ವಿಜಯಸಾಕ್ಷಿ ಸುದ್ದಿ, ಗದಗ: ‘ಗದಗ ಉತ್ಸವ’ ಕೇವಲ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವಲ್ಲ. ಇದು ಗದಗ, ರಾಜ್ಯ ಹಾಗೂ ಅಂತರ್ರಾಜ್ಯದ ಉತ್ಪನ್ನಗಳು ಮತ್ತು ಉದ್ಯಮಗಳ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಹಾಗೂ ಅವುಗಳಿಗೆ ಮಾರುಕಟ್ಟೆ ಒದಗಿಸುವ ವೇದಿಕೆಯಾಗಿದೆ ಎಂದು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜಿ.ಕೆ. ಆದಪ್ಪಗೌಡ್ರ ಹೇಳಿದರು.
ನಗರದ ಎ.ಪಿ.ಎಂ.ಸಿ. ಯಾರ್ಡ್ನ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಆ.14ರಿಂದ 18ರವರೆಗೆ ನಡೆಯಲಿರುವ ‘ಗದಗ ಉತ್ಸವ-2026’ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶುಕ್ರವಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಹಾಗೂ ಕೃಷಿ ಉತ್ಪನ್ನಗಳ ಪ್ರಮುಖ ಮಾರುಕಟ್ಟೆಯಾಗಿರುವ ಗದಗ ಜಿಲ್ಲೆ ಇದೀಗ ವೇಗವಾಗಿ ಉದ್ಯಮೀಕರಣದತ್ತ ಸಾಗುತ್ತಿದೆ. ಪ್ರಮುಖ ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿರುವ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಹೆಚ್ಚಾಗುವ ಎಲ್ಲ ಅವಕಾಶಗಳಿವೆ ಎಂದರು.
ಗದಗ ಜಿಲ್ಲೆಯಲ್ಲಿ ಉಗ್ರಾಣ, ಶೀತಲ ಸರಕು ಸಂಗ್ರಹಣಾ ಘಟಕ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ರಫ್ತು ಘಟಕಗಳನ್ನು ಸ್ಥಾಪಿಸಲು ಪೂರಕ ವಾತಾವರಣವಿದೆ. ಇಂತಹ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಜಿಲ್ಲೆಯ ತಲಾ ಆದಾಯ ಹಾಗೂ ಉದ್ಯೋಗ ಸೃಷ್ಟಿ ಹೆಚ್ಚಲಿದೆ ಎಂದು ಹೇಳಿದರು.
ಯುವಕರು ಉದ್ಯೋಗ ಅರಸಿ ಹೋಗುವವರಾಗದೆ, ಉದ್ಯೋಗ ನೀಡುವ ಉದ್ಯಮಿಗಳಾಗಬೇಕು. ಸಣ್ಣ, ಅತಿ ಸಣ್ಣ ಹಾಗೂ ಗುಡಿ ಕೈಗಾರಿಕೆಗಳಿಗೆ ಜಿಲ್ಲೆಯಲ್ಲಿ ಅಪಾರ ಅವಕಾಶಗಳಿವೆ ಎಂದು ಕರೆ ನೀಡಿದರು.
ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಭೂಮಿಯ ಹೆಚ್ಚಿನ ಬೆಲೆ ಹಾಗೂ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರ ರಿಯಾಯಿತಿ ದರದಲ್ಲಿ ಕೈಗಾರಿಕಾ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಬೇಕು. ಜಿಲ್ಲೆಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಿದರೆ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಒತ್ತಾಯಿಸಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಸರ್ಕಾರದ ಸಹಯೋಗದಲ್ಲಿ ಶಾಶ್ವತ ವಸ್ತು ಪ್ರದರ್ಶನ ಕೇಂದ್ರ ನಿರ್ಮಿಸಲು ಮುಂದಾದರೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ವರ್ಷದಿಂದ ವರ್ಷಕ್ಕೆ ‘ಗದಗ ಉತ್ಸವ’ದ ವ್ಯಾಪ್ತಿ ಹಾಗೂ ವೈಭವ ಹೆಚ್ಚುತ್ತಿರುವುದು ಶ್ಲಾಘನೀಯ. ಇಂತಹ ಮೇಳಗಳಿಂದ ಸ್ಥಳೀಯ ಕೈಗಾರಿಕೆಗಳು, ಉತ್ಪನ್ನಗಳು ಮತ್ತು ಉದ್ಯಮಿಗಳು ಬೆಳೆಯಲು ಉತ್ತಮ ಅವಕಾಶ ದೊರೆಯುತ್ತದೆ ಎಂದರು.



