrime Newsತಾಯಿಯನ್ನೇ ಕೊಂದು ಮಂಚದಿಂದ ಬಿದ್ದಿದ್ದಾಳೆಂದು ನಾಟಕ; ಮರಣೋತ್ತರ ಪರೀಕ್ಷೆಯಿಂದ ಬಯಲಾಯ್ತು ಕೊಲೆ ರಹಸ್ಯ!

ತಾಯಿಯನ್ನೇ ಕೊಂದು ಮಂಚದಿಂದ ಬಿದ್ದಿದ್ದಾಳೆಂದು ನಾಟಕ; ಮರಣೋತ್ತರ ಪರೀಕ್ಷೆಯಿಂದ ಬಯಲಾಯ್ತು ಕೊಲೆ ರಹಸ್ಯ!

For Dai;y Updates Join Our whatsapp Group

ಬೆಂಗಳೂರು: ಹೆತ್ತ ತಾಯಿಯನ್ನೇ ಕೊಂದು, ಆಕೆ ಮಂಚದಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ನಂಬಿಸುವ ಪ್ರಯತ್ನ. ಅಂತ್ಯಕ್ರಿಯೆಗೂ ಸಿದ್ಧವಾಗಿದ್ದ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಬಯಲಾಯ್ತು ಕೊಲೆ ರಹಸ್ಯ! ಹೌದು… ಬೆಂಗಳೂರಿನ ಕಾಡುಗೋಡಿ ಪೊಲೀಸರ ಸಮಯೋಚಿತ ತನಿಖೆಯಿಂದ ರೋಚಕ ಕೊಲೆ ಪ್ರಕರಣವೊಂದು ಬಯಲಾಗಿದೆ.

ಕಾಡುಗೋಡಿಯ ಬೇವಿನಮರ ಕಾಲೋನಿಯಲ್ಲಿ ಸೆಪ್ಟೆಂಬರ್ 25ರಂದು ಈ ಘಟನೆ ನಡೆದಿತ್ತು. 24ರ ರಾತ್ರಿ 60 ವರ್ಷದ ಭಾಗ್ಯಮ್ಮ ಮೃತಪಟ್ಟಿದ್ದರು. ಮರುದಿನ ಕುಟುಂಬಸ್ಥರು ಮತ್ತು ಸಂಬಂಧಿಕರು ಸೇರಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಭಾಗ್ಯಮ್ಮ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಡುಗೋಡಿ ಪೊಲೀಸರು ನೇರವಾಗಿ ಅಂತ್ಯಕ್ರಿಯೆ ಸ್ಥಳಕ್ಕೆ ತೆರಳಿದ್ದರು.

ಆದರೆ, ಕುಟುಂಬಸ್ಥರು ಮಾತ್ರ ಭಾಗ್ಯಮ್ಮ ಅವರು ಮಂಚದ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ. ಇದು ಅಸಹಜ ಸಾವು, ಯಾವುದೇ ಅನುಮಾನವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದರು. ಇನ್ನೇನು ಅಂತ್ಯಕ್ರಿಯೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಪೊಲೀಸರು ಕುಟುಂಬಸ್ಥರನ್ನು ಮನವೊಲಿಸಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಅಂದೇ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಆದರೆ, ಇತ್ತೀಚೆಗೆ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

‘ಡೆತ್ ಡ್ಯೂ ಟು ಹೆಡ್ ಇಂಜ್ಯೂರಿ’ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿತ್ತು. ಅಷ್ಟೇ ಅಲ್ಲ, ಭಾಗ್ಯಮ್ಮ ಅವರ ದೇಹದ 12 ಕಡೆ ಗಾಯಗಳಾಗಿರುವುದು ಕೂಡ ವರದಿಯಲ್ಲಿ ಪತ್ತೆಯಾಗಿತ್ತು. ಮಂಚದಿಂದ ಬಿದ್ದು ಮೃತಪಟ್ಟಿದ್ದರೆ ದೇಹದ 12 ಕಡೆ ಇಷ್ಟೊಂದು ಗಾಯಗಳಾಗಲು ಹೇಗೆ ಸಾಧ್ಯ ಎಂಬ ಅನುಮಾನ ಪೊಲೀಸರಿಗೆ ಮೂಡಿತ್ತು.

ಹೀಗಾಗಿ ಕಾಡುಗೋಡಿ ಪೊಲೀಸರು ಸುತ್ತಮುತ್ತಲಿನವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಭಾಗ್ಯಮ್ಮ ಅವರ ಮನೆಯಲ್ಲಿ 24ರಂದು ಗಲಾಟೆ ನಡೆದಿದ್ದ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಿಕ್ಕಿದೆ. ಇದಾದ ಬಳಿಕ ಭಾಗ್ಯಮ್ಮ ಅವರ ಮೂರನೇ ಪುತ್ರ ಬಾಲಾಜಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಾಲಾಜಿ ತಾಯಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ತಾಯಿಯನ್ನು ಕೊಲೆ ಮಾಡಲು ಮೂರು ಕಾರಣಗಳನ್ನು ಬಾಲಾಜಿ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.

ಮೊದಲ ಕಾರಣ…

ಒಬ್ಬ ವ್ಯಕ್ತಿ ಆಗಾಗ್ಗೆ ತಮ್ಮ ಮನೆ ಬಳಿ ಬಂದು ಕುಳಿತುಕೊಳ್ಳುತ್ತಿದ್ದನಂತೆ. ಆ ವ್ಯಕ್ತಿ ಮತ್ತು ತನ್ನ ತಾಯಿ ಬಗ್ಗೆ ಏರಿಯಾದವರು ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಇದರಿಂದ ಬಾಲಾಜಿ ಕೋಪಗೊಂಡಿದ್ದ ಎಂದು ತಿಳಿದುಬಂದಿದೆ.

ಎರಡನೇ ಕಾರಣ…

ಗಂಡನ ಸಾವಿನ ಬಳಿಕ ಭಾಗ್ಯಮ್ಮ ಅವರಿಗೆ ಕುಡಿತದ ಚಟ ಇತ್ತು ಎಂದು ಬಾಲಾಜಿ ಆರೋಪಿಸಿದ್ದಾನೆ. ಬೆಳಗ್ಗೆಯಿಂದಲೇ ಮದ್ಯಪಾನ ಮಾಡಿ ಕಿರಿಕಿರಿ ನೀಡುತ್ತಿದ್ದರು ಎಂಬ ಕಾರಣವನ್ನೂ ಆತ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.

ಮೂರನೇ ಕಾರಣ…

ತಾಯಿಯ 32 ಗ್ರಾಂ ಚಿನ್ನವನ್ನು ಬಾಲಾಜಿ ಅಡಮಾನ ಇಟ್ಟಿದ್ದ ಎನ್ನಲಾಗಿದೆ. ಆ ಚಿನ್ನವನ್ನು ಬಿಡಿಸಿಕೊಡುವಂತೆ ಭಾಗ್ಯಮ್ಮ ಪದೇಪದೇ ಕೇಳುತ್ತಿದ್ದರು. ಇದೇ ವಿಚಾರದಲ್ಲಿ ಕೋಪಗೊಂಡು ತಾಯಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಬಾಲಾಜಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿಯನ್ನು ಕೊಂದು, ಮಂಚದಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದ ಪ್ರಕರಣವನ್ನು ಕಾಡುಗೋಡಿ ಪೊಲೀಸರು ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಮೂಲಕ ಬೇಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತ ಭಾಗ್ಯಮ್ಮ ಅವರ ಪುತ್ರ ಬಾಲಾಜಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img