ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜೈಲಿನಲ್ಲಿ ಅವರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆಯೇ ಎಂಬ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠ, ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿ ರಾಜ್ಯ ಸರ್ಕಾರ ಹಾಗೂ ವಿಚಾರಣಾಧೀನ ನ್ಯಾಯಾಲಯಕ್ಕೆ ಮಹತ್ವದ ಸೂಚನೆ ನೀಡಿದೆ. ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ನ್ಯಾಯಪೀಠ ಆದೇಶಿಸಿದೆ.
ಜೈಲಿನಲ್ಲಿ ದರ್ಶನ್‌ಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂಬ ಕುರಿತು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆ ಯಾವ ಹಂತದಲ್ಲಿದೆ ಹಾಗೂ ಉಳಿದಿರುವ ಸಾಕ್ಷ್ಯ ಪರಿಶೀಲನೆಗೆ ಇನ್ನಷ್ಟು ಎಷ್ಟು ಸಮಯ ಬೇಕಾಗಬಹುದು ಎಂಬುದರ ಕುರಿತು ವಿಚಾರಣಾ ನ್ಯಾಯಾಲಯದಿಂದಲೂ ವರದಿ ಕೇಳಲಾಗಿದೆ.
ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿ, ಜೈಲಿನಲ್ಲಿ ದರ್ಶನ್‌ಗೆ ಸೂಕ್ತ ಮೂಲಸೌಕರ್ಯ ಕಲ್ಪಿಸಲಾಗಿಲ್ಲ ಎಂದು ತಿಳಿಸಿದರು.
ದರ್ಶನ್ ಅವರನ್ನು ಬೆಳಕು ಸಮರ್ಪಕವಾಗಿ ಇಲ್ಲದ ಸೆಲ್‌ನಲ್ಲಿ ಇರಿಸಲಾಗಿದೆ. ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದೆ” ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಈ ವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್, ಪ್ರಕರಣದ ಪ್ರಗತಿ ಹಾಗೂ ಜೈಲು ಪರಿಸ್ಥಿತಿಯ ಕುರಿತು ವಾಸ್ತವ ಮಾಹಿತಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಇದುವರೆಗೆ ಎಷ್ಟು ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ ಮತ್ತು ಮುಂದಿನ ವಿಚಾರಣಾ ಪ್ರಕ್ರಿಯೆ ಪೂರ್ಣಗೊಳ್ಳಲು ಬೇಕಾಗುವ ಅವಧಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸಿದ್ದು, ಮುಂದಿನ ವಿಚಾರಣೆಯಲ್ಲಿ ಈ ವರದಿಗಳ ಆಧಾರದ ಮೇಲೆ ಜಾಮೀನು ಅರ್ಜಿಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.



