ಹಾಸನ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುತ್ತಿದ್ದ ಖಾಸಗಿ ಸ್ಲೀಪರ್ ಎಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾದ ಭೀಕರ ಘಟನೆ ಶಾಂತಿಗ್ರಾಮ ಸಮೀಪ ನಡೆದಿದೆ. ಮಣಿಪಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಇದ್ದ 36 ಪ್ರಯಾಣಿಕರು ಚಾಲಕನ ಕ್ಷಿಪ್ರ ನಿರ್ಧಾರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಡರಾತ್ರಿ ಸುಮಾರು 2:30ರ ವೇಳೆಗೆ ಬಸ್‌ನ ಹಿಂಬದಿ ಟೈರ್ ಸ್ಫೋಟಗೊಂಡಿದ್ದು, ನಂತರ ಬೆಂಕಿ ವೇಗವಾಗಿ ಹಬ್ಬಿದೆ. ಚಾಲಕ ತಕ್ಷಣವೇ ಬಸ್ ನಿಲ್ಲಿಸಿ, ಒಳಗಿದ್ದ ಪ್ರಯಾಣಿಕರನ್ನು ಎಚ್ಚರಿಸಿ ಹೊರಗೆ ಕರೆದೊಯ್ದಿದ್ದಾರೆ. ಬೆಂಕಿ ವ್ಯಾಪಕವಾಗುವ ಮುನ್ನವೇ ಎಲ್ಲರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
ಬಸ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದರು. ಯಾವುದೇ ಜೀವಹಾನಿ ಸಂಭವಿಸದಿದ್ದರೂ, ಪ್ರಯಾಣಿಕರ ಬ್ಯಾಗ್, ಬಟ್ಟೆ, ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳು ಬೆಂಕಿಯಲ್ಲಿ ಕರಕಲಾಗಿವೆ.
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರೂ, ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತಾಂತ್ರಿಕ ದೋಷವೇ ಅಥವಾ ಬೇರೆ ಕಾರಣವೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.



