ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು 21,866 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿ ಪಕ್ಷಕ್ಕೆ ಮಹತ್ವದ ಜಯ ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಒಟ್ಟು 97,941 ಮತಗಳು ಲಭಿಸಿವೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 76,075 ಮತಗಳನ್ನು ಪಡೆದಿದ್ದು, ಉಮೇಶ್ ಮೇಟಿ ಸ್ಪಷ್ಟ ಮುನ್ನಡೆಯೊಂದಿಗೆ ವಿಜಯಶಾಲಿಯಾಗಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ ಉಮೇಶ್ ಮೇಟಿ, ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದ ಎಲ್ಲ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಈ ಗೆಲುವು ನನ್ನ ವೈಯಕ್ತಿಕ ಸಾಧನೆಯಲ್ಲ. ಇದು ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮ ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಗೆಲುವಾಗಿದೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆಯಿಂದ ಹಿಡಿದು ಚುನಾವಣಾ ಪ್ರಚಾರದ ಕೊನೆಯ ಹಂತದವರೆಗೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ್, ಸಚಿವ ಸತೀಶ್ ಜಾರಕಿಹೋಳಿ ಸೇರಿದಂತೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಅಪಾರ ಶ್ರಮ ಪಟ್ಟಿದ್ದಾರೆ. ಅವರ ಸಹಕಾರ ಮತ್ತು ಬೆಂಬಲದಿಂದಲೇ ಈ ಗೆಲುವು ಸಾಧ್ಯವಾಗಿದೆ ಎಂದು ತಿಳಿಸಿದರು.



