Home Blog Page 110

ತ್ಯಾಗವೇ ಮೊಹರಂನ ಮಹಾ ಸಂದೇಶ: ತಾಜುದ್ದೀನ್ ಎಂ. ಕಿಂಡ್ರಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮೊಹರಂ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ. ಅದು ಸತ್ಯ, ನ್ಯಾಯ, ತ್ಯಾಗ ಮತ್ತು ಮಾನವೀಯತೆಯ ಶಾಶ್ವತ ಸಂದೇಶ ಸಾರುವ ಪವಿತ್ರ ದಿನವಾಗಿದೆ ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ತಾಜುದ್ದೀನ್ ಎಂ. ಕಿಂಡ್ರಿ ಹೇಳಿದರು.

ಮೊಹರಂ ಪ್ರಯುಕ್ತ ಶುಭಾಶಯಗಳನ್ನು ತಿಳಿಸಿ ಮಾತನಾಡಿದ ಅವರು, ಇಮಾಮ್ ಹುಸೇನ್ (ರ.ಅ) ಅವರ ತ್ಯಾಗ, ಧೈರ್ಯ ಮತ್ತು ನ್ಯಾಯಕ್ಕಾಗಿ ನಡೆಸಿದ ಹೋರಾಟವು ಇಡೀ ಮಾನವಕುಲಕ್ಕೆ ಆದರ್ಶವಾಗಿದೆ. ಅನ್ಯಾಯದ ಮುಂದೆ ತಲೆಬಾಗದೆ, ಸತ್ಯದ ಮಾರ್ಗದಲ್ಲಿ ಕೊನೆಯವರೆಗೂ ಅಚಲವಾಗಿ ನಿಲ್ಲುವ ಸಂದೇಶವನ್ನು ಮೊಹರಂ ಸಾರುತ್ತದೆ ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಅನ್ಯಾಯ, ಅಸಮಾನತೆ ಮತ್ತು ಹಿಂಸಾಚಾರ ಹೆಚ್ಚುತ್ತಿರುವ ಸಂದರ್ಭದಲ್ಲಿ ಮೊಹರಂನ ಸಂದೇಶ ಇನ್ನಷ್ಟು ಪ್ರಸ್ತುತವಾಗಿದೆ. ಪ್ರತಿಯೊಬ್ಬರೂ ಸತ್ಯ, ನ್ಯಾಯ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಲಾಲಶಾಪೀರ್, ಮಕಾಂದರ್, ಜಾಫರ್ ಮೌಲಾನ, ಹಿರಿಯರಾದ ಇಮಾಮಸಾಬ್, ನದ್ದಿಮುಲ್ಲಾ, ಹಮೀದ್ ಮುಜಾವರ್, ಹೈದರಾಲಿ ಖವಾಸ್, ಮುನ್ನಾ ಢಾಲಾಯತ್, ದಾವುದ್ ಜಮಾಲ್, ದಾವಲಸಾಬ್ ಲಕ್ಷ್ಮೇಶ್ವರ, ಇಮ್ಮಣ್ಣ ಕಿಂಡ್ರಿ, ರಾಜೇಸಾಬ್ ಸೈಯದ್‌ಬಡೆ, ಇಮಾಮ್ ಜಾಫರ್, ಲಾಡಸಾಬ್, ಮಾಬೂಸಾಬ್ ಅಬ್ಬುನವರ, ಮಹಬೂಬ್ ಅಲಿ ಶೇಖ್, ಹೈದರ್ ಶೇಖ್, ಮಹಮ್ಮದ್ ರಫಿ ಮುಲ್ಲಾ, ಖ್ವಾಜಾ ಕಿಚಡಿ ಹಾಗೂ ಸಲೀಂ ಫ್ಲೋರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗ ನಿಬಂಧ ಹಾಗೂ ಯೋಗಾಸನ ಸಮೂಹ ನೃತ್ಯ ಸ್ಪರ್ಧೆಗಳ ಫಲಿತಾಂಶ ಪ್ರಕಟಿಸಲಾಗಿದೆ.

ಯೋಗ ನಿಬಂಧ ಸ್ಪರ್ಧೆಯಲ್ಲಿ ಸುನಂದಾ ಜ್ಞಾನೋಪಂತ ಹಾಗೂ ಸುಲೋಚನಾ ಐಹೊಳೆ ಪ್ರಥಮ, ಗೀತಾ ಹೂಗಾರ ದ್ವಿತೀಯ, ಮಲ್ಲಯ್ಯ ಕಲಹಾಳ ತೃತೀಯ ಸ್ಥಾನ ಪಡೆದರೆ, ರೋಜಾ ಮುಗಳಿ ಸಮಾಧಾನಕರ ಬಹುಮಾನ ಪಡೆದರು.

ಯೋಗಾಸನ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ (ಸಿದ್ಧಲಿಂಗನಗರ, ಗದಗ) ಪ್ರಥಮ, ನಿತ್ಯಂ ಯೋಗ ಕೇಂದ್ರ ದ್ವಿತೀಯ ಹಾಗೂ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಗಳಿಸಿತು.

ಸ್ಪರ್ಧೆಯಲ್ಲಿ ಯೋಗ ನಿಬಂಧ ವಿಭಾಗದಲ್ಲಿ 24 ಹಾಗೂ ಯೋಗಾಸನ ಸಮೂಹ ನೃತ್ಯ ವಿಭಾಗದಲ್ಲಿ 49 ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಎಸ್.ವೈ.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ, ಲಿಂಗಾಯತ ಪ್ರಗತಿಶೀಲ ಸಂಘ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಲಾಗಿತ್ತು ಎಂದು ಸ್ಪರ್ಧೆಗಳ ಸಂಯೋಜಕ ಕೆ.ಎಸ್. ಪಲ್ಲೇದ ತಿಳಿಸಿದ್ದಾರೆ.

ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಸ್ಪರ್ಧೆಗಳು ಅಗತ್ಯ: ಶೈಲಜಾ ತುಪ್ಪದ

0

ವಿಜಯಸಾಕ್ಷಿ ಸುದ್ದಿ, ಗದಗ: “ಮಕ್ಕಳು, ಯುವಕರು ಹಾಗೂ ಹಿರಿಯರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸ್ಪರ್ಧೆಗಳು ಉತ್ತಮ ವೇದಿಕೆಯಾಗಿವೆ. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಬೆಳೆಯುವುದರ ಜೊತೆಗೆ ಪ್ರತಿಭೆಗೆ ಸೂಕ್ತ ಗೌರವ ದೊರೆಯುತ್ತದೆ” ಎಂದು ಕ್ಯಾಲಿಫೋರ್ನಿಯಾದ ಸಮಾಜ ಸೇವಾ ಇಲಾಖೆಯ ಇಂಜಿನಿಯರ್ ಶ್ರೀಮತಿ ಶೈಲಜಾ ತುಪ್ಪದ ಹೇಳಿದರು.

12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗಾಸನ ಸಮೂಹ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ತಾವು ವಿದ್ಯಾರ್ಥಿಯಾಗಿದ್ದಾಗ ಯೋಗಾಭ್ಯಾಸ ಮಾಡಿ ರಾಜ್ಯಮಟ್ಟದ ಯೋಗಾಸನ ಕ್ರೀಡಾಪಟುವಾಗಿದ್ದೆ. ಈಗ ವಿದೇಶದಲ್ಲಿಯೂ ಯೋಗ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಯೋಗಕ್ಕೆ ವಿಶ್ವದಾದ್ಯಂತ ಗೌರವವಿದೆ. ಎಲ್ಲರೂ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಿ.ಪಿ. ಕಟ್ಟಿಮನಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಂದ ಗುರುಗಳಿಗೆ ಸಮಾಜದಲ್ಲಿ ಇನ್ನಷ್ಟು ಗೌರವ ದೊರೆಯುತ್ತದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ, ಬಾಬಣ್ಣ ಗೋಟಡಕಿ, ಎಸ್.ಸಿ. ಹಿರೇಮಠ, ವಿದ್ಯಾ ಗಂಜಿಹಾಳ, ಸುಮಂಗಲಾ ಹದ್ಲಿ ಹಾಗೂ ಶಾಂತಾ ತುಪ್ಪದ ಉಪಸ್ಥಿತರಿದ್ದರು.

ಸುನಂದಾ ಜ್ಞಾನೋಪಂತ ಯೋಗ ಪ್ರಾರ್ಥನೆ ನೆರವೇರಿಸಿದರು. ಎಂ.ವಿ. ಕಲಹಾಳ ಸ್ವಾಗತಿಸಿದರು. ಎಸ್.ಎಂ. ಬುರಡಿ ವಂದಿಸಿದರು. ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸ್ಪರ್ಧೆಗಳು ಅತ್ಯುತ್ತಮ ವೇದಿಕೆಯಾಗಿವೆ.”

ಶ್ರೀಮತಿ ಶೈಲಜಾ ತುಪ್ಪದ

ಬೆಳ್ಳಿತೆರೆಗೆ ‘ಏನಾಯಿತು’ ಪಯಣ ಆರಂಭ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ವಿಸ್ಮಯ ವೆಂಚರ್ಸ್ ನಿರ್ಮಾಣದ ‘ಏನಾಯಿತು’ ಕನ್ನಡ ಚಲನಚಿತ್ರದ ಮುಹೂರ್ತ ಹಾಗೂ ಚಿತ್ರೀಕರಣಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕ್ಯಾಮೆರಾ ಚಾಲನೆ ನೀಡಿ ಮಾತನಾಡಿದ ಸ್ವರ್ಣ ಗ್ರೂಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಎಚ್.ವಿ.ಎಸ್.ವಿ. ಪ್ರಸಾದ್, “ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಿನಿಮಾಗಳು ನಿರ್ಮಾಣವಾಗಬೇಕು. ಇಲ್ಲಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು. ಉತ್ತಮ ಸದಭಿರುಚಿಯ ಚಿತ್ರಗಳು ಸಮಾಜಕ್ಕೆ ಅಗತ್ಯ” ಎಂದು ಹೇಳಿದರು.

ಸಿದ್ಧಾರೂಢ ಮಠ ಟ್ರಸ್ಟ್ ಅಧ್ಯಕ್ಷ ಬಾಳು ಮಗಜಿಕೊಂಡಿ ಕ್ಲಾಪ್ ಮಾಡಿ ಮಾತನಾಡಿ, “ಇಡೀ ಕುಟುಂಬ ಕುಳಿತು ನೋಡುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನಚಿತ್ರಗಳು ನಿರ್ಮಾಣವಾಗಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಎವಿಕೆ ಫೌಂಡೇಶನ್‌ನ ವೆಂಕಟೇಶ್ ಕಾಟವೆ, ಹಿರಿಯ ಕವಿ ಮಹಾಂತಪ್ಪ ನಂದೂರ್, ಡಾ. ರಾಮು ಮುಲಗಿ, ನಾಯಕ ನಟ ಈಶಾನ್ ರಘುರಾಜನ್, ನಟಿ ಚೈತ್ರ ತೋಟದ್, ನಿರ್ದೇಶಕ ತಮನ್ನಾ, ಚಲನಚಿತ್ರ ಪತ್ರಕರ್ತ ಹಾಗೂ ಪಿಆರ್‌ಒ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ವಿನಾಯಕ ಶೆಟ್ಟಿ, ನವೀನ ಪಾಟೀಲ ಜೈನ್, ರಾಘು ಬುಧಪನವರ್, ಕೃಷ್ಣ ಉಲ್ಲಿಕಾಶಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

ಚಿತ್ರಕ್ಕೆ ಗೌರಿ ವೆಂಕಟೇಶ ಛಾಯಾಗ್ರಹಣ, ಡಾ. ಶೈಲಜಾ ಶರ್ಮ ಕಥೆ, ಈಶಾನ್ ರಘುರಾಜನ್ ಸಾಹಿತ್ಯ, ಸಂಭಾಷಣೆ ಹಾಗೂ ಚಿತ್ರಕಥೆ, ವಿ. ಮನೋಹರ ಸಂಗೀತ ನೀಡಿದ್ದು, ತಮನ್ನಾ ನಿರ್ದೇಶನ ಮಾಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಉತ್ತರ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

“ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಿನಿಮಾಗಳು ನಿರ್ಮಾಣವಾಗಿ, ಇಲ್ಲಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು.”

– ಡಾ. ಸಿ.ಎಚ್.ವಿ.ಎಸ್.ವಿ. ಪ್ರಸಾದ್

ಸಿ.ಎ. ಸಾಧನೆಯೊಂದಿಗೆ ಮಿಂಚಿದ ಸ್ವಾತಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆ.ಎಸ್.ಆರ್.ಟಿ.ಸಿ. ನಿವೃತ್ತ ನಿರ್ವಾಹಕರಾದ ಬಸವರಾಜ ಅಡಿವೆಪ್ಪ ಕರಮುಡಿ ಹಾಗೂ ವಿಜಯಲಕ್ಷ್ಮಿ ಕರಮುಡಿ ದಂಪತಿಯ ಎರಡನೇ ಪುತ್ರಿ ಸ್ವಾತಿ ಬಸವರಾಜ ಕರಮುಡಿ ಅವರು 2026ರ ಜೂನ್‌ನಲ್ಲಿ ನಡೆದ ಸಿ.ಎ. (ಚಾರ್ಟರ್ಡ್ ಅಕೌಂಟೆಂಟ್) ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸ್ವಾತಿ ಅವರು ಪ್ರಾಥಮಿಕ ಶಿಕ್ಷಣವನ್ನು ವಾಸವಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ವಿ.ಡಿ.ಎಸ್.ಟಿ.ಸಿ. ಹೆಣ್ಣು ಮಕ್ಕಳ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಬಳಿಕ ಜೆ.ಟಿ. ಮಹಾವಿದ್ಯಾಲಯದಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.99 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದರು.

ನಂತರ ಯಾವುದೇ ಕೋಚಿಂಗ್ ಪಡೆಯದೆ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನೊಂದಿಗೆ ಉತ್ತೀರ್ಣರಾಗಿ, ಬೆಂಗಳೂರಿನ ಎಂ.ಸಿ.ಎಸ್. ರಾಘವನ್ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ತರಬೇತಿ ಪೂರ್ಣಗೊಳಿಸಿ, ಸಹಾಯಕರಾಗಿ ಕಾರ್ಯನಿರ್ವಹಿಸುತ್ತಲೇ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

ಸ್ವಾತಿ ಕರಮುಡಿ ಅವರ ಸಾಧನೆಗೆ ತಂದೆ-ತಾಯಿ, ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಜಾಗೃತ ನಾಗರಿಕರ ವೇದಿಕೆ ಅಧ್ಯಕ್ಷ ಎಂ.ಎಫ್. ಡೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇವು ಉಳಿಸಲು ಟ್ಯಾಂಕರ್ ಮೊರೆ ಹೋದ ರೈತ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜಾನುವಾರುಗಳ ಮೇವು ಉಳಿಸಿಕೊಳ್ಳಲು ಲಕ್ಷ್ಮೇಶ್ವರದ ರೈತರೊಬ್ಬರು ಬಾಡಿಗೆ ಟ್ಯಾಂಕರ್ ಮೂಲಕ ನೀರುಣಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಪಟ್ಟಣದ ರೈತ ಪ್ರಕಾಶ ಮೇವುಂಡಿ ಅವರು ದನಕರುಗಳ ಮೇವಿಗಾಗಿ ಬಿತ್ತನೆ ಮಾಡಿದ್ದ ಜೋಳದ ಬೆಳೆ ಒಣಗದಂತೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಕಿಸುತ್ತಿದ್ದಾರೆ. ಹೆಸರು, ಹತ್ತಿ ಸೇರಿದಂತೆ ಇತರೆ ಬೆಳೆಗಳು ಮಳೆ ಕೊರತೆಯಿಂದ ಒಣಗುತ್ತಿದ್ದರೂ, ಜಾನುವಾರುಗಳಿಗೆ ಮೇವು ಒದಗಿಸುವ ಜೋಳದ ಬೆಳೆಯನ್ನು ಮಾತ್ರ ಹೇಗಾದರೂ ಉಳಿಸಬೇಕೆಂಬ ಹಠದಿಂದ ಈ ಪ್ರಯತ್ನ ನಡೆಸುತ್ತಿದ್ದಾರೆ.

“ನಾವು ಹೇಗಾದರೂ ಬದುಕುತ್ತೇವೆ. ಆದರೆ ಜಾನುವಾರುಗಳ ರಕ್ಷಣೆಯೇ ದೊಡ್ಡ ಸವಾಲಾಗಿದೆ. ಕಳೆದ ವರ್ಷದ ಮೇವು ಬಹುತೇಕ ಖಾಲಿಯಾಗಿದೆ. ಈಗ ಜೋಳದ ಬೆಳೆ ಒಣಗಿದರೆ ದುಡ್ಡು ಕೊಟ್ಟರೂ ಮೇವು ಸಿಗುವುದಿಲ್ಲ. ಅದಕ್ಕಾಗಿ ಕಷ್ಟವಾದರೂ ಟ್ಯಾಂಕರ್ ಮೂಲಕ ನೀರು ಹಾಕಿಸಿ ಬೆಳೆ ಉಳಿಸಿಕೊಳ್ಳುತ್ತಿದ್ದೇನೆ” ಎಂದು ರೈತ ಪ್ರಕಾಶ ಮೇವುಂಡಿ ತಮ್ಮ ಅಳಲು ತೋಡಿಕೊಂಡರು.

ಮಳೆ ಕೊರತೆಯಿಂದ ರೈತರ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ದೃಶ್ಯ ಜಿಲ್ಲೆಯ ರೈತರ ಸಂಕಷ್ಟಕ್ಕೆ ಹಿಡಿದ ಕನ್ನಡಿಯಾಗಿದೆ.

“ನಾವು ಹೇಗಾದರೂ ಬದುಕುತ್ತೇವೆ; ಆದರೆ ನಮ್ಮ ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ಈಗ ದೊಡ್ಡ ಸವಾಲಾಗಿದೆ.”

– ರೈತ ಪ್ರಕಾಶ ಮೇವುಂಡಿ

ಜು. 6ಕ್ಕೆ ಗದಗದಲ್ಲಿ ರಾಷ್ಟ್ರಮಟ್ಟದ ಜಂಗಿ ಕುಸ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 82ನೇ ಹಾಗೂ ಪದ್ಮಭೂಷಣ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 16ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜುಲೈ 6ರಂದು ಗದಗದಲ್ಲಿ ರಾಷ್ಟ್ರಮಟ್ಟದ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.

ಈ ಕುರಿತು ಗದಗ-ಬೆಟಗೇರಿ ಜನರಲ್ ವರ್ಕರ್ಸ್ ಹಮಾಲರು ಹಾಗೂ ಚಕ್ಕಡಿಯವರ ಸಮಿತಿಯ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಆದಪ್ಪ ಮಾರೆಪ್ಪನವರ ಮಾತನಾಡಿ, ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿರುವ ಕುಸ್ತಿ ಕಲೆ ಶಿಸ್ತು, ಧೈರ್ಯ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಪರಂಪರೆಯ ಕ್ರೀಡೆಯಾಗಿದೆ. ಯುವಜನರು ಈ ಕಲೆಯತ್ತ ಆಕರ್ಷಿತರಾಗಬೇಕು ಹಾಗೂ ಗ್ರಾಮೀಣ ಸೊಗಡಿನ ಕುಸ್ತಿ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಜುಲೈ 5ರಂದು ವಿವಿಧ ರಾಜ್ಯಗಳ ಹೆಸರಾಂತ ಪೈಲ್ವಾನರು ಗದಗಕ್ಕೆ ಆಗಮಿಸಲಿದ್ದು, ಜುಲೈ 6ರಂದು ಮಧ್ಯಾಹ್ನ 3 ಗಂಟೆಗೆ ವೀರೇಶ್ವರ ಪುಣ್ಯಾಶ್ರಮದ ಸಮೀಪದ ಕುಸ್ತಿ ಮೈದಾನದಲ್ಲಿ (ಕೆ.ಎಚ್. ಪಾಟೀಲ ಸಭಾಭವನದ ಎದುರು) ಪಂದ್ಯಾವಳಿ ನಡೆಯಲಿದೆ. ಹಿರಿಯ ಪೈಲ್ವಾನರು ಮತ್ತು ನಿರ್ಣಾಯಕರ ಮಾರ್ಗದರ್ಶನದಲ್ಲಿ ಕುಸ್ತಿಗಳನ್ನು ಶಿಸ್ತಿನಿಂದ ನಡೆಸಲಾಗುವುದು ಎಂದು ತಿಳಿಸಿದರು.

ಕುಸ್ತಿ ಅಭಿಮಾನಿಗಳು, ದಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಮಕ್ತುಂಸಾಬ ನಾಗನೂರ, ಕಾರ್ಯದರ್ಶಿ ಇಮಾಮಸಾಬ ರೋಣದ, ಖಜಾಂಚಿ ಶಂಕ್ರಪ್ಪ ಯರಗುಡಿ, ಕರ್ನಾಟಕ ರಾಜ್ಯ ಹಮಾಲರ ಒಕ್ಕೂಟದ ರಾಜ್ಯಾಧ್ಯಕ್ಷ ಅಯ್ಯಪ್ಪ ನಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪೋಕ್ಸೋ ಪ್ರಕರಣ: ರೆಗ್ಯುಲರ್ ಜಾಮೀನಿಗೆ ಕೋರ್ಟ್ ಮೊರೆ ಹೋದ ವಚನಾನಂದ ಸ್ವಾಮೀಜಿ!

ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಚಾಟನೆಗೊಂಡಿರುವ ವಚನಾನಂದ ಸ್ವಾಮೀಜಿ ಅವರು ದಾವಣಗೆರೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ರೆಗ್ಯುಲರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಸ್ವಾಮೀಜಿ ತಮ್ಮ ವಕೀಲ ಎಸ್.ವಿ. ಪಾಟೀಲ್ ಹಾಗೂ ಭಕ್ತರೊಂದಿಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ:

ಮಠದಲ್ಲಿ ಆಶ್ರಯ ಪಡೆದಿದ್ದ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಾಗಿತ್ತು. ಬಳಿಕ ತನಿಖೆಯ ಕಾರಣದಿಂದ ಪ್ರಕರಣವನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.

ಹೈಕೋರ್ಟ್ ಆದೇಶ:

ಪ್ರಕರಣ ದಾಖಲಾಗುವ ಮುನ್ನವೇ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ ಆ ಜಾಮೀನನ್ನು ರದ್ದುಪಡಿಸುವಂತೆ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿ, ರೆಗ್ಯುಲರ್ ಜಾಮೀನು ಪಡೆಯಲು ಮೂರು ವಾರಗಳ ಕಾಲಾವಕಾಶ ನೀಡಿತ್ತು.

ಹೈಕೋರ್ಟ್ ನೀಡಿದ ಕಾಲಾವಕಾಶದ ಹಿನ್ನೆಲೆಯಲ್ಲಿ, ವಚನಾನಂದ ಸ್ವಾಮೀಜಿ ಇದೀಗ ದಾವಣಗೆರೆ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ರೆಗ್ಯುಲರ್ ಜಾಮೀನು ಕೋರಿ ಅಧಿಕೃತ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಗಮನ ಸೆಳೆಯುತ್ತಿದೆ.

ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಮುಂದಿನ 7 ದಿನ ಭಾರಿ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ!

ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಮುಂದಿನ 7 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ವರದಿ ಪ್ರಕಾರ, ರಾಜ್ಯದ ಹಲವೆಡೆ ಗುಡುಗು, ಸಿಡಿಲು ಮತ್ತು ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಮುಂದುವರಿಯಲಿದೆ. ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇರುವುದರಿಂದ ಎಚ್ಚರಿಕೆ ನೀಡಲಾಗಿದೆ.

ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್:

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ನಿರಂತರ ಮಳೆಯಾಗಲಿದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 27ರಿಂದ ಜೂನ್ 30ರವರೆಗೆ ಭಾರಿ ಮಳೆಯ ಜೊತೆಗೆ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನಲ್ಲಿ ಗುಡುಗು ಮಳೆ:

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಗುಡುಗು-ಸಿಡಿಲು ಸಹಿತ ಮಳೆಯಾಗಲಿದೆ. ಜೂನ್ 27ರಂದು ಕೆಲವು ಸ್ಥಳಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದ್ದು, ಬಲವಾದ ಗಾಳಿಯೂ ಬೀಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಜೂನ್ 28ರಿಂದ ಜುಲೈ 3ರವರೆಗೆ ಹಗುರದಿಂದ ಸಾಧಾರಣ ಮಳೆ ಮುಂದುವರಿಯಲಿದ್ದು, ಗುಡುಗು ಮತ್ತು ಸಿಡಿಲು ಸಾಮಾನ್ಯವಾಗಿರಲಿದೆ.

ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಸಾಧ್ಯತೆ:

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಜೂನ್ 30ರಿಂದ ಮಳೆಯ ತೀವ್ರತೆ ಹೆಚ್ಚಾಗಲಿದೆ. ಜೂನ್ 29ರಂದು ತಾತ್ಕಾಲಿಕವಾಗಿ ಮಳೆ ಕಡಿಮೆಯಾಗುವ ಸಾಧ್ಯತೆ ಇದ್ದರೂ, ಜೂನ್ 30ರಿಂದ ಜುಲೈ 3ರವರೆಗೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಸಾರ್ವಜನಿಕರಿಗೆ ಎಚ್ಚರಿಕೆ:

ಗುಡುಗು-ಸಿಡಿಲಿನ ಸಂದರ್ಭಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು IMD ಸೂಚಿಸಿದೆ. ಮರಗಳ ಕೆಳಗೆ ನಿಲ್ಲುವುದು, ಹಳೆಯ ಕಟ್ಟಡಗಳಲ್ಲಿ ಆಶ್ರಯ ಪಡೆಯುವುದು ಹಾಗೂ ತೆರೆದ ಪ್ರದೇಶಗಳಲ್ಲಿ ಇರುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಲಾಗಿದೆ.

ರೈತರು ಮತ್ತು ಮೀನುಗಾರರು ಹವಾಮಾನ ಪರಿಸ್ಥಿತಿಯನ್ನು ಗಮನಿಸಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.

ಮಳೆಗಾಗಿ ಗುರ್ಜಿ ಹೊತ್ತ ರೈತ ಮಹಿಳೆಯರು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರು ಉತ್ತಮ ಮಳೆಯಾಗಲೆಂದು ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಗುರ್ಜಿ ಪೂಜೆ ನೆರವೇರಿಸಿದರು.

ಗ್ರಾಮದ ಮಹಿಳೆಯರು ತಲೆಯ ಮೇಲೆ ಗುರ್ಜಿ ಹೊತ್ತು, “ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ… ಕಾರ ಮಳೆಯೋ, ಕಪ್ಪತ್ತ ಮಳೆಯೋ…” ಎಂದು ಜಾನಪದ ಹಾಡುಗಳನ್ನು ಹಾಡುತ್ತ ಮನೆ ಮನೆಗೆ ತೆರಳಿ ಮಳೆಗಾಗಿ ಪ್ರಾರ್ಥಿಸಿದರು.

ಸಗಣಿಯಿಂದ ತಯಾರಿಸಿದ ಗುರ್ಜಿಯನ್ನು ಹೆಂಚಿನ ಮೇಲೆ ಇಟ್ಟು ಗ್ರಾಮದ ಮನೆಗಳಿಗೆ ಕೊಂಡೊಯ್ಯಲಾಯಿತು. ಗುರ್ಜಿ ಮನೆ ಎದುರು ಬಂದಾಗ ಮನೆಯವರು ಹೆಂಚಿನ ಮೇಲೆ ನೀರು ಸುರಿದು ಮಳೆಯ ಸಂಕೇತವಾಗಿ ಪೂಜೆ ಸಲ್ಲಿಸಿ ದವಸ-ಧಾನ್ಯವನ್ನು ಕಾಣಿಕೆಯಾಗಿ ನೀಡಿದರು.

ಸಂಗ್ರಹವಾದ ದವಸ-ಧಾನ್ಯವನ್ನು ಮಾರಾಟ ಮಾಡಿ ಬಂದ ಹಣದಿಂದ ಚುರುಮರಿ ಖರೀದಿಸಿ ದೇವಸ್ಥಾನದಲ್ಲಿ ಎಲ್ಲರೂ ಪ್ರಸಾದ ಸ್ವೀಕರಿಸಿದರು. ಈ ಜಾನಪದ ಆಚರಣೆ ಗ್ರಾಮಸ್ಥರಲ್ಲಿ ಸಾಮರಸ್ಯ, ಸಹಕಾರ ಹಾಗೂ ಪ್ರಕೃತಿಯ ಮೇಲಿನ ಭಕ್ತಿಗೆ ಸಾಕ್ಷಿಯಾಯಿತು.

ಪೂಜೆಯಲ್ಲಿ ಬಸಪ್ಪ ಹಂಜಿ, ಶಿವಪ್ಪ ಕೆಸರಳ್ಳಿ, ರಾಜು ಮುಳಗುಂದ, ಎನ್.ಎನ್. ನೆಗಳೂರ, ಶ್ರೀಧರ ಜನಿವಾರದ, ವಿಷ್ಣಪ್ಪ ಮಾಳೋದಿ ಸೇರಿದಂತೆ ಅನೇಕ ಗ್ರಾಮಸ್ಥರು ಪಾಲ್ಗೊಂಡಿದ್ದರು.