Home Blog Page 12

ಇರಾನ್-ಇಸ್ರೇಲ್-ಅಮೆರಿಕ ಯುದ್ದ: ನರಗುಂದ ಪೆಟ್ರೋಲ್ ಬಂಕ್ʼಗಳಲ್ಲಿ ನೋ ಸ್ಟಾಕ್ ಬೋರ್ಡ್!

0

ಗದಗ: ಇರಾನ್-ಇಸ್ರೇಲ್-ಅಮೇರಿಕ ನಡುವೆ ಯುದ್ಧ ಹಿನ್ನಲೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪೆಟ್ರೋಲ್ ಅಭಾವ ಉಂಟಾಗಿದೆ.

ಪಟ್ಟಣದ ಶಿವಾಜಿ ಸರ್ಕಲ್ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಸಂಪೂರ್ಣ ಖಾಲಿಯಾಗಿದ್ದು, ನೋ ಸ್ಟಾಕ್ ಬೋರ್ಡ್ ಅಳವಡಿಸಲಾಗಿದೆ.

ನಿನ್ನೆ ರಾತ್ರಿ ಪೆಟ್ರೋಲ್ ಖಾಲಿಯಾಗಿದ್ದು, ಬಂಕ್ ಗೆ ಬಂದ ಗ್ರಾಹಕರನ್ನು ಸಿಬ್ಬಂದಿ ವಾಪಸ್ ಕಳುಹಿಸುತ್ತಿದ್ದಾರೆ.
ಇದಲ್ಲದೆ, ಇನ್ನೂ ಎರಡು ಪೆಟ್ರೋಲ್ ಬಂಕ್‌ಗಳಲ್ಲೂ ಪೆಟ್ರೋಲ್ ಲಭ್ಯವಿಲ್ಲ ಎನ್ನಲಾಗಿದ್ದು, ಇದರಿಂದ ಬೈಕ್ ಹಾಗೂ ಕಾರ್ ಮಾಲಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಬ್ಬಳ್ಳಿ ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ದೊರೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳು ಮುಗಿಬಿದ್ದಿದ್ದು, ಸರತಿ ಸಾಲಿನಲ್ಲಿ ನಿಂತು ಬೈಕ್ ಗೆ ಸವಾರರು ಪೆಟ್ರೋಲ್ ಹಾಕಿಸುತ್ತಿದ್ದಾರೆ. ಯುದ್ಧದ ಎಫೆಕ್ಟ್ ಬೈಕ್ ಹಾಗೂ ಕಾರ್ ಸವಾರರಿಗೂ ತಟ್ಟಿದೆ.

ಗದಗದಲ್ಲಿ ದನದ ಶೆಡ್ಡಿಗೆ ಭೀಕರ ಬೆಂಕಿ: ಆಕಳು-ಕರು ಸಾವು, ಎರಡು ಹಸುಗಳಿಗೆ ಗಂಭೀರ ಗಾಯ

0

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯರ್ಥದ ಬಳಿ ದನದ ಶೆಡ್ಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭೀಕರ ದುರಂತ ಸಂಭವಿಸಿದೆ. ಈ ಅವಘಡದಲ್ಲಿ ಶೆಡ್ಡಿನಲ್ಲಿದ್ದ ಆಕಳು ಹಾಗೂ ಕರುಗಳು ಜೀವಂತವಾಗಿ ಸುಟ್ಟು ಸಾವನ್ನಪ್ಪಿದ್ದು, ಇನ್ನೂ ಎರಡು ಹಸುಗಳು ಗಂಭೀರವಾಗಿ ಗಾಯಗೊಂಡಿವೆ.

ಮಲ್ಲಪ್ಪ ಉಮಚುಗಿ ಎಂಬ ರೈತನಿಗೆ ಸೇರಿದ ಈ ದನದ ಶೆಡ್ಡಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ, ಒಳಗಿದ್ದ ಪಶುಗಳು ಪಾರಾಗಲು ಸಾಧ್ಯವಾಗದೆ ಸಂಪೂರ್ಣ ಸುಟ್ಟು ಕರಕಲಾಗಿವೆ. ಜೊತೆಗೆ ಶೆಡ್ಡಿನಲ್ಲಿದ್ದ ಶೇಂಗಾ ಹೊಟ್ಟು ಮತ್ತು ಮೇವು ಸಹ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಭಸ್ಮವಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ಘಟನೆ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಡಿಜೆ ಹಳ್ಳಿಯಲ್ಲಿ ಅಪ್ರಾಪ್ತೆ ಕೊಲೆ ಪ್ರಕರಣ: ಅಜ್ಮೀರನಲ್ಲಿ ಆರೋಪಿ ಬಂಧನ

ಬೆಂಗಳೂರು: ನಗರದ ಡಿ.ಜೆ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ದಾರುಣ ಕೊಲೆ ಪ್ರಕರಣದಲ್ಲಿ, ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನೇ ಹತ್ಯೆಗೈದ ಆರೋಪಿ ಸೈಯದ್ ಶಬೀಲ್ ನನ್ನು ಅಜ್ಮೀರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮದುವೆಯಾಗಬೇಕಿದ್ದ ಯುವತಿಯ ಮೇಲಿನ ಅನುಮಾನವೇ ಈ ಕ್ರೂರ ಕೃತ್ಯಕ್ಕೆ ಕಾರಣವೆಂದು ತಿಳಿದುಬಂದಿದೆ. ಮಾರ್ಚ್ 17ರಂದು ಆಕೆಯನ್ನು ಭೇಟಿಯಾಗುವ ನೆಪದಲ್ಲಿ ಕರೆಸಿಕೊಂಡು, ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದ.

ಘಟನೆ ನಂತರ ಪ್ರಕರಣ ದಾಖಲಿಸಿಕೊಂಡ ಡಿ.ಜೆ ಹಳ್ಳಿ ಪೊಲೀಸರು ವಿವಿಧ ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಅಂತಿಮವಾಗಿ ಆರೋಪಿ ಅಜ್ಮೀರ್ ದರ್ಗಾ ಬಳಿ ಇರುವುದನ್ನು ಪತ್ತೆಹಚ್ಚಿದರು.

ಪಶ್ಚಾತ್ತಾಪದಿಂದ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ನಂತರ ಹೊರಬರುವಾಗಲೇ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತನನ್ನು ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಈ ಘಟನೆ ನಗರದಲ್ಲಿ ಆಘಾತ ಮೂಡಿಸಿದೆ.

ಪಶುವೈದ್ಯೆ ಸಾವಿಗೆ ಗೌರವ ನಮನ: ಬನ್ನೇರುಘಟ್ಟದ ಆನೆ ಮರಿಗೆ ಸಮೀಕ್ಷಾ ರೆಡ್ಡಿ ಹೆಸರು

0

ಶಿವಮೊಗ್ಗ: ಮೃಗಾಲಯದಲ್ಲಿ ನಡೆದ ದಾರುಣ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಟ್ರೈನಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸ್ಮರಣಾರ್ಥ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಅವರು, ಬನ್ನೇರುಘಟ್ಟದಲ್ಲಿ ಜನಿಸಿದ ಆನೆ ಮರಿಯಿಗೆ ಸಮೀಕ್ಷಾ ರೆಡ್ಡಿ ಅವರ ಹೆಸರನ್ನು ಇಡುವುದಾಗಿ ಘೋಷಿಸಿದ್ದಾರೆ. ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿ, “ಈ ಘಟನೆ ನಮ್ಮನ್ನೆಲ್ಲ ಆಘಾತಕ್ಕೀಡಾಗಿಸಿದೆ. ಇಂತಹ ಘಟನೆ ಮರುಕಳಿಸಬಾರದು,” ಎಂದು ಹೇಳಿದ್ದಾರೆ.

ಸಮೀಕ್ಷಾ ರೆಡ್ಡಿ ಅವರಿಗೆ ಹುತಾತ್ಮ ಪಟ್ಟ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ. ಘಟನೆಯ ಕುರಿತು ಪೊಲೀಸ್ ಹಾಗೂ ಅರಣ್ಯ ಇಲಾಖೆಗಳಿಂದ ಸಮಗ್ರ ತನಿಖೆ ನಡೆಯುತ್ತಿದ್ದು, ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ದಾಳಿ ನಡೆಸಿದ ನೀರಾನೆ ಎರಡು ಬಾರಿ ಮರಿ ಕಳೆದುಕೊಂಡಿದ್ದ ಹಿನ್ನೆಲೆ, ಮೂರನೇ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚು ಸಂವೇದನಾಶೀಲವಾಗಿ ವರ್ತಿಸಿ, ಮರಿಯನ್ನು ಕಾಪಾಡುವ ಸಹಜ ಪ್ರವೃತ್ತಿಯಿಂದ ದಾಳಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಸಹೋದರರು ಸಾವು: ತಂದೆ ಕಣ್ಣೆದುರೇ ಕೊಚ್ಚಿಹೋದ ಮಕ್ಕಳು

0

ದಾವಣಗೆರೆ: ಜಿಲ್ಲೆಯಲ್ಲಿ ನಡೆದ ದಾರುಣ ಘಟನೆಯಲ್ಲಿ, ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ನಡೆದ ಈ ಘಟನೆ ಎಲ್ಲರ ಮನಸ್ಸನ್ನೂ ಕಲಕಿದೆ. ಮನು (19) ಮತ್ತು ಪ್ರಜ್ವಲ್ (18) ಮೃತರಾಗಿದ್ದು, ತಮ್ಮ ತಂದೆಯ ಕಣ್ಣೆದುರಲ್ಲೇ ಈ ದುರ್ಘಟನೆ ನಡೆದಿದೆ.

ತಂದೆ ಮಂಜಪ್ಪ ಅವರೊಂದಿಗೆ ಮೂವರು ಮಕ್ಕಳು ನದಿಗೆ ತೆರಳಿದ್ದಾಗ, ನೀರಿನ ಪ್ರವಾಹದಲ್ಲಿ ಇಬ್ಬರು ಸಹೋದರರು ನಿಯಂತ್ರಣ ಕಳೆದುಕೊಂಡು ಕೊಚ್ಚಿಕೊಂಡು ಹೋಗಿದ್ದಾರೆ.

ಆಪತ್ತಿನ ಕ್ಷಣದಲ್ಲಿ ಮಂಜಪ್ಪ ಅವರ ಸಮಯಪ್ರಜ್ಞೆಯಿಂದ ಮೂರನೇ ಮಗ ಚಿರಂಜೀವಿ ಜೀವಾಪಾಯದಿಂದ ಪಾರಾಗಿದ್ದಾನೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಇಡೀ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಅನಾರೋಗ್ಯದಿಂದ ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ ನಿಧನ!

ಕೊಪ್ಪಳ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿ (60) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಕರಿಯಣ್ಣ ಸಂಗಟಿ ಅವರು ರಾಜಕೀಯವಾಗಿ ಸಕ್ರಿಯರಾಗಿದ್ದು, ಎರಡು ಬಾರಿ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸರಳ ವ್ಯಕ್ತಿತ್ವ ಮತ್ತು ಸಂಘಟನಾ ಸಾಮರ್ಥ್ಯದಿಂದ ಅವರು ಜನಮನ್ನಣೆ ಗಳಿಸಿದ್ದರು. ಡಿಕೆ ಶಿವಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದ ನಿವಾಸಿಯಾಗಿದ್ದ ಕರಿಯಣ್ಣ ಸಂಗಟಿ ಅವರ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬೀದಿ ನಾಯಿಗಳ ಹಾವಳಿಗೆ ಬೇಸತ್ತ ಅಪಾರ್ಟ್ಮೆಂಟ್ ನಿವಾಸಿಗಳು: ಕಾಲಭೈರವನಿಗೆ ವಿಶೇಷ ಪೂಜೆ! ಬೇಡಿಕೆ ಏನು?

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚುತ್ತಿದೆ. ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದ್ದು, ಪುಟ್ಟ ಮಕ್ಕಳು ಮತ್ತು ವೃದ್ಧರಿಗೂ ಅಪಾಯ ಉಂಟಾಗುವ ಭಯ ಇದೆ.

ಇಂತಹ ಸಂದರ್ಭದಲ್ಲೇ ಜೆಪಿ ನಗರ ಎಲಿಟಾ ಪ್ರೊಮೆನೇಡ್ ಅಪಾರ್ಟ್ಮೆಂಟ್ ನಿವಾಸಿಗಳು ಬೀದಿ ನಾಯಿಗಳಿಗೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದಾರೆ. ಅವರು ಕಾಲಭೈರವ ಮತ್ತು ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಬೀದಿ ನಾಯಿಗಳು ಹಾಗೂ ಸಾಕು ನಾಯಿಗಳಿಗೆ ಶಾಂತಿ ದೊರಕಲಿ ಮತ್ತು ಮಾನವರೊಂದಿಗೆ ಸ್ನೇಹಭಾವ ಬೆಳೆಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಅಪಾರ್ಟ್ಮೆಂಟ್ ಕ್ಲಬ್ ಹೌಸ್‌ನಲ್ಲಿ ನಡೆದ ಈ ಪೂಜೆಯಲ್ಲಿ ವಾಸಿಗಳು, ಮಕ್ಕಳು ಮತ್ತು ಸಾಕು ನಾಯಿಗಳು ಭಾಗವಹಿಸಿದ್ದರು. ಪೂಜೆಯ ನಂತರ ವಿಶೇಷ ಪ್ರಸಾದ ಹಾಗೂ ಆಹಾರ ವ್ಯವಸ್ಥೆ ಮಾಡಲಾಯಿತು. ಕಾರ್ಯಕ್ರಮದ ವೇಳೆ ಕೆಲ ನಿವಾಸಿಗಳು ಬೀದಿ ನಾಯಿಗಳಿಂದ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ನಗರದ ಅನೇಕ ಅಪಾರ್ಟ್ಮೆಂಟ್‌ಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಿರುವುದು ಗಮನಾರ್ಹವಾಗಿದ್ದು, ಕೆಲವೆಡೆ ಮಕ್ಕಳಿಗೆ ಹಾಗೂ ನಿವಾಸಿಗಳಿಗೆ ಕಚ್ಚುವ ಘಟನೆಗಳೂ ವರದಿಯಾಗಿವೆ. ಇಂತಹ ಸಂದರ್ಭದಲ್ಲಿ ಪೂಜೆ ಮತ್ತು ಪ್ರಾರ್ಥನೆಯ ಮೂಲಕ ಮಾನವ-ನಾಯಿ ನಡುವಿನ ಸ್ನೇಹವನ್ನು ಹೆಚ್ಚಿಸಲು ನಿವಾಸಿಗಳು ಮುಂದಾಗಿರುವುದು ವಿಶೇಷವಾಗಿದೆ.

ಒಟ್ಟಿನಲ್ಲಿ, ಬೀದಿ ನಾಯಿಗಳು ಮತ್ತು ಜನರ ನಡುವೆ ಪರಸ್ಪರ ಪ್ರೀತಿ, ನಂಬಿಕೆ ಮತ್ತು ಸಹಕಾರ ಬೆಳೆಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮ ಜನರ ಗಮನಸೆಳೆದಿದೆ.

ಕರ್ತವ್ಯದಲ್ಲಿದ್ದಾಗಲೇ ದುರಂತ: ಹಠಾತ್ತನೆ ಕುಸಿದು ಗ್ರಾ.ಪಂ ಸಿಬ್ಬಂದಿ ಸಾವು!

ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದಲ್ಲಿ ಕರ್ತವ್ಯನಿರತ ಗ್ರಾ.ಪಂ ಸಿಬ್ಬಂದಿ ಹಠಾತ್ತನೆ ಕುಸಿದು ಬಿದ್ದು, ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದಲ್ಲಿ ನಡೆದಿದೆ.

ನೀರಗಂಟಿ ಗಂಗಪ್ಪ ಎಲ್ (58) ಮೃತ ದುರ್ದೈವಿ. ಕಳೆದ 29 ವರ್ಷಗಳಿಂದ ಗಂಗಪ್ಪ ನೀರಗಂಟಿಯಾಗಿ ಸೀತಾರಾಮ ತಾಂಡದ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಪ್ಪ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಕೆಲಸಕ್ಕೆ ಹೋಗಿದ್ದರು. ಭಾನುವಾರ ಕರ್ತವ್ಯದಲ್ಲಿದ್ದಾಗಲೇ ಗಂಗಪ್ಪ ಹಠಾತ್ ಕುಸಿದು ಬಿದ್ದಿದ್ದಾರೆ.

ಕೂಡಲೇ ಕುಟುಂಬಸ್ಥರು ಗಂಗಪ್ಪರನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಗಂಗಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 25 ಕೋಟಿ ವಂಚನೆ: ಖತರ್ನಾಕ್ ದಂಪತಿ ಅರೆಸ್ಟ್

ಬೆಂಗಳೂರು: ಕೋರ್ಟ್‍ನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಸುಮಾರು 500ಕ್ಕೂ ಹೆಚ್ಚು ಜನರನ್ನು ವಂಚಿಸಿದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಜೈಸನ್ ಡಿಸೋಜಾ ಮತ್ತು ಲವೀನಾ ಎಂದು ಗುರುತಿಸಲಾಗಿದೆ.

ವಂಚಿತ ಜೋಡಿ, ನಿರೋದ್ಯೋಗಿಗಳು ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಮಾಯಕರನ್ನು ಟಾರ್ಗೆಟ್ ಮಾಡಿ, ಡಿ ಗ್ರೂಪ್ ಉದ್ಯೋಗ ಭರವಸೆ ನೀಡಿ, ಒಬ್ಬೊಬ್ಬರಿಂದ 10 ರಿಂದ 25 ಲಕ್ಷ ರೂ. ವರೆಗೆ ಹಣ ಪಡೆದು ವಂಚಿಸುತ್ತಿದ್ದರು. ವರದಿ ಪ್ರಕಾರ, ಹೀಗೆ ಸುಮಾರು ಐನೂರಕ್ಕೂ ಹೆಚ್ಚು ಜನರಿಂದ  25 ಕೋಟಿ ರೂ.ಗೂ ಹೆಚ್ಚು ಹಣ ವಂಚಿಸಲಾಗಿದೆ.

ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಆರ್ಡರ್ ಪ್ರತಿ ತೋರಿಸುವ ಮೂಲಕ, ಆರ್ಡರ್ ಪಡೆದಂತೆ ಜನರನ್ನು ನಂಬಿಸುವ ಈ ಜೋಡಿ, ಕೆಲಸ ಕೇಳಿದ್ರೆ ನಾಳೆ ನಾಡಿದ್ದು ಎಂದು ಕಥೆ ಹೇಳುತ್ತಿದ್ದರು. ಕೊನೆಗೆ ಫೋನ್ ರಿಸೀವ್ ಮಾಡುತ್ತಲೇ ಇರಲಿಲ್ಲ. ಮೋಸ ಹೋಗಿರೋದು ಗೊತ್ತಾಗಿ ಸಿಸಿಬಿಗೆ ಸಂತ್ರಸ್ಥರು ದೂರು ನೀಡಿದ್ದರು.

ಆರೋಪಿಗಳು ವಂಚನೆಗಾಗಿ ಒಂದು ಜಾಲವನ್ನೇ ಸೃಷ್ಟಿಸಿದ್ದರು. ಜನರನ್ನು ನಂಬಿಸಲು, ಹಣ ಪಡೆಯಲು ಏಜೆಂಟ್‍ಗಳನ್ನು ನೇಮಿಸಿಕೊಂಡಿದ್ದರು. ದಾಖಲೆ ಪರಿಶೀಲನೆ ಅಂತ ಖಾಸಗಿ ಹೋಟೆಲ್‍ಗೆ ಕರೆಸಿಕೊಂಡು ಬೇರೆಯವರಿಗೆ ಆಫರ್ ಲೆಟರ್ ಬಂದಿದೆ ಎಂದು ನಕಲಿ ಆಫರ್ ಲೆಟರ್ ತೋರಿಸಿ ವಂಚಿಸುತ್ತಿದ್ದರು. ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.‌

 

ರಾಮನಗರ| ಡಿವೈಡರ್‌ಗೆ ಬಸ್‌ ಡಿಕ್ಕಿ, ನಾಲ್ವರು ಪ್ರಯಾಣಿಕರು ಸಾವು!

ರಾಮನಗರ: ಭೀಕರ ಅಪಘಾತದಲ್ಲಿ ಡಿವೈಡರ್‌ಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಕೇರಳ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದ ಬಸ್‌ ಕೇರಳದಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಚನ್ನಪಟ್ಟಣ ತಾಲೂಕಿನ ಪುಟ್ಟಪ್ಪನದೊಡ್ಡಿ ಬಳಿ ಬಸ್‌ ಡಿವೈಡರ್‌ಗೆ ಡಿಕ್ಕಿಯಾಗಿದೆ.

ಘಟನೆ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ನಿದ್ದೆ ಮಂಪರಿನಲ್ಲಿ ಇದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಘಟನೆಯಲ್ಲಿ ಮೃತಪಟ್ಟ ಎಲ್ಲರೂ ಕೇರಳ ಮೂಲದವರು ಎಂದು ತಿಳಿದು ಬಂದಿದೆ. ಮೃತದೇಹಗಳು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!