Home Blog Page 112

ಅರ್ಹರಿಗೆ ಗ್ಯಾರಂಟಿ ಸೌಲಭ್ಯ ತಲುಪಿಸಿ: ಮಿಥುನ್ ಜಿ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯೋಜನೆಗಳ ಲಾಭ ಪಡೆಯುತ್ತಿರುವ ಅನರ್ಹರು ಹಾಗೂ ಮೃತಪಟ್ಟ ಫಲಾನುಭವಿಗಳ ಕುರಿತು ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ವಹಿಸಬೇಕು ಎಂದು ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ರೋಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ 38,422 ಪಡಿತರ ಚೀಟಿಗಳಿದ್ದು, 38,278 ಅರ್ಜಿಗಳು ನೋಂದಣಿಯಾಗಿವೆ. ಈ ಪೈಕಿ 34,528 ಅರ್ಜಿಗಳಿಗೆ ಮಂಜೂರಾತಿ ದೊರೆತಿದ್ದು, ಶೇ.90.20ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮನೆಮನೆ ಪರಿಶೀಲನೆಯಲ್ಲಿ 945 ಫಲಾನುಭವಿಗಳು ಮೃತಪಟ್ಟಿರುವುದು ಹಾಗೂ 248 ಮಂದಿ ಜಿಎಸ್‌ಟಿಗೆ ನೋಂದಣಿಯಾಗಿರುವುದು ಪತ್ತೆಯಾಗಿದೆ. ಮನೆಯ ಯಜಮಾನಿ ಮೃತಪಟ್ಟಿದ್ದರೆ ರೇಷನ್ ಕಾರ್ಡ್‌ನಲ್ಲಿ ಅಗತ್ಯ ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಗೃಹಲಕ್ಷ್ಮೀ ಕಂತು ಜಮೆಯಾಗುವ ಮುನ್ನವೇ ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಬೇಕು. ಅರ್ಹರು ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳಲ್ಲಿ 12 ನಿಯಮಗಳ ಬ್ಯಾನರ್ ಅಳವಡಿಸುವಂತೆ ಹಿಂದಿನ ಸಭೆಯಲ್ಲಿ ಸೂಚಿಸಿದ್ದರೂ ಅನುಷ್ಠಾನವಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಲಾಯಿತು. 75 ವರ್ಷ ಮೇಲ್ಪಟ್ಟವರಿಗೆ ಹೆಬ್ಬೆಟ್ಟು ಗುರುತಿನ ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಒಟಿಪಿ ಮೂಲಕ ಪಡಿತರ ಪಡೆಯುವ ಅವಕಾಶದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು.

ಪ್ರತಿ ತಿಂಗಳು 25ರ ನಂತರ ಪಡಿತರ ವಿತರಣೆ ಆರಂಭವಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಮಿತಿ ಸದಸ್ಯ ಬಿ.ಎಸ್. ರಡ್ಡೇರ ಗಮನ ಸೆಳೆದರು. ಗೋದಾಮಿನಿಂದ ಪಡಿತರ ಎತ್ತುವಳಿ ವಿಳಂಬವಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಹೆಸ್ಕಾಂ ವ್ಯಾಪ್ತಿಯಲ್ಲಿ ಫಲಾನುಭವಿಗಳ ಮರುಸಮೀಕ್ಷೆ ಶೇ.86ರಷ್ಟು ಪೂರ್ಣಗೊಂಡಿದೆ. ಉಳಿದವರ ಸಮೀಕ್ಷೆಯನ್ನು ಮನೆಮನೆಗೆ ತೆರಳಿ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಯೋಜನೆಯಿಂದ ಹೆಸರು ಹೊರಗುಳಿಯದಂತೆ ಅಗತ್ಯ ದಾಖಲೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು.

ವಿದ್ಯುತ್ ಸಲಹಾ ಸಮಿತಿ ಸಭೆಗಳ ಮಾಹಿತಿ ಸದಸ್ಯರಿಗೆ ದೊರೆಯುತ್ತಿಲ್ಲ ಎಂದು ಶಿವಪ್ಪ ಗಾಣಿಗೇರ ಆಕ್ಷೇಪ ವ್ಯಕ್ತಪಡಿಸಿದರು. ಸಾರ್ವಜನಿಕರ ವಿದ್ಯುತ್ ಸಮಸ್ಯೆಗಳನ್ನು ಇಲಾಖೆಯ ಗಮನಕ್ಕೆ ತರಲು ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.

ಶಕ್ತಿ ಯೋಜನೆಯಡಿ ರೋಣ–ಅಬ್ಬಿಗೇರಿ ಮಾರ್ಗದಲ್ಲಿ ಬೆಳಗ್ಗೆ 6 ಹಾಗೂ ಸಂಜೆ 5.30ಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಯಿತು. ರೋಣ–ಸವಡಿ ಮಾರ್ಗವಾಗಿ ಗದಗಕ್ಕೆ ತೆರಳುವ ಬಸ್‌ಗಳಲ್ಲಿ ಹೆಚ್ಚಿನ ಜನದಟ್ಟಣೆ ಇರುವುದರಿಂದ ಹೆಚ್ಚುವರಿ ಬಸ್ ಕಲ್ಪಿಸುವಂತೆ ಬಸವರಾಜ ತಳವಾರ ಮನವಿ ಮಾಡಿದರು.

ರೋಣ–ಹೊಸಳ್ಳಿ–ಇಟಗಿ ಮಾರ್ಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಶಾಲಾ ಸಮಯದಲ್ಲಿ ನಿಗದಿತ ಸ್ಥಳಗಳಲ್ಲಿ ಬಸ್ ನಿಲ್ಲಿಸುವಂತೆ ಬಿ.ಎಸ್. ರಡ್ಡೇರ ಮನವಿ ಮಾಡಿದರು. ಮಹಿಳಾ ಪ್ರಯಾಣಿಕರಿದ್ದರೂ ಕೆಲವೆಡೆ ಬಸ್ ನಿಲ್ಲಿಸದಿರುವ ಕುರಿತು ನಾಜಬೇಗಂ ಯಲಿಗಾರ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಚಾಲಕರು ಹಾಗೂ ನಿರ್ವಾಹಕರ ಸಭೆ ನಡೆಸಿ ಸೂಕ್ತ ತಿಳುವಳಿಕೆ ನೀಡುವಂತೆ ಅಧ್ಯಕ್ಷರು ಸೂಚಿಸಿದರು.

ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆಯೂ ಘಟಕ ನಿರ್ವಾಹಕರಿಗೆ ನಿರ್ದೇಶನ ನೀಡಲಾಯಿತು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

“ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ಸಕಾಲಕ್ಕೆ ತಲುಪಬೇಕು. ಅನರ್ಹರು ಹಾಗೂ ಮೃತಪಟ್ಟವರ ಹೆಸರಿನಲ್ಲಿ ಸೌಲಭ್ಯ ಮುಂದುವರಿಯದಂತೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು.” ಎಂದು ಮಿಥುನ್ ಜಿ. ಪಾಟೀಲ ಹೇಳಿದರು.

— ಮಿಥುನ್ ಜಿ. ಪಾಟೀಲ, ಅಧ್ಯಕ್ಷರು, ತಾಲೂಕು ಗ್ಯಾರಂಟಿ ಸಮಿತಿ

ಸಬ್ಸಿಡಿಗಿಂತ ಸ್ವಾವಲಂಬಿ ಪರಿಶ್ರಮದ ದುಡಿಮೆ ಮುಖ್ಯ: ಶರಣಬಸಪ್ಪ ಗುಡಿಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಾಮಾಣಿಕತೆ, ಸ್ವಾವಲಂಬನೆ ಹಾಗೂ ನಿರಂತರ ಪರಿಶ್ರಮವೇ ಉದ್ಯಮದ ಯಶಸ್ಸಿನ ಮೂಲಮಂತ್ರ. ವ್ಯಾಪಾರಸ್ಥರು ಯಾವುದೇ ಸಮಸ್ಯೆ ಎದುರಾದರೂ ಧೈರ್ಯದಿಂದ ಹೋರಾಡಬೇಕು. ಅವರ ಬೆನ್ನಿಗೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸದಾ ನಿಲ್ಲಲಿದೆ ಎಂದು ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಭಾನುವಾರ ನಡೆದ ‘ಗದಗ ಉತ್ಸವ–2026’ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉದ್ಯಮಿಗಳಿಗೆ ಸರ್ಕಾರದ ಆರ್ಥಿಕ ನೆರವು ಮತ್ತಷ್ಟು ಹೆಚ್ಚಾಗಬೇಕು. ಪ್ರಸ್ತುತ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸುವುದರ ಜತೆಗೆ, ರೈತರಿಗೆ ನೀಡುವ ಮಾದರಿಯಲ್ಲಿ ಉದ್ಯಮಿಗಳಿಗೂ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸಬೇಕು. ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಿ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

“ಸಬ್ಸಿಡಿಗಾಗಿ ಕಾಯುವುದಕ್ಕಿಂತ ಸ್ವಾವಲಂಬಿಯಾಗಿ ದುಡಿಯುವುದು ಮುಖ್ಯ. ಪ್ರಾಮಾಣಿಕವಾಗಿ ದುಡಿಯುವವರನ್ನು ಸಂಸ್ಥೆ ಸದಾ ಬೆಂಬಲಿಸುತ್ತದೆ.” ಎಂದು ಗುಡಿಮನಿ ಹೇಳಿದರು.

ಸರ್ಕಾರ ತೆರಿಗೆ ಸಂಗ್ರಹಿಸುವ ತನ್ನ ಕರ್ತವ್ಯ ನಿರ್ವಹಿಸಲಿ. ಆದರೆ ಸಣ್ಣಪುಟ್ಟ ಕಾರಣಗಳಿಗೆ ಉದ್ಯಮಿಗಳಿಗೆ ಅನಗತ್ಯ ತೊಂದರೆ ನೀಡಬಾರದು. ಒಂದು ಉದ್ಯಮಕ್ಕೆ ಧಕ್ಕೆಯಾದರೆ ಅದರೊಂದಿಗೆ ನೂರಾರು ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದರು.

ಆರ್ಥಿಕ ಸಂಕಷ್ಟ ಹಾಗೂ ಸಾಲದ ಒತ್ತಡದ ನಡುವೆಯೂ ಛಲ ಬಿಡದೆ ಪ್ರಾಮಾಣಿಕವಾಗಿ ದುಡಿದು ಯಶಸ್ಸು ಸಾಧಿಸಿರುವ ಗಜೇಂದ್ರಗಡದ ಉದ್ಯಮಿಗಳ ಸಾಧನೆ ಇತರರಿಗೆ ಮಾದರಿಯಾಗಿದೆ. ನಿರಂತರ ಪರಿಶ್ರಮದಿಂದ ಸಂಕಷ್ಟದ ದಿನಗಳನ್ನು ಮೀರಿ ಯಶಸ್ಸು ಗಳಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರಿಗಳ ನೋಟಿಸ್‌ಗೆ ಹೆದರಿ ಉದ್ಯಮಿಗಳು ಆತಂಕಕ್ಕೊಳಗಾಗಬಾರದು. ಕಾನೂನುಬದ್ಧವಾಗಿ ಉತ್ತರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ವ್ಯಾಪಾರಸ್ಥರ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡಲು ಸಂಸ್ಥೆಯಲ್ಲಿ ಅನುಭವಿ ವಕೀಲರು ಹಾಗೂ ವಿಷಯ ತಜ್ಞರು ಲಭ್ಯವಿದ್ದು, ಯಾವುದೇ ತೊಂದರೆ ಎದುರಾದರೂ ಸಂಸ್ಥೆಯನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ಗದಗ ಉತ್ಸವದ ಅಂಗವಾಗಿ ನಡೆದ 140 ಮಳಿಗೆಗಳ ಪ್ರದರ್ಶನ ಯಶಸ್ವಿಯಾಗಿದ್ದು, ಸಣ್ಣ ಗುಡಿ ಕೈಗಾರಿಕೆಗಳಿಂದ ಉತ್ಪನ್ನ ತಯಾರಿಸಿ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿರುವ ಉದ್ಯಮಿಗಳ ಸಾಧನೆ ಹೆಮ್ಮೆಯ ಸಂಗತಿ ಎಂದರು.

ಉತ್ಸವದ ಆಯೋಜನೆಗೆ ಸರ್ಕಾರದ ನೆರವು ಮಾತ್ರ ಸಾಕಾಗುವುದಿಲ್ಲ. ಸುಮಾರು ₹50 ಲಕ್ಷ ವೆಚ್ಚವನ್ನು ವ್ಯಾಪಾರಸ್ಥರು ತಮ್ಮ ಲಾಭದ ಹಣದಿಂದಲೇ ಭರಿಸುತ್ತಿದ್ದಾರೆ. ಉದ್ಯಮಿಗಳು ತಮ್ಮ ಕಾರ್ಮಿಕರ ಕುಟುಂಬಗಳ ಮದುವೆ, ವೈದ್ಯಕೀಯ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ನೆರವಾಗುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.

ಉತ್ಸವದ ಯಶಸ್ಸಿಗೆ ಸಹಕರಿಸಿದ ಚೇಂಬರ್ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರಿಗೆ ಗುಡಿಮನಿ ಕೃತಜ್ಞತೆ ಸಲ್ಲಿಸಿದರು.

“ಅಧಿಕಾರಿಗಳ ನೋಟಿಸ್‌ಗೆ ಹೆದರಿ ಉದ್ಯಮಿಗಳು ಆತಂಕಕ್ಕೊಳಗಾಗಬಾರದು. ಕಾನೂನುಬದ್ಧವಾಗಿ ಉತ್ತರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ವ್ಯಾಪಾರಸ್ಥರ ಯಾವುದೇ ಸಮಸ್ಯೆಗೆ ಸಂಸ್ಥೆ ಅವರ ಬೆನ್ನಿಗೆ ನಿಲ್ಲಲಿದೆ.” ಎಂದು ಶರಣಬಸಪ್ಪ ಗುಡಿಮನಿ ಹೇಳಿದರು.

— ಶರಣಬಸಪ್ಪ ಗುಡಿಮನಿ, ಅಧ್ಯಕ್ಷರು, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ

ಯುವಕರ ಕೈಗೆ ಉದ್ಯೋಗ–ಉದ್ಯಮದ ಚಾವಿ ಕೊಡಿ: ಬಸವೇಶ್ವರ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ಗದಗ: ಯುವಕರು ಮುದುಕರಾಗುತ್ತಾರೆ, ಮುದುಕರು ಯುವಕರಾಗುವುದಿಲ್ಲ. ಹೀಗಾಗಿ ಹಿರಿಯರು ಜವಾಬ್ದಾರಿಗಳನ್ನು ತಮ್ಮಲ್ಲೇ ಇಟ್ಟುಕೊಳ್ಳದೆ, ಯುವಕರಿಗೆ ಉದ್ಯೋಗ, ಉದ್ಯಮದ ಅವಕಾಶ ನೀಡಿ ಸೂಕ್ತ ಮಾರ್ಗದರ್ಶನದೊಂದಿಗೆ ಮುನ್ನೆಲೆಗೆ ತರಬೇಕು ಎಂದು ಸೂಡಿ–ಗದಗ ಜುಕ್ತಿ ಹಿರೇಮಠದ ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಭಾನುವಾರ ನಡೆದ ‘ಗದಗ ಉತ್ಸವ–2026’ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗದಗ ‘ಮುದ್ರಣ ಕಾಶಿ’ಯಾಗಿ ಗುರುತಿಸಿಕೊಂಡಿದ್ದು, ಇದೀಗ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲೂ ತನ್ನದೇ ಛಾಪು ಮೂಡಿಸಿದೆ. ಸರ್ಕಾರ ಅಗತ್ಯ ಮೂಲಸೌಕರ್ಯ ಕಲ್ಪಿಸಿದರೆ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ವಿಸ್ತರಿಸಲಿವೆ ಎಂದರು.

ಗದಗ ಉತ್ಸವದಲ್ಲಿ 140 ಮಳಿಗೆಗಳಿಗೆ ಉತ್ತಮ ಸ್ಪಂದನೆ ದೊರೆತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಉತ್ಸವದ ಯಶಸ್ಸಿಗೆ ಸಾಕ್ಷಿಯಾಗಿದೆ. ಇಂತಹ ಉತ್ಸವಗಳು ವರ್ಷದಲ್ಲಿ ಎರಡು–ಮೂರು ಬಾರಿ ನಡೆಯಬೇಕು ಎಂದರು.

“ಕಿಂಗ್ ಆಗುವವರು ಹಲವರಿದ್ದಾರೆ; ಆದರೆ ಕಿಂಗ್ ಮೇಕರ್ ಆಗುವವರು ವಿರಳ. ತಾವೇ ಮುನ್ನೆಲೆಗೆ ಬರಬೇಕೆಂಬ ಆಸೆಗಿಂತ ಇತರರನ್ನು ಬೆಳೆಸುವ ಗುಣವೇ ನಿಜವಾದ ನಾಯಕತ್ವ.” ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರ ಮಾತನಾಡಿ, ಕೃಷಿ ಹಾಗೂ ಜವಳಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಉದ್ಯಮ ಆರಂಭಿಸುವ ಮುನ್ನ ಕಚ್ಚಾ ವಸ್ತು, ಮಾರುಕಟ್ಟೆ, ನುರಿತ ಕಾರ್ಮಿಕರು ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಅಧ್ಯಯನ ಅಗತ್ಯ ಎಂದರು.

ಕಪ್ಪತಗುಡ್ಡದ ನೈಸರ್ಗಿಕ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು. ‘ಮೇಕ್ ಇನ್ ಇಂಡಿಯಾ’, ‘ಸ್ಟಾರ್ಟ್ಅಪ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’ ಹಾಗೂ ‘ಮುದ್ರಾ’ ಯೋಜನೆಗಳ ಪ್ರಯೋಜನ ಪಡೆದು ಯುವಕರು ಉದ್ಯಮಶೀಲರಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ವಹಿಸಿದ್ದರು. ಮಧುಸೂಧನ ಪುಣೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರು ಬಾಳಿಹಳ್ಳಿಮಠ ಹಾಗೂ ಮುರುಗೇಶ ಬಡ್ನಿ ನಿರೂಪಿಸಿದರು. ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ ವಂದಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಜಯದೇವ ಮೆಣಸಗಿ, ಪ್ರಕಾಶ ಉಗಲಾಟ, ಸಿದ್ರಾಮಪ್ಪ ಉಮಚಗಿ, ರಾಘವೇಂದ್ರ ಕಾಲವಾಡ, ಅಶೋಕ ಸಂಕಣ್ಣವರ, ಅರವಿಂದ ಕಾಮತ, ಮಧುಸೂಧನ ಪುಣೇಕರ, ಮಂಜುನಾಥ ವೀರಲಿಂಗಯ್ಯನಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಆನಂದ ಪೋತ್ನೀಸ್ ಹಾಗೂ ಈಶಣ್ಣ ಮುನವಳ್ಳಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೇಷ್ಠ ಉದ್ಯಮಿ ಪ್ರಶಸ್ತಿಯನ್ನು ಕುಮಾರ ಫಟ್ಟದ, ವೀರಣ್ಣ ಸೊನ್ನದ ಹಾಗೂ ಶಿಗ್ಲಿಯ ವೀರಣ್ಣ ಪವಾಡದ ಅವರಿಗೆ, ಶ್ರೇಷ್ಠ ವರ್ತಕ ಪ್ರಶಸ್ತಿಯನ್ನು ಸುರೇಶಕುಮಾರ ಓಸವಾಲ, ಬಸಪ್ಪ ಶೆಟ್ಟಿಕೇರಿ, ಸಂಗಮೇಶ ಗೌರಿಮಠ ಹಾಗೂ ಗೌತಮ್‌ಚಂದ್ ಚೋಪ್ರಾ ಅವರಿಗೆ ಪ್ರದಾನ ಮಾಡಲಾಯಿತು.

ಶ್ರೇಷ್ಠ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ನಿರ್ಮಲಾ ಕೊಳ್ಳಿ ಅವರಿಗೆ ನೀಡಲಾಯಿತು. ವಿಜಯಕುಮಾರ ಮೇಗೂರ, ಅರಷದ್ ಖಾಜಿ ಹಾಗೂ ಸುವರ್ಣಾ ಮದರಿಮಠ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಉದ್ಯಮ ಆರಂಭಿಸುವ ಮುನ್ನ ಕಚ್ಚಾ ವಸ್ತು, ಮಾರುಕಟ್ಟೆ, ನುರಿತ ಕಾರ್ಮಿಕರು ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಅಧ್ಯಯನ ಅಗತ್ಯ. ಕೇವಲ ಸಬ್ಸಿಡಿ ನಿರೀಕ್ಷೆಯಲ್ಲಿ ಉದ್ಯಮ ಆರಂಭಿಸಿ ವಿಫಲರಾಗಬಾರದು.
– ಪ್ರೊ. ಎಸ್.ವ್ಹಿ. ಸಂಕನೂರ, ವಿಧಾನ ಪರಿಷತ್ ಸದಸ್ಯರು

ಬೀದರ್‌ನಲ್ಲಿ ಕೈಕೊಟ್ಟ ಮುಂಗಾರು:57 ಕೆರೆಗಳು ಬತ್ತಿ ಬರದ ಆತಂಕ!

0

ಬೀದರ್: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೆರೆ-ಕಟ್ಟೆಗಳು ಬತ್ತುತ್ತಿದ್ದು, ಕೃಷಿ ಚಟುವಟಿಕೆಗಳ ಮೇಲೆ ಅದರ ಪರಿಣಾಮ ಈಗಾಗಲೇ ಗೋಚರಿಸುತ್ತಿದೆ.

ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಅಂತರ್ಜಲ ಮಟ್ಟ ಹಾಗೂ ಗ್ರಾಮೀಣ ಜನರ ಜೀವನೋಪಾಯದ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಸಣ್ಣ ನೀರಾವರಿ ಇಲಾಖೆ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಬೀದರ್ ಜಿಲ್ಲೆಯಲ್ಲಿ ಒಟ್ಟು 125 ಕೆರೆಗಳಿದ್ದು, 2,958 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. ಈ ಕೆರೆಗಳ ಅಚ್ಚುಕಟ್ಟು ಪ್ರದೇಶ ಸುಮಾರು 21 ಸಾವಿರ ಹೆಕ್ಟೇರ್‌ನಷ್ಟಿದೆ.

ಆದರೆ ಪ್ರಸಕ್ತ ಮುಂಗಾರು ಮಳೆ ಕೊರತೆಯಿಂದಾಗಿ ಈ ಕೆರೆಗಳ ಪೈಕಿ 57 ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಇನ್ನು 60 ಕೆರೆಗಳಲ್ಲಿ ಶೇ.30ರಷ್ಟು ಮಾತ್ರ ನೀರಿನ ಸಂಗ್ರಹವಿದ್ದು, ಕೇವಲ 7 ಕೆರೆಗಳಲ್ಲಿ ಶೇ.50ರಷ್ಟು ನೀರು ತುಂಬಿದೆ ಎಂದು ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ.

ಗ್ರಾಮೀಣ ಭಾಗದಲ್ಲಿ ಹನಿ ನೀರಿಗೂ ಹಾಹಾಕಾರ:

ಕೆರೆಗಳು ಬತ್ತುತ್ತಿರುವ ಪರಿಣಾಮ ಗ್ರಾಮೀಣ ಭಾಗಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಕೃಷಿ ಚಟುವಟಿಕೆಗಳಿಗೂ ನೀರಿನ ಕೊರತೆ ದೊಡ್ಡ ಹೊಡೆತ ನೀಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕೆರೆಗಳ ನೀರಿನ ಮಟ್ಟ ಕುಸಿದಿರುವುದು ಅಂತರ್ಜಲದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಬಾವಿ ಹಾಗೂ ಕೊಳವೆಬಾವಿಗಳಲ್ಲಿನ ನೀರಿನ ಲಭ್ಯತೆ ಕಡಿಮೆಯಾಗುವ ಆತಂಕ ಸ್ಥಳೀಯರಲ್ಲಿ ಮೂಡಿದೆ.

ಶಾಶ್ವತ ಪರಿಹಾರಕ್ಕೆ ಆಗ್ರಹ:

ಕೆರೆಗಳು ಬತ್ತುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಪರಿಹಾರ ಕ್ರಮಗಳ ಬದಲಿಗೆ ಕೆರೆಗಳ ಪುನರುಜ್ಜೀವನ, ಹೂಳು ತೆರವು, ಒತ್ತುವರಿ ತೆರವು ಹಾಗೂ ನೀರು ಹರಿದುಬರುವ ಕಾಲುವೆಗಳ ದುರಸ್ತಿ ಸೇರಿದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಇದರ ಜೊತೆಗೆ ವಿಬಿ-ಜಿ ರಾಮ್‌ ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಗ್ರಾಮೀಣ ಭಾಗದ ಜಲಮೂಲಗಳನ್ನು ಸಂರಕ್ಷಿಸಬೇಕು. ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಕೂಡಲೇ ಅಗತ್ಯ ಕ್ರಮ ಕೈಗೊಂಡು ಕೆರೆಗಳಿಗೆ ಕಾಯಕಲ್ಪ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಪದೇಪದೇ ಕಣ್ಣುಗಳಿಂದ ನೀರು ಬರುತ್ತಿದೆಯೇ? ಈ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ!

0

ಕಣ್ಣುಗಳಿಂದ ನೀರು ಬರುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ.

ಧೂಳು, ಹೊಗೆ, ಗಾಳಿ, ತೀವ್ರ ಬೆಳಕು ಅಥವಾ ಕಣ್ಣಿಗೆ ಸಣ್ಣ ಕಸ ಹೋಗುವುದರಿಂದ ಕೆಲವೊಮ್ಮೆ ಕಣ್ಣೀರು ಹೆಚ್ಚಾಗಬಹುದು. ಕಣ್ಣಿನಲ್ಲಿ ಉರಿ ಅಥವಾ ಆಯಾಸವಾದಾಗಲೂ ಕಣ್ಣುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಹೆಚ್ಚಿನ ಕಣ್ಣೀರನ್ನು ಉತ್ಪಾದಿಸುತ್ತವೆ.

ಆದರೆ ಕಣ್ಣುಗಳಿಂದ ಪದೇಪದೇ ಅಥವಾ ನಿರಂತರವಾಗಿ ನೀರು ಬರುತ್ತಿದ್ದರೆ, ಅದನ್ನು ನಿರ್ಲಕ್ಷಿಸಬಾರದು. ಡ್ರೈ ಐ ಸಿಂಡ್ರೋಮ್, ಅಲರ್ಜಿ, ಸೋಂಕು ಅಥವಾ ಕಣ್ಣೀರಿನ ನಾಳಿಯಲ್ಲಿ ಅಡಚಣೆ ಸೇರಿದಂತೆ ಹಲವು ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹುದು.

ಕಣ್ಣುಗಳಿಂದ ಪದೇಪದೇ ನೀರು ಬರುವುದಕ್ಕೆ ಕಾರಣಗಳೇನು?

ಡ್ರೈ ಐ ಸಿಂಡ್ರೋಮ್:

ಕಣ್ಣಿನಲ್ಲಿ ಸಾಕಷ್ಟು ತೇವಾಂಶ ಇಲ್ಲದಿದ್ದಾಗ ಡ್ರೈ ಐ ಸಿಂಡ್ರೋಮ್ ಉಂಟಾಗಬಹುದು. ಇದರಿಂದ ಕಣ್ಣಿನಲ್ಲಿ ಉರಿ, ಕಿರಿಕಿರಿ ಅಥವಾ ಒಣಗಿದ ಅನುಭವ ಕಾಣಿಸಿಕೊಳ್ಳಬಹುದು. ಇದಕ್ಕೆ ಪ್ರತಿಕ್ರಿಯೆಯಾಗಿ ಕಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಕಣ್ಣೀರನ್ನು ಉತ್ಪಾದಿಸುವುದರಿಂದ ಕಣ್ಣುಗಳಿಂದ ನೀರು ಹರಿಯಬಹುದು.

ಅಲರ್ಜಿ ಮತ್ತು ಸೋಂಕು:

ಧೂಳು, ಪರಾಗಕಣಗಳು ಅಥವಾ ಇತರ ಅಲರ್ಜಿಕಾರಕಗಳಿಂದ ಕಣ್ಣಿನಲ್ಲಿ ಅಲರ್ಜಿ ಉಂಟಾದಾಗ ನೀರು ಬರುವುದು, ತುರಿಕೆ ಮತ್ತು ಕಣ್ಣು ಕೆಂಪಾಗುವುದು ಕಂಡುಬರಬಹುದು. ಕಣ್ಣಿನ ಸೋಂಕು ಕೂಡ ಹೆಚ್ಚಿನ ಕಣ್ಣೀರಿಗೆ ಕಾರಣವಾಗಬಹುದು.

ಕಣ್ಣಿನಿಂದ ಉತ್ಪತ್ತಿಯಾಗುವ ಕಣ್ಣೀರು ಸರಿಯಾಗಿ ಹೊರಹೋಗಲು ಸಾಧ್ಯವಾಗದಿದ್ದಾಗ ಕಣ್ಣೀರಿನ ನಾಳಿಯಲ್ಲಿ ಅಡಚಣೆ ಉಂಟಾಗಿರಬಹುದು. ಇದರಿಂದ ಕಣ್ಣೀರು ಕಣ್ಣಿನಲ್ಲೇ ಸಂಗ್ರಹವಾಗಿ ಹೊರಗೆ ಹರಿಯುವ ಸಾಧ್ಯತೆ ಇರುತ್ತದೆ.

ಗಾಳಿ, ಧೂಳು ಮತ್ತು ಹೊಗೆ:

ತೀವ್ರ ಗಾಳಿ, ತಂಪಾದ ಗಾಳಿ, ಹೊಗೆ, ಧೂಳು ಅಥವಾ ಅತಿಯಾದ ಬೆಳಕು ಕಣ್ಣಿಗೆ ಕಿರಿಕಿರಿ ಉಂಟುಮಾಡಬಹುದು. ಇಂತಹ ಸಂದರ್ಭಗಳಲ್ಲಿ ಕಣ್ಣುಗಳು ರಕ್ಷಣಾತ್ಮಕವಾಗಿ ಹೆಚ್ಚಿನ ಕಣ್ಣೀರನ್ನು ಉತ್ಪಾದಿಸುತ್ತವೆ.

ಕಣ್ಣಿನ ಗಾಯ ಅಥವಾ ಔಷಧಿಗಳ ಪರಿಣಾಮ:

ಕಣ್ಣಿಗೆ ಗಾಯವಾದ ನಂತರವೂ ನಿರಂತರವಾಗಿ ನೀರು ಬರಬಹುದು. ಕೆಲವು ಔಷಧಿಗಳ ಪರಿಣಾಮ ಅಥವಾ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಗಳ ಸಂದರ್ಭದಲ್ಲಿಯೂ ಕಣ್ಣೀರಿನ ಪ್ರಮಾಣದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು.

ಯಾವಾಗ ಕಣ್ಣಿನ ವೈದ್ಯರನ್ನು ಭೇಟಿಯಾಗಬೇಕು?

ಒಂದೆರಡು ಬಾರಿ ಕಣ್ಣುಗಳಿಂದ ನೀರು ಬರುವುದು ಸಾಮಾನ್ಯವಾಗಿರಬಹುದು. ಆದರೆ ಸಮಸ್ಯೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ಹಲವು ದಿನಗಳವರೆಗೆ ಮುಂದುವರಿದರೆ, ಕಣ್ಣಿನ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.

ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ವಿಶೇಷವಾಗಿ ನಿರ್ಲಕ್ಷಿಸಬೇಡಿ:

  • ಕಣ್ಣಿನಲ್ಲಿ ತೀವ್ರ ನೋವು
  • ಕಣ್ಣು ಹೆಚ್ಚು ಕೆಂಪಾಗುವುದು
  • ಕಣ್ಣಿನಲ್ಲಿ ಊತ
  • ದೃಷ್ಟಿ ಮಸುಕಾಗುವುದು
  • ಬೆಳಕನ್ನು ನೋಡಲು ಕಷ್ಟವಾಗುವುದು
  • ಕಣ್ಣಿಗೆ ಗಾಯವಾದ ನಂತರ ನಿರಂತರವಾಗಿ ನೀರು ಬರುವುದು
  • ಕಣ್ಣಿನಿಂದ ಹೆಚ್ಚು ಜಿಗುಟಾದ ಸ್ರಾವ ಹೊರಬರುವುದು
  • ಕಣ್ಣು ತೆರೆಯಲು ಕಷ್ಟವಾಗುವುದು

ಪದೇಪದೇ ಕಣ್ಣುಗಳಿಂದ ನೀರು ಬರುತ್ತಿದ್ದರೆ ಕಾರಣವನ್ನು ಸ್ವತಃ ಊಹಿಸುವ ಬದಲು ಕಣ್ಣಿನ ತಜ್ಞರಿಂದ ಪರೀಕ್ಷಿಸಿಕೊಳ್ಳುವುದು ಉತ್ತಮ.

ತುಮಕೂರಲ್ಲಿ KSRTC ಬಸ್‌ಗಳ ಮುಂದೆ ಮಲಗಿ ವಿದ್ಯಾರ್ಥಿಗಳ ಪ್ರತಿಭಟನೆ; ಪೊಲೀಸರ ಜೊತೆ ತಳ್ಳಾಟ-ನೂಕಾಟ!

0

ತುಮಕೂರು: ಗ್ರಾಮೀಣ ಭಾಗಗಳಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ತುಮಕೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾರಿ ಪ್ರತಿಭಟನೆ ನಡೆಸಿದರು.

ಬಸ್‌ಗಳ ಮುಂದೆ ಅಡ್ಡಲಾಗಿ ಮಲಗಿ ಬಸ್ ಸಂಚಾರವನ್ನು ತಡೆದ ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಾರಿಗೆ ಇಲಾಖೆಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಶಾಲೆ ಹಾಗೂ ಕಾಲೇಜುಗಳಿಗೆ ತೆರಳಲು ಸೂಕ್ತ ಸಮಯಕ್ಕೆ ಬಸ್‌ಗಳು ಸಿಗದೇ ನಿತ್ಯ ಪರದಾಡುತ್ತಿರುವ ವಿದ್ಯಾರ್ಥಿಗಳು, ಗ್ರಾಮೀಣ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ವೇಳೆ ಬಸ್ ನಿಲ್ದಾಣದೊಳಗೆ ಬಸ್‌ಗಳ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು.

ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು ಮುಂದಾದರು. ಈ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ-ಪಟಾಟ ಮತ್ತು ವಾಗ್ವಾದ ನಡೆದಿದ್ದು, ಕೆಲಕಾಲ ಬಸ್ ನಿಲ್ದಾಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಕೊರಟಗೆರೆ, ಪಾವಗಡ, ಮಧುಗಿರಿ ಹಾಗೂ ಚಿಕ್ಕನಾಯಕನಹಳ್ಳಿ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ತುಮಕೂರು ನಗರದ ಕಾಲೇಜುಗಳಿಗೆ ಸಂಚರಿಸುತ್ತಿದ್ದಾರೆ. ಈ ಮಾರ್ಗಗಳಲ್ಲಿ ಬಸ್‌ಗಳ ಕೊರತೆಯಿಂದ ಸಮಯಕ್ಕೆ ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಪ್ರದೂಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಆ.20ಕ್ಕೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಆರೋಪಿ ಪ್ರದೂಷ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ 59ನೇ ಸಿಸಿಎಚ್ ನ್ಯಾಯಾಲಯ, ಆಗಸ್ಟ್ 20ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಪ್ರದೂಷ್ ಅವರ ವಿಚಾರಣೆ ನಡೆಸಿದ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಆದೇಶ ಕಾಯ್ದಿರಿಸಿ ವಿಚಾರಣೆ ಮುಂದೂಡಿದ್ದಾರೆ.

ಪ್ರದೂಷ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯಲ್ಲಿನ ಅಂಶಗಳನ್ನು ಅವರಿಂದಲೇ ಖಚಿತಪಡಿಸಿಕೊಳ್ಳಬೇಕು ಎಂದು ಕೋರಿದ ದರ್ಶನ್ ಪರ ವಕೀಲರು, ಪ್ರದೂಷ್ ಮಾಫಿ ಸಾಕ್ಷಿಯಾದರೆ ಪ್ರಕರಣದಿಂದ ಹೊರಬರಬಹುದು ಎಂಬ ಆಸೆಯಿಂದ ಈ ರೀತಿ ಹೇಳಿಕೆ ನೀಡುತ್ತಿರಬಹುದು ಎಂದು ಅಭಿಪ್ರಾಯಪಟ್ಟರು. ಅವರಿಗೆ ಯಾವುದಾದರೂ ಆಮಿಷ ಅಥವಾ ಒತ್ತಡ ಇರಬಹುದೇ ಎಂಬ ಬಗ್ಗೆ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು, ಮಾಫಿ ಸಾಕ್ಷಿಯ ಪರಿಣಾಮಗಳ ಕುರಿತು ಪ್ರದೂಷ್‌ಗೆ ಅರಿವು ಮೂಡಿಸಿದರು. ಹೇಳುವ ಅಂಶಗಳು ಸತ್ಯವಲ್ಲ ಎಂದಾದರೆ ಜೈಲಿನಲ್ಲೇ ಇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಪ್ರದೂಷ್, ತನ್ನ ಪರ ವಕೀಲರು ಎಲ್ಲ ಅಂಶಗಳನ್ನು ಗಮನಕ್ಕೆ ತಂದಿರುವುದಾಗಿ ತಿಳಿಸಿದರು. ಅಂತಿಮವಾಗಿ ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದರು.

ಬರಗಾಲ ಪೀಡಿತ ಪ್ರದೇಶಗಳ ಅಧ್ಯಯನ ಪೂರ್ಣ: ಬಿಜೆಪಿ ತಂಡಗಳ ವರದಿ ಶೀಘ್ರ ಸರ್ಕಾರಕ್ಕೆ ಸಲ್ಲಿಕೆ – ಎನ್. ರವಿಕುಮಾರ್

0

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಬಿಜೆಪಿ ತಂಡಗಳ ಬರಗಾಲ ಅಧ್ಯಯನ ಸಂಬಂಧಿತ ವರದಿಯನ್ನು ಶೀಘ್ರವೇ ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬರಗಾಲದ ಅಧ್ಯಯನಕ್ಕಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು 6 ತಂಡಗಳನ್ನು ರಚಿಸಿದ್ದರು ಎಂದು ವಿವರಿಸಿದರು. ಈ ತಂಡಗಳು ಜಿಲ್ಲೆಗಳು ಮಾತ್ರವಲ್ಲದೇ ಕೆಲವು ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿವೆ ಎಂದು ಹೇಳಿದರು.

ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ರಾಜ್ಯ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂಬ ವಿಚಾರವನ್ನು ಗಮನಕ್ಕೆ ತರುವ ಉದ್ದೇಶ ಈ ವರದಿಯ ಹಿಂದಿದೆ ಎಂದು ರವಿಕುಮಾರ್ ತಿಳಿಸಿದರು. ರೈತರು ಸಂಕಷ್ಟದಲ್ಲಿದ್ದು, ಈ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ನಿರ್ಧರಿಸಲಾಗಿದೆ ಎಂದರು. ಈ ಸಂಬಂಧ ವರದಿಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ, ಈ ಬಾರಿ ಯಾರಿಗೂ ಖೇಲ್ ರತ್ನ ಇಲ್ಲ

0

ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಕ್ರೀಡಾ ಸಚಿವಾಲಯ ಪ್ರಕಟಿಸಿದ್ದು, ಈ ಬಾರಿ ಒಟ್ಟು 17 ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ಆದರೆ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಈ ಬಾರಿ ಯಾವುದೇ ಕ್ರೀಡಾಪಟುವಿಗೂ ನೀಡದಿರಲು ಸಚಿವಾಲಯ ತೀರ್ಮಾನಿಸಿದೆ.

ಆಯ್ಕೆ ಸಮಿತಿ ಶಿಫಾರಸು ಮಾಡಿದ್ದ ಪಟ್ಟಿಯನ್ನು ಸುಮಾರು ಆರು ತಿಂಗಳ ಬಳಿಕ ಮರುಪರಿಶೀಲನೆಗೆ ಒಳಪಡಿಸಿದ ಕ್ರೀಡಾ ಸಚಿವಾಲಯ, ಅಂತಿಮವಾಗಿ 17 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಅನುಮೋದಿಸಿದೆ. 2014ರ ಬಳಿಕ ಖೇಲ್ ರತ್ನ ಪ್ರಶಸ್ತಿಯನ್ನು ಯಾವುದೇ ಕ್ರೀಡಾಪಟುವಿಗೂ ನೀಡದೇ ಇರುವುದೇ ಇದೇ ಮೊದಲ ಬಾರಿಯಾಗಿದೆ.

ಖೇಲ್ ರತ್ನ ಪ್ರಶಸ್ತಿಗೆ ಹಾಕಿ ಆಟಗಾರ ಹಾರ್ದಿಕ್ ಸಿಂಗ್ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ನೇತೃತ್ವದ ಆಯ್ಕೆ ಸಮಿತಿ ಶಿಫಾರಸು ಮಾಡಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಹಾರ್ದಿಕ್ ಸಿಂಗ್ ಅವರ ಹೆಸರು ಕಾಣಿಸಿಕೊಂಡಿಲ್ಲ.

ಇನ್ನು ಅರ್ಜುನ ಪ್ರಶಸ್ತಿಗಾಗಿ ಆಯ್ಕೆ ಸಮಿತಿಯು ಒಟ್ಟು 24 ಹೆಸರುಗಳನ್ನು ಶಿಫಾರಸು ಮಾಡಿತ್ತು. ಆದರೆ ಪ್ರಶಸ್ತಿಯ ಘನತೆ ಹಾಗೂ ಅರ್ಹತೆಯ ಮಾನದಂಡವನ್ನು ಕಾಪಾಡುವ ಉದ್ದೇಶದಿಂದ ಸಚಿವಾಲಯವು 17 ಕ್ರೀಡಾಪಟುಗಳ ಹೆಸರನ್ನು ಮಾತ್ರ ಅಂತಿಮಗೊಳಿಸಿದೆ.

ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ 17 ಕ್ರೀಡಾಪಟುಗಳು

ಅಥ್ಲೆಟಿಕ್ಸ್‌ನ ತೇಜಸ್ವಿನ್ ಶಂಕರ್, ಪ್ರಿಯಾಂಕಾ ಗೋಸ್ವಾಮಿ ಹಾಗೂ ಮುಹಮ್ಮದ್ ಅಜ್ಮಲ್, ಬಾಕ್ಸಿಂಗ್‌ನ ನರೇಂದರ್, ಚೆಸ್‌ನ ವಿದಿತ್ ಗುಜರಾತಿ ಹಾಗೂ ದಿವ್ಯಾ ದೇಶಮುಖ್, ಕಿವುಡರ ಶೂಟಿಂಗ್‌ನ ಧನುಷ್ ಶ್ರೀಕಾಂತ್, ಹಾಕಿಯ ರಾಜ್‌ಕುಮಾರ್ ಪಾಲ್ ಹಾಗೂ ಲಾಲ್ರೆಮ್ಸಿಯಾಮಿ, ಕಬಡ್ಡಿಯ ಸುರ್ಜಿತ್ ಹಾಗೂ ಪೂಜಾ, ಪ್ಯಾರಾ ಶೂಟಿಂಗ್‌ನ ರುದ್ರಾಂಶ್ ಖಂಡೇಲ್‌ವಾಲ್, ಪ್ಯಾರಾ ಅಥ್ಲೆಟಿಕ್ಸ್‌ನ ಏಕ್ತಾ ಭ್ಯಾನ್, ರೋಯಿಂಗ್‌ನ ಅರವಿಂದ್ ಸಿಂಗ್, ಶೂಟಿಂಗ್‌ನ ಅಖಿಲ್ ಶಿಯೋರಾನ್, ಬ್ಯಾಡ್ಮಿಂಟನ್‌ನ ತ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರಿಗೆ ಅರ್ಜುನ ಪ್ರಶಸ್ತಿ ಘೋಷಿಸಲಾಗಿದೆ.

ಜೀವಮಾನ ಸಾಧನೆಗಾಗಿ ಅರ್ಜುನ ಪ್ರಶಸ್ತಿ

ಫುಟ್‌ಬಾಲ್ ಕ್ಷೇತ್ರದ ಐ. ಅರುಮೈನಾಯಗಂ ಅವರಿಗೆ ಅರ್ಜುನ ಪ್ರಶಸ್ತಿಯ ಜೀವಮಾನ ಸಾಧನೆ ವಿಭಾಗದಲ್ಲಿ ಗೌರವ ನೀಡಲಾಗಿದೆ. ಅವರು 1962ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು.

ದ್ರೋಣಾಚಾರ್ಯ ಪ್ರಶಸ್ತಿ

ದ್ರೋಣಾಚಾರ್ಯ ಪ್ರಶಸ್ತಿಯ ಸಾಮಾನ್ಯ ವಿಭಾಗದಲ್ಲಿ ಬಾಕ್ಸಿಂಗ್‌ನ ಚೋಟೆ ಲಾಲ್ ಯಾದವ್, ಪರ್ವೀರ್ ಸಿಂಗ್ ಹಾಗೂ ನೇಹಾ ಚವಾಣ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಜೀವಮಾನ ಸಾಧನೆ ವಿಭಾಗದಲ್ಲಿ ಧರ್ಮೇಂದ್ರ ಯಾದವ್ ಹಾಗೂ ವೀರೇಂದ್ರ ಕುಮಾರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗುತ್ತಿದೆ.

ಕ್ರಿಕೆಟಿಗರಿಗೆ ಈ ಬಾರಿಯೂ ಸ್ಥಾನವಿಲ್ಲ

1991ರಲ್ಲಿ ಪ್ರಶಸ್ತಿ ಆರಂಭವಾದ ಬಳಿಕ ಈ ಬಾರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ಅತ್ಯಂತ ತಡವಾಗಿ ಪ್ರಕಟಗೊಂಡಿವೆ. ಗಮನಾರ್ಹ ಸಂಗತಿಯೆಂದರೆ ಈ ಬಾರಿಯ ಪಟ್ಟಿಯಲ್ಲೂ ಯಾವುದೇ ಕ್ರಿಕೆಟಿಗರಿಗೆ ಸ್ಥಾನ ದೊರೆತಿಲ್ಲ.

2023ರಲ್ಲಿ ವೇಗಿ ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ಲಭಿಸಿದ ಬಳಿಕ ಯಾವುದೇ ಕ್ರಿಕೆಟಿಗರು ಈ ಗೌರವಕ್ಕೆ ಆಯ್ಕೆಯಾಗಿಲ್ಲ. ಖೇಲ್ ರತ್ನ ಪ್ರಶಸ್ತಿಯು ₹25 ಲಕ್ಷ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದರೆ, ಅರ್ಜುನ ಪ್ರಶಸ್ತಿಯು ₹15 ಲಕ್ಷ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಸಾಮಾನ್ಯವಾಗಿ ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನವಾದ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿತ್ತು. ಆದರೆ ಕೋವಿಡ್-19 ಆರೋಗ್ಯ ನಿಯಮಾವಳಿಗಳ ಹಿನ್ನೆಲೆಯಲ್ಲಿ 2020ರಿಂದ ಸಮಾರಂಭದ ಸ್ವರೂಪದಲ್ಲಿ ಬದಲಾವಣೆ ಕಂಡುಬಂದಿತ್ತು. ನಂತರದ ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭ ವಿಳಂಬಗೊಂಡಿದೆ. ಕಳೆದ ವರ್ಷ ಪ್ರಕಟಗೊಂಡ ಪ್ರಶಸ್ತಿಗಳನ್ನು ಈ ವರ್ಷದ ಜನವರಿ 17ರಂದು ಪ್ರದಾನ ಮಾಡಲಾಗಿತ್ತು.

ಶಿವಶಂಕರಪ್ಪ ಅಮಾನತು ರದ್ದುಗೊಳಿಸಿದ ಹೈಕೋರ್ಟ್: 7 ದಿನದಲ್ಲಿ ಮರುನೇಮಕಕ್ಕೆ ಆದೇಶ

0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ ಹಾಗೂ ಜಾರಿ ನಿರ್ದೇಶನಾಲಯದ ತನಿಖೆಯ ನಡುವೆಯೇ, ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ, ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸುವಂತೆ ರಾಜ್ಯ ಸಚಿವ ಸಂಪುಟ ಯಾವುದೇ ಸಲಹೆ ಅಥವಾ ಶಿಫಾರಸು ಮಾಡಿರಲಿಲ್ಲ. ಸಂವಿಧಾನಬದ್ಧವಾಗಿ ರಾಜ್ಯಪಾಲರು ಸಚಿವ ಸಂಪುಟದ ತೀರ್ಮಾನವನ್ನಷ್ಟೇ ಅನುಸರಿಸಬೇಕಿರುತ್ತದೆ. ಆದರೆ ಈ ಪ್ರಕ್ರಿಯೆಯನ್ನು ಉಲ್ಲಂಘಿಸಿ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಜುಲೈ 10ರಂದು ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಮುಂದಿನ 7 ದಿನಗಳ ಒಳಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮರುನೇಮಕ ಮಾಡುವಂತೆ ಆದೇಶಿಸಿದೆ. ಆದರೆ, ತಮ್ಮ ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ಯಾವುದೇ ಆಡಳಿತಾತ್ಮಕ ಪ್ರಕ್ರಿಯೆ ಅಥವಾ ನಿರ್ಣಯಗಳಲ್ಲಿ ಭಾಗಿಯಾಗಬಾರದು, ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎಂದು ನಿರ್ಬಂಧ ವಿಧಿಸಿದೆ.

ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಸರಿ-ತಪ್ಪುಗಳ ಬಗ್ಗೆ ತಾನು ಯಾವುದೇ ತೀರ್ಮಾನ ನೀಡಿಲ್ಲ, ಅಮಾನತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾತ್ರ ಈ ಆದೇಶ ಪ್ರಕಟಿಸಲಾಗಿದೆ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹಂತದಲ್ಲೂ ಯಾರ ಮೇಲೂ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಮಾನತು ಪ್ರಕ್ರಿಯೆಯಲ್ಲಿದ್ದ ಲೋಪದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆಯೇ ಹೊರತು, ಆರೋಪಗಳಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಶಿವಶಂಕರಪ್ಪ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ರಾಜ್ಯಪಾಲರ ನಿರ್ಧಾರ ಕಾನೂನುಬಾಹಿರ ಎಂದು ವಾದಿಸಿದ್ದರು.