ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ನಟಿ ರಚಿತಾ ರಾಮ್ ಅವರಿಗೆ ನಿರಾಸೆಯಾಗಿದೆ.
ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಲು ರಚಿತಾ ರಾಮ್ ಕಾರಾಗೃಹದ ಆವರಣಕ್ಕೆ ಆಗಮಿಸಿದ್ದರು. ನಿಯಮಗಳ ಪ್ರಕಾರ, ರಚಿತಾ ರಾಮ್ ಭೇಟಿ ವಿಚಾರವನ್ನು ಜೈಲಾಧಿಕಾರಿಗಳು ದರ್ಶನ್ ಅವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಆದರೆ, ಹೊರಗಿನಿಂದ ಬಂದವರನ್ನು ಭೇಟಿಯಾಗಲು ದರ್ಶನ್ ನಿರಾಕರಿಸಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಸುಮಾರು ಎರಡು ಗಂಟೆಗಳ ಕಾಲ ಕಾಯುತ್ತಿದ್ದ ರಚಿತಾ ರಾಮ್ ಅವರು ಭೇಟಿಯಾಗದೆ ಜೈಲಿನಿಂದ ವಾಪಸ್ ತೆರಳಿದ್ದಾರೆ.
ಜೈಲು ಮೂಲಗಳ ಪ್ರಕಾರ, ದರ್ಶನ್ ಅವರು ಸದ್ಯ ಪತ್ನಿ ವಿಜಯಲಕ್ಷ್ಮಿ, ಮಗ, ತಾಯಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರನ್ನು ಹೊರತುಪಡಿಸಿ ಇತರ ಆಪ್ತರು ಅಥವಾ ಚಿತ್ರರಂಗದ ಸಹೋದ್ಯೋಗಿಗಳನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.



