Home Blog Page 11

ನಾಳೆಯಿಂದ ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ಪ್ರಚಾರ ರಾಯಭಾರಿ: MB ಪಾಟೀಲ್

0

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ಮಾರುಕಟ್ಟೆ ಬಲವರ್ಧನೆಗಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು 2 ವರ್ಷದ ಅವಧಿಗೆ ಪ್ರಚಾರ ರಾಯಭಾರಿಯಾಗಿ ನೇಮಿಸಿದೆ.

ಅವರು ಫೆ.10ರಿಂದ ಅಧಿಕೃತವಾಗಿ ತಮ್ಮ ಕಾರ್ಯಾರಂಭ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ನವನವೀನ ರೂಪದಲ್ಲಿಯೂ ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, KSDL ವಹಿವಾಟನ್ನು 2030ಕ್ಕೆ ₹5,000 ಕೋಟಿ ತಲುಪಿಸುವ ಗುರಿಯಿದೆ. ತಮನ್ನಾ ಅವರ ಸೆಲೆಬ್ರಿಟಿ ಪ್ರಭಾವದಿಂದ ಯುವಜನಾಂಗ ಹಾಗೂ ಉತ್ತರ ಭಾರತದ ಮಾರುಕಟ್ಟೆಗೆ ಉತ್ತೇಜನ ನೀಡಲಾಗುವುದು. ಕೆಎಸ್‌ಡಿಎಲ್‌ ಶತಮಾನಕ್ಕೂ ಮೇಲಾಗಿರುವ ಪರಂಪರೆಯ ಸಂಸ್ಥೆ.

ಪ್ರಸ್ತುತ 57 ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಮೈಸೂರು ಸ್ಯಾಂಡಲ್ ಸೋಪಿನಿಂದ ಕುಡಿಯುವ ನೀರಿನವರೆಗೂ ವ್ಯಾಪ್ತಿಯಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ತಮನ್ನಾ ಇತರ ಖಾಸಗಿ ಕಂಪನಿಗಳಲ್ಲಿನ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲರ 34ನೇ ಪುಣ್ಯಸ್ಮರಣೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರಿ ರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ದಿ. ಕೆ.ಎಚ್. ಪಾಟೀಲರ ಪುಣ್ಯಸ್ಮರಣೆಯನ್ನು ಸೋಮವಾರ ನಗರದ ದಿ. ಗದಗ ಕೋ-ಆಪ್ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಅತ್ಯಂತ ಭಕ್ತಿ-ಗೌರವಗಳೊಂದಿಗೆ ಆಚರಿಸಲಾಯಿತು.

ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲರು ದಿ. ಕೆ.ಎಚ್. ಪಾಟೀಲರ ಭವ್ಯ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ.ಎಚ್. ಪಾಟೀಲರು ಸಹಕಾರಿ ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಅಪ್ರತಿಮ ಕೊಡುಗೆಗಳನ್ನು ಸ್ಮರಿಸಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬೀಳಗಿ ಶಾಸಕ ಜಿ.ಟಿ. ಪಾಟೀಲ, ರೋಣ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ತಾಲೂಕು ಘಟಕದ ಅಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಕಾಂಗ್ರೆಸ್ ಮುಖಂಡರಾದ ಎಸ್.ಎನ್. ಬಳ್ಳಾರಿ, ವಿದ್ಯಾಧರ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಾಬರ್ಚಿ, ಜಿ.ಪಂ ಮಾಜಿ ಅಧ್ಯಕ್ಷ ಸುಜಾತಾ ದೊಡ್ಡಮನಿ, ನಗರಸಭೆ ಮಾಜಿ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಸವರಾಜ ಕಡೆಮನಿ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಉಮರಫಾರೂಖ್ ಹುಬ್ಬಳ್ಳಿ, ಮುಖಂಡರಾದ ವೀಣಾ ಕಟ್ನಳ್ಳಿ, ಶಾರೂಖ್ ಹುಯಿಲಗೋಳ, ಶಹಬಾಜ್ ಮುಲ್ಲಾ, ಶಂಭು ಕಾಳೆ, ಮಹಮ್ಮದ್ ಶಾಲಗಾರ, ಸರ್ಫರಾಜ್ ಬಾಬರ್ಚಿ, ವಿನಾಯಕ ಬಳ್ಳಾರಿ, ಸೈಯದ್‌ಖಾಲಿದ ಕೊಪ್ಪಳ, ಅನ್ವರ ನದಾಫ್, ಮಹಾಂತೇಶ ಮಡಿವಾಳರ, ಪರಪ್ಪ ಕಮತರ, ಕಮಲಾಕ್ಷಿ ಹಾದಿಮನಿ, ಯಲ್ಲಮ್ಮ ಜಡಿ, ದ್ರಾಕ್ಷಾಯಣಿ ಹಾಸಿಲ್ಕರ್, ಪೂಜಾ ಬೇವೂರ, ಮರಿಯಪ್ಪ ಸಣ್ಣತಂಗಿಯವರ, ಮಹೇಶ ಪಟ್ಟಣಶೆಟ್ಟಿ, ಜಾಕೀರ ಕುನ್ನಿಬಾವಿ, ಪರಮೇಶಪ್ಪ ಜಂತ್ಲಿ, ಕರಬಸಯ್ಯ ನಾಲ್ವಾಡಮಠ, ಮಲಿಕ್ ಸಂಗಾಪೂರ, ಉಮರ್‌ಫಾರೂಖ್ ಬಾರಿಗಿಡದ, ಅಭಿಷೇಕ, ಶಿವು ಹಾದಿಮನಿ, ಸಂತೋಷ ರಾಮೇನಹಳ್ಳಿ, ಮಹಮ್ಮದ್ ಬೆಟಗೇರಿ, ಅಜ್ಜಪ್ಪ ವಗ್ಗನ್ನವರ, ವಿರೂಪಾಕ್ಷ ನಂದೆಣ್ಣವರ, ಅಹ್ಮದ್ ಖಾಜಿ, ಹುಸೇನ್ ಓಲೇಕಾರ, ಅನ್ವರ ಶಿರಹಟ್ಟಿ, ಕಾಂಗ್ರೆಸ್ ಮುಖಂಡರು, ಕೆ.ಎಚ್. ಪಾಟೀಲ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ವಿವಿಧ ಇಲಾಖೆಗಳಲ್ಲಿ ನೈಪುಣ್ಯತೆಯನ್ನು ಕೆ.ಎಚ್. ಪಾಟೀಲರು ಹೊಂದಿದ್ದರು. ಅಂದು ಗದಗ-ಬೆಟಗೇರಿಯಲ್ಲಿ ನೀರಿನ ಸಮಸ್ಯೆ ಸಾಕಷ್ಟು ತಲೆದೋರಿತ್ತು. ಆ ನೀರಿನ ಸಮಸ್ಯೆಯನ್ನು ಬಗೆಹರಿಸಿ ನೀರಾವರಿ ಭೀಷ್ಮ ಎಂದೇ ಕರೆಯಿಸಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿಯೂ ಅಷ್ಟೇ ವಿಶೇಷ ಆಸಕ್ತಿಯನ್ನು ದಿ. ಕೆ.ಎಚ್. ಪಾಟೀಲರು ಹೊಂದಿದ್ದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದರು ಎನ್ನುವುದನ್ನು ಅವರ ಪುಣ್ಯ ಸ್ಮರಣೆಯ ದಿನದಂದು ನಾವು ಸ್ಮರಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಸಚಿವ ಎಚ್.ಕೆ. ಪಾಟೀಲ ನುಡಿದರು.

ರೈತರ ಹಿತ ಕಾಯುವುದು ಸಹಕಾರಿಗಳ ಕರ್ತವ್ಯ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ರೈತರ ಹಿತವನ್ನು ಬಯಸುವುದು ಸಹಕಾರಿ ಸಂಘಗಳ ಆದ್ಯ ಕರ್ತವ್ಯವಾಗಿದ್ದು, ನೂತನವಾಗಿ ಆಯ್ಕೆಯಾದ ಸದಸ್ಯರು ಇದನ್ನು ಅರಿತು ತಮ್ಮ ಕೆಲಸ ನಿರ್ವಹಿಸಬೇಕು ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.

ಅವರು ರವಿವಾರ ಸಂಜೆ ತಮ್ಮ ನಿವಾಸದಲ್ಲಿ ಹೊಸಳ್ಳಿ ಗ್ರಾಮದ ಸಹಕಾರಿ ಕೃಷಿ ಪತ್ತಿನ ಚುನಾವಣೆಯಲ್ಲಿ ಜಯ ಗಳಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸತ್ಕರಿಸಿ ಮಾತನಾಡಿದರು.

ಸಹಕಾರಿ ಸಂಘಗಳು ಮೊದಲಿನಿಂದಲೂ ರೈತರ ಹಿತಕ್ಕಾಗಿ ಬೆಳೆದು ಬಂದಿರುವ ಸಂಘಗಳು. ಸದಸ್ಯರು ರೈತರ ಬೆಳವಣಿಗೆಯನ್ನು ಬಯಸಿದಾಗ ಮಾತ್ರ ಕೃಷಿ ಪತ್ತಿನ ಸಹಕಾರಿ ಸಂಘ ಬೆಳೆಯಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಸಹಕಾರಿ ಸಂಘಗಳ ಆರ್ಥಿಕ ಬೆಳವಣಿಗೆಯಲ್ಲಿ ರೈತರ ಪಾಲು ಕೂಡ ಇದ್ದು, ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರಳಿಸಬೇಕು. ಇದರಿಂದ ಸಂಘದ ಚೇತರಿಕೆ ಜೊತೆಗೆ ಮತ್ತೆ ಹೆಚ್ಚಿನ ಸಾಲ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳ ಬಲವರ್ಧನೆಗೊಳಿಸಲು ಸಹಕಾರಿ ಸಂಘಗಳತ್ತ ಅವಲಂಬಿತರಾಗಿರುತ್ತಾರೆ. ಅಲ್ಲದೆ ಗ್ರಾಮದಲ್ಲಿಯೇ ಹಣಕಾಸಿನ ವ್ಯವಹಾರ ನಡೆಯುವುದರಿಂದ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಈ ದಿಶೆಯಲ್ಲಿ ಸಹಕಾರಿ ಸಂಘಗಳು ಕೂಡ ರೈತರಿಗೆ ಹೆಚ್ಚಿನ ಸಾಲವನ್ನು ಕೊಡುವ ಜೊತೆಗೆ ಅವರ ಪ್ರಗತಿಗೆ ಕಾರಣವಾಗಬೇಕು ಎಂದರು.

ಸಹಕಾರಿ ಸಂಘಗಳಲ್ಲಿ ಸ್ಥಳಾವಕಾಶವಿದ್ದರೆ ಅಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿಕೊಳ್ಳಬೇಕು. ಇದರಿಂದ ಸಹಕಾರಿ ಸಂಘಗಳಿಗೆ ಆದಾಯ ಸಿಗುತ್ತದೆ. ಸಹಕಾರಿ ಸಂಘಗಳಿಗೆ ಸರ್ಕಾರ ಕೊಡಮಾಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ರೈತರ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸಂಗಪ್ಪ ಮೆಣಸಿನಕಾಯಿ, ಪಸಾರಾದ, ವಿ.ಬಿ. ಸೋಮನಕಟ್ಟಿಮಠ ಸೇರಿದಂತೆ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರು, ಮುಖಂಡರು ಉಪಸ್ಥಿತರಿದ್ದರು.

ಇತ್ತೀಚೆಗೆ ಹೊಸಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಗ್ರಾ.ಪಂ ಚುನಾವಣೆಯನ್ನೂ ಮೀರಿಸುವಂತೆ ನಡೆದಿತ್ತು. ಅಲ್ಲದೆ ಗ್ರಾಮದಲ್ಲಿ ಡಿಆರ್ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿತ್ತು. ಒಟ್ಟು 12 ಸ್ಥಾನಗಳನ್ನು ಹೊಂದಿರುವ ಹೊಸಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಬಿಜೆಪಿ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 10 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ಆಡಳಿತದ ಚುಕ್ಕಾಣಿಯನ್ನು ಹಿಡಿದರು. ಹೇಮಯ್ಯ ಹಿರೇಮಠ, ಭೀಮರೆಡ್ಡಪ್ಪ ರೆಡ್ಡೇರ, ಶರಣಪ್ಪ ಮೇಟಿ, ಕಳಕಪ್ಪ ಪಟ್ಟಣಶೆಟ್ಟಿ, ಅಂದಪ್ಪ ಹೂಗಾರ, ಪರಶುರಾಮ ಕುರಿ, ಬಸವರಾಜ ತೆಗ್ಗಿ, ಶರಣಪ್ಪ ಪೂಜಾರ, ಜುಲೇಖಾ ಬೇಗಂ ಹೊಸಳ್ಳಿ, ರೇಣುಕಾಬಾಯಿ ಕದಂ ಆಯ್ಕೆಗೊಂಡ ಸದಸ್ಯರಾಗಿದ್ದಾರೆ.

ಬೆಂಗಳೂರು| ಜ್ಯುವೆಲರ್ಸ್ ಶಾಪ್ ಗೆ ನುಗ್ಗಿ 30 ಗ್ರಾಂ ಚಿನ್ನಾಭರಣ ದೋಚಿದ್ದ ಐವರು ಅರೆಸ್ಟ್!

0

ನೆಲಮಂಗಲ:- ಕಳೆದ ಜನವರಿ 27ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ರಾಮ್ ದೇವ್ ಜ್ಯುವೆಲರ್ಸ್​​ನಲ್ಲಿ ನಡೆದ ಭಯಾನಕ ದರೋಡೆ ಪ್ರಕರಣದಲ್ಲಿ ಗನ್ ಹಿಡಿದು 30 ಗ್ರಾಂ ಚಿನ್ನಾಭರಣ ಕದ್ದ 5 ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸ್ ತಂಡ ಏಳು ದಿನಗಳಲ್ಲಿ ಬಂಧಿಸಿದೆ.

ಬಂಧಿತರನ್ನು ರಾಜಸ್ತಾನಿ ಮೂಲದ ಅನೂಪ್ ಸಿಂಗ್, ರವಿ, ಅಂಕಿತ್, ಅರುಣ್, ಅನೂಪ್ ರಾಮ್ ಎಂದು ಗುರುತಿಸಲಾಗಿದೆ. ದರೋಡೆ ನಂತರ ರಾಜಸ್ಥಾನಕ್ಕೆ ತೆರಳಿದ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

ಕಳೆದ ವಾರವಷ್ಟೇ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸಪುರದ ರಾಮ್ ದೇವ್ ಜ್ಯವೆಲರ್ಸ್​​ನಲ್ಲಿ ಈ ಭಯಾನಕ ದರೋಡೆ ನಡೆದಿತ್ತು. ದರೋಡೆಕೋರರು ಗನ್ ತೋರಿಸಿ 30 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಸದ್ಯ ಐವರು ಆರೋಪಿಗಳನ್ನ ಮಾದನಾಯಕನಹಳ್ಳಿ ಪೊಲಿಸರು ಬಂಧಿಸಿದ್ದಾರೆ.

ಕೆ.ಆರ್.ಪುರಂ| ಸಿಲಿಂಡರ್ ಸ್ಫೋಟಗೊಂಡು ಇಬ್ಬರಿಗೆ ಗಾಯ; ಮಹಿಳೆ ಸ್ಥಿತಿ ಗಂಭೀರ

0

ಬೆಂಗಳೂರು:- ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ್ ಲೇಔಟ್‌ನಲ್ಲಿ ಇಂದು ಸಂಜೆ ಸುಮಾರು 7 ಗಂಟೆ ವೇಳೆಗೆ ಸಿಲಿಂಡರ್ ಬ್ಲಾಸ್ಟ್‌ನಿಂದಾಗಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಈ ಘಟನೆಯಲ್ಲಿ ಪೂರ್ಣಿಮ (46) ಹಾಗೂ ವೆಂಕಟೇಶ್ (40) ಗಾಯಗೊಂಡಿದ್ದು, ಪೂರ್ಣಿಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸಿಲಿಂಡರ್ ಸ್ಫೋಟದಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲಿ ಆತಂಕ ಉಂಟಾಯಿತು. ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಗೂ ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚಿಕ್ಕಬಳ್ಳಾಪುರ| ಎಣ್ಣೆ ಮತ್ತಲ್ಲಿ ಕದಿಯಲು ಹೋದವ ಮನೆಯಲ್ಲೇ ಬೆಚ್ಚಗೆ ಮಲಗಿ ತಗ್ಲಾಕ್ಕೊಂಡ!

0

ಚಿಕ್ಕಬಳ್ಳಾಪುರ:- ಖದೀಮನೋರ್ವ ಎಣ್ಣೆ ನಶೆಯಲ್ಲಿ ಕಳ್ಳತನಕ್ಕೆಂದು ಮನೆಗೆ ನುಗ್ಗಿದ್ದ ವೇಳೆ ನಿದ್ದೆ ಬಂದ ಕಾರಣ ಅಲ್ಲೇ ಬೆಚ್ಚಗೆ ಮಲಗಿ ತಗಲಾಕಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಜರುಗಿದೆ.

ಪ್ರೇಮನಾಥ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಲೆಂದು ಇಬ್ಬರು ಖದೀಮರು ತೆರಳಿದ್ದರು. ಮನೆಯ ಮೇಲಿನ ರೇಕ್ ಕತ್ತರಿಸಿ ಒಳಗೆ ಕೂಡ ನುಗ್ಗಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ನಗದು ದೋಚಿ ಓರ್ವ ಕಳ್ಳ ಪರಾರಿಯಾಗಿದ್ದರೆ, ಮತ್ತೊಬ್ಬ ಅದೇ ಮನೆಯಲ್ಲಿ ನಿದ್ದೆಗೆ ಜಾರಿದ್ದಾನೆ. ಇತ್ತ ಮನೆಗೆ ಕಳ್ಳರು ನುಗ್ಗಿರುವ ಅನುಮಾನದಿಂದ ಮಾಲೀಕ ಪ್ರೇಮನಾಥನಿಗೆ ಕರೆ ಮಾಡಿ ನೆರೆ ಮನೆಯವರು ವಿಷಯ ತಿಳಿಸಿದ್ದಾರೆ. ಕೆಲಸದ ನಿಮಿತ್ತ ಹೈದರಾಬಾದ್ ಗೆ ತೆರಳಿದ್ದ ಅವರು, ರಾತ್ರೋ ರಾತ್ರಿ ಮನೆಗೆ ಹಿಂದಿರುಗಿದ್ದಾರೆ.

ಇನ್ನು ಮನೆಗೆ ಪ್ರೇಮನಾಥ ಎಂಟ್ರಿಯಾಗ್ತಿದ್ದಂತೆ ಅವರಿಗೆ ಆಶ್ಚರ್ಯವಾಗಿದೆ. ಕಳ್ಳತನಕ್ಕೆಂದು ಬಂದಾತ ಮನೆಯಲ್ಲೇ ಮಲಗಿದ್ದನ್ನು ನೋಡಿದ ಅವರು, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ವ್ಯಕ್ತಿ ಗೌರಿಬಿದನೂರಿನ ನದಿದಡ ವಾರ್ಡ್​ನ ದೇವರಾಜು ಎಂಬುದು ಗೊತ್ತಾಗಿದ್ದು, ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಮೆಟ್ರೋ ದರ ಏರಿಕೆ ತಡೆ ಮಾಡಿದ್ದು ರಾಜ್ಯ ಸರ್ಕಾರವೇ ಹೊರತು ಕೆಂದ್ರವಲ್ಲ; DCM ಡಿ.ಕೆ.ಶಿವಕುಮಾರ್

0

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಯುವ ನಿರ್ಧಾರವನ್ನು ರಾಜ್ಯ ಸರ್ಕಾರವೇ ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರದ ಪತ್ರಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ದರ ನಿಗದಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ. ದೆಹಲಿ ಮೆಟ್ರೋ ಅನುಸರಿಸುವ ಸೂತ್ರದಂತೆ ಮರು ಲೆಕ್ಕಾಚಾರ ಮಾಡಲು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಹಳೆಯ ದರ ನಿಗದಿ ಸಮಿತಿ 09-02-2025ರಂದು ಶೇ.5 ದರ ಏರಿಕೆಗೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಜಾರಿಯಾಗಿದೆ. ಹೊಸ ದರ ನಿಗದಿ ಸಮಿತಿ ರಚನೆಯಾಗುವ ತನಕ ದರ ಏರಿಕೆ ತಡೆಯಲು ಸರ್ಕಾರ ನಿರ್ಧರಿಸಿದೆ ಎಂದರು.

ಜನರಿಗೆ ಹಾಗೂ ಮೆಟ್ರೋ ಸಂಸ್ಥೆಗೆ ಭಾರವಾಗದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದು ರಾಜಕೀಯವಲ್ಲ, ಜನರ ಪರವಾದ ಹೋರಾಟ. ರಾಜ್ಯ ಸರ್ಕಾರ ಈಗಾಗಲೇ ಕ್ಯಾಶ್ ಲಾಸ್ ಹಾಗೂ ಸಾಲ ಮರುಪಾವತಿಗೆ ಒಟ್ಟು 5,066.55 ಕೋಟಿ ರೂ. ಪಾವತಿಸಿದೆ ಎಂದರು.

ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ; 8 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ!

0

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಸಾಗಿಸಲಾಗುತ್ತಿದ್ದ ಸುಮಾರು 8 ಕೋಟಿ ರೂ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಮಿಗ್ರೇಷನ್ ಚೆಕಿಂಗ್ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ್ದ ಪ್ರಯಾಣಿಕರ ಲಗೇಜ್ ಪರಿಶೀಲನೆ ನಡೆಸಿದಾಗ, ಬ್ಯಾಗ್‌ನ ತಳಭಾಗದಲ್ಲಿ ಅಕ್ರಮವಾಗಿ ಗಾಂಜಾ ಮರೆಮಾಚಿ ಸಾಗಿಸಲಾಗುತ್ತಿರುವುದು ಪತ್ತೆಯಾಗಿದೆ.

ಈ ಸಂಬಂಧ ಹೆಚ್ಚಿನ ತನಿಖೆಯನ್ನು ಕಸ್ಟಮ್ಸ್ ಅಧಿಕಾರಿಗಳು ಮುಂದುವರಿಸಿದ್ದಾರೆ.

ಬೆಂಗಳೂರಿಗರಿಗೆ ತಪ್ಪದ ಪವರ್ ಸಮಸ್ಯೆ; ಈ ಏರಿಯಾಗಳಲ್ಲಿ ಮಂಗಳವಾರವೂ ಕರೆಂಟ್ ಕಟ್! ಎಲ್ಲೆಲ್ಲಿ?

0

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಪವರ್ ಸಮಸ್ಯೆ ಬಿಟ್ಟು ಬಿಡದೇ ಕಾಡುತ್ತಿದ್ದು, ನಗರದ ಹಲವೆಡೆ ನಾಳೆಯೂ ಕರೆಂಟ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಎಲ್ ನಿಂದ ಜಾಲಹಳ್ಳಿ ವಿಭಾಗದ 66/11ಕೆವಿ ಎ೦.ಇ.ಐ ಸಬ್‌ಸ್ಟೇಷನ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುವುದರಿಂದ ಮಂಗಳವಾರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ನಗರದ ಎಜಿಬಿಜಿ ಲೇಔಟ್, ಶೆಟ್ಟಿಹಳ್ಳಿ, ಮಲ್ಲಸಂದ್ರ, ಜಗದೇಸ್ ಲೇಔಟ್, ನಾಗದೇಸ್ ಲೇಔಟ್, ಬೋನ್‌ವಿಲ್, ಚಿಕ್ಕಸಂದ್ರ ಐರ್‌ಲೇಔಟ್, ಕಾವೇರಿ ಲೇಔಟ್, ಹೇಶ್ರವಿಶ್ರಾವೃತ ಲೇಔಟ್, 8ನೇ ಮೈಲ್, ತುಮಕೂರು ಮುಖ್ಯ ರಸ್ತೆ, ಮಹೇಶ್ವರಿ ನಗರ, ಕೆಂಪೇಗೌಡ ನಗರ, ಟಿ-ದಾಸರಹಳ್ಳಿ ಮೆಟ್ರೋ ಹಿಂಭಾಗ, ಹಳೆಯ ಮಸಿಡಿ, ಹೊಸ ಮಸಿಡಿ, ಪೈಪ್ ಲೈನ್ ರಸ್ತೆ, ಬೃಂದಾವನ ಲೇಔಟ್, ಮರಿಗ್ಮ್ ಅಪಾರ್ಟ್‌ಮೆಂಟ್, ಕಲ್ಯಾಣನಗರ ಬಾಗಲಗುಂಟೆ, ಕಿರ್ಲೋಸ್ಕರ್ ಲೇಔಟ್, ಎನ್‌ಎಂಎಚ್ ಲೇಔಟ್, ಸೌರ್ಯ ಲೇಔಟ್, ಮೀನಾಕ್ಷಿ ಲೇಔಟ್, ಸಿದ್ಧೇಶ್ವರ ಲೇಔಟ್, ಸಹ್ಯಾದ್ರಿ ಬಳಗ, ಸಪ್ತಗಿರಿ ವೈದ್ಯಕೀಯ ಕಾಲೇಜು, ಹೆಸರಘಟ್ಟ ಮುಖ್ಯರಸ್ತೆ, ಚಿಕ್ಕಬಾಣಾವರ, ಸೋಮಶೆಟ್ಟಿಹಳ್ಳಿ, ಕೆರೆಗುಡ್ಡದಹಳ್ಳಿ, ಮೇದರಹಳ್ಳಿ, ಗುಣಿಅಗ್ರಹಾರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗೂ ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

ರೈತನ ಬದುಕನ್ನೇ ನಾಶಮಾಡಿದ ಬೇಟೆಗಾಗಿ ಇಟ್ಟ ನಾಡ ಬಾಂಬ್: ಎರಡು ಹೋರಿಗಳು ಸಾವು

0

ಹಾನಗಲ್: ಕಾಡು ಪ್ರಾಣಿಗಳ ಬೇಟೆಗಾಗಿ ಅಕ್ರಮವಾಗಿ ಇಟ್ಟಿದ್ದ ನಾಡ ಬಾಂಬ್‌ ಸ್ಫೋಟಗೊಂಡ ಪರಿಣಾಮ ಎರಡು ಹೋರಿಗಳು ಸಾವನ್ನಪ್ಪಿರುವ ಭೀಕರ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೀರೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿರುವ ಸಿಗಿಗುಂಡಿ ಪ್ರದೇಶದ ಕಾಡಿನಲ್ಲಿ, ವನ್ಯಜೀವಿಗಳು ನೀರು ಕುಡಿಯುವ ಉದ್ದೇಶದಿಂದ ತೋಡಿದ್ದ ನೀರಿನ ಗುಂಡಿಯ ಬಳಿ ಕಿಡಿಗೇಡಿಗಳು ನಾಡ ಬಾಂಬ್‌ ಅಳವಡಿಸಿದ್ದರು. ನೀರು ಕುಡಿಯಲು ಬಂದಿದ್ದ ಎರಡು ಹೋರಿಗಳು ಬಾಂಬ್‌ನ್ನು ಕಚ್ಚಿದ ಕ್ಷಣವೇ ಭಾರೀ ಸ್ಫೋಟ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಹೋರಿಗಳ ಬಾಯಿ ಸಂಪೂರ್ಣವಾಗಿ ಛಿದ್ರ-ಛಿದ್ರಗೊಂಡು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿವೆ. ಮೃತ ಹೋರಿಗಳು ಹೀರೂರು ಗ್ರಾಮದ ರೈತ ಶೇಖಪ್ಪ ಮೇಳ್ಳಿಹಳ್ಳಿ ಅವರಿಗೆ ಸೇರಿದ್ದವು ಎಂದು ತಿಳಿದುಬಂದಿದೆ. ಲಕ್ಷಾಂತರ ರೂ. ಮೌಲ್ಯದ ಹೋರಿಗಳನ್ನು ಕಳೆದುಕೊಂಡ ರೈತ ಶೋಕದಲ್ಲಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಹಾನಗಲ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಿನ ನೀರಿನ ಗುಂಡಿಗಳ ಸುತ್ತಮುತ್ತ ಇನ್ನೂ ನಾಡ ಬಾಂಬ್‌ಗಳನ್ನು ಇಟ್ಟಿರುವ ಸಾಧ್ಯತೆ ಇದ್ದು, ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕಾಡು ಪ್ರಾಣಿಗಳ ಬೇಟೆಗಾಗಿ ಇಡಲಾದ ನಾಡ ಬಾಂಬ್‌ಗಳೇ ಈ ದುರ್ಘಟನೆಗೆ ಕಾರಣ ಎಂದು ಶಂಕಿಸಲಾಗಿದ್ದು, ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.

error: Content is protected !!