ದುಬೈ: ಯುಎಇನಲ್ಲಿ ನಡೆಯಲಿರುವ ಅಫ್ಘಾನಿಸ್ತಾನ್ ಪ್ರೀಮಿಯರ್ ಲೀಗ್ (APL) ಐದನೇ ಆವೃತ್ತಿಯ ಆಟಗಾರರ ಡ್ರಾಫ್ಟ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಬಾರಿ ಹಲವು ವಿದೇಶಿ ಸ್ಟಾರ್ ಆಟಗಾರರು ವಿವಿಧ ಫ್ರಾಂಚೈಸಿಗಳ ಪಾಲಾಗಿದ್ದರೆ, ಭಾರತದ ಮೂವರು ಅನುಭವಿ ಆಟಗಾರರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಿಸಿಲ್ಲ. ಹೀಗಾಗಿ ವಿಜಯ್ ಶಂಕರ್, ಕೆಎಸ್ ಭರತ್ ಮತ್ತು ಮುರುಗನ್ ಅಶ್ವಿನ್ ಅನ್ಸೋಲ್ಡ್ ಆಗಿ ಉಳಿದಿದ್ದಾರೆ.

ಬಿಸಿಸಿಐ ನಿಯಮಗಳ ಪ್ರಕಾರ, ಸಕ್ರಿಯ ಭಾರತೀಯ ಆಟಗಾರರು ವಿದೇಶಿ ಟಿ20 ಲೀಗ್ಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ಹಿನ್ನೆಲೆಯಲ್ಲಿ ದೇಶಿ ಕ್ರಿಕೆಟ್ ಹಾಗೂ ಐಪಿಎಲ್ನಿಂದ ನಿವೃತ್ತರಾದ ಈ ಮೂವರು ಆಟಗಾರರು ವಿದೇಶಿ ಲೀಗ್ಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಎಪಿಎಲ್ ಡ್ರಾಫ್ಟ್ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು.
ಗೋಲ್ಡ್ ಕ್ಯಾಟಗರಿಯಲ್ಲಿದ್ದರೂ ಸಿಗದ ಅವಕಾಶ
ಎಪಿಎಲ್ ಡ್ರಾಫ್ಟ್ನಲ್ಲಿ ವಿಜಯ್ ಶಂಕರ್, ಕೆಎಸ್ ಭರತ್ ಹಾಗೂ ತಮಿಳುನಾಡಿನ ಸ್ಪಿನ್ನರ್ ಮುರುಗನ್ ಅಶ್ವಿನ್ ಅವರು ಗೋಲ್ಡ್ ಕ್ಯಾಟಗರಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ, ಯಾವುದೇ ಫ್ರಾಂಚೈಸಿ ಅವರನ್ನು ಆಯ್ಕೆ ಮಾಡದ ಕಾರಣ ಮೂವರೂ ಅನ್ಸೋಲ್ಡ್ ಆಗಿದ್ದಾರೆ.
ಐಪಿಎಲ್ನಲ್ಲಿ ಆರ್ಸಿಬಿ, ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ನಂತಹ ಪ್ರಮುಖ ತಂಡಗಳನ್ನು ಪ್ರತಿನಿಧಿಸಿದ ಅನುಭವ ಈ ಆಟಗಾರರಿಗಿದೆ. ಆದರೂ ಈ ಬಾರಿಯ ಡ್ರಾಫ್ಟ್ನಲ್ಲಿ ಅವರಿಗೆ ಅವಕಾಶ ಸಿಗದಿರುವುದು ಅಚ್ಚರಿಗೆ ಕಾರಣವಾಗಿದೆ.
ಡಿಸೆಂಬರ್ 27ರಿಂದ ಎಪಿಎಲ್ ಟೂರ್ನಿ ಆರಂಭ
ಅಫ್ಘಾನಿಸ್ತಾನದ ಯುವ ಕ್ರಿಕೆಟ್ ಪ್ರತಿಭೆಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸುವ ಉದ್ದೇಶದಿಂದ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ (ACB) 2018ರಲ್ಲಿ ಈ ಲೀಗ್ ಆರಂಭಿಸಿತ್ತು. ಆದರೆ, ಮೊದಲ ಆವೃತ್ತಿಯ ಬಳಿಕ ಹಣಕಾಸಿನ ವಿವಾದಗಳು ಹಾಗೂ ತಾಂತ್ರಿಕ ಕಾರಣಗಳಿಂದ ಟೂರ್ನಿ ಸ್ಥಗಿತಗೊಂಡಿತ್ತು.
ಸುಮಾರು ಏಳು ವರ್ಷಗಳ ವಿರಾಮದ ಬಳಿಕ ಇದೀಗ 2026ರಲ್ಲಿ ಎಪಿಎಲ್ ಅನ್ನು ಮತ್ತೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಅದರಂತೆ ಟೂರ್ನಿಯು ಡಿಸೆಂಬರ್ 27, 2026ರಂದು ಆರಂಭವಾಗಲಿದೆ.
ಯುಎಇನಲ್ಲಿ ನಡೆಯಲಿರುವ ಪಂದ್ಯಗಳು
ಅಫ್ಘಾನಿಸ್ತಾನದಲ್ಲಿನ ಭದ್ರತಾ ಸವಾಲುಗಳು ಹಾಗೂ ಸೂಕ್ತ ಕ್ರೀಡಾಂಗಣಗಳ ಕೊರತೆಯ ಹಿನ್ನೆಲೆಯಲ್ಲಿ ಇಡೀ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿಯಂತಹ ಪ್ರಮುಖ ಕ್ರಿಕೆಟ್ ಕೇಂದ್ರಗಳಲ್ಲಿ ಪಂದ್ಯಗಳು ನಡೆಯುವ ನಿರೀಕ್ಷೆಯಿದೆ.
ಐದು ತಂಡಗಳ ನಡುವೆ ಪೈಪೋಟಿ
ಈ ಬಾರಿಯ ಎಪಿಎಲ್ನಲ್ಲಿ ಅಫ್ಘಾನಿಸ್ತಾನದ ಪ್ರಮುಖ ಕ್ರಿಕೆಟ್ ವಲಯಗಳನ್ನು ಪ್ರತಿನಿಧಿಸುವ ಐದು ಫ್ರಾಂಚೈಸಿಗಳು ಭಾಗವಹಿಸಲಿವೆ. ಅವುಗಳೆಂದರೆ:
-
ಕಾಬೂಲ್
-
ಕಂದಹಾರ್
-
ಬಲ್ಖ್
-
ಪಕ್ತಿಯಾ
-
ನಂಗರಹಾರ್
ಫ್ರಾಂಚೈಸಿಗಳ ಪೂರ್ಣ ಹೆಸರು ಹಾಗೂ ಲೋಗೋಗಳನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.









