ಬೆಂಗಳೂರು: ಚಿನ್ನದ ಅಂಗಡಿಯಲ್ಲಿ ಆಭರಣ ಖರೀದಿಸುವ ನೆಪದಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹರೀಶ್ ಟಿ ಅಲಿಯಾಸ್ ಹರಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 13.20 ಲಕ್ಷ ರೂಪಾಯಿ ಮೌಲ್ಯದ ಎರಡು ಚಿನ್ನದ ಸರಗಳು ಹಾಗೂ ಏಳು ಚಿನ್ನದ ಉಂಗುರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳೆದ ಅಕ್ಟೋಬರ್ 29ರಂದು ಆರೋಪಿ ಯಲಹಂಕದ ಅನಂತಪುರ ಮುಖ್ಯ ರಸ್ತೆಯಲ್ಲಿರುವ ಕೃಷ್ಣ ಜ್ಯುವೆಲ್ಲರ್ಸ್ ಅಂಗಡಿಗೆ ತೆರಳಿದ್ದ. ಈ ವೇಳೆ ಚಿನ್ನಾಭರಣ ಖರೀದಿಸುವುದಾಗಿ ಹೇಳಿ ಎರಡು ಚಿನ್ನದ ಸರಗಳು ಹಾಗೂ ಏಳು ಉಂಗುರಗಳನ್ನು ಧರಿಸಿಕೊಂಡಿದ್ದ. ಬಳಿಕ ಕನ್ನಡಿಯಲ್ಲಿ ಆಭರಣಗಳನ್ನು ನೋಡಿಕೊಳ್ಳುವಂತೆ ನಾಟಕ ಮಾಡಿದ್ದಾನೆ.
ಅಂಗಡಿ ಮಾಲೀಕರು ಬೇರೆ ಆಭರಣಗಳನ್ನು ತೋರಿಸಲು ಮುಂದಾದಾಗ, ಅವರ ಗಮನ ಬೇರೆಡೆ ಸೆಳೆದ ಆರೋಪಿ ಧರಿಸಿಕೊಂಡಿದ್ದ ಚಿನ್ನಾಭರಣಗಳ ಸಮೇತ ಅಂಗಡಿಯಿಂದ ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಯಲಹಂಕ ನ್ಯೂ ಟೌನ್ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಆರೋಪಿ ಹರೀಶ್ ಟಿ ಅಲಿಯಾಸ್ ಹರಿಯನ್ನು ಬಂಧಿಸಿ, ಕಳ್ಳತನ ಮಾಡಿದ್ದ 13.20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.










