ರಾಯಚೂರು: ಕಲಿಯುಗ ಕಾಮಧೇನು ಎಂದೇ ಪ್ರಸಿದ್ಧಿಯಲ್ಲಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಏಪ್ರಿಲ್ ತಿಂಗಳ ಮೊದಲ 22 ದಿನಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಒಟ್ಟು 3.25 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ಬಿರು ಬೇಸಿಗೆಯ ನಡುವೆಯೂ ಶಾಲೆ-ಕಾಲೇಜು ರಜೆ ಹಿನ್ನೆಲೆ ಭಕ್ತರು ದಂಡು ದಂಡಾಗಿ ಮಠಕ್ಕೆ ಹರಿದು ಬಂದಿದ್ದು, ಕಾಣಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಸಂಗ್ರಹವಾದ ಕಾಣಿಕೆಯಲ್ಲಿ 3,15,62,354 ರೂಪಾಯಿ ಕರೆನ್ಸಿ ನೋಟುಗಳು ಹಾಗೂ 10,34,500 ರೂಪಾಯಿ ನಾಣ್ಯಗಳು ಸೇರಿವೆ.
ಇದೇ ವೇಳೆ ಭಕ್ತರು 47 ಗ್ರಾಂ ಚಿನ್ನ ಮತ್ತು 592 ಗ್ರಾಂ ಬೆಳ್ಳಿಯನ್ನು ಕೂಡ ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಮಂತ್ರಾಲಯದ ರಾಯರ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು ಮತ್ತು ಕರ ಸೇವಕರು ಪಾಲ್ಗೊಂಡಿದ್ದರು.
ಒಟ್ಟಾರೆ, ಭಕ್ತರ ಅಪಾರ ಭಕ್ತಿ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುವಂತೆ ಕೋಟ್ಯಾಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿರುವುದು ವಿಶೇಷವಾಗಿದೆ.



