HomeGadag Newsಎಸ್‌ಐಆರ್‌ ಗೊಂದಲ: ಸರ್ಕಾರ ಸ್ಪಷ್ಟನೆ ನೀಡಲಿ: ಎಚ್.ವೈ. ಮಿಶನ್ನವರ

ಎಸ್‌ಐಆರ್‌ ಗೊಂದಲ: ಸರ್ಕಾರ ಸ್ಪಷ್ಟನೆ ನೀಡಲಿ: ಎಚ್.ವೈ. ಮಿಶನ್ನವರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರದ ಎಸ್‌ಐಆರ್‌ (ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅರ್ಜಿ ನಮೂನೆ ಭರ್ತಿ ಸೇರಿದಂತೆ ವಿವಿಧ ಹಂತಗಳಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸ್ಪಷ್ಟ ಮಾರ್ಗಸೂಚಿ ನೀಡಬೇಕು ಎಂದು ಅಂಬೇಡ್ಕರ್ ವಿಚಾರಧಾರಾ ಜಿಲ್ಲಾ ಅಧ್ಯಕ್ಷ ಎಚ್.ವೈ. ಮಿಶನ್ನವರ ಆಗ್ರಹಿಸಿದ್ದಾರೆ.

ಎಸ್‌ಐಆರ್‌ ಅರ್ಜಿಯ ವಿವಿಧ ಕಾಲಂಗಳನ್ನು ಹೇಗೆ ಭರ್ತಿ ಮಾಡಬೇಕು ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ಸ್ಪಷ್ಟ ಮಾಹಿತಿ ಇಲ್ಲ. ಸುಶಿಕ್ಷಿತರಿಗೆ ಕೂಡ ಕೆಲವು ಅಂಶಗಳು ಗೊಂದಲ ಉಂಟುಮಾಡುತ್ತಿದ್ದು, ಓದು-ಬರಹ ಬಾರದವರು ಅರ್ಜಿ ಭರ್ತಿ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಹೀಗಾಗಿ ಕೇವಲ ಸೂಚನೆ ನೀಡುವುದಕ್ಕಿಂತ, ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆಯನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅದೇ ರೀತಿ ಶಾಲಾ ದಾಖಲೆ, ಆಧಾರ್‌ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಜನ್ಮ ದಿನಾಂಕ ಅಥವಾ ಇತರೆ ವಿವರಗಳಲ್ಲಿ ವ್ಯತ್ಯಾಸವಿದ್ದರೆ ಎಸ್‌ಐಆರ್‌ ಅರ್ಜಿಯಲ್ಲಿ ಯಾವ ದಾಖಲೆಯನ್ನು ಆಧಾರವಾಗಿಟ್ಟುಕೊಳ್ಳಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು. 2002ರ ನಂತರ ಜಿಲ್ಲೆ, ತಾಲೂಕು, ವಾರ್ಡ್‌ ಸೇರಿದಂತೆ ಆಡಳಿತಾತ್ಮಕ ವ್ಯಾಪ್ತಿಗಳಲ್ಲಿ ಬದಲಾವಣೆಗಳಾಗಿರುವುದರಿಂದ ಹಳೆಯ ವಿವರಗಳನ್ನು ಹೊಂದಿರುವವರು ಅರ್ಜಿಯಲ್ಲಿ ಯಾವ ಮಾಹಿತಿಯನ್ನು ನಮೂದಿಸಬೇಕು ಎಂಬುದಕ್ಕೂ ಸ್ಪಷ್ಟ ಮಾರ್ಗಸೂಚಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಫೋಟೋಗೆ ಸಂಬಂಧಿಸಿದಂತೆ ಕೂಡ ಸಾರ್ವಜನಿಕರಲ್ಲಿ ಗೊಂದಲವಿದ್ದು, ಕೆಲವರಿಗೆ ನಿರ್ದಿಷ್ಟ ರೀತಿಯ ಫೋಟೋ ತೆಗೆಸುವಂತೆ ಸೂಚಿಸಲಾಗುತ್ತಿದೆ. ಆದರೆ ಮತ್ತೊಂದೆಡೆ ವಿಭಿನ್ನ ರೀತಿಯ ಮಾಹಿತಿ ನೀಡಲಾಗುತ್ತಿದೆ. ಹೀಗಾಗಿ ಫೋಟೋಗೆ ಸಂಬಂಧಿಸಿದ ನಿಯಮಗಳನ್ನೂ ಅಧಿಕೃತವಾಗಿ ಸ್ಪಷ್ಟಪಡಿಸಬೇಕು. ವಿಶೇಷವಾಗಿ ನಿಗದಿತ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗದವರಿಗೆ ಪರ್ಯಾಯ ವ್ಯವಸ್ಥೆ ಏನು ಎಂಬುದನ್ನು ತಿಳಿಸಬೇಕು ಎಂದು ಮಿಶನ್ನವರ ಮನವಿ ಮಾಡಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ವ್ಯಕ್ತಿಯ ಹೆಸರು ಅಥವಾ ವಿವರ ತಪ್ಪಿಹೋಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಗ್ರಾಮ, ವಾರ್ಡ್‌ ಹಾಗೂ ಬೂತ್‌ ಮಟ್ಟದಲ್ಲಿ ಅರ್ಜಿ ಭರ್ತಿ ಮಾಡಲು ನೆರವಾಗುವಂತೆ ಸರ್ಕಾರದಿಂದಲೇ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಬೇಕು. ಅನಕ್ಷರಸ್ಥರು, ಹಿರಿಯ ನಾಗರಿಕರು ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ಸ್ಥಳದಲ್ಲೇ ಮಾರ್ಗದರ್ಶನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಜನರು ಪ್ರತಿದಿನ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸರ್ಕಾರ ಈ ವಿಷಯವನ್ನು ನಿರ್ಲಕ್ಷಿಸದೆ, ತಕ್ಷಣವೇ ಸ್ಪಷ್ಟ ಮಾಹಿತಿ ಬಿಡುಗಡೆ ಮಾಡಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಜನಸ್ನೇಹಿಯಾಗಿಸಬೇಕು ಎಂದು ಎಚ್.ವೈ. ಮಿಶನ್ನವರ ಒತ್ತಾಯಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img