ಬೆಂಗಳೂರು: ಹೋಲ್ಸೇಲ್ ದರದಲ್ಲಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ನಡೆದ ಈ ಹೈಟೆಕ್ ವಂಚನೆಯಲ್ಲಿ ಆರೋಪಿಗಳು ಸುಮಾರು ₹3 ಕೋಟಿ ಮೌಲ್ಯದ 1 ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ.
ನಗರತ್ಪೇಟೆಯಲ್ಲಿರುವ ಪ್ರಸಿದ್ಧ ‘ಮೆಹ್ತಾ ಜ್ಯುವೆಲ್ಲರಿ’ ಸಂಸ್ಥೆಯ ಮಾಲೀಕರು ಈ ವಂಚನೆ ಜಾಲದ ಬಲೆಗೆ ಬಿದ್ದಿದ್ದಾರೆ. ಪರೇಶ್ ಸೋನಿ ಎಂಬಾತ ಮೆಹ್ತಾ ಜ್ಯುವೆಲ್ಲರಿ ಮಾಲೀಕರನ್ನು ಸಂಪರ್ಕಿಸಿ, ‘ಮಾಹಿ ಎಂಟರ್ಪ್ರೈಸಸ್’ ಹೆಸರಿನ ಸಂಸ್ಥೆ ನಡೆಸುತ್ತಿರುವುದಾಗಿ ಹೇಳಿ, ಹೋಲ್ಸೇಲ್ ದರದಲ್ಲಿ ದೊಡ್ಡ ಪ್ರಮಾಣದ ಚಿನ್ನಾಭರಣಗಳ ಅಗತ್ಯವಿದೆ ಎಂದು ನಂಬಿಸಿದ್ದಾನೆ.
ಇದಕ್ಕಾಗಿ ಮಲ್ಲೇಶ್ವರಂನ ಕಚೇರಿಯೊಂದರ ಮೇಲೆ ‘ಲೋಟಸ್ ಜ್ಯುವೆಲ್ಲರಿ’ ಹಾಗೂ ‘ಮಾಹಿ ಎಂಟರ್ಪ್ರೈಸಸ್’ ಎಂಬ ನಕಲಿ ಬೋರ್ಡ್ ಅಳವಡಿಸಿ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ದೊಡ್ಡ ವ್ಯವಹಾರದ ಆರ್ಡರ್ ಇದೆ ಎಂದು ನಂಬಿದ ಜ್ಯುವೆಲ್ಲರಿ ಮಾಲೀಕರು, ತಮ್ಮ ಮ್ಯಾನೇಜರ್ ಮೂಲಕ ಸುಮಾರು 3 ಕೆಜಿ ಚಿನ್ನಾಭರಣಗಳನ್ನು ಆರೋಪಿಗಳ ಕಚೇರಿಗೆ ಕಳುಹಿಸಿದ್ದರು.
ಮ್ಯಾನೇಜರ್ ಕಚೇರಿಗೆ ತಲುಪಿದ ಬಳಿಕ ಆರೋಪಿಗಳು ಆಭರಣಗಳ ವಿನ್ಯಾಸ ಪರಿಶೀಲಿಸುವಂತೆ ನಟಿಸಿ, ಪಕ್ಕದ ಕ್ಯಾಬಿನ್ನಲ್ಲಿ ಕುಳಿತಿದ್ದ ಚಂದ್ರಶೇಖರ್ ಎಂಬಾತನಿಗೆ ಪಟ್ಟಿ ಸಿದ್ಧಪಡಿಸುವಂತೆ ನೀಡಿದ್ದಾರೆ.
ನಂತರ ಆಭರಣಗಳ ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಆರೋಪಿಗಳು ಪಕ್ಕದ ಕೋಣೆಗೆ ತೆರಳಿದ್ದು, ಅಲ್ಲಿಂದಲೇ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಒಳಗೆ ಹೋದವರು ಬಹಳ ಹೊತ್ತಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮ್ಯಾನೇಜರ್ ಪರಿಶೀಲನೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಶ್ಯಾಮ್, ರಾಮಚಂದ್ರ ಹಾಗೂ ಪರೇಶ್ ಸೋನಿ ವಿರುದ್ಧ ಸಂತ್ರಸ್ತ ಉದ್ಯಮಿ ದೂರು ನೀಡಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.



