ಉತ್ತರ ಕನ್ನಡ: ಮೀನು ಸಂಗ್ರಹಣಾ ಘಟಕದಿಂದ ಹೊರಹೊಮ್ಮಿದ ವಿಷಾನಿಲಕ್ಕೆ ಉಸಿರುಗಟ್ಟಿ ಇಬ್ಬರು ಮೀನುಗಾರರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.
ಮತ್ತೊಬ್ಬ ಮೀನುಗಾರ ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೇಲೆಕೇರಿ ಮೂಲದ ‘ಮೂಕಾಂಬಿಕಾ’ ಹೆಸರಿನ ಬೋಟ್ನಲ್ಲಿ ಈ ಘಟನೆ ಸಂಭವಿಸಿದೆ. ಚಮನ್ ಜಾತಿಯ ಮೀನುಗಳನ್ನು ಹಿಡಿದು ಬಂದರಿಗೆ ಮರಳಿದ್ದ ಮೀನುಗಾರರು, ಬೋಟ್ನ ಕೋಲ್ಡ್ ಸ್ಟೋರೇಜ್ನಲ್ಲಿದ್ದ ಮೀನುಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಶೇಖರಣಾ ಘಟಕದಿಂದ ಹೊರಹೊಮ್ಮಿದ ವಿಷಾನಿಲಕ್ಕೆ ಸಿಲುಕಿ ಅವಘಡ ಸಂಭವಿಸಿದೆ.
ದುರಂತದಲ್ಲಿ ಒಡಿಶಾ ಮೂಲದ ಪುರಂದರ ಬಿಸರಾ (21) ಮತ್ತು ಆಕಾಶ ನಾಯ್ಕ (24) ಮೃತಪಟ್ಟಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡ ಲಾಲಿಂದರ ಧ್ರುವ (41) ಅವರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಮತ್ತಿಬ್ಬರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಮೂರು ದಿನಗಳ ಅಂತರದಲ್ಲಿ ಮತ್ತೊಂದು ದುರಂತ!
ಇದಕ್ಕೂ ಕೇವಲ ಮೂರು ದಿನಗಳ ಹಿಂದೆ ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ಚಮನ್ ಮೀನಿನ ವಿಷಾನಿಲಕ್ಕೆ ಸಿಲುಕಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಇದೀಗ ಮುದಗಾ ಬಂದರಿನಲ್ಲೂ ಇದೇ ರೀತಿಯ ದುರಂತ ಮರುಕಳಿಸಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿಸಿದೆ.
ಬೋಟ್ಗಳಲ್ಲಿರುವ ಮೀನು ಸಂಗ್ರಹಣಾ ಘಟಕಗಳನ್ನು ಸ್ವಚ್ಛಗೊಳಿಸುವಾಗ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಅಗತ್ಯವನ್ನು ಈ ಘಟನೆಗಳು ಮತ್ತೊಮ್ಮೆ ಎಚ್ಚರಿಸಿವೆ.










