HomeDharwadಕೃತಕ ಅಭಾವ ಸೃಷ್ಟಿಸಿದರೆ ಕ್ರಿಮಿನಲ್ ಕೇಸ್

ಕೃತಕ ಅಭಾವ ಸೃಷ್ಟಿಸಿದರೆ ಕ್ರಿಮಿನಲ್ ಕೇಸ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಬೇಡಿಕೆಗಿಂತ ಹೆಚ್ಚು ರಾಸಾಯನಿಕ ಗೊಬ್ಬರ ವಿತರಿಸಿದರೂ ಕಲಘಟಗಿ ತಾಲೂಕಿನಲ್ಲಿ ಅನಗತ್ಯ ಗೊಂದಲಗಳು, ರೈತರಿಗೆ ತೊಂದರೆಗಳು ಉಂಟಾಗುತ್ತಿವೆ. ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದಾಗ ವಿತರಕರು ಸರಕಾರದ ನಿಯಮ, ಷರತ್ತು ಪಾಲಿಸದೆ ಇರುವುದು ಮತ್ತು ಸಂಬಂಧಿಸಿದ ಅಧಿಕಾರಿಗಳು ಕ್ರಮಬದ್ಧವಾಗಿ ಮೇಲುಸ್ತುವಾರಿ ಹಾಗೂ ನಿಗಾವಹಿಸದಿರುವುದು ಕಂಡು ಬಂದಿದೆ. ಅಧಿಕಾರಿಗಳಿಂದ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಾರ್ವಜನಿಕ ದೂರು ಮತ್ತು ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಬೀಜ, ರಸಗೊಬ್ಬರದ ಸಮಸ್ಯೆಗಳನ್ನು ತಿಳಿದು, ಪರಿಹರಿಸುವ ಉದ್ದೇಶದಿಂದ ಕಲಘಟಗಿ ಪಟ್ಟಣದ ಬೀಜ, ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಸೋಮವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಗೊಬ್ಬರ ಖರೀದಿಗೆ ಬಂದಿದ್ದ ರೈತರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕೆಲವು ರಸಗೊಬ್ಬರ ಮಾರಾಟಗಾರರು ಮತ್ತು ಇತರರು ರೈತರಿಗೆ ರಸಗೊಬ್ಬರ ವಿತರಿಸುವಲ್ಲಿ ಕಾನೂನು, ಸರಕಾರದ ಆದೇಶ ಮೀರಿ ವರ್ತಿಸುತ್ತಿರುವುದು ಮತ್ತು ರೈತರನ್ನು ವಂಚಿಸುತ್ತಿರುವುದು ಕಂಡು ಬರುತ್ತಿದೆ. ನಿಯಮಾನುಸಾರ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ, ಕಳನಾಶಕ ವಿತರಿಸುವುದನ್ನು ಪರಿಶೀಲಿಸಲು, ನಿರಂತರ ನಿಗಾವಹಿಸಲು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಾಗುವಂತೆ ಪ್ರತಿ ತಾಲೂಕಿಗೆ ಆಯಾ ತಹಸೀಲ್ದಾರರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗುತ್ತದೆ ಎಂದರು.

ಬೇಡಿಕೆಗಿಂತ ಹೆಚ್ಚು ಯೂರಿಯಾ ಸೇರಿ ವಿವಿಧ ರಸಗೊಬ್ಬರಗಳನ್ನು ರೈತರ ಬೇಡಿಕೆ ಮೇರೆಗೆ ಕಲಘಟಗಿ ತಾಲೂಕಿಗೆ ಕೃಷಿ ಇಲಾಖೆ ಪೂರೈಸಿದೆ. ಆದರೂ ರೈತರು ಪ್ರತಿ ದಿನ ಗೊಬ್ಬರ ಖರೀದಿಗೆ ಅಂಗಡಿಗಳ ಮುಂದೆ ಸಾಲು ನಿಲ್ಲುತ್ತಿದ್ದಾರೆ. ಗೊಬ್ಬರ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಈ ಕುರಿತು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಿ, ವಿವರ ಪಡೆದುಕೊಳ್ಳುತ್ತೇನೆ. ಗೊಬ್ಬರದ ಕಳ್ಳ ಮಾರಾಟ, ಅನರ್ಹರಿಗೆ ಮತ್ತು ಕೃಷಿಕರಲ್ಲದವರಿಗೆ ಗೊಬ್ಬರ ಪೂರೈಸಿದ್ದು ಅಥವಾ ಅಕ್ರಮ ದಾಸ್ತಾನು ಮಾಡಿ, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದ್ದರೆ, ಅಂತವರ ವಿರುದ್ಧ ಎಫ್.ಐ.ಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಮತ್ತು ಮಾರಾಟದ ಲೈಸನ್ಸ್ ರದ್ದು ಮಾಡಿ ಅಂಗಡಿ ಸೀಲ್ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಲಘಟಗಿ ತಹಸೀಲ್ದಾರ ಬಸವರಾಜ ಬೆಣ್ಣೆಶಿರೂರು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಪ್ರಭಾರಿ ಕೃಷಿ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಸೇರಿದಂತೆ ಇತರ ಅಧಿಕಾರಿಗಳು, ರೈತ ಮುಖಂಡರು, ಸಾರ್ವಜನಿಕರು ಇದ್ದರು.

ಪ್ರತಿ ರಸಗೊಬ್ಬರ ಮಾರಾಟ ಅಂಗಡಿ ಮುಂದೆ ಅವರಲ್ಲಿ ಲಭ್ಯವಿರುವ ರಸಗೊಬ್ಬರಗಳು, ಅವುಗಳ ದರ, ಮಾರಾಟವಾದ ಚೀಲಗಳು, ದಾಸ್ತಾನು ವಿವರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ದಪ್ಪ ಅಕ್ಷರಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಇದರಿಂದ ರೈತರಿಗೆ ಅಗತ್ಯ ಮಾಹಿತಿ ಲಭಿಸಿ, ಅನಗತ್ಯ ಸಮಯ ಹಾಳು ತಪ್ಪುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!