ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗಸಂದ್ರ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಸಣ್ಣ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸ್ಪಷ್ಟಪಡಿಸಿದೆ.
ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯ ಪ್ರಕಾರ, ಮಧ್ಯಾಹ್ನ ಸುಮಾರು 1.30 ಗಂಟೆ ವೇಳೆಗೆ ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ (Emergency Exit) ಪ್ರದೇಶದ ಸಮೀಪ ಅಳವಡಿಸಲಾಗಿದ್ದ ಸೂಚನಾ ಫಲಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಮಾಹಿತಿ ದೊರೆಯುತ್ತಿದ್ದಂತೆಯೇ ಮೆಟ್ರೋ ಕಾರ್ಯಾಚರಣೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಕೆಲವೇ ಕ್ಷಣಗಳಲ್ಲಿ ನಂದಿಸಿದ್ದಾರೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಗ್ನಿ ಅವಘಡದ ಪರಿಣಾಮ ನಮ್ಮ ಮೆಟ್ರೋ ರೈಲು ಸಂಚಾರ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಸಿರು ಮಾರ್ಗದ ಮಾದಾವರ–ಸಿಲ್ಕ್ ಇನ್‌ಸ್ಟಿಟ್ಯೂಟ್ ಮಾರ್ಗ ಸೇರಿದಂತೆ ಎಲ್ಲಾ ಮೆಟ್ರೋ ಸೇವೆಗಳು ಎಂದಿನಂತೆ ಸುಗಮವಾಗಿ ಸಂಚರಿಸುತ್ತಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.



