HomeKarnataka Newsಲಂಚದ ಹಣವನ್ನು ವಿಚಾರಣೆ ಮುಗಿಯುವವರೆಗೆ ವರ್ಷಗಟ್ಟಲೆ ಕೋರ್ಟ್ʼನಲ್ಲಿ ಇಡುವಂತಿಲ್ಲ: ದೂರುದಾರರಿಗೆ ಹಣ ಮರುಪಾವತಿಗೆ ಹೈಕೋರ್ಟ್

ಲಂಚದ ಹಣವನ್ನು ವಿಚಾರಣೆ ಮುಗಿಯುವವರೆಗೆ ವರ್ಷಗಟ್ಟಲೆ ಕೋರ್ಟ್ʼನಲ್ಲಿ ಇಡುವಂತಿಲ್ಲ: ದೂರುದಾರರಿಗೆ ಹಣ ಮರುಪಾವತಿಗೆ ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆ ವೇಳೆ (ಟ್ರಾಪ್) ವಶಪಡಿಸಿಕೊಳ್ಳುವ ಲಂಚದ ಹಣವನ್ನು ದೂರುದಾರರಿಗೆ ಮರುಪಾವತಿಸಲು ವಿಚಾರಣೆ ಪೂರ್ಣಗೊಳ್ಳುವವರೆಗೆ ವರ್ಷಗಟ್ಟಲೆ ಕಾಯಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ದೂರುದಾರರಿಗೆ ಹಣವನ್ನು ಸರ್ಕಾರದ ಖಜಾನೆಯಿಂದ ಸಮಾನ ಮೊತ್ತದಲ್ಲಿ ಪಾವತಿಸಲು ಕಾನೂನಿನಲ್ಲಿ ಅಡ್ಡಿಯಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಬಳ್ಳಾರಿಯ ಗುತ್ತಿಗೆದಾರ ಜಿ. ಈಶ್ವರಯ್ಯ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಧಿಕಾರಿಗಳು ಲಂಚ ಕೇಳಿದ ಹಿನ್ನೆಲೆಯಲ್ಲಿ, ಟ್ರಾಪ್ ಕಾರ್ಯಾಚರಣೆಯಲ್ಲಿ ಅಧಿಕಾರಿಗೆ ನೀಡಲಾಗಿದ್ದ ಹಣವನ್ನು ಮರುಪಾವತಿಸುವಂತೆ ಈಶ್ವರಯ್ಯ ಅವರು ಮನವಿ ಮಾಡಿದ್ದರು.

ಸುಪ್ರೀಂ ಕೋರ್ಟ್‌ ಹಾಗೂ ವಿವಿಧ ಹೈಕೋರ್ಟ್‌ಗಳ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಕಾನೂನಿಗೆ ನೆರವಾಗುವ ಪ್ರಾಮಾಣಿಕ ನಾಗರಿಕನ ಕಷ್ಟದ ದುಡಿಮೆಯ ಹಣವನ್ನು ಸುದೀರ್ಘ ಕಾಲ ನ್ಯಾಯಾಂಗ ವಶದಲ್ಲಿ ಇರಿಸಿ ಆತನನ್ನು ಆರ್ಥಿಕ ಸಂಕಷ್ಟಕ್ಕೆ ದೂಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇಂತಹ ಪ್ರಕರಣಗಳ ವಿಚಾರಣೆ ಪೂರ್ಣಗೊಳ್ಳಲು ಹಲವು ವರ್ಷಗಳು ಬೇಕಾಗಬಹುದು. ಹಲವು ಸಂದರ್ಭಗಳಲ್ಲಿ ದೂರುದಾರರು ಸಾಲ ಮಾಡಿ ಅಥವಾ ತಮ್ಮ ಕಷ್ಟದ ಗಳಿಕೆಯಿಂದ ಹಣವನ್ನು ವ್ಯವಸ್ಥೆ ಮಾಡಿ ಲಂಚದ ರೂಪದಲ್ಲಿ ಅಧಿಕಾರಿಗಳಿಗೆ ನೀಡಿರುತ್ತಾರೆ. ಭ್ರಷ್ಟ ಅಧಿಕಾರಿಯನ್ನು ಕಾನೂನಿನ ಬಲೆಗೆ ಬೀಳಿಸಲು ನೆರವಾದ ದೂರುದಾರನೇ ಕೊನೆಗೆ ಆರ್ಥಿಕವಾಗಿ ಸಂಕಷ್ಟ ಅನುಭವಿಸುವಂತಾಗಬಾರದು ಎಂದು ಹೈಕೋರ್ಟ್‌ ಹೇಳಿದೆ.

ಸಾಕ್ಷ್ಯದ ದೃಷ್ಟಿಯಿಂದ ಅಸಲಿ ನೋಟುಗಳನ್ನು ನ್ಯಾಯಾಲಯದಲ್ಲಿ ಇರಿಸಿಕೊಳ್ಳಬೇಕಾದ ಸಂದರ್ಭದಲ್ಲೂ, ಸರ್ಕಾರದ ಖಜಾನೆಯಿಂದ ಅದೇ ಮೊತ್ತದ ಹಣವನ್ನು ದೂರುದಾರರಿಗೆ ಬಿಡುಗಡೆ ಮಾಡಲು ಕಾನೂನಿನಲ್ಲಿ ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಇದರೊಂದಿಗೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿ ವಿಶೇಷ ನ್ಯಾಯಾಲಯಕ್ಕೆ ಸೂಕ್ತ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಹೈಕೋರ್ಟ್‌ ಸ್ವಾತಂತ್ರ್ಯ ನೀಡಿದೆ. ಅರ್ಜಿ ಸಲ್ಲಿಕೆಯಾದ ನಾಲ್ಕು ವಾರಗಳೊಳಗೆ ನಿಯಮಾನುಸಾರ ಪರಿಶೀಲನೆ ನಡೆಸಿ, ಸಮಾನ ಮೊತ್ತದ ಹಣವನ್ನು ಅರ್ಜಿದಾರರಿಗೆ ಬಿಡುಗಡೆ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಇದೇ ವೇಳೆ ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಉಳಿದುಕೊಂಡಿರುವ ನಗದು, ವಾಹನಗಳು, ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ ಸಾಧನಗಳ ವಿಲೇವಾರಿ ಕುರಿತಂತೆಯೂ ಹೈಕೋರ್ಟ್‌ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಆಧರಿಸಿ, ಯಾವುದೇ ವಶಪಡಿಸಿಕೊಂಡ ಸೊತ್ತನ್ನು ಅನಗತ್ಯವಾಗಿ ಪೊಲೀಸ್ ಠಾಣೆಗಳಲ್ಲಿ ದೀರ್ಘಕಾಲ ಇರಿಸಬಾರದು ಎಂದು ಕೆಳಹಂತದ ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳಿಗೆ ಸೂಚಿಸಿದೆ. ಮಾಲೀಕತ್ವವನ್ನು ಪರಿಶೀಲಿಸಿದ ಬಳಿಕ ಅಗತ್ಯ ಬಾಂಡ್ ಪಡೆದು ಸೊತ್ತುಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಬಳ್ಳಾರಿಯ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST) ವಿಭಾಗದ ಸೂಪರಿಂಟೆಂಡೆಂಟ್ ಆಗಿದ್ದ ಕೆ. ಮಧುಸೂದನ ಅವರು, ಅರ್ಜಿದಾರ ಜಿ. ಈಶ್ವರಯ್ಯ ಅವರ ಜಿಎಸ್‌ಟಿ ಬಾಕಿ ಮೊತ್ತವನ್ನು ಚುಕ್ತಾ ಮಾಡುವುದಕ್ಕಾಗಿ ₹80,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಲಂಚ ನೀಡಲು ಇಚ್ಛಿಸದ ಈಶ್ವರಯ್ಯ ಅವರು ಸಿಬಿಐ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಇದರ ಆಧಾರದ ಮೇಲೆ 2022ರ ಜೂನ್ 5ರಂದು ಸಿಬಿಐ ಅಧಿಕಾರಿಗಳು ಟ್ರಾಪ್ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ₹80,000 ಲಂಚ ಪಡೆಯುತ್ತಿದ್ದ ಮಧುಸೂದನ ಅವರು ಸಿಬಿಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.

ಬಳಿಕ ಲಂಚದ ಹಣವನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡು, ಪ್ರಕರಣದ ಪ್ರಮುಖ ಸಾಕ್ಷ್ಯಾಧಾರವಾಗಿ ವಿಶೇಷ ನ್ಯಾಯಾಲಯದಲ್ಲಿ ಇರಿಸಿದ್ದರು. ತಮ್ಮ ಕಷ್ಟದ ದುಡಿಮೆಯ ಹಣವನ್ನು ಮರಳಿ ನೀಡುವಂತೆ ಕೋರಿ ಈಶ್ವರಯ್ಯ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಸಿಬಿಐ ಪರ ವಕೀಲರು, ಸಿಬಿಐ ನಿಯಮಾವಳಿಗಳ ಪ್ರಕಾರ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವ ಮುನ್ನ ಟ್ರಾಪ್ ಹಣವನ್ನು ದೂರುದಾರರಿಗೆ ಮರಳಿ ನೀಡಲು ಅವಕಾಶವಿಲ್ಲ. ವಿಚಾರಣೆ ಮುಗಿದ ಬಳಿಕವಷ್ಟೇ ಹಣವನ್ನು ಹಿಂದಿರುಗಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಆದರೆ, ದೂರುದಾರರ ಆರ್ಥಿಕ ಹಿತಾಸಕ್ತಿಯನ್ನು ಪರಿಗಣಿಸಿದ ಹೈಕೋರ್ಟ್‌, ಅಸಲಿ ಹಣವನ್ನು ಸಾಕ್ಷ್ಯವಾಗಿ ಉಳಿಸಿಕೊಂಡು, ಅದಕ್ಕೆ ಸಮಾನ ಮೊತ್ತವನ್ನು ಸರ್ಕಾರದ ಖಜಾನೆಯಿಂದ ದೂರುದಾರರಿಗೆ ಬಿಡುಗಡೆ ಮಾಡುವ ವ್ಯವಸ್ಥೆಗೆ ಕಾನೂನಿನಲ್ಲಿ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img