ಕಾಮಿಡಿ ಕಿಲಾಡಿಗಳು ಸೀಸನ್ 3ರ ಮೂಲಕ ಜನಪ್ರಿಯತೆ ಪಡೆದ ನಟ ರಾಕೇಶ್ ಪೂಜಾರಿ ಅಕಾಲಿಕ ಸಾವನ್ನಪ್ಪಿದ್ದಾರೆ. ಉಡುಪಿಯ ಕಾರ್ಕಳದ ನಿಟ್ಟೆಯಲ್ಲಿ ನಡೆದ ಸ್ನೇಹಿತರ ಮದುವೆಯಲ್ಲಿ ಭಾಗಿಯಾಗಿದ್ದ ರಾಕೇಶ್ ಲೋ ಬಿಪಿ ಸಮಸ್ಯೆಯಿಂದ ಕುಸಿದು ಬಿದ್ದಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಾಗಲೇ ರಾಕೇಶ್ ಪೂಜಾರಿ ನಿಧನರಾಗಿದ್ದರು. ರಾಕೇಶ್ ಪೂಜಾರಿ ಅಕಾಲಿಕ ನಿಧನಕ್ಕೆ ಕಿರುತೆರೆಯ ಹಲವು ನಟ, ನಟಿಯರು ಕಂಬನಿ ಮಿಡಿದಿದ್ದಾರೆ.
ಕಿರುತೆರೆ ಕಾರ್ಯಕ್ರಮಗಳ ಮೂಲಕ ಹಲವರಿಗೆ ಹತ್ತಿರವಾಗಿದ್ದ ನಟಿ ಕಂ ನಿರೂಪಕಿ ಕೂಡ ರಾಕೇಶ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಯಾವಾಗಲೂ ಅಕ್ಕ ಅಕ್ಕ ಅಂತ ತಮಾಷೆ ಮಾಡುತ್ತಾ ಇರುತ್ತಿದ್ದ ರಾಕೇಶ್ ಅವರನ್ನು ನೆನೆದು ಅನುಶ್ರೀ ಭಾವುಕರಾಗಿದ್ದಾರೆ. ನಮ್ಮ ಕರಾವಳಿಯ ಅಪ್ಪಟ ಪ್ರತಿಭೆ ರಾಕೇಶ್. ಅಕ್ಕ, ಅಕ್ಕ ಎಂದು ಬಾಯಿ ತುಂಬಾ ಮನಸಾರೆ ಕರೆಯುತ್ತಿದ್ದ. ನಾನು ನನ್ನ ತಮ್ಮನನ್ನು ಕಳೆದುಕೊಂಡಿದ್ದೇನೆ. ತಮಾಷೆಗೂ ಯಾರ ಮನಸ್ಸನ್ನು ರಾಕೇಶ್ ನೋಯಿಸಿಲ್ಲ. ಕನ್ನಡದ ಶೈಲಿಯನ್ನು ಬದಲಾಯಿಸದೆ ಉಳಿಸಿಕೊಂಡಿದ್ದ. ದೇವರು ಒಳ್ಳೆಯವರನ್ನು ಬೇಗ ಕರೆಸಿಕೊಂಡಿದ್ದಾರೆ ಎಂದು ಅನುಶ್ರೀ ಬೇಸರ ವ್ಯಕ್ತಪಡಿಸಿದ್ದರು.
ರಾಕೇಶ …
ನಗು ಆರೋಗ್ಯವಾಗಿರುತ್ತೀಯ …
ನಗಿಸು ಸುಖವಾಗಿರುತ್ತೀಯ…
ಇದೆಲ್ಲ ಸುಳ್ಳು ಅಲ್ವಾ ಮಾರಾಯ !!!
ನಿಂಗೆ ಹೇಗೆ ಹೇಳಲಿ ವಿದಾಯ !!!
ಒಂದಂತು ಸತ್ಯ ರಾಕಿ
ನಿನ್ನ ಮುಗುಳ್ನಗು ಅಮರ…
ಹೋಗಿ ಬಾ ತಮ್ಮ
ರಾಕೇಶ್ ಪೂಜಾರಿ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ, ಕಾಮಿಡಿ ಕಿಲಾಡಿ ತಂಡ, ಆತ್ಮೀಯ ಸ್ನೇಹಿತರು ಅಂತಿಮ ದರ್ಶನಕ್ಕಾಗಿ ಉಡುಪಿಗೆ ಆಗಮಿಸಿ ಗೆಳೆಯನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಮನೆಗೆ ಆಧಾರ ಸ್ಥಂಭವಾಗಿದ್ದ ಮಗನನ್ನು ಕಳೆದುಕೊಂಡ ತಾಯಿ ಹಾಗೂ ತಂಗಿ ಕಣ್ಣೀರು ಹಾಕುತ್ತಿರುವ ದೃಶ್ಯ ಎಂಥವರನ್ನು ಕಣ್ಣೀರು ಹಾಕುವಂತೆ ಮಾಡಿದೆ.