Home Blog Page 12

ಚಿಕ್ಕಮಗಳೂರಿನಲ್ಲಿ ಕೆಕೆಆರ್‌ಟಿಸಿ ಬಸ್ ಪಲ್ಟಿ: 8 ಪ್ರಯಾಣಿಕರಿಗೆ ಗಾಯ

ಚಿಕ್ಕಮಗಳೂರು: ಕುಕ್ಕನೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಬಸ್ ಚಿಕ್ಕಮಗಳೂರು ತಾಲೂಕಿನ ಕೊಡಾಳ್ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ನಡೆದಿದೆ.

ಈ ಅಪಘಾತದಲ್ಲಿ ಎಂಟು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಭವಿಸಿದ ವೇಳೆ ಬಸ್‌ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

ಕಸ್ಟಡಿಯಲ್ಲಿ ಅನುಮಾನಾಸ್ಪದ ಸಾವು: ಕಾಂತರಾಜು ಪ್ರಕರಣಕ್ಕೆ ಸಿಐಡಿ ತನಿಖೆಗೆ

0

ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

ಜೂಜಾಟ ಪ್ರಕರಣದ ಸಂಬಂಧ ವಿಚಾರಣೆಗೆ ಪೊಲೀಸರು ಕರೆತಂದಿದ್ದ ಆರು ಮಂದಿಯ ಪೈಕಿ ಕಾಂತರಾಜು ಎಂಬವರು ಮೃತಪಟ್ಟಿದ್ದರು. ಈ ಘಟನೆ ಅನುಮಾನಾಸ್ಪದವಾಗಿದ್ದು, ಮೃತರ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಿ ಕೊಲೆಗೈಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಯಳನಾಡು ಗ್ರಾಮದ ನಿವಾಸಿಯಾದ ಕಾಂತರಾಜು ಜೊತೆ ಇದ್ದ ಪ್ರದೀಪ್ ಹೇಳುವಂತೆ, ಜೂಜಾಟದಲ್ಲಿ ಭಾಗಿಯಾಗದಿದ್ದರೂ ಕಾಂತರಾಜು ಸೇರಿ ಐವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದರು. ಠಾಣೆಗೆ ಬಂದಾಗ ಕಾಂತರಾಜು ತುಂಬಾ ಸುಸ್ತಾಗಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಂತೆ ಕಂಡರೂ ಪೊಲೀಸರು ಗಮನ ಹರಿಸಲಿಲ್ಲ ಎಂದು ಆರೋಪಿಸಲಾಗಿದೆ.

ಹೇಳಿಕೆ ಪಡೆಯಲು ಬಂದಿದ್ದ ಸರ್ಕಲ್ ಇನ್ಸ್ಪೆಕ್ಟರ್, ಠಾಣೆಯಲ್ಲೇ ಮಲಗಿದ್ದ ಕಾಂತರಾಜು ಅವರನ್ನು ಕಾಲಿನಿಂದ ಒದ್ದು ಎಬ್ಬಿಸಿದ್ದಾರೆಯೆಂದು ಹೇಳಲಾಗಿದೆ. ಬಳಿಕ ಎಲ್ಲಾ ಪ್ರಕ್ರಿಯೆಗಳು ಮುಗಿಸಿ ಹೊರಬರುತ್ತಿದ್ದ ವೇಳೆ ಕಾಂತರಾಜು ಠಾಣೆಯ ಬಾಗಿಲಿನ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ.

ಇನ್ನೊಂದೆಡೆ, ಕಾಂತರಾಜು ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳು ತೀವ್ರ ಆಕ್ರಂದನದಲ್ಲಿದ್ದಾರೆ. ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತನ ಮಗಳು ನಂದಿತಾ ಆಗ್ರಹಿಸಿದ್ದಾರೆ.

ಮೃತನ ಮಗ ತಿಲಕ್ ಗೌಡ ತಮ್ಮ ತಂದೆಯ ಸಾವಿಗೆ ಪೊಲೀಸರೇ ಹೊಣೆ ಎಂದು ದೂರು ನೀಡಿದ್ದು, ಆರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದ್ದರೂ ಚಿಕಿತ್ಸೆ ನೀಡದೆ, ತಲೆ, ಕಾಲು ಮತ್ತು ಎದೆ ಭಾಗಕ್ಕೆ ಬೂಟ್ ಕಾಲಿನಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಇದೀಗ ಸಿಐಡಿ ತನಿಖೆ ಮುಂದುವರಿಯಲಿದೆ.

ತುಮಕೂರಿನಲ್ಲಿ ಸರ್ಕಾರಿ ಅಧಿಕಾರಿ ಆತ್ಮಹತ್ಯೆ: ಮೇಲಾಧಿಕಾರಿ ಕಿರುಕುಳ ಆರೋಪದ ವಿಡಿಯೋ ವೈರಲ್

0

ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ (59) ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಪಾವಗಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲೇ, ಸಿಬ್ಬಂದಿ ತೆರಳಿದ ಬಳಿಕ ಮಲ್ಲಿಕಾರ್ಜುನ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.

ಸಾವಿಗೆ ಮುನ್ನ ಮಲ್ಲಿಕಾರ್ಜುನ ಮಾಡಿದ ವಿಡಿಯೋ ಈಗ ವೈರಲ್ ಆಗಿದ್ದು, ಅದರಲ್ಲಿ ಅವರು ಜಂಟಿ ನಿರ್ದೇಶಕ ಕೃಷ್ಣಪ್ಪ ನೀಡಿದ ಕಿರುಕುಳವೇ ತಮ್ಮ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಿದ್ದಾರೆ. “ನನ್ನ ತಾಯಿ, ಪತ್ನಿ ಮತ್ತು ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಮೇಲಾಧಿಕಾರಿಯಿಂದಾದ ಕಿರುಕುಳದಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಇನ್ನೂ, ಕೃಷ್ಣಪ್ಪ ಅವರಿಗೆ ದೇವರು ಮತ್ತು ಕಾನೂನು ತಕ್ಕ ಶಿಕ್ಷೆ ನೀಡಲಿದೆ ಎಂಬುದನ್ನೂ ಅವರು ಹೇಳಿದ್ದಾರೆ.

ಘಟನಾ ಸ್ಥಳದಲ್ಲಿ ಪೊಲೀಸರು ಡೆತ್ ನೋಟ್ ವಶಪಡಿಸಿಕೊಂಡಿದ್ದು, ಅದರಲ್ಲಿ ಕೃಷ್ಣಪ್ಪ ಮತ್ತು ಹಣಕಾಸು ಸಂಬಂಧಿತ ವಿಚಾರಗಳ ಉಲ್ಲೇಖ ಇರುವುದಾಗಿ ತಿಳಿದುಬಂದಿದೆ.

ಮಲ್ಲಿಕಾರ್ಜುನ ಮೂಲತಃ ಪಾವಗಡ ತಾಲೂಕಿನವರಾಗಿದ್ದು, ಕಳೆದ ಮೂರು ವರ್ಷಗಳಿಂದ ಅಲ್ಲಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ಅವರು ನಿವೃತ್ತಿಯಾಗಬೇಕಾಗಿತ್ತು ಎನ್ನಲಾಗಿದೆ.

ಪ್ರಕರಣದ ಕುರಿತು ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.

L.L.M ಪದವಿಯಲ್ಲಿ ಫಸ್ಟ್ ರ‍್ಯಾಂಕ್: ಗದಗದ ಸಹನಾ ಕಾರ್ಕಳರಿಗೆ ಆರ್.ಎಸ್.ಎಸ್.ದಿಂದ ಸನ್ಮಾನ!

0

ಗದಗ: ಗದಗದ ಸಹನಾ ಎ. ಕಾರ್ಕಳ ಅವರು L.L.M. ಪದವಿಯಲ್ಲಿ ಗೋಲ್ಡ್ ಮೆಡಲ್‌ ಸಮೇತ ರಾಜ್ಯಕ್ಕೆ ಫಸ್ಟ್ ರ‍್ಯಾಂಕ್ ಗಳಿಸಿದ್ದು, ಈ ಸಾಧನೆಗಾಗಿ ಕರ್ನಾಟಕ ಉತ್ತರ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಾಮರಸ್ಯ ವೇದಿಕೆ ಪದಾಧಿಕಾರಿಗಳು ಗೌರವಿಸಿ ಶುಭ ಕೋರಿದರು.

ಸಹನಾ ಕಾರ್ಕಳ ನಿವಾಸಕ್ಕೆ ಸಾಮರಸ್ಯ ವೇದಿಕೆ ತಂಡ ಆಗಮಿಸಿ ಗೌರವಿಸಿದ ನಂತರ ವಿಡಿಎಸ್ ಟಿಸಿ ಕಾಲೇಜ್ ಪ್ರಾಚಾರ್ಯರು, ಸಂಘದ ಪ್ರಮುಖರಾದ ಮಾರುತಿ ಕಟ್ಟಿಮನಿಯವರು ಮಾತನಾಡಿ, ಸತತ ಅಧ್ಯಯನ, ಉತ್ತಮ ಸಂಸ್ಕಾರ, ಪಾಲಕರ ಪ್ರೋತ್ಸಾಹ ದೊರೆತರೆ ಎಂತಹ ಸಾಧನೆ ಮಾಡಬಹುದು ಎಂಬುದಕ್ಕೆ ಸಹನಾ ಕಾರ್ಕಳ ಸಾಕ್ಷಿಯಾಗಿದ್ದಾರೆ ಎಂದರು.

ಸಾಧನೆ ಯಾರ ಸ್ವತ್ತಲ್ಲ, ಆದರೆ ಸಾದಿಸುವ ಸಾಹಸ, ಛಲ ಮತ್ತು ಜಾಣ್ಮೆ ಇರಬೇಕು. ಬರುವ ಸವಾಲುಗಳನ್ನೆ ಸಾಧನವಾಗಿ ಬಳಸಿಕೊಂಡ್ರೆ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಸಹನಾ ಕಾರ್ಕಳ ಸ್ಪಷ್ಟ ಎಕ್ಸಾಂಪಲ್ ಎಂದು ಮಾರುತಿ ಕಟ್ಟಿಮನಿ ಹೇಳಿದರು.

ಈ ವೇಳೆ ಕರ್ನಾಟಕ ಉತ್ತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮರಸ್ಯ ವೇದಿಕೆ ಪದಾಧಿಕಾರಿಗಳಾದ ಡಾ.ಉಮೇಶ ಹಾದಿ, ಡಾ.ಪ್ರಕಾಶ ಹೊಸಮನಿ, ರವಿಕಾಂತ ಅಂಗಡಿ, ಪ್ರೊ.ಹನುಮಂತ ಕಾಳೆ ಪ್ರೊ.ಶಶಿಧರ ಕುರಿ, ಡಾ.ಅನಂತ ಎಸ್.ಕಾರ್ಕಳ, ಶ್ರೀಮತಿ ಮಂಗಳಾ ಕಾರ್ಕಳ ಉಪಸ್ಥಿತರಿದ್ದರು.

ಗದಗ| ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ: ಸರ್ಕಾರಿ ಬಸ್ ಹರಿದು ಮಹಿಳೆ ಸಾವು!

0

ಗದಗ:- ಸರ್ಕಾರಿ ಬಸ್ ಹರಿದು‌ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಜರುಗಿದೆ.

ಚೆನ್ನಮ್ಮ ಹಡಪದ (48) ಮೃತ ದುರ್ದೈವಿ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಡಕೋಳ ಗ್ರಾಮದ ನಿವಾಸಿ.

ಇಂದು ತಮ್ಮೂರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಸವಣೂರು ಕಡೆಗೆ ಹೋಗುವ ಬಸ್ ಕಾಲಿನ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಗಾಯಾಳು ಮಹಿಳೆಯನ್ನು ಲಕ್ಷ್ಮೇಶ್ವರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಗಾಯದ ತೀವ್ರತೆ ಹೆಚ್ಚಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ.

ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಗದಗ: ದೇವು ಫಿಟ್ನೆಸ್‌ನಲ್ಲಿ “ಅಪ್ಪು” ಜನ್ಮದಿನಕ್ಕೆ ವಿಶೇಷ ಸ್ಮರಣೆ!

0

ಗದಗ: ನಗರದ ದೇವು ಫಿಟ್ನೆಸ್ನಲ್ಲಿ ಇತ್ತೀಚೆಗೆ ವ್ಯಾಯಾಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ದಿವಂಗತ ಪುನೀತ್ ರಾಜ್‍ಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕೇಕ್ ಕತ್ತರಿಸಿ ಗೌರವ ಸಲ್ಲಿಸಿದರು. ಅವರ ಜೀವನ ಮೌಲ್ಯಗಳು, ಸಮಾಜ ಸೇವೆ ಮತ್ತು ಯುವಕರಿಗೆ ನೀಡಿದ ಪ್ರೇರಣೆಗಳನ್ನು ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರತಿಜ್ಞೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವು, ಪರಶುರಾಮ ಸುಂಕದ, ದೇವು ಮೇದಾರ ಹಾಗೂ ರವಿ ಭಂಡಾರಿ ಇದ್ದರು.

50,000 ಸಿಲಿಂಡರ್ ಅಗತ್ಯ: ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ದೇಶದಾದ್ಯಾಂತ ಸಿಲಿಂಡರ್ ಕೊರತೆಯ ಸಮಸ್ಯೆ ಮುಂದುವರೆದಿದ್ದು, ಕರ್ನಾಟಕದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ದಿನನಿತ್ಯ ಪರದಾಡುವ ಸ್ಥಿತಿಗೆ ತಲುಪಿದ್ದಾರೆ.

ಒಂದ್ಕಡೆ ಗೃಹಬಳಕೆ ಸಿಲಿಂಡರ್ ಪಡೆಯಲು ಜನರು ಮುಗಿಬಿದ್ದರೆ, ಮತ್ತೊಂದ್ಕಡೆ ವಾಣಿಜ್ಯ ಬಳಕೆಗಾಗಿ ಸಿಲಿಂಡರ್ ಲಭ್ಯವಿಲ್ಲದ ಕಾರಣ ಉದ್ಯಮಗಳು ಮುಚ್ಚುವ ಪರಿಸ್ಥಿತಿ ಎದುರಾಗುತ್ತಿದೆ.

ಈ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪೆಟ್ರೋಲ್ ಮತ್ತು ಎಲ್‌ಪಿಜಿ ವಿಭಾಗದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪೂಣಿಯಾ ಅವರಿಗೆ ಬರೆದ ಪತ್ರದಲ್ಲಿ, ರಾಜ್ಯಕ್ಕೆ ತುರ್ತು ಅಗತ್ಯವಿರುವ ಸಿಲಿಂಡರ್ ಸಂಖ್ಯೆ 50,000 ಎಂದು ಉಲ್ಲೇಖಿಸಲಾಗಿದೆ. “ಈಗಾಗಲೇ ದಿನಕ್ಕೆ 1,000 ಸಿಲಿಂಡರ್ ಮಾತ್ರ ಪೂರೈಸಲು ಸಾಧ್ಯವಾಗಿದೆ. ಹೀಗಾಗಿ ಹೋಟೆಲ್ಗಳು, ಪಿಜಿ ಅಂಗಡಿಗಳು, ಅಡುಗೆ ತಯಾರಿಕಾ ಸಂಸ್ಥೆಗಳು ಮುಚ್ಚುವ ಪರಿಸ್ಥಿತಿ ಎದುರಾಗುತ್ತಿದೆ,” ಎಂದು ಸಿಎಂ ತಿಳಿಸಿದ್ದಾರೆ.

ವಿದ್ಯಾರ್ಥಿಗಳು, ಐಟಿ ನೌಕರರು, ರೈತರು, ಡೈರಿ ಉತ್ಪಾದಕರು ಸೇರಿದಂತೆ ಅನೇಕ ಜನರು ಆತಿಥ್ಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಭಾರತಕ್ಕೆ ಬಂದ 2 ಟ್ಯಾಂಕರ್ಗಳ LPG ಅನ್ನು ಸಮರ್ಪಕವಾಗಿ ಹಂಚಿಕೆ ಮಾಡಿ. ರಾಜ್ಯದ ಲಭ್ಯತೆ ಸ್ಥಿರಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

ಬಿಸಿಲಿನಲ್ಲಿ ತಣ್ಣೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿ!? ತಜ್ಞರಿಂದಲೇ ನಿಜಾಂಶ ತಿಳಿದುಕೊಳ್ಳಿ!

0

ಬೇಸಿಗೆ ಹಿಮ್ಮುಖವಾಗಿ ತಂಪಾದ ನೀರು ಕುಡಿಯುವುದು ಸಾಮಾನ್ಯ ಅಭ್ಯಾಸವಾಗಿದ್ದರೂ, ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಬಿಸಿಲಿನ ತೀವ್ರತೆಯಿಂದ ಮುಕ್ತಿ ಪಡೆಯಲು ತಕ್ಷಣ ತಂಪು ನೀರನ್ನು ಕುಡಿಯುವ ಅಭ್ಯಾಸ ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ತಜ್ಞರ ಪ್ರಕಾರ, ತುಂಬಾ ತಂಪಾದ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಆಹಾರ ಸರಿಯಾಗಿ ಜೀರ್ಣವಾಗದೇ ಹೊಟ್ಟೆ ಭಾರವಾಗುವುದು, ಗ್ಯಾಸ್ಟ್ರಿಕ್ ಸಮಸ್ಯೆಗಳು ಕಂಡುಬರಬಹುದು. ಜೊತೆಗೆ ಗಂಟಲು ಕೆರೆತ ಅಥವಾ ಶೀತಕ್ಕೆ ಒಳಗಾಗಬಹುದು. ಬೇಸಿಗೆಯಲ್ಲಿ ದೇಹ ಬಿಸಿಯಾಗಿರುವ ಸಮಯದಲ್ಲಿ ಏಕಾಏಕಿ ತಣ್ಣೀರು ಕುಡಿಯುವುದರಿಂದ ದೇಹದ ತಾಪಮಾನ ಏಕಾಏಕಿ ಬದಲಾವಣೆಯಾಗುತ್ತದೆ. ಇದರಿಂದ ತಲೆನೋವು, ಸುಸ್ತು, ರಕ್ತ ಸಂಚಾರದ ಮೇಲೆ ಪರಿಣಾಮ, ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ಯಾರು ತಣ್ಣೀರು ಕುಡಿಯಬಾರದು?

  • ಜೀರ್ಣಕ್ರಿಯೆ ಸಮಸ್ಯೆಯಿರುವವರು
  • ಗಂಟಲು ಅಥವಾ ಸೈನಸ್ ಸಮಸ್ಯೆ ಹೊಂದಿರುವವರು
  • ಹೆಚ್ಚು ಶೀತಕ್ಕೆ ಒಳಗಾಗುವವರು
  • ಸಣ್ಣ ಮಕ್ಕಳು ಮತ್ತು ವೃದ್ಧರು
  • ಹೃದಯ ಅಥವಾ ರಕ್ತದ ಒತ್ತಡ ಸಮಸ್ಯೆ ಇರುವವರು

ತಣ್ಣೀರು ಕುಡಿಯುವ ಮುನ್ನ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು:

  • ತುಂಬಾ ಐಸ್ ಅಥವಾ ಅತಿಯಾಗಿ ತಂಪಾದ ನೀರನ್ನು ಕುಡಿಯಬೇಡಿ
  • ಬಿಸಿಲಿನಿಂದ ಬಂದ ತಕ್ಷಣ ನೀರು ಕುಡಿಯದೆ, ಕೆಲವು ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ
  • ದಿನವಿಡೀ ನೀರನ್ನು ಸ್ವಲ್ಪ-ಸ್ವಲ್ಪ ಕುಡಿಯಿರಿ
  • ಗಂಟಲು ನೋವು ಅಥವಾ ಇತರ ಸಮಸ್ಯೆಗಳಿದ್ದರೆ ತಣ್ಣೀರು ಕುಡಿಯಬೇಡಿ

 

‘ನಮ್ಮ ಮೆಟ್ರೋ’ 15 ವರ್ಷದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು!

ಬೆಂಗಳೂರು: ಯುಗಾದಿ ಹಿಂದಿನ ದಿನ, ನಮ್ಮ ಮೆಟ್ರೋದಲ್ಲಿ 10.73 ಲಕ್ಷ ಜನರು ಪ್ರಯಾಣಿಸಿ 15 ವರ್ಷಗಳ ಮೆಟ್ರೋ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ನಾಲ್ಕು ದಿನದ ನಿರಂತರ ರಜೆಯ ಕಾರಣ ಮೆಟ್ರೋ ಪ್ರಯಾಣಿಕರ ಸಂಖ್ಯೆ ಬೃಹತ್ ಪ್ರಮಾಣಕ್ಕೆ ಏರಿಕೆಯಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಒಂದೇ ದಿನ ಸಂಚರಿಸಿದ್ದಾರೆ. ಈ ಸಂಖ್ಯೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ ಬಳಕೆ ಮಾಡಿಕೊಂಡಿದ್ದಾರೆ.

ಈ ಸಾಧನೆಯೊಂದಿಗೆ ಬೆಂಗಳೂರು ಮೆಟ್ರೋ ನಗರ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದು, ನಗರಿಗರಿಗೆ ಬೃಹತ್ ಮೆಟ್ರೋ ಸೇವೆ ನೀಡುವ ಸಾಮರ್ಥ್ಯವನ್ನು ಪುನರುಚ್ಚರಿಸಿದೆ.

ಇರಾನ್–ಇಸ್ರೇಲ್ ಸಂಘರ್ಷ: ಮಾ.28ರವರೆಗೆ 9 ಗಲ್ಫ್ ರಾಷ್ಟ್ರಗಳ ಏರ್‌ಸ್ಪೇಸ್ ಪ್ರವೇಶಿಸದಂತೆ ನಿರ್ಬಂಧ!

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನತೆ ಹಿನ್ನೆಲೆ, ನಾಗರಿಕ ವಿಮಾನಯಾನ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಾರ್ಚ್ 28ರವರೆಗೆ 9 ಗಲ್ಫ್ ರಾಷ್ಟ್ರಗಳ ವಾಯುಪ್ರದೇಶ ಪ್ರವೇಶಿಸದಂತೆ ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಿದೆ.

ಡಿಜಿಸಿಎ ಮಾರ್ಗಸೂಚಿಯಂತೆ, ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶಗಳನ್ನು ತಾತ್ಕಾಲಿಕವಾಗಿ ತಪ್ಪಿಸುವಂತೆ ಸೂಚಿಸಲಾಗಿದೆ.

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಹಾಗೂ ಅಮೆರಿಕದ ಭಾಗವಹಿಸುವಿಕೆಯಿಂದ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶಗಳನ್ನು ಹೈರಿಸ್ಕ್ ವಲಯವಾಗಿ ಗುರುತಿಸಲಾಗಿದೆ.

ಇದಲ್ಲದೆ, ಇರಾನ್, ಇಸ್ರೇಲ್, ಲೆಬನಾನ್, ಇರಾಕ್, ಸೌದಿ ಅರೇಬಿಯಾ, ಯುಎಇ, ಕತಾರ್, ಬಹ್ರೇನ್, ಕುವೈತ್, ಓಮನ್ ಮತ್ತು ಜೋರ್ಡಾನ್ ಸೇರಿದಂತೆ 11 ರಾಷ್ಟ್ರಗಳಲ್ಲಿ 32,000 ಅಡಿ ಎತ್ತರಕ್ಕಿಂತ ಕಡಿಮೆ ಹಾರಾಟಗಳನ್ನು ತಪ್ಪಿಸಲು ಸೂಚಿಸಲಾಗಿದೆ.

ಈ ಸೂಚನೆಯ ಪರಿಣಾಮವಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಈಗಾಗಲೇ ಹಲವು ವಿಮಾನಗಳು ರದ್ದಾಗಿದ್ದು, ಇನ್ನೂ ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಿಂದ ಭಾರತದಿಂದ ಯುರೋಪ್, ಉತ್ತರ ಅಮೆರಿಕಾ ಹಾಗೂ ಮಧ್ಯಪ್ರಾಚ್ಯದ ಕಡೆ ಪ್ರಯಾಣಿಸುವ ಪ್ರಯಾಣಿಕರ ಪ್ರಯಾಣ ಸಮಯ ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!