ಚಿಕ್ಕಮಗಳೂರು: ತಾನು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡು ಸಾರ್ವಜನಿಕರಿಗೆ ಹಣ ಹಾಗೂ ಚಿನ್ನಾಭರಣ ವಂಚಿಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ರಾಮನಗರ ಮೂಲದ ನಿವೇದಿತಾ ಗೌಡ ಬಂಧಿತ ಆರೋಪಿ.
ಚಿಕ್ಕಮಗಳೂರು ನಗರದಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದ ನಿವೇದಿತಾ, ಅಲ್ಲಿಗೆ ಬರುತ್ತಿದ್ದ ಯುವಕರು ಹಾಗೂ ಮಹಿಳೆಯರೊಂದಿಗೆ ಪರಿಚಯ ಬೆಳೆಸಿಕೊಳ್ಳುತ್ತಿದ್ದಳು. ಬಳಿಕ ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿದ್ದು, ಸದ್ಯ ರಜೆಯ ಮೇಲೆ ಚಿಕ್ಕಮಗಳೂರಿಗೆ ಬಂದಿರುವುದಾಗಿ ಹೇಳಿ ನಂಬಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಜನರು ತನ್ನನ್ನು ಪೊಲೀಸ್ ಅಧಿಕಾರಿ ಎಂದು ನಂಬುವಂತೆ ಮಾಡಲು ಪೊಲೀಸ್ ಅಧಿಕಾರಿಗಳ ಮಾದರಿಯ ಹೇರ್‌ಸ್ಟೈಲ್ ಹಾಗೂ ಉಡುಪು ಧರಿಸುತ್ತಿದ್ದಳು ಎನ್ನಲಾಗಿದೆ. ಪರಿಚಯ ಗಾಢವಾದ ಬಳಿಕ ವಿವಿಧ ನೆಪವೊಡ್ಡಿ ಹಣ, ಚಿನ್ನಾಭರಣ ಹಾಗೂ ಐಷಾರಾಮಿ ಕಾರುಗಳನ್ನು ಪಡೆದುಕೊಳ್ಳುತ್ತಿದ್ದಳು ಎಂಬ ಆರೋಪವಿದೆ. ಓಡಾಟಕ್ಕೆ ಬೇಕು ಎಂದು ಪಡೆದ ಕೆಲವು ಕಾರುಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಹಣ ಮಾಡಿಕೊಂಡಿದ್ದಳು ಎಂಬ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ನಿವೇದಿತಾ 25ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಹಣ ಹಾಗೂ ಚಿನ್ನಾಭರಣ ವಂಚಿಸಿರುವ ಆರೋಪ ಬೆಳಕಿಗೆ ಬಂದಿದೆ. ಮೋಸ ಹೋಗಿರುವುದಾಗಿ ಹೇಳಿಕೊಂಡ 20ಕ್ಕೂ ಹೆಚ್ಚು ಮಂದಿ ದೂರು ನೀಡಿದ್ದು, ಬಸವನಹಳ್ಳಿ ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ದೂರುಗಳ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ನಿವೇದಿತಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ ಬೇರೆ ಬೇರೆ ಹೆಸರುಗಳಲ್ಲಿರುವ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ ಎನ್ನಲಾಗಿದೆ. ಅವುಗಳನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು ಮಾತ್ರವಲ್ಲದೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಇದೇ ರೀತಿಯಲ್ಲಿ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ವಂಚಿಸಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.
ವಂಚನೆಯಿಂದ ಪಡೆದಿದ್ದ ಎನ್ನಲಾದ ಹಣ ಹಾಗೂ ಚಿನ್ನಾಭರಣವನ್ನು ತನ್ನ ಪ್ರಿಯಕರ ದೇವ್ ಎಂಬಾತನಿಗೆ ನೀಡಿರುವುದಾಗಿ ನಿವೇದಿತಾ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇವ್ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿರುವ ಪೊಲೀಸರು, ಆತನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ ಹಾಗೂ ವಂಚನೆಯ ಒಟ್ಟು ಮೊತ್ತ ಎಷ್ಟು ಎಂಬುದರ ಕುರಿತು ತನಿಖೆ ಮುಂದುವರಿದಿದೆ.



