Home Blog Page 11

ಬೈ ಎಲೆಕ್ಷನ್| ನಾಳೆ ಬೆಳಗ್ಗೆ ಒಳಗೆ ಕಾಂಗ್ರೆಸ್ ಟಿಕೆಟ್ ಘೋಷಣೆ – ರಣದೀಪ್ ಸುರ್ಜೇವಾಲಾ!

ಬೆಂಗಳೂರು: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಸಂಜೆ ಅಥವಾ ನಾಳೆ ಬೆಳಗ್ಗೆಯೊಳಗೆ ಘೋಷಿಸಲಾಗುವುದು ಎಂದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ಕುರಿತು ವ್ಯಾಪಕವಾಗಿ ಚರ್ಚೆ ನಡೆಸಲಾಗಿದ್ದು, ಯಾವುದೇ ಕಾರ್ಯಕರ್ತರ ಅಭಿಪ್ರಾಯವನ್ನು ನಿರ್ಲಕ್ಷಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಶುಕ್ರವಾರ ತಡರಾತ್ರಿವರೆಗೂ ಚರ್ಚೆ ನಡೆದಿದ್ದು, ಎಲ್ಲಾ ಮಟ್ಟದ ನಾಯಕರ ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆ ಎಂದರು.

ಇನ್ನೊಂದೆಡೆ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪ್ರತಿಕ್ರಿಯಿಸಿ, ಟಿಕೆಟ್ ಆಕಾಂಕ್ಷಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸುರ್ಜೇವಾಲಾ ಮತ್ತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ವೀಕ್ಷಕರು ಕ್ಷೇತ್ರಗಳಿಗೆ ಭೇಟಿ ನೀಡಿ ಸರ್ವೇ ನಡೆಸಿ ವರದಿ ಸಲ್ಲಿಸಿದ್ದು, ಎಲ್ಲಾ ಸಮುದಾಯಗಳ ಮನವಿಗಳನ್ನು ಪರಿಗಣಿಸಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಮರ್ಥ್ಯ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದೇ ಪಕ್ಷದ ಉದ್ದೇಶ ಎಂದು ಅವರು ಹೇಳಿದರು.

ಸಿಲಿಂಡರ್‌ಗಳ ಮೇಲೆ ಕಳ್ಳರ ಕಣ್ಣು: 2 ತುಂಬಿದ ಗ್ಯಾಸ್ ಹೊತ್ತೊಯ್ದ ಖದೀಮರು!

ಬೆಂಗಳೂರು: ಇರಾನ್-ಇಸ್ರೆಲ್ ಸಂಘರ್ಷದ ಪರಿಣಾಮ ರಾಜ್ಯದಲ್ಲಿ ಸಿಲಿಂಡರ್ ಅಭಾವ ತಲೆದೋರಿದೆ.

ಈ ನಡುವೆಯೇ ಯುಗಾದಿಯಂದು 2 ಗೃಹ ಬಳಕೆ ಸಿಲಿಂಡರ್‌ಗಳನ್ನು ಪುಂಡರು ಕದ್ದು ಎಸ್ಕೇಪ್ ಆಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಬೇಗೂರು ಬಳಿಯ ಆರ್‌ಸಿ ಲೇಔಟ್‌ನ ವಿಶ್ವಪ್ರಿಯ ಅಪಾರ್ಟ್ಮೆಂಟ್‌ನಲ್ಲಿ ಜರುಗಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಎಫೆಕ್ಟ್ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಇದರ ಎಫೆಕ್ಟ್ ಭಾರತ ದೇಶದ ಮೇಲೂ ಇದ್ದು, ಸಿಲಿಂಡರ್ ಬಳಕೆಯಲ್ಲಿ ಮಿತವ್ಯಯ ಉಂಟಾಗಿದೆ. ರಾಜ್ಯದಲ್ಲಿ ಸಿಲಿಂಡರ್‌ಗಾಗಿ ಜನರು ಪರದಾಡುವಂತಾಗಿದೆ. ಇಂತಹ ಹೊತ್ತಲ್ಲಿ ಬೆಂಗಳೂರಿನ ಬೇಗೂರಿನಲ್ಲಿ ಯುಗಾದಿ ಹಬ್ಬದ ದಿನವೇ ಅಪಾರ್ಟ್ಮೆಂಟ್‌ಗೆ ನುಗ್ಗಿದ ಇಬ್ಬರು ಅಪರಿಚಿತ ಯುವಕರು, ಎರಡು ಗೃಹಬಳಕೆ ಸಿಲಿಂಡರ್ ಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ.

ಗುರುವಾರ ಮಧ್ಯಾಹ್ನದ ಹೊತ್ತಿಗೆ ಹೆಲ್ಮೆಟ್ ಧರಿಸಿ ಇಬ್ಬರು ಯುವಕರು ಬೈಕ್‌ನಲ್ಲಿ ಬಂದಿದ್ದರು. ಒಬ್ಬ ಹೊರಗೆ ನಿಂತಿದ್ದ ಮತ್ತೊಬ್ಬ ಬೈಕ್ ಸಮೇತ ಒಳಗೆ ಹೋಗಿ ಎರಡು ಸಿಲಿಂಡರ್‌ಗಳನ್ನು ಕಳವು ಮಾಡಿ ಹಾಡಹಗಲೇ ಯಾರಿಗೂ ಅನುಮಾನ ಬಾರದಂತೆ ಎಸ್ಕೇಪ್ ಆಗಿದ್ದಾರೆ. ಸಿಲಿಂಡರ್ ಕಳ್ಳತನದ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಮನೆ ಮಾಲೀಕರು ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಹೆಚ್‌ಪಿ ಗ್ಯಾಸ್ ಟ್ಯಾಂಕರ್‌ನಲ್ಲಿ ಏಕಾಏಕಿ ಗ್ಯಾಸ್ ಸೋರಿಕೆ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ!

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರು ಕ್ರಾಸ್ ಬಳಿ ಅವಘಡ ಸಂಭವಿಸಿದೆ.

ಮಂಗಳೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ಹೆಚ್‌ಪಿ ಗ್ಯಾಸ್ ಟ್ಯಾಂಕರ್‌ನಲ್ಲಿ ಏಕಾಏಕಿ ಗ್ಯಾಸ್ ಸೋರಿಕೆಯಾಗಿದೆ. ಬೃಹತ್ ವಾಹನದಲ್ಲಿ 18 ಟನ್ ಹೆಚ್‌ಪಿ ಗ್ಯಾಸ್ ಧಾರವಾಡಕ್ಕೆ ತರಲಾಗುತಿತ್ತು. ಈ ವೇಳೆ ಕಲಘಟಗಿ ಸಮೀಪದಲ್ಲಿ ಗ್ಯಾಸ್ ಸೋರಿಕೆ ಆಗುತ್ತಿರುವುದು ಕಂಡುಬಂದಿದೆ. ಹೀಗಾಗಿ ವಾಹನವನ್ನು ನಿಲ್ಲಿಸಿದ ಚಾಲಕ ಸಂಬಂಧಪಟ್ಟ ಕಂಪನಿಗೆ ವಿಷಯ ತಿಳಿಸಿದ್ದಾನೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಮೊದಲಿಗೆ ಕಲಘಟಗಿ, ಯಲ್ಲಾಪುರ ಮಾರ್ಗದಲ್ಲಿ ಸಂಚಾರ ನಿಷೇಧ ಮಾಡಿದ್ದಾರೆ. ಎರಡು ಕಿಲೊಮೀಟರ್ ಅಂತರದಲ್ಲಿ ಜನರ ಸಂಚಾರಕ್ಕೂ ಸಹ ನಿಷೇಧ ಹೇರಲಾಗಿದೆ.

ಸದ್ಯ ಸ್ಥಳಕ್ಕೆ ಮತ್ತೊಂದು ಟ್ಯಾಂಕರ್ ತಂದು ಅದರಲ್ಲಿ ಉಳಿದ ಗ್ಯಾಸ್ ವರ್ಗಾವಣೆ ಮಾಡಲಾಗುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಅತ್ಯಂತ ಸೂಕ್ಷ್ಮವಾಗಿ ತಜ್ಞರ ನೇತೃತ್ವದಲ್ಲಿ ಗ್ಯಾಸ್ ತುಂಬಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಜೂಜಾಟ‌ದ ವೇಳೆ ಪೋಲೀಸರ ದಾಳಿ: ತಪ್ಪಿಸಿಕೊಳ್ಳುವ ಭರದಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿ ಸಾವು!

ಹಾಸನ: ಯುಗಾದಿ ಹಬ್ಬ ಬಂತು ಅಂದ್ರೆ ಸಾಕು ಜೂಜಾಡುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಪೊಲೀಸರಿಗೆ ಗೊತ್ತಾಗಬಾರದು ಅಂತ ಕದ್ದುಮುಚ್ಚಿ ಆಟ ಆಡೋದು ಕಾಮನ್.

ಆದ್ರೆ ಇಲ್ಲಿ ಪೊಲೀಸರ ಕಣ್ತಪ್ಪಿಸಿ ಜೂಜಾಡುತ್ತಿದ್ದಾಗ ಖಾಕಿಯ ದಿಢೀರ್ ಎಂಟ್ರಿ ದುರಂತಕ್ಕೆ ದಾರಿಮಾಡಿಕೊಟ್ಟಿದೆ. ಎಸ್, ಅರಸೀಕೆರೆ ತಾಲ್ಲೂಕಿನ ಅರೆಕೆರೆ ಗ್ರಾಮದಲ್ಲಿ ಜೂಜಾಡುವ ವೇಳೆ ಪೊಲೀಸರು ದಾಳಿ ನಡೆಸಿದ್ದು, ಪೊಲೀಸರಿಂದ ತಪ್ಪಿಸಿಕೊಂಡು ಓಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. 34 ವರ್ಷದ ಪ್ರವೀಣ್ ಮೃತಪಟ್ಟ ವ್ಯಕ್ತಿ.

ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಪಕ್ಕದ ತಾವರೆಹಳ್ಳಿ ನಿರ್ಜನ ಪ್ರದೇಶದಲ್ಲಿ ಯುವಕರ ಗುಂಪು ಜೂಜಾಡುತ್ತಿದ್ದರು. ಜೂಜಾಟದ ವಿಷಯ ತಿಳಿದು ಜಾವಗಲ್ ಪೊಲೀಸರು ದಾಳಿ‌ ಮಾಡಿದ್ದಾರೆ. ಈ ವೇಳೆ ಸ್ಥಳದಿಂದ‌ ತಪ್ಪಿಸಿಕೊಳ್ಳಲು‌ ಜೂಜಾಡುತ್ತಿದ್ದ ಯುವಕರು ಓಡಿದ್ದಾರೆ. ಮೂರ್ಛೆ ರೋಗದಿಂದ ಬಳಲುತ್ತಿದ್ದ ಪ್ರವೀಣ್ ಓಡುವ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಶಂಕಿಸಿಲಾಗಿದೆ.

ಘಟನೆ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹಾಸನದ ಹಿಮ್ಸ್‌ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.

ಇನ್ನೂ ಅಚ್ಚರಿ ಎಂಬಂತೆ ಶವದ ಮೇಲೆ ರಕ್ತದ ಕಲೆಗಳಿರುವ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಚುರುಕು ತನಿಖೆ ಕೈಗೊಂಡಿದ್ದಾರೆ.

ಬಾಕಿ ನೀರಿನ ಬಿಲ್ ಪಾವತಿಸದ ಗ್ರಾಹಕರಿಗೆ ಗುಡ್ ನ್ಯೂಸ್: ಬಡ್ಡಿ ಮನ್ನಾ ಯೋಜನೆ ಜಾರಿ!?

ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗರಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಎಸ್, ಬೆಂಗಳೂರು ಜಲಮಂಡಳಿಯು ಬಾಕಿ ನೀರಿನ ಬಿಲ್ ಪಾವತಿಸದ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಏಪ್ರಿಲ್‌ನಿಂದ ಮೂರು ತಿಂಗಳ ಅವಧಿಗೆ ಶೇ100ರಷ್ಟು ಬಡ್ಡಿ ಮನ್ನಾ ಯೋಜನೆ ಜಾರಿಗೆ ತರಲಾಗಿದೆ.

ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಏಪ್ರಿಲ್ ತಿಂಗಳಿಂದ ಮೂರು ತಿಂಗಳ ಅವಧಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

ಈ ಅವಧಿಯಲ್ಲಿ ಗ್ರಾಹಕರು ತಮ್ಮ ಬಾಕಿ ನೀರಿನ ಬಿಲ್ ಪಾವತಿಸಿದರೆ ಶೇ100ರಷ್ಟು ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಗೃಹ, ವಾಣಿಜ್ಯ ಹಾಗೂ ಕೈಗಾರಿಕಾ ಸೇರಿದಂತೆ ಎಲ್ಲಾ ವರ್ಗದ ಗ್ರಾಹಕರಿಗೂ ಈ ಸೌಲಭ್ಯ ಅನ್ವಯವಾಗಲಿದೆ. ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯ ಎಲ್ಲಾ ಬಳಕೆದಾರರು ಇದರ ಪ್ರಯೋಜನ ಪಡೆಯಬಹುದು. ಈ ವಿಶೇಷ ಅವಕಾಶವನ್ನು ಮುಂದಿನ ಮೂರು ತಿಂಗಳಲ್ಲಿ ಬಳಸಿಕೊಳ್ಳುವಂತೆ ಡಿಸಿಎಂ ಮನವಿ ಮಾಡಿಕೊಂಡಿದ್ದಾರೆ.

ಭೀಕರ ಅಪಘಾತ: ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಲಾರಿ ಹರಿದು 4ರ ಬಾಲಕಿ ಸಾವು!

ಬೆಂಗಳೂರು: ಬೆಂಗಳೂರಿನ ಉತ್ತರ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ಭೀಕರ ಅಪಘಾತ ಸಂಭವಿಸಿದೆ.

ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಲಾರಿ ಹರಿದು 4 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. 4 ವರ್ಷದ ನಿಶಿಕಾ ಮೃತ ಬಾಲಕಿ. ಯುಗಾದಿ ಹಬ್ಬ ಮುಗಿಸಿ ತಾಯಿ-ಮಗಳು ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ತೆರಳುತ್ತಿದ್ದರು. ಎರಡನೇ ಮಗು ಕಂಕುಳಲ್ಲಿ ಹಾಗೂ ಮೊದಲ ಮಗುವಿನ ಕೈ ಹಿಡಿದು ತೆರಳುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಲಾರಿ ಏಕಾಏಕಿ ಮಗುವಿನ ಮೇಲೆ ಹರಿದಿದೆ.

ಪರಿಣಾಮ ತೀವ್ರ ರಕ್ತಸ್ರಾವವಾಗಿ ಮಗು ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಶವಗಾರಕ್ಕೆ ರವಾನಿಸಲಾಗಿದೆ.

ಕಣ್ಣೆದುರು ಮಗುವಿನ ಸಾವು ಕಂಡ ಹೆತ್ತ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ

ಊರಿಗೆ ಹೋಗಲು ವಾಹನಗಳು ಸಿಕ್ಕಿಲ್ಲ ಅಂತ ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!

ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

ಊರಿಗೆ ಹೋಗಲು ವಾಹನಗಳು ಸಿಕ್ಕಿಲ್ಲವೆಂದು ಬಸ್ಸನ್ನೇ ಚಾಲಕ ಕದ್ದೊಯ್ದ ವಿಲಕ್ಷಣ ಘಟನೆ ಜರುಗಿದೆ. ಯಾದಗಿರಿಯ ಸೈದಾಪುರ ಪಟ್ಟಣದಿಂದ ಬಸ್ ಕದ್ದೊಯ್ಯಲಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಇದೀಗ ಬಯಲಾಗಿವೆ. ಕೆಕೆಆರ್​ಟಿಸಿಗೆ ಸೇರಿದ ಬಸ್‌ ಅನ್ನು ಅದೇ ಸಂಸ್ಥೆಯಲ್ಲಿ ಚಾಲಕ ಕಂ ನಿರ್ವಾಹಕರಾಗಿದ್ದ ಮಹಿಪಾಲರೆಡ್ಡಿ ಕದ್ದೊಯ್ದಿದ್ದಾರೆ. ಈ ಹಿಂದೆ ಕರ್ತವ್ಯ ಲೋಪದ ಹಿನ್ನೆಲೆ ಮಹಿಪಾಲರೆಡ್ಡಿಯನ್ನು ವಜಾಗೊಳಿಸಲಾಗಿತ್ತು ಎನ್ನಲಾಗಿದೆ.

ಮಹಿಪಾಲರೆಡ್ಡಿ ಅವರು, ಆತನ ಸ್ವಗ್ರಾಮ ರಾಚನಳ್ಳಿಗೆ ತೆರಳಲು ಯಾವುದೇ ವಾಹನ ಸಿಗದಿದ್ದರಿಂದ ಮಾರ್ಚ್ 19ರಂದು ಸೈದಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ ಅನ್ನು ತೆಗೆದುಕೊಂಡು ಹೋಗಿದ್ದಾರೆ.

ಬಸ್ ಕದ್ದೊಯ್ದ ಬಳಿಕ ಗ್ರಾಮದಲ್ಲಿರುವ ದೇವಸ್ಥಾನದ ಬಳಿ ನಿಲ್ಲಿಸಿ, ಅಲ್ಲಿಂದ ತೆರಳಿದ್ದರು. ಬಳಿಕ ಪ್ರಕರಣ ಬೆಳಕಿಗೆ ಬಂದಂತೆ ಪೊಲೀಸರು ತನಿಖೆ ನಡೆಸಿ ಬಸ್‌ ಅನ್ನು ವಾಪಸ್ ಪಡೆದಿದ್ದಾರೆ. ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ರಾಜ್ಯದಲ್ಲಿ ಶುರುವಾಗೇ ಬಿಡ್ತಾ ಡಿಸೇಲ್-ಪೆಟ್ರೋಲ್ ಅಭಾವ? ರಿಪ್ಪನ್‌ಪೇಟೆ ಬಂಕ್‌ಗೆ ಮುಗಿಬಿದ್ದ ಜನ!

ಶಿವಮೊಗ್ಗ:- ಇರಾನ್-ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ಸಧ್ಯ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಆದ್ರೆ ಈ ಯುದ್ಧದ ಎಫೆಕ್ಟ್ ಭಾರತಕ್ಕೂ ತಟ್ಟಿದೆ.

ದೇಶದಲ್ಲಿ ಸಿಲಿಂಡರ್ ಅಭಾವ ಸೃಷ್ಟಿಯಾಗಿದ್ದು, ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ತೈಲ ಮತ್ತು ಅನಿಲ ಪೂರೈಕೆ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ದೇಶದ ವಿವಿಧ ಭಾಗಗಳಲ್ಲಿ ಅಡುಗೆ ಅನಿಲ ಬಿಕ್ಕಟ್ಟು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಭೀತಿ ಶುರುವಾಗಿದೆ.

ಎಸ್, ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಕೊರತೆ ವದಂತಿ ಹರಡಿದ್ದು, ಹೀಗಾಗಿ ಪೆಟ್ರೋಲ್ – ಡೀಸೆಲ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ 3 ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಖಾಲಿ ಹಿನ್ನೆಲೆ ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಕೊರತೆ ವದಂತಿ ಹರಡಿತ್ತು. ಈ ಹಿನ್ನೆಲೆ ಇಂದನ ಲಭ್ಯವಿದ್ದ ಹೆಚ್‌ಪಿ ಪೆಟ್ರೋಲ್ ಬಂಕ್‌ಗೆ ಜನರು ಮುಗಿಬಿದ್ದಿದ್ದಾರೆ.

ವಾಹನದ ಜೊತೆಗೆ ಖಾಲಿ ಬಾಟಲ್‌ಗಳನ್ನ ಸಹ ತಂದ ಜನರು ಕ್ಯೂನಲ್ಲಿ ನಿಂತು ವಾಹನ ಹಾಗೂ ಕ್ಯಾನ್‌ಗಳಿಗೆ ಇಂಧನ ಭರ್ತಿ ಮಾಡಿಕೊಂಡಿದ್ದಾರೆ. ವದಂತಿ ಹರಡಿದ ಬೆನ್ನಲ್ಲೇ ಇಂಧನ ಕೊರತೆಯಿಲ್ಲ, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಬಂಕ್ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಒಂಟಿ ಸಲಗದ ದಾಳಿ: ಮನೆ ಬಳಿ ನಿಲ್ಲಿಸಿದ್ದ ಆಟೋ ಜಖಂಗೊಳಿಸಿದ ಪುಂಡಾನೆ!

ಮಡಿಕೇರಿ: ಒಂಟಿ ಸಲಗವೊಂದು ಮನೆ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾದ ಮೇಲೆ ದಾಳಿ ನಡೆಸಿ ಜಖಂಗೊಳಿಸಿರುವ ಘಟನೆ ಕುಶಾಲನಗರದ ನೆಲ್ಲಿ ಹುದಿಕೇರಿ ಗ್ರಾಮದಲ್ಲಿ ಜರುಗಿದೆ.

ಹೆಚ್.ಟಿ. ಸುನಿಲ್ ಎಂಬವರಿಗೆ ಸೇರಿದ ಆಟೋ ಮೇಲೆ ಕಾಡಾನೆ ದಾಳಿ ಮಾಡಿದೆ. ದಂತದಿಂದ ಗುದ್ದಿದ ಪರಿಣಾಮ ಆಟೋ ಜಖಂಗೊಂಡಿದೆ. ಇಷ್ಟೇ ಅಲ್ಲದೇ ಗ್ರಾಮದ ಶ್ರೀ ಸತ್ಯನಾರಾಯಣ ದೇವಾಲಯದ ಸುತ್ತಮುತ್ತಲಿನಲ್ಲಿ ಹಾಗೂ ಎಂ.ಜಿ.ಕಾಲೋನಿ ಸುತ್ತಮುತ್ತ ಸಂಚರಿಸಿ ಕಾಫಿ ತೋಟದೊಳಗೂ ದಾಂಧಲೆ ನಡೆಸಿದೆ.

ಇನ್ನೂ ಸಲಗ ಕಂಡ ಗ್ರಾಮಸ್ಥರು ದಿಕ್ಕಪಾಲಾಗಿ ಓಡಿ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಒಂಟಿ ಸಲಗ ಗ್ರಾಮದಲ್ಲಿ ಸಂಚರಿಸಿದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯ ಸಿಬ್ಬಂದಿ ಡ್ರೋನ್ ಕ್ಯಾಮೆರಾ ಬಳಸಿ ಆನೆಯನ್ನು ಪತ್ತೆಹಚ್ಚಿ ಕಾಡಿಗೆ ಅಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರಿನಲ್ಲಿ ಕೆಕೆಆರ್‌ಟಿಸಿ ಬಸ್ ಪಲ್ಟಿ: 8 ಪ್ರಯಾಣಿಕರಿಗೆ ಗಾಯ

ಚಿಕ್ಕಮಗಳೂರು: ಕುಕ್ಕನೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಬಸ್ ಚಿಕ್ಕಮಗಳೂರು ತಾಲೂಕಿನ ಕೊಡಾಳ್ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ನಡೆದಿದೆ.

ಈ ಅಪಘಾತದಲ್ಲಿ ಎಂಟು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಭವಿಸಿದ ವೇಳೆ ಬಸ್‌ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

error: Content is protected !!