ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಬೇಕು. ಸೌಲಭ್ಯ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶ ಹೊಂದಿವೆ. ಯಾವುದೇ ಅರ್ಹ ಫಲಾನುಭವಿ ಸೌಲಭ್ಯದಿಂದ ವಂಚಿತನಾಗದಂತೆ ಅಧಿಕಾರಿಗಳು ಕ್ರಿಯಾಶೀಲತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಿಂದ ಯಾವುದೇ ಅರ್ಹ ಮಹಿಳೆ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮರಣ ಹೊಂದಿದವರ ಖಾತೆಗೆ ಹಣ ಜಮೆಯಾಗುವ ಪ್ರಕರಣಗಳನ್ನು ತಡೆಗಟ್ಟಬೇಕು. ಯುವನಿಧಿ ಯೋಜನೆಯಿಂದ ಅರ್ಹರು ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು. ಅನ್ನಭಾಗ್ಯ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಯುವನಿಧಿ ಯೋಜನೆಯಡಿ ಜೂನ್ 2026ರವರೆಗೆ ಗದಗ ತಾಲೂಕಿನಲ್ಲಿ 3,112 ಅಭ್ಯರ್ಥಿಗಳು ನೋಂದಣಿಯಾಗಿದ್ದು, 2,819 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿದೆ.
ಗೃಹಲಕ್ಷ್ಮೀ ಯೋಜನೆಯಡಿ ಏಪ್ರಿಲ್ 2026ರವರೆಗೆ 84,037 ಅರ್ಜಿಗಳು ನೋಂದಣಿಯಾಗಿದ್ದು, 75,133 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಪಾವತಿಸಲಾಗಿದೆ. ಮೇ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ.
ಗೃಹಜ್ಯೋತಿ ಯೋಜನೆಯಡಿ ಜುಲೈ 31ರವರೆಗೆ ಗದಗ ಶಹರದಲ್ಲಿ ಅರ್ಹ 46,484 ಸ್ಥಾವರಗಳ ಪೈಕಿ 46,260 ನೋಂದಣಿಯಾಗಿದ್ದು, ಶೇ.99.52ರಷ್ಟು ಪ್ರಗತಿ ಸಾಧಿಸಲಾಗಿದೆ. ಗದಗ ಗ್ರಾಮೀಣ ಉಪವಿಭಾಗದಲ್ಲಿ ಅರ್ಹ 53,324 ಸ್ಥಾವರಗಳ ಪೈಕಿ 53,110 ನೋಂದಣಿಯಾಗಿದ್ದು, ಶೇ.99.60ರಷ್ಟು ಪ್ರಗತಿ ಸಾಧಿಸಲಾಗಿದೆ.
ಶಕ್ತಿ ಯೋಜನೆಯಡಿ 2023ರ ಜೂನ್ 11ರಿಂದ 2026ರ ಆಗಸ್ಟ್ 3ರವರೆಗೆ ಗದಗ ಘಟಕದಲ್ಲಿ ಮಹಿಳಾ ಪ್ರಯಾಣಿಕರಿಂದ ₹10,625.33 ಲಕ್ಷ ಹಾಗೂ ಬೆಟಗೇರಿ ಘಟಕದಲ್ಲಿ ₹6,297.67 ಲಕ್ಷ ಆದಾಯವಾಗಿದೆ.
ಅನ್ನಭಾಗ್ಯ ಯೋಜನೆಯಡಿ ಜುಲೈ 2026ರಲ್ಲಿ ಗದಗ ಶಹರದ 32,699 ಪಡಿತರ ಕಾರ್ಡುದಾರರಿಗೆ ಕೇಂದ್ರದ ಎನ್ಎಸ್ಎಫ್ಎ ಅಡಿ 2,250.98 ಕ್ವಿಂಟಲ್ ಅಕ್ಕಿ ಹಾಗೂ ಗ್ರಾಮೀಣ ಭಾಗದ 48,483 ಕಾರ್ಡುದಾರರಿಗೆ 3,578.82 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ರಾಜ್ಯ ಸರ್ಕಾರದ ಅನ್ನಭಾಗ್ಯ ಅಕ್ಕಿ ಹಂಚಿಕೆ ಯೋಜನೆಯಡಿ ಗದಗ ಶಹರದ 32,699 ಕಾರ್ಡುದಾರರಿಗೆ 5,360.95 ಕ್ವಿಂಟಲ್ ಹಾಗೂ ಗ್ರಾಮೀಣ ಭಾಗದ 48,483 ಕಾರ್ಡುದಾರರಿಗೆ 7,521.35 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ತಾಲೂಕು ಸಮಿತಿ ಸದಸ್ಯರಾದ ಮೀನಾಕ್ಷಿ ಬೆನಕಣ್ಣವರ, ದಯಾನಂದ ಪವಾರ, ಸಂಗು ಕರಕಲಮಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಎಚ್.ಎಸ್. ಜಿನಗ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
“ಪಂಚ ಗ್ಯಾರಂಟಿ ಯೋಜನೆಗಳು ಬಡಜನರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಯಾಗಿವೆ. ಯಾವುದೇ ಅರ್ಹ ಫಲಾನುಭವಿ ಸೌಲಭ್ಯದಿಂದ ವಂಚಿತರಾಗದಂತೆ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಿ, ಅನುಷ್ಠಾನದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು.”
— ಅಶೋಕ ಮಂದಾಲಿ, ಅಧ್ಯಕ್ಷರು, ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ



