ಪ್ರಕೃತಿಯ ಕರುಣೆ ಮತ್ತೆ ಆಕಾಶದಿಂದ ಸುರಿಯುತ್ತಿದೆ. ಮೊಟ್ಟಮೊದಲ ಮಳೆಯ ಹನಿಗಳು ನೆಲದ ಮಡಿಲು ಹಾಸುಹೊಕ್ಕು ಆನಂದದಿಂದ ಕುಣಿಯುವಂತೆ ಮಾಡುತ್ತವೆ. ನೀರಿನ ಹನಿಗಳಿಂದ ಮರಗಳು ನವಚೈತನ್ಯವನ್ನು ಅನುಭವಿಸುತ್ತವೆ. ಹಕ್ಕಿಗಳು ಹರ್ಷದಿಂದ ಚಿಲಿಪಿಲಿ ಹಾಡು ಹಾಡುತ್ತವೆ, ಬೆಳೆಗಳು ಜೀವೋದ್ಘಾರದಂತೆ ಮೊಳಕು ಇಡುತ್ತವೆ. ಹೀಗೆ ಮಳೆ ಎಂದರೆ ಕೇವಲ ನೀರಿನ ಸುರಿವಷ್ಟೇ ಅಲ್ಲ, ಅದು ಬದುಕಿಗೆ ಶಕ್ತಿ ನೀಡುವ ದೇವತಾ ವರ.
ಈ ತಾಜಾ ಮಳೆಯ ಹನಿಗಳ ನಡುವೆ ನಾವು ನಮ್ಮ ಜವಾಬ್ದಾರಿಯನ್ನು ಮರೆತೆವೇನೋ ಎಂಬ ಭಾವನೆ ಮೂಡುತ್ತದೆ. ನಾವು ಪರಿಸರವನ್ನು ಹಾಳು ಮಾಡುತ್ತಾ ಬಂದಿದ್ದೇವೆ, ಇಂದಿನ ಜೀವನಶೈಲಿ, ನಗರೀಕರಣ, ಅರಣ್ಯ ನಾಶ, ಇವುಗಳೆಲ್ಲವೂ ಪ್ರಕೃತಿಗೆ ನೀಡಿದ ಗಾಯಗಳೇ. ಆದರೆ ನಾವು ಇದನ್ನು ನಿಲ್ಲಿಸಬಹುದಾದ ಹಂತದಲ್ಲಿದ್ದೇವೆ. ನಾವೆಲ್ಲರೂ ಕೈಜೋಡಿಸಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಸಣ್ಣ ಹೆಜ್ಜೆ ಇಟ್ಟರೆ ಅದು ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಅದರಲ್ಲಿ ಅತ್ಯಂತ ಸರಳ, ಪರಿಣಾಮಕಾರಿ ಹಾಗೂ ಶಾಶ್ವತ ಮಾರ್ಗವೆಂದರೆ ಗಿಡ ನೆಡುವುದು.
ಒಂದು ಗಿಡ ನೆಡುವುದರಿಂದ ನಾವು ಕೇವಲ ಪ್ರಪಂಚದ ಪರಿಸರ ಸಮಸ್ಯೆಗೆ ಪರಿಹಾರ ನೀಡುತ್ತಿರುವುದಿಲ್ಲ, ಬದಲಾಗಿ ಭವಿಷ್ಯದ ಪೀಳಿಗೆಗೆ ಜೀವ ನೀಡುತ್ತಿದ್ದೇವೆ. ಗಿಡಗಳು ವಾತಾವರಣದ ಕಾರ್ಬನ್ ಡೈಆಕ್ಸೈಡ್ ಅನ್ನು ತೆಗೆದುಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಇದು ಶುದ್ಧ ವಾಯುವಿನ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಮಳೆ ನೀರನ್ನು ಇಂಗಿಸಿ ನೆಲದ ನದಿ-ಬಾವಿಗಳ ಶುದ್ಧೀಕರಣಕ್ಕೂ ಸಹಕಾರಿ. ಮಣ್ಣಿನ ಇಂಧನ ಶಕ್ತಿ ಹೆಚ್ಚಿಸಲು, ಕಳಪೆ ಭೂಮಿಯನ್ನು ಪರಿವರ್ತಿಸುವಲ್ಲಿಯೂ ಗಿಡಗಳ ಪಾತ್ರ ಅಪಾರ.
ಮಳೆಗಾಲವು ಗಿಡ ನೆಡುವ ಅತ್ಯುತ್ತಮ ಸಮಯ. ಮಳೆಯ ತಂಪು, ಮಣ್ಣು ತೇವದಿಂದ ಕೂಡಿರುವುದು ಬೀಜಗಳ ಮೊಳೆಯುವಿಕೆಗೆ ಸಹಾಯಕವಾಗುತ್ತದೆ. ನೆಟ್ಟ ಗಿಡಗಳು ಸುಲಭವಾಗಿ ನೆಲದೊಂದಿಗೆ ಬೇರೂರಿ ಬೆಳೆದು ಪರಿಪೂರ್ಣ ಮರಗಳಾಗಿ ಪರಿವರ್ತನೆಗೊಳ್ಳುತ್ತವೆ.
ಪರಿಸರ ರಕ್ಷಣೆ ಎಂಬುದು ಕೇವಲ ಸರ್ಕಾರದ ಹೊಣೆಗಾರಿಕೆ ಅಲ್ಲ. ಪ್ರತಿಯೊಬ್ಬ ನಾಗರಿಕನೂ ತಮ್ಮ ಜವಾಬ್ದಾರಿಯನ್ನು ಗುರುತಿಸಬೇಕು. ಶಾಲಾ ಮಕ್ಕಳಿಂದ ಆರಂಭಿಸಿ ಹಿರಿಯ ನಾಗರಿಕರವರೆಗೆ ಎಲ್ಲರೂ ತಮ್ಮ ಮನೆಯಿಂದ, ಶಾಲೆಯಿಂದ, ಪಾರ್ಕ್ನಿಂದ ಅಥವಾ ಖಾಲಿ ಜಾಗದಿಂದ ಗಿಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. `ಒಬ್ಬೊಬ್ಬ ವ್ಯಕ್ತಿಯೂ ವರ್ಷಕ್ಕೆ ಕನಿಷ್ಠ ಒಂದು ಗಿಡ ನೆಡಲಿ’ ಎಂಬ ಸಂಕಲ್ಪ ನಮ್ಮ ಗ್ರಾಮ-ನಗರಗಳನ್ನು ಹಸಿರಾಗಿಸಲು ಸಾಕು.
ಪರಿಸರ ಉಳಿಸುವುದು ಅಂದರೆ ನಮ್ಮ ಬದುಕನ್ನು ಉಳಿಸುವುದೇ ಆಗಿದೆ. ಗಿಡ ನೆಡುವ ಕೆಲಸಕ್ಕೆ ತಕ್ಷಣವೇ ಫಲಿತಾಂಶ ಗೋಚರವಾಗದಿದ್ದರೂ ಅದು ನಮ್ಮ ಮುಂದಿನ ಪೀಳಿಗೆಗೆ ಅಪಾರ ಕೊಡುಗೆಯಾಗುತ್ತದೆ. ಪ್ರಕೃತಿಯೊಂದಿಗೆ ನಂಟು ಬೆಳೆಸಿದಾಗ ಮಾತ್ರ ನಿಜವಾದ ಸಮೃದ್ಧಿ ಸಾಧ್ಯ.
ನಮ್ಮ ನಡಿಗೆಯೇ ಬದಲಾವಣೆಯ ಬೀಜವಾಗಲಿ. ಮಳೆ ಶುರುವಾಯಿತು ಬನ್ನಿ, ಗಿಡ ನೆಟ್ಟು ಪರಿಸರ ಉಳಿಸೋಣ!
-ರವಿ ಹೊಂಬಾಳೆ.
ಹವ್ಯಾಸಿ ಬರಹಗಾರರು, ಗದಗ.