Home Blog Page 102

ಯುವಶಕ್ತಿ ಸಂಘಟನೆಯತ್ತ ಮಹತ್ವದ ಹೆಜ್ಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಯುವಕರನ್ನು ದೇಶದ ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಜಿಲ್ಲೆಯಲ್ಲಿ ೧೭೮ ‘ಭಾರತ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಟ್ಟಿದೆ. ೧೬ರಿಂದ ೩೫ ವರ್ಷದೊಳಗಿನ ಯುವಕ-ಯುವತಿಯರನ್ನು ಸಂಘಟಿಸಿ, ನಾಯಕತ್ವ ಗುಣ ಹಾಗೂ ದೇಶಪ್ರೇಮ ಬೆಳೆಸುವ ಜೊತೆಗೆ ಸಾಮಾಜಿಕ ಮತ್ತು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವ ಗುರಿ ಹೊಂದಲಾಗಿದೆ.

ನಗರದ ಜಿಲ್ಲಾಡಳಿತ ಭವನದ ಕೇಸ್ವಾನ್ ವಿಡಿಯೋ ಸಂವಾದ ಸಭಾಂಗಣದಲ್ಲಿ ನಡೆದ ‘ಭಾರತ ಜೋಡೋ ಯುವ ಸಂಘ’ಗಳ ಸ್ಥಾಪನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿದರು.

ಯುವಶಕ್ತಿಯು ದೇಶದ ಅತಿದೊಡ್ಡ ಸಂಪತ್ತು. ಅದನ್ನು ಸೃಜನಶೀಲ ಹಾಗೂ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸುವ ಮೂಲಕ ದೇಶದ ಅಭಿವೃದ್ಧಿಗೆ ವೇಗ ನೀಡಬೇಕು. ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಭಾರತ ಜೋಡೋ ಯುವ ಸಂಘಗಳನ್ನು ಪರಿಣಾಮಕಾರಿಯಾಗಿ ಸ್ಥಾಪಿಸಲು ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚಿಸಿದರು.

ಯೋಜನೆಯಡಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಸಂಘಗಳನ್ನು ರಚಿಸಲಾಗುವುದು. ಪ್ರತಿ ಸಂಘಕ್ಕೆ ವಾರ್ಷಿಕ ₹೧೦ ಲಕ್ಷ ಅನುದಾನ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಈಗಾಗಲೇ ೩,೫೦೦ಕ್ಕೂ ಅಧಿಕ ಸದಸ್ಯರು ನೋಂದಣಿಯಾಗಿದ್ದು, ಒಟ್ಟು ೧೮ ಸಾವಿರ ಯುವಕ-ಯುವತಿಯರನ್ನು ಸದಸ್ಯರನ್ನಾಗಿ ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಯುವಕರಲ್ಲಿ ನಾಯಕತ್ವದ ಗುಣ ಬೆಳೆಸುವುದು, ದೇಶಪ್ರೇಮದ ಭಾವನೆ ಮೂಡಿಸುವುದು ಹಾಗೂ ಅವರ ಶಕ್ತಿ ಮತ್ತು ಪ್ರತಿಭೆಯನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಲು ಸಂಘಗಳು ಉತ್ತಮ ವೇದಿಕೆಯಾಗಲಿವೆ. ಹೀಗಾಗಿ ಸಂಘಗಳ ಸ್ಥಾಪನೆ ಹಾಗೂ ಕಾರ್ಯನಿರ್ವಹಣೆಗೆ ಎಲ್ಲ ಇಲಾಖೆಗಳು ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಸಂಘಗಳ ಉದ್ದೇಶ, ಕಾರ್ಯನಿರ್ವಹಣೆ, ಅನುದಾನದ ಬಳಕೆ ಹಾಗೂ ಮೇಲ್ವಿಚಾರಣೆ ಕುರಿತು ಚರ್ಚಿಸಲಾಯಿತು. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಂಘಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮೆಹಬೂಬ್ ಎಂ. ತುಂಬುರಮಟ್ಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಮಿತ್ ಬಿದರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

೧೫ ಸದಸ್ಯರ ಕಾರ್ಯಕಾರಿ ಸಮಿತಿ

ಸಂಘಗಳ ಕಾರ್ಯನಿರ್ವಹಣೆ ಹಾಗೂ ಅನುದಾನದ ಸಮರ್ಪಕ ಬಳಕೆಗಾಗಿ ೧೫ ಮಂದಿ ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಗುವುದು. ಜಿಲ್ಲಾಧಿಕಾರಿಗಳು ಪದಾಧಿಕಾರಿಗಳನ್ನು ನೇಮಿಸಲಿದ್ದು, ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿ ಸಂಘಗಳ ಚಟುವಟಿಕೆಗಳನ್ನು ಗಮನಿಸಲಿದೆ.

ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು: ಡಾ. ಪ್ರದೀಪ ಉಗಲಾಟ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊರಹೊಮ್ಮುತ್ತಿರುವುದು ಶೈಕ್ಷಣಿಕ ಪ್ರಗತಿಯ ಸಂಕೇತವಾಗಿದೆ ಎಂದು ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಹೇಳಿದರು.

ತಾಲೂಕಿನ ಬೆಳಹೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಲಿಕಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅಭಿನಂದಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದರ ಪರಿಣಾಮ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇತ್ತೀಚಿನ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಡಾ. ಪ್ರದೀಪ ಉಗಲಾಟ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್. ದಿಂಡಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಮುನ್ನಡೆಯಬೇಕು ಎಂದರು.

ಡಿಡಿಪಿಐ ಹಾಗೂ ಬಿಇಒ ಅವರ ಮಾರ್ಗದರ್ಶನದಲ್ಲಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಮುದಾಯ ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವವೂ ಅತ್ಯಂತ ಮುಖ್ಯವಾಗಿದೆ. ರೋಟರಿ ಕ್ಲಬ್ ಪದಾಧಿಕಾರಿಗಳು ಶಾಲೆಗೆ ಆಗಮಿಸಿ ಸಸಿ ನೆಡುವುದರ ಜೊತೆಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿರುವುದು ಅಭಿನಂದನೀಯ ಎಂದರು.

ಸಚೇತನ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾಗೂ ವಿವಿಧ ಎಫ್‌ಎಲ್‌ಎನ್‌ ಕಲಿಕಾ ಸ್ಪರ್ಧೆಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ನೋಟ್‌ಬುಕ್ ಹಾಗೂ ಪೆನ್ಸಿಲ್‌ಗಳನ್ನು ವಿತರಿಸಿ ಕಲಿಕೆಗೆ ಉತ್ತೇಜನ ನೀಡಲಾಯಿತು.

ಕನ್ನಡ ಶಬ್ದಗಳನ್ನು ಬಿಡಿಸುವ ಸ್ಪರ್ಧೆಯಲ್ಲಿ ರೋಹಿತ ಹುಲಕೋಟಿ, ಕಿರಣ ಶಿಶುವಿನಹಳ್ಳಿ ಹಾಗೂ ಸ್ಪೂರ್ತಿ ಪಕ್ಕೀರಗೌಡ್ರ ವಿಜೇತರಾದರು. ಮೂಲಕ್ರಿಯೆಗಳ ಲೆಕ್ಕ ಬಿಡಿಸುವ ಸ್ಪರ್ಧೆಯಲ್ಲಿ ನಿವೇದಿತಾ ನರಗುಂದ, ಸ್ನೇಹಾ ನೀರಲಗಿ ಹಾಗೂ ಸಾನ್ವಿ ಮಡಿವಾಳರ ಸ್ಥಾನ ಪಡೆದರು.

ಮಗ್ಗಿ ಹೇಳುವ ಸ್ಪರ್ಧೆಯಲ್ಲಿ ಶಾಂಭವಿ ಹುಲಕೋಟಿ, ತನ್ವೀರ್ ನದಾಫ್ ಹಾಗೂ ರೋಹಿತ ಭರಮನಗೌಡ್ರ ವಿಜೇತರಾದರು. ನಾಲ್ಕನೇ ತರಗತಿಯ ಕನ್ನಡ ಉಕ್ತಲೇಖನ ಸ್ಪರ್ಧೆಯಲ್ಲಿ ವೇದಾ ದೊಡ್ಡಗೌಡ್ರ, ಸಾನ್ವಿ ಚಲವಾದಿ ಹಾಗೂ ಕೀರ್ತಿ ಉಪ್ಪಾರ ಉತ್ತಮ ಸಾಧನೆ ಮಾಡಿದರು.

ಐದನೇ ತರಗತಿಯ ಉಕ್ತಲೇಖನ ಸ್ಪರ್ಧೆಯಲ್ಲಿ ಅನುಪಮ ಹುಲಕೋಟಿ, ದೇವೇಂದ್ರಗೌಡ ಮುದಿಗೌಡ್ರ ಹಾಗೂ ತೇಜಸ್ವಿನಿ ಚಲವಾದಿ ವಿಜೇತರಾದರು. ಮೂಲಕ್ರಿಯೆಗಳ ಲೆಕ್ಕ ಬಿಡಿಸುವ ಸ್ಪರ್ಧೆಯಲ್ಲಿ ಸಾಬಣ್ಣಸಾಬ ಹೊಂಬಳ, ಪಲ್ಲವಿ ಪಕ್ಕಿರಗೌಡ್ರ ಹಾಗೂ ಪಲ್ಲವಿ ಹುಲಕೋಟಿ ಸಾಧನೆ ಮಾಡಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ ನೀಲಾ ಲಿಂಗನಾಯ್ಕರ, ಬಸಮ್ಮ ಕತ್ತಿ ಹಾಗೂ ಅನಿಸಾ ನದಾಫ್ ಸ್ಥಾನ ಪಡೆದರು. ಸಚೇತನ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ನೀಲಾ ಲಿಂಗನಾಯ್ಕರ ಸೇರಿದಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.

ವೇದಿಕೆಯಲ್ಲಿ ರೋಟರಿ ಕ್ಲಬ್ ಉಪಾಧ್ಯಕ್ಷ ಸುರೇಶ ಕುಂಬಾರ, ಕಾರ್ಯದರ್ಶಿ ಅಕ್ಷಯ್ ಶೆಟ್ಟಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪತ್ತೇಸಾಬ ದೊಡ್ಡಮನಿ, ಸದಸ್ಯ ಪರಸಪ್ಪ ಹುಲಕೋಟಿ ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕರಾದ ಬಿ.ಎಂ. ಸೈಯದ್, ಮಂಜುನಾಥ ಜಕ್ಕಲಿ, ರುಕ್ಮಿಣಿ ಗುಳಗಂದಿ, ಸುಜಾತಾ ಧೋಳ, ಸುಮಾ ತಿಪ್ಪರಡ್ಡಿ, ಲಲಿತಾ ಚನ್ನಪ್ಪಗೌಡರ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರೈತರೇ ಗಮನಿಸಿ: ಪಹಣಿಯಲ್ಲಿ ಬೆಳೆ ವಿವರ ಸರಿಯಾಗಿರಲಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಅರ್ಜಿಯಲ್ಲಿನ ಮಾಹಿತಿ ಹೊಂದಿಕೆಯಾಗದಿದ್ದರೆ ವಿಮೆ ಪರಿಹಾರ ತಿರಸ್ಕೃತಗೊಳ್ಳುವ ಸಾಧ್ಯತೆ ಇರುವುದರಿಂದ ರೈತರು ತಮ್ಮ ಪಹಣಿ ಪತ್ರಿಕೆಯಲ್ಲಿ ಬೆಳೆದಿರುವ ನಿಖರ ಬೆಳೆ ವಿವರಗಳನ್ನು ದಾಖಲಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

ಆ. ೨೩ರೊಳಗೆ ಬೆಳೆಗಳ ಮರುಸಮೀಕ್ಷೆ ನಡೆಯಲಿದ್ದು, ಆ. ೨೫ರೊಳಗೆ ಮೇಲ್ವಿಚಾರಕರ ಪರಿಶೀಲನೆ ಪೂರ್ಣಗೊಳ್ಳಲಿದೆ. ಸಮೀಕ್ಷೆ ನಡೆಯದ ತಾಕುಗಳಿಗೆ ಮಾತ್ರ ಆ. ೨೮ರೊಳಗೆ ರೈತರು ಆಕ್ಷೇಪಣೆ ಸಲ್ಲಿಸಬಹುದು. ಆ. ೩೧ರೊಳಗೆ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು. ನಂತರ ಯಾವುದೇ ವಿಸ್ತರಣೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ರೈತರು ತಮ್ಮ ಸರ್ವೇ ಸಂಖ್ಯೆಗೆ ಬೆಳೆ ಸಮೀಕ್ಷೆ ದಾಖಲಾಗಿದೆಯೇ ಎಂಬುದನ್ನು ‘ಬೆಳೆ ದರ್ಶಕ’ ಆ್ಯಪ್‌ನಲ್ಲಿ ಪರಿಶೀಲಿಸಬಹುದು. ಬೆಳೆ ವಿವರ ಅಥವಾ ಛಾಯಾಚಿತ್ರಗಳಲ್ಲಿ ತಪ್ಪಿದ್ದರೆ ಅದೇ ಆ್ಯಪ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಸರ್ಕಾರದ ವಿವಿಧ ಸವಲತ್ತು, ಬರ ಪರಿಹಾರ ಹಾಗೂ ಸಹಾಯಧನ ಪಡೆಯಲು ಪ್ರತಿಯೊಂದು ಸರ್ವೇ ಸಂಖ್ಯೆಯನ್ನು ಎಫ್‌ಐಡಿ ಮೂಲಕ ನೋಂದಾಯಿಸಿ ರೈತರ ಗುರುತಿನ ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ. ಆಧಾರ್ ಪ್ರತಿ, ಸಂಪರ್ಕಿತ ಮೊಬೈಲ್ ಸಂಖ್ಯೆ, ಪಹಣಿ, ಬ್ಯಾಂಕ್ ಪಾಸ್‌ಬುಕ್, ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಒನ್, ಕರ್ನಾಟಕ ಒನ್, ಸಾಮಾನ್ಯ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ ಅಥವಾ ಸಂಬಂಧಿಸಿದ ಇಲಾಖೆಗಳ ಕಚೇರಿಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಾಬ್‌ಕಾರ್ಡ್‌ಗಾಗಿ ಮನೆ ಬಾಗಿಲಿಗೆ ಅಧಿಕಾರಿಗಳು

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗ್ರಾಮೀಣ ಕುಟುಂಬಗಳಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಶಿರಹಟ್ಟಿ ತಾಲೂಕಿನಾದ್ಯಂತ ಆ. ೧೫ರಿಂದ ಸೆ. ೧೫ರವರೆಗೆ ಜಾಬ್‌ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನ ನಡೆಯುತ್ತಿದೆ.

ಅಭಿಯಾನದ ಅಂಗವಾಗಿ ಕಡಕೋಳ, ರಣತೂರ ಹಾಗೂ ಮಜ್ಜೂರು ಗ್ರಾಮಗಳಲ್ಲಿ ಜಾಬ್‌ಕಾರ್ಡ್ ಮೇಳ ಆಯೋಜಿಸಿ ಗ್ರಾಮಸ್ಥರಿಗೆ ಯೋಜನೆಯ ಕುರಿತು ಮಾಹಿತಿ ನೀಡಲಾಯಿತು.

ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್‌ಕಾರ್ಡ್ ಮೇಳ ನಡೆಸಲಾಗುತ್ತಿದ್ದು, ಗ್ರಾಮೀಣ ಕುಟುಂಬಗಳಿಗೆ ಹೊಸ ಜಾಬ್‌ಕಾರ್ಡ್ ಮಾಡಿಸಿಕೊಡುವುದು, ಹಳೆಯ ಜಾಬ್‌ಕಾರ್ಡ್ ನವೀಕರಿಸುವುದು, ಇ-ಕೆವೈಸಿ ಪೂರ್ಣಗೊಳಿಸುವುದು ಹಾಗೂ ಉದ್ಯೋಗದ ಬೇಡಿಕೆ ಸ್ವೀಕರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.

ಮಾಹಿತಿ, ಶಿಕ್ಷಣ ಹಾಗೂ ಸಂವಹನ ಚಟುವಟಿಕೆಗಳಡಿ ನಿಷ್ಕ್ರಿಯ ಜಾಬ್‌ಕಾರ್ಡ್ ಹೊಂದಿರುವ ಕುಟುಂಬಗಳನ್ನು ಗುರುತಿಸಿ ಮನೆಮನೆಗೆ ಭೇಟಿ ನೀಡಲಾಗುತ್ತಿದೆ. ಈ ವೇಳೆ ಯೋಜನೆಯಡಿ ಲಭ್ಯವಿರುವ ಅಕುಶಲ ಉದ್ಯೋಗ ಹಾಗೂ ವೈಯಕ್ತಿಕ ಸವಲತ್ತುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಕಾರ್ಮಿಕರ ಹಾಜರಾತಿ, ಕಾಮಗಾರಿಗಳ ಪ್ರಗತಿ ಹಾಗೂ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ನಿರ್ವಹಿಸುವುದಕ್ಕೂ ಒತ್ತು ನೀಡಲಾಗುತ್ತಿದೆ. ಸ್ವಗ್ರಾಮದಲ್ಲಿಯೇ ಉದ್ಯೋಗ ದೊರೆಯುವುದರಿಂದ ಉದ್ಯೋಗ ಅರಸಿ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ತಡೆಯುವ ಆಶಯವೂ ಯೋಜನೆಯದ್ದಾಗಿದೆ.

ಜಾಬ್‌ಕಾರ್ಡ್, ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳು ಹಾಗೂ ಉದ್ಯೋಗದ ಬೇಡಿಕೆ ಸಲ್ಲಿಕೆ ಕುರಿತು ಮಾಹಿತಿ ಅಗತ್ಯವಿರುವವರು ತಮ್ಮ ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

ದುರ್ಬಲ ವರ್ಗದವರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಒತ್ತು

ಅಭಿಯಾನದ ಮೂಲಕ ದುರ್ಬಲ ವರ್ಗದ ಜನರ ಯೋಜನಾ ಭಾಗವಹಿಸುವಿಕೆ ಹೆಚ್ಚಿಸಿ, ಉದ್ಯೋಗ ಸೃಷ್ಟಿಯ ಮೂಲಕ ಆರ್ಥಿಕ ಹಾಗೂ ಜೀವನೋಪಾಯ ಭದ್ರತೆ ಕಲ್ಪಿಸುವ ಗುರಿ ಹೊಂದಲಾಗಿದೆ. ಬರ ಪರಿಸ್ಥಿತಿಯನ್ನು ಎದುರಿಸಲು ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಹಾಗೂ ದೀರ್ಘಕಾಲೀನ ಜೀವನೋಪಾಯಕ್ಕೆ ನೆರವಾಗುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು.

— ವೀರೇಶ, ಮಾಹಿತಿ, ಶಿಕ್ಷಣ ಸಂಯೋಜಕ

ಸ್ವಗ್ರಾಮದಲ್ಲೇ ಉದ್ಯೋಗ ಒದಗಿಸುವ ಗುರಿ

ಅರ್ಹ ಗ್ರಾಮೀಣ ಕುಟುಂಬಗಳಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗ ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಜಾಬ್‌ಕಾರ್ಡ್ ಮೇಳದ ಮೂಲಕ ಹೆಚ್ಚಿನ ಮಾನವ ದಿನಗಳ ಸೃಷ್ಟಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.

— ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು

ಮನೆ ಬಾಗಿಲಿಗೆ ಅಂಚೆ ಸೇವೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕುಮಾರವ್ಯಾಸ ವ್ಯಾಪಾರ ಮಳಿಗೆ ಸಂಕೀರ್ಣದಲ್ಲಿ ಗುರುವಾರ ನೂತನ ಅಂಚೆ ಗ್ರಾಹಕ ಸೇವಾ ಕೇಂದ್ರಕ್ಕೆ ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ತ್ವರಿತ, ವಿಶ್ವಾಸಾರ್ಹ ಹಾಗೂ ಸುಲಭ ಅಂಚೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನೂತನ ಸೇವಾ ಕೇಂದ್ರ ಆರಂಭಿಸಲಾಗಿದೆ. ಇದರಿಂದ ನಗರದ ಜನರಿಗೆ ಅಗತ್ಯ ಅಂಚೆ ಸೇವೆಗಳು ಇನ್ನಷ್ಟು ವೇಗವಾಗಿ ಹಾಗೂ ಸುಲಭವಾಗಿ ಲಭ್ಯವಾಗಲಿವೆ ಎಂದರು.

ಗ್ರಾಹಕರ ಅನುಕೂಲಕ್ಕಾಗಿ ಗದಗ ನಗರದ ಹೃದಯ ಭಾಗದಲ್ಲಿ ನೂತನ ಅಂಚೆ ಫ್ರಾಂಚೈಸಿ ಹಾಗೂ ಗ್ರಾಹಕ ಸೇವಾ ಕೇಂದ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಂಚೆ ಇಲಾಖೆ ಇಂದು ಕೇವಲ ಪತ್ರಗಳನ್ನು ತಲುಪಿಸುವ ಸಂಸ್ಥೆಯಾಗಿರದೆ, ಜನರ ಅಗತ್ಯಗಳಿಗೆ ಸ್ಪಂದಿಸುವ ಸಮಗ್ರ ಸೇವಾ ಸಂಸ್ಥೆಯಾಗಿ ರೂಪಾಂತರಗೊಂಡಿದೆ ಎಂದು ಎಸ್.ಎಸ್. ಶಿರಹಟ್ಟಿ ಹೇಳಿದರು.

ತಂತ್ರಜ್ಞಾನ ಹಾಗೂ ನೂತನ ಸೇವಾ ಕೇಂದ್ರಗಳ ಮೂಲಕ ಅಂಚೆ ಸೇವೆಗಳು ಜನರ ಮನೆ ಬಾಗಿಲಿಗೆ ಇನ್ನಷ್ಟು ಹತ್ತಿರವಾಗುತ್ತಿವೆ. ನಗರದ ನಾಗರಿಕರು ಈ ಕೇಂದ್ರದ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಧಾನ ಅಂಚೆ ಪಾಲಕ ಲಕ್ಷ್ಮಣ ಅಸುಂಡಿ, ಅಂಚೆ ಸಹಾಯಕರಾದ ಎಂ.ಟಿ. ಕರಿಗಾರ, ಮಧು ಶಿರೂರ, ವೆಂಕಟೇಶ ಆಕಳವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಒಳ ಮೀಸಲಾತಿ ಫಲ: ವೈದ್ಯಕೀಯ ಶಿಕ್ಷಣದತ್ತ ವಿದ್ಯಾರ್ಥಿನಿ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಸುಮಾರು ೩೫ ವರ್ಷಗಳ ಒಳ ಮೀಸಲಾತಿ ಹೋರಾಟದ ಫಲವಾಗಿ ತಾಲೂಕಿನ ಮೋರಗೇರಿ ಗ್ರಾಮದ ಮಾದಿಗ ಸಮಾಜದ ವಿದ್ಯಾರ್ಥಿನಿ ಕುಮಾರಿ ದುರುಗಮ್ಮ ಉತ್ತಂಗಿ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಪಡೆದಿದ್ದಾರೆ.
ಒಳ ಮೀಸಲಾತಿ ಜಾರಿಯಿಂದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶ ದೊರೆತಿದೆ ಎಂದು ಮಹಾಸಭಾ ಅಧ್ಯಕ್ಷ ಪೂಜಾರ್ ಲೋಕಪ್ಪ ಮಾದರ ಹೇಳಿದರು.
ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಅವರನ್ನು ಉನ್ನತ ಶಿಕ್ಷಣದತ್ತ ಕೊಂಡೊಯ್ಯಬೇಕು. ದುರುಗಮ್ಮ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಮಾಜ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗದ್ದಿಕೇರಿ ಎಚ್. ದೊಡ್ಡಬಸಪ್ಪ, ಬೆಣಕಲ್ ಪ್ರಕಾಶ್, ವರಲಹಳ್ಳಿ ಶಿವು, ಮಂಜುನಾಥ ಬ್ಯಾಲಾಳ, ಬುಳ್ಳಪ್ಪ ಉಪ್ಪಾರಗಟ್ಟಿ, ಅರ್ಜುನ್ ಟಿ., ಕಿತ್ತೂರು ಮಲ್ಲಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಬಾಂಧವರು ಉಪಸ್ಥಿತರಿದ್ದರು.

ಹರಿಜಾತ್ರೆ ಎಂದರೆ ದೈವಶಕ್ತಿಯ ಆರಾಧನೆ: ಸದಾಶಿವಾನಂದ ಮಹಾಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಗದಗ: ಹರಿಜಾತ್ರೆ ಎಂದರೆ ತಾಯಿಯರ ಜಾತ್ರೆ. ತಾಯಿ ಎಂದರೆ ಶಕ್ತಿ. ಈ ಜಗತ್ತು ವಿಕಾಸವಾಗಿರುವುದೇ ಆ ಶಕ್ತಿಯಿಂದ ಎಂದು ಗದುಗಿನ ಶಿವಾನಂದ ಬ್ರಹ್ಮಮಠದ ಪೂಜ್ಯಶ್ರೀ ಜ. ಸದಾಶಿವಾನಂದ ಮಹಾಸ್ವಾಮೀಜಿ ಹೇಳಿದರು.

ನಗರದ ಒಕ್ಕಲಗೇರಿ ಓಣಿಯಲ್ಲಿ 18 ವರ್ಷಗಳ ಬಳಿಕ ನಡೆಯುತ್ತಿರುವ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವದ ಮೂರನೇ ದಿನದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಕೃತಿಯೇ ತಾಯಿ. ಆ ತಾಯಿಯ ಮಡಿಲಲ್ಲಿ ಎಲ್ಲರನ್ನೂ ಕಾಪಾಡುವ ಶಕ್ತಿಯಿದೆ. ಆ ತಾಯಿಗೆ ಉಡಿ ತುಂಬುವ ಮೂಲಕ ಕೃತಜ್ಞತೆ ಸಲ್ಲಿಸುವುದೇ ಜಾತ್ರೆಯ ಉದ್ದೇಶ. ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ದೇವಿಯ ಸ್ಥಾನ ನೀಡಲಾಗುತ್ತದೆ. ಮನೆಯಲ್ಲಿ ಹೆಣ್ಣುಮಕ್ಕಳನ್ನು ಸಾಕ್ಷಾತ್ ದೇವಿಯ ರೂಪದಲ್ಲಿ ಕಾಣುವ ಸಂಪ್ರದಾಯವಿದೆ ಎಂದರು.

18 ವರ್ಷಗಳಿಗೊಮ್ಮೆ ನಡೆಯುವ ಹರಿಜಾತ್ರೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಯಾವ ಸಮಯದಲ್ಲಿ ಯಾವ ಕಾರ್ಯ ನಡೆಯಬೇಕು ಎಂಬುದೂ ದೈವಿಚ್ಛೆಯಾಗಿರುತ್ತದೆ. ದೈವಶಕ್ತಿಯನ್ನು ಆರಾಧಿಸುವುದೇ ಜಾತ್ರೆಯ ಮೂಲ ಆಶಯ ಎಂದು ಶ್ರೀಗಳು ಹೇಳಿದರು.

ಕಪ್ಪತಗುಡ್ಡದ ಪರಿಸರ ಸಂರಕ್ಷಣೆ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಕಪ್ಪತಗುಡ್ಡ ಮಲಿನವಾಗುತ್ತಿದೆ. ಪರಿಸರ ಹಾಳಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡುವಂತೆ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರಲ್ಲಿ ಎಲ್ಲರೂ ಪ್ರಾರ್ಥಿಸೋಣ ಎಂದು ಕರೆ ನೀಡಿದರು.

ಆಧ್ಯಾತ್ಮಿಕ ವಿದ್ಯಾಶ್ರಮದ ಪೂಜ್ಯಶ್ರೀ ನೀಲಮ್ಮ ತಾಯಿ ಅಸುಂಡಿ ಅಮ್ಮನವರು ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ್ ಅಧ್ಯಕ್ಷತೆ ವಹಿಸಿದ್ದರು. ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಸಾಮಾಜಿಕ ಕಾರ್ಯಕರ್ತ ಮಹೇಶ ದಾಸರ, ಗಣ್ಯ ವ್ಯಾಪಾರಸ್ಥ ಶರಣಪ್ಪ ಸಾಸನೂರ, ಯುವ ಧುರೀಣ ಸಂಗಮೇಶ ಕವಳಿಕಾಯಿ, ಉದ್ಯಮಿ ಸಾಗರ ಪವಾರ, ಗಣ್ಯ ವ್ಯಾಪಾರಸ್ಥ ಫಕೀರಸಾ ಬಾಂಡಗೆ ಮುಖ್ಯ ಅತಿಥಿಗಳಾಗಿದ್ದರು.

ನಗರಸಭೆ ಸದಸ್ಯರಾದ ಶ್ವೇತಾ ದಂಡಿನ, ವಿಜಯಲಕ್ಷ್ಮೀ ದಿಂಡೂರ, ಗೂಳಪ್ಪ ಮುಶಿಗೇರಿ, ಪ್ರಕಾಶ ಅಂಗಡಿ, ಚಂದ್ರಶೇಖರ ತಡಸದ, ಜಾತ್ರಾ ಕಮಿಟಿ ಕಾರ್ಯದರ್ಶಿ ಗಂಗಾಧರ ಮೆಲಗೇರಿ, ಚಂದ್ರಶೇಖರ ಶೆಟ್ಟರ, ಮಹೇಶ ಶಾಬಾದಿಮಠ, ಕಿರಣ ಭೂಮಾ ಪಾಲನಕರ, ಸಂತೋಷ ಎಂ.ಎಂ. ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪಂಚಾಕ್ಷರಿ ಅಂಗಡಿ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಡೋಣಿಯ ನಿಂಗಪ್ಪ ಗುಡ್ಡದ ಅವರಿಂದ ಡೊಳ್ಳಿನ ಪದ ಹಾಗೂ ರಾಮದುರ್ಗ ತಂಡದಿಂದ ಜುಗಲಬಂದಿ ಕಾರ್ಯಕ್ರಮ ನಡೆಯಿತು. ಜಾತ್ರೋತ್ಸವದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸದ್ಭಾವನೆಯಿಂದಲೇ ರಾಷ್ಟ್ರದ ಏಕತೆಗೆ ಬಲ: ಪರಶುರಾಮ ಗುಡದಾರಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಾತಿ, ಧರ್ಮ, ಭಾಷೆ ಹಾಗೂ ಪ್ರಾದೇಶಿಕತೆಯ ಹೆಸರಿನಲ್ಲಿ ಇರುವ ಭೇದಭಾವಗಳನ್ನು ತೊಲಗಿಸಿ, ಸಮಾಜದಲ್ಲಿ ಸದ್ಭಾವನೆ, ಸೌಹಾರ್ದತೆ ಹಾಗೂ ಶಾಂತಿಯನ್ನು ಬೆಳೆಸುವ ಮೂಲಕ ರಾಷ್ಟ್ರದ ಏಕತೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಗುರುವಾರ ಸದ್ಭಾವನಾ ದಿನಾಚರಣೆ ಅಂಗವಾಗಿ ಸಿಬ್ಬಂದಿಯೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಶಾಲಾ ಹಂತದಿಂದಲೇ ಸಂವಿಧಾನದ ಆಶಯ, ರಾಷ್ಟ್ರೀಯ ಏಕತೆ ಹಾಗೂ ಸೌಹಾರ್ದತೆಯ ಮಹತ್ವವನ್ನು ತಿಳಿಸಿಕೊಟ್ಟರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ದೇಶದ ಏಕತೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ವೈವಿಧ್ಯತೆಯಲ್ಲಿಯೇ ಭಾರತದ ಶಕ್ತಿ ಅಡಗಿದೆ. ಹೀಗಾಗಿ ಜಾತಿ, ಧರ್ಮ, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ಜನರನ್ನು ವಿಭಜಿಸುವ ಮನೋಭಾವಕ್ಕೆ ಅವಕಾಶ ನೀಡದೆ, ಪರಸ್ಪರ ಸಹಕಾರ ಹಾಗೂ ಸಹೋದರತ್ವದಿಂದ ಬದುಕಬೇಕು ಎಂದು ಹೇಳಿದರು.

ಸದ್ಭಾವನಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿದಿನದ ಬದುಕಿನಲ್ಲಿ ಸೌಹಾರ್ದತೆ, ಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು ಎಂದು ಪರಶುರಾಮ ಗುಡದಾರಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಸಿಬ್ಬಂದಿ ಹನುಮಂತಪ್ಪ ನಂದೆಣ್ಣವರ ಅವರು ಸದ್ಭಾವನಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಕಂದಾಯ ಅಧಿಕಾರಿ ಸುರೇಶ ಪೂಜಾರ, ಎಸ್.ಪಿ. ಲಿಂಬಯ್ಯನಮಠ, ನೇತ್ರಾ ಹೊಸಮನಿ, ಮಹೇಶ ಹೊಸಮನಿ, ಹೇಮರಾಜ ಅಣ್ಣಿಗೇರಿ, ಸಿದ್ದಪ್ಪ ಬಾಲೇಹೊಸೂರು, ಮಂಜುನಾಥ ಹೆಬ್ಬಾಳ, ಶೈಲಜಾ ಪಾಟೀಲ ಸೇರಿದಂತೆ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

ಗದಗ ಉತ್ಸವಕ್ಕೆ ಭವ್ಯ ಮೆರುಗು: ಯುವ ಉದ್ಯಮಿ ಅಪ್ಪುರಾಜ್‌ಗೆ ಸನ್ಮಾನ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಎಪಿಎಂಸಿ ಯಾರ್ಡ್‌ನ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆದ ‘ಗದಗ ಉತ್ಸವ–೨೦೨೬’ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿತು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಹಾಗೂ ಸಣ್ಣ ಉದ್ಯಮ ವಿಭಾಗ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಿದ್ದ ಉತ್ಸವಕ್ಕೆ ಭವ್ಯ ವೇದಿಕೆ, ಆಕರ್ಷಕ ದೀಪಾಲಂಕಾರ, ಅಚ್ಚುಕಟ್ಟಾದ ಪೀಠೋಪಕರಣ ವ್ಯವಸ್ಥೆ ಹಾಗೂ ಅತ್ಯಾಧುನಿಕ ಧ್ವನಿವರ್ಧಕ ವ್ಯವಸ್ಥೆಗಳು ವಿಶೇಷ ಮೆರುಗು ನೀಡಿದವು.

ಉತ್ಸವದ ಯಶಸ್ಸಿನ ಹಿಂದೆ ತಮ್ಮ ಸೃಜನಶೀಲತೆ ಹಾಗೂ ಪರಿಶ್ರಮದ ಮೂಲಕ ಪ್ರಮುಖ ಪಾತ್ರ ವಹಿಸಿದ ‘ಅಪ್ಪುರಾಜ್ ಇವೆಂಟ್ಸ್’ನ ಯುವ ಉದ್ಯಮಿ ಅಪ್ಪುರಾಜ್ ಭದ್ರಕಾಳಮ್ಮನಮಠ ಅವರನ್ನು ಗದಗ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ತಮ್ಮ ಉತ್ಸಾಹಿ ಕಲಾ ತಂಡದೊಂದಿಗೆ ಉತ್ಸವದ ವೇದಿಕೆ ಸಜ್ಜುಗೊಳಿಸುವಿಕೆ, ಅಲಂಕಾರ ಹಾಗೂ ವಿವಿಧ ವ್ಯವಸ್ಥೆಗಳಿಗೆ ನೀಡಿದ ಸೇವೆಯನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಪುಣೇಕರ ಶ್ಲಾಘಿಸಿ, ಅಪ್ಪುರಾಜ್ ಅವರನ್ನು ಅಭಿನಂದಿಸಿದರು.

ಯುವ ಉದ್ಯಮಿ ಅಪ್ಪುರಾಜ್ ಅವರ ಸೃಜನಶೀಲತೆ, ಸಂಘಟನಾ ಸಾಮರ್ಥ್ಯ ಹಾಗೂ ಅವರ ಕಲಾತಂಡದ ಪರಿಶ್ರಮಕ್ಕೆ ದೊರೆತ ಈ ಗೌರವವು ಗದಗ ಉತ್ಸವದ ಯಶಸ್ಸಿನ ಮತ್ತೊಂದು ಹೆಮ್ಮೆಯ ಕ್ಷಣವಾಗಿ ಮೂಡಿಬಂದಿತು ಎಂದು ಆಯೋಜಕರು ತಿಳಿಸಿದ್ದಾರೆ.

ಶಾಲಾ ಮಕ್ಕಳಿಂದ ಹಸಿರು ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಉದ್ದೇಶದಿಂದ ಗದಗ-ಬೆಟಗೇರಿ ರೋಟರಿ ಕ್ಲಬ್ ವತಿಯಿಂದ ತಾಲೂಕಿನ ಬೆಳಹೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಆವರಣದಲ್ಲಿ ಸಸಿ ನೆಡುವ ಹಾಗೂ ಪಾಲನಾ ಆಂದೋಲನ ಕಾರ್ಯಕ್ರಮ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಸಸಿ ನೆಟ್ಟು, ಅವುಗಳನ್ನು ಪೋಷಿಸಿ ಬೆಳೆಸುವ ಸಂಕಲ್ಪ ತೊಟ್ಟರು. ಮಕ್ಕಳೊಂದಿಗೆ ರೋಟರಿ ಕ್ಲಬ್‌ನ ಪದಾಧಿಕಾರಿಗಳೂ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ಇದು ಕೇವಲ ಸಸಿ ವಿತರಣಾ ಕಾರ್ಯಕ್ರಮವಲ್ಲ. ಮುಂದಿನ ಪೀಳಿಗೆಗಾಗಿ ಹಸಿರು ಪರಂಪರೆಯನ್ನು ಉಳಿಸುವ ಜನಾಂದೋಲನವಾಗಿದೆ. ನಾವು ಇಂದು ನೆಡುವ ಪ್ರತಿಯೊಂದು ಮರವು ಮುಂದಿನ ತಲೆಮಾರಿಗೆ ಹಾಗೂ ಪರಿಸರಕ್ಕೆ ಬಹುದೊಡ್ಡ ಶಕ್ತಿಯಾಗಲಿದೆ ಎಂದು ಉಚಿತ ಸಸಿ ವಿತರಣಾ ಅಭಿಯಾನದ ರೋಟರಿ ಕ್ಲಬ್ ಪರಿಸರೋತ್ಸವದ ಕಾರ್ಯಕ್ರಮ ಅಧ್ಯಕ್ಷ ಸುರೇಶ ಕುಂಬಾರ ಹೇಳಿದರು.

ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಮಹತ್ವದ್ದಾಗಿದೆ. ಮರಗಳನ್ನು ನೆಟ್ಟು, ಅವುಗಳನ್ನು ನಿರಂತರವಾಗಿ ಪೋಷಿಸುವ ಮೂಲಕವೇ ಪ್ರಕೃತಿಯ ಸಮತೋಲನ ಕಾಪಾಡಲು ಸಾಧ್ಯ ಎಂದರು.

ಮರ ಕಡಿದರೆ ಮಳೆ ನಿಲ್ಲುತ್ತದೆ, ಮರ ನೆಟ್ಟರೆ ಮಳೆ ಬರುತ್ತದೆ ಎಂಬುದು ಕೇವಲ ಮಾತಲ್ಲ, ಅದರ ಹಿಂದೆ ವೈಜ್ಞಾನಿಕ ಸತ್ಯವಿದೆ. ಮರಗಳು ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತವೆ. ನಗರಗಳ ಉಷ್ಣತೆ ತಗ್ಗಿಸುವಲ್ಲಿಯೂ ಮರಗಳ ಪಾತ್ರ ಅಪಾರ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್. ದಿಂಡಿ ಮಾತನಾಡಿ, ರೋಟರಿ ಕ್ಲಬ್‌ನ ಪದಾಧಿಕಾರಿಗಳು ಶಾಲೆಗೆ ಆಗಮಿಸಿ ಮಕ್ಕಳೊಂದಿಗೆ ಸಸಿ ನೆಟ್ಟು ಸಂಭ್ರಮಿಸಿರುವುದು ಸಂತಸ ತಂದಿದೆ. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿರುವುದು ಶ್ಲಾಘನೀಯ. ನೆಟ್ಟ ಸಸಿಗಳನ್ನು ಉತ್ತಮ ರೀತಿಯಲ್ಲಿ ಪೋಷಿಸಿ ಮರಗಳನ್ನಾಗಿ ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ವೇದಿಕೆಯಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪತ್ತೇಸಾಬ ದೊಡ್ಡಮನಿ, ಸದಸ್ಯ ಪರಸಪ್ಪ ಹುಲಕೋಟಿ ಹಾಗೂ ರೋಟರಿ ಕ್ಲಬ್ ಕಾರ್ಯದರ್ಶಿ ಅಕ್ಷಯ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಬಿ.ಎಂ. ಸೈಯದ್ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಜಕ್ಕಲಿ ನಿರೂಪಿಸಿದರು. ಶಿಕ್ಷಕಿ ರುಕ್ಮಿಣಿ ಗುಳಗಂದಿ ವಂದಿಸಿದರು.

ಶಿಕ್ಷಕಿಯರಾದ ಸುಜಾತಾ ಧೋಳ, ಸುಮಾ ತಿಪ್ಪರಡ್ಡಿ, ಲಲಿತಾ ಚನ್ನಪ್ಪಗೌಡರ, ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಮುಖ್ಯ ಶಿಕ್ಷಕ ಮದನಿ ಬಾದಷಾ ಸರ್ವರ, ರಮೇಶ ಮೇಡಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.