ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಆಘಾತ ಎದುರಾಗಿದ್ದು, ರಾಘವ್ ಚಡ್ಡಾ ಸೇರಿದಂತೆ ಏಳು ರಾಜ್ಯಸಭಾ ಸದಸ್ಯರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.
ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಸೇರಿದಂತೆ ಒಟ್ಟು ಏಳು ಮಂದಿ ರಾಜ್ಯಸಭಾ ಸಂಸದರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ. ರಾಜ್ಯಸಭೆಯ ಎಎಪಿ ಸದಸ್ಯರ ಪೈಕಿ ಎರಡು ಮೂರಂಚು ಮಂದಿ ಬಿಜೆಪಿಗೆ ಬೆಂಬಲ ನೀಡಿರುವುದಾಗಿ ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ರಾಘವ್ ಚಡ್ಡಾ, “ನಾವು ಸಂವಿಧಾನದ ನಿಯಮಾನುಸಾರ ಬಿಜೆಪಿಯೊಂದಿಗೆ ವಿಲೀನಗೊಳ್ಳುವ ನಿರ್ಧಾರ ಕೈಗೊಂಡಿದ್ದೇವೆ. ನಾನು ನನ್ನ ಯೌವನದ 15 ವರ್ಷಗಳನ್ನು ಎಎಪಿಗೆ ಸಮರ್ಪಿಸಿದ್ದರೂ, ಈಗ ಪಕ್ಷ ತನ್ನ ಮೂಲ ತತ್ವಗಳು ಮತ್ತು ಮೌಲ್ಯಗಳಿಂದ ದೂರವಾಗಿದೆ” ಎಂದು ಆರೋಪಿಸಿದ್ದಾರೆ.
ಪಕ್ಷವು ರಾಷ್ಟ್ರ ಹಿತಾಸಕ್ತಿಗೆ ಕೆಲಸ ಮಾಡುವ ಬದಲು ವೈಯಕ್ತಿಕ ಲಾಭಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದ ಅವರು, ಕಳೆದ ಕೆಲವು ವರ್ಷಗಳಿಂದ ತಾನು ತಪ್ಪು ಪಕ್ಷದಲ್ಲಿ ಕೆಲಸ ಮಾಡುತ್ತಿರುವ ಸರಿಯಾದ ವ್ಯಕ್ತಿ ಎಂಬ ಭಾವನೆ ಹೊಂದಿದ್ದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಎಪಿಯಿಂದ ದೂರ ಸರಿದು, ಜನರೊಂದಿಗೆ ಹೆಚ್ಚು ಹತ್ತಿರವಾಗಲು ನಿರ್ಧರಿಸಿದ್ದಾಗಿ ರಾಘವ್ ಚಡ್ಡಾ ಘೋಷಿಸಿದ್ದಾರೆ.



