ಬೆಂಗಳೂರು: ಜಮ್ಮು-ಕಾಶ್ಮೀರದ ಶ್ರೀನಗರದ ಹೈದರ್ಪೋರ ಪ್ರದೇಶದಲ್ಲಿರುವ ನೂತನ ಹೋಟೆಲ್‌ನಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಬೆಂಗಳೂರಿನ ಆರು ಮಂದಿ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಅರಿಸನ್ ಲಕ್ಷುರಿ ಹೋಟೆಲ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಲಿಫ್ಟ್ ಏಕಾಏಕಿ ಕುಸಿದು ಬಿದ್ದ ಕಾರಣ ಪ್ರವಾಸಿಗರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಶ್ರೀನಗರದ ಬರ್ಜುಲ್ಲಾದ ಬೋನ್ ಆ್ಯಂಡ್ ಜಾಯಿಂಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡವರನ್ನು ವೆಂಕಟೇಶ್ (65), ಡಿ. ಮಂಗಲಾ (54), ಕುಶಲ್ಲಾ (18), ಪಂಕಜಾ (16), ವೆಂಕಟಲಕ್ಷ್ಮಮ್ಮ (60) ಹಾಗೂ ಸೌಭಾಗ್ಯ (60) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ.
ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಲಿಫ್ಟ್ ಕುಸಿತಕ್ಕೆ ತಾಂತ್ರಿಕ ದೋಷವೇ ಅಥವಾ ನಿರ್ಲಕ್ಷ್ಯವೇ ಕಾರಣವೋ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಆದರೆ ಈವರೆಗೆ ಹೋಟೆಲ್ ಆಡಳಿತದಿಂದ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲ.
ಈ ಘಟನೆ ಪ್ರವಾಸಿಗರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.



