Home Gadag News ಇಷ್ಟಲಿಂಗ ಪೂಜೆಯಿಂದ ಜನ್ಮ ಸಾರ್ಥಕ

ಇಷ್ಟಲಿಂಗ ಪೂಜೆಯಿಂದ ಜನ್ಮ ಸಾರ್ಥಕ

0
ಇಷ್ಟಲಿಂಗ ಪೂಜೆಯಿಂದ ಜನ್ಮ ಸಾರ್ಥಕ
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಿಂಗದೀಕ್ಷೆಯು ಭಗವಂತನನ್ನು ಸಾಕ್ಷಾತ್ಕಾರಪಡಿಸಿಕೊಳ್ಳುವ ಚೈತನ್ಯ ಶಕ್ತಿಸಾಧನವಾಗಿದೆ. ಶ್ರೀಗುರುವಿನಿಂದ ಶಿವದೀಕ್ಷಾ ಸಂಪನ್ನರಾಗಿ ಇಷ್ಟಲಿಂಗ ಪಡೆದು ಪೂಜಿಸಿದರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಹಿರೂರದ ಗುಬ್ಬಿ ನಂಜುಡೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಶುಕ್ರವಾರ ತಾಲೂಕಿನ ಬಾಲೇಹೊಸುರು ಗ್ರಾಮದ ಶ್ರೀ ದಿಂಗಾಲೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಂಗಮ ವಟುಗಳಿಗೆ ಅಯ್ಯಾಚಾರ-ಲಿಂಗದೀಕ್ಷೆ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು.

ವೀರಶೈವ ಧರ್ಮದಲ್ಲಿ ಗುರು-ಲಿಂಗ-ಜಂಗಮಕ್ಕೆ ವಿಶಿಷ್ಠ ಸ್ಥಾನಮಾನವಿದೆ. ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚುತ್ತದೆ. ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ. ವಿಭೂತಿ, ಲಿಂಗ, ಜೋಳಿಗೆ, ದಂಡ ಇವು ಸಂಸ್ಕಾರದ ಸಂಕೇತಗಳಾಗಿವೆ. ವೀರಶೈವ ಲಿಂಗಾಯತ ಸಮಾಜದವರೆಲ್ಲರೂ ನಿತ್ಯ `ಓಂ ನಮಃ ಶಿವಾಯ’ ಶ್ರೇಷ್ಠ ಮಂತ್ರ ಪಠಣ ಮಾಡಬೇಕು. ಲಿಂಗದೀಕ್ಷೆ ಪಡೆದವರು ಸಮಾಜದಲ್ಲಿ ನಿತ್ಯ ಶಿವಪೂಜೆ ಮಾಡಿ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಧರ್ಮ ಸಂರಕ್ಷಣೆಗೆ ಮುಂದಾಗಬೇಕು. ದುಶ್ಚಟಗಳನ್ನು ಬಿಟ್ಟು ಒಳ್ಳೆಯ ವಿದ್ಯಾಭ್ಯಾಸ ಪಡೆದು ನಾಡಿಗೆ ಒಳ್ಳೆಯ ನಾಗರಿಕರಾಗಲು ಈ ಲಿಂಗದೀಕ್ಷೆ ಅಯ್ಯಾಚಾರ ಸೂಕ್ತ ಮಾರ್ಗದರ್ಶನ ಮಾಡುತ್ತದೆ ಎಂದು ನುಡಿದರು.

ದಿಂಗಾಲೇಶ್ವರ ಮಠದ ಪಟ್ಟಾಧ್ಯಕ್ಷರು ಹಾಗೂ ಶಿರಹಟ್ಟಿ ಶ್ರೀ ಫಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಗಳೂ ಆಗಿರುವ ಜ.ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬೆಳಿಗ್ಗೆ ಷಟಸ್ಥಲ ದ್ವಜಾರೋಹಣ ನೆರವೇರಿಸಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಹಲವು ಗ್ರಾಮಗಳ ಭಕ್ತರು ಆಗಮಿಸಿದ್ದರು. 50ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಲಿಂಗದೀಕ್ಷೆ ಕಾರ್ಯ ನೆರವೇರಿಸಲಾಯಿತು.


Spread the love

LEAVE A REPLY

Please enter your comment!
Please enter your name here