Home Blog Page 137

RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲು!

0

ಪುತ್ತೂರು: ಖಾಸಗಿ ಕಾಲೇಜು ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣ ನೀಡಿದ್ದ ಆರೋಪದ ಮೂಲಕ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಹಾಗೂ ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಪ್ರಭಾಕರ್ ಭಟ್ ವಿರುದ್ಧ ಪುತ್ತೂರು ನಿವಾಸಿ ಮತ್ತು ಕಾಂಗ್ರೆಸ್ ಮುಖಂಡ ಅಮಳ ರಾಮಚಂದ್ರ ದೂರು ನೀಡಿದ್ದು, ಮಾನವ ಬಂಧುತ್ವ ವೇದಿಕೆಯ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದೆ. ಭಾಷಣವನ್ನು ಪ್ರಸಾರ ಮಾಡಿದ ‘ವಿಕಸನ ಟಿವಿ’ ಯೂಟ್ಯೂಬ್ ಚಾನಲ್ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಜನವರಿ 12 ರಂದು ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಎದುರಿನಲ್ಲಿ ವಿವಾದಾತ್ಮಕ ಭಾಷಣ ನಡೆದಿದೆ ಎಂಬ ಆರೋಪ ಇದೆ. ದಾಖಲಾಗಿರುವ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆ (IPC) ಅಡಿ ಗಂಭೀರ ಸೆಕ್ಷನ್‌ಗಳು 196, 299, 302, 353(2), 3(5) ಒಳಗೊಂಡಿವೆ.

Gold Rate Today| ಗೋಲ್ಡ್ ಪ್ರಿಯರಿಗೆ ಶುಭ ಸುದ್ದಿ; ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ!

0

ಗೋಲ್ಡ್ ಪ್ರಿಯರಿಗೆ ಶುಭ ಸುದ್ದಿ ಸಿಕ್ಕಿದ್ದು, ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ನಿನ್ನೆ ಭರ್ಜರಿ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ ಇವತ್ತು ಸ್ವಲ್ಪ ಇಳಿದಿದೆ. ಗ್ರಾಮ್​ಗೆ 45 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆಯೂ ಐದು ರೂ ಕಡಿಮೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 32,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 32,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 34,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 22ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,431 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,145 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,573 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,431 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,145 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ.

ಗದಗ| 7ನೇ ದಿನದ ಲಕ್ಕುಂಡಿ ಉತ್ಖನನ; ಅಪರೂಪದ ತಾಮ್ರ ರೂಪದ ಲೋಹ ಪತ್ತೆ!

0

ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ 7ನೇ ದಿನದ ಉತ್ಖನನ ವೇಳೆ ಅಪರೂಪದ ತಾಮ್ರ ರೂಪದ ಲೋಹ ಪತ್ತೆಯಾಗಿದೆ.

ಕುತೂಹಲ ಮೂಡಿಸಿರುವ ಈ ಲೋಹವನ್ನು ಉತ್ಖನನ ಮೇಲ್ವಿಚಾರಕರು ಪರಿಶೀಲನೆ ನಡೆಸಿದರು. ಸ್ಥಳೀಯ ಸಿಬ್ಬಂದಿ ಲೋಹವನ್ನು ಪ್ಲಾಸ್ಟಿಕ್ ಚಿಕ್ಕ ಪ್ಯಾಕೆಟ್‌ನಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ. ಈ ಉತ್ಖನನ ಕಾರ್ಯವು ನೈಜ ಲಕ್ಕುಂಡಿ ಸ್ಥಳದ ಪತ್ತೆಯನ್ನು ಪಡೆಯಲು ಮುಂದುವರೆದಿದ್ದು, ಹುದುಗಿ ಹೋಗಿದ್ದ ಐತಿಹಾಸಿಕ ಸ್ಥಳಗಳನ್ನು ಸ್ಮರಣೆ ಮಾಡಲು ಅವಕಾಶ ನೀಡಲಿದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ಖನನ ವೇಳೆ ಪುರಾತನ ಕಾಲದ ಮೆಟಲ್ ವಸ್ತುಗಳು, ಶಿಲೆ ಮತ್ತು ಇತರ ಐತಿಹಾಸಿಕ ವಸ್ತುಗಳ ಪತ್ತೆ ಕೂಡ ಸಂಭವಿಸಿದೆ.

ಸುಮಾರು 35 ಕಾರ್ಮಿಕರಿಂದ ಮುಂಜಾನೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸೂಕ್ಷ್ಮವಾಗಿ ನಡೆಸಲಾಗುತ್ತಿರುವ ಉತ್ಖನನ ಕಾರ್ಯವನ್ನು ಪುರಾತತ್ವ ಇಲಾಖೆ ಮತ್ತು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿದೆ.

ಹಳೆಯ ರಾಜಮಹಾರಾಜರ ಕಾಲದ ವೈಭವವನ್ನು, ಚಿನ್ನ, ವಜ್ರ, ಹವಳ, ಮುತ್ತು ಸೇರಿದಂತೆ ಪ್ರಾಚೀನ ಕಾಲದ ಐತಿಹಾಸಿಕ ವಸ್ತುಗಳ ಪತ್ತೆ ಮಾಡಲು ಶ್ರದ್ಧೆಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಜನರಲ್ಲಿ ಈ ಉತ್ಖನನದಲ್ಲಿ ಏನು ಪತ್ತೆಯಾಗಲಿದೆ ಎಂಬ ಕುತೂಹಲ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪುರಾತನ ವಸ್ತು ಪತ್ತೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಬೆಂಗಳೂರು| ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್; 4.5 ಲಕ್ಷ ವಸೂಲಿ, 1 ಕೋಟಿ ಬೇಡಿಕೆ; ಸಿಸಿಬಿಯಿಂದ ಮಹಿಳೆ ಅರೆಸ್ಟ್

0

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ ಸ್ಪೂರ್ತಿ ಎಂಬ ಮಹಿಳೆಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಈಗಾಗಲೇ ಸ್ವಾಮೀಜಿಯಿಂದ 4.5 ಲಕ್ಷ ರೂ. ವಸೂಲಿ ಮಾಡಿಕೊಂಡಿದ್ದು, ನಂತರ 1 ಕೋಟಿ ರೂ. ನೀಡುವಂತೆ ಒತ್ತಡ ಹೇರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಐದು ತಿಂಗಳ ಹಿಂದೆ ಸ್ವಾಮೀಜಿಗೆ ಕರೆ ಮಾಡಿದ್ದ ಸ್ಪೂರ್ತಿ, ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಳು. ಬಳಿಕ ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಮಾನಹಾನಿ ಮಾಡುವುದಾಗಿ ಹಾಗೂ ಜೀವ ಬೆದರಿಕೆ ಹಾಕಿದ್ದಾಳೆ ಎಂಬ ಆರೋಪ ಇದೆ. ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ 4.5 ಲಕ್ಷ ರೂ. ಪಡೆದರೂ, ನಂತರ ತನ್ನ ಸಹಚರರ ಜೊತೆಗೂಡಿ ಮತ್ತೆ ಹಣಕ್ಕಾಗಿ ಬೆದರಿಕೆ ಮುಂದುವರಿಸಿದ್ದಾಳೆ ಎನ್ನಲಾಗಿದೆ.

ಪುನಃ ಪುನಃ ಹಣ ಬೇಡಿಕೆ ಹಾಗೂ ಬೆದರಿಕೆಗಳಿಂದ ಆತಂಕಗೊಂಡ ಸ್ವಾಮೀಜಿ ಸಿಸಿಬಿ ಪೊಲೀಸರನ್ನು ಸಂಪರ್ಕಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಸ್ಪೂರ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆ ಮುಂದುವರಿದಿದೆ.

ಗಮನಾರ್ಹವಾಗಿ, ಇದೇ ಸ್ವಾಮೀಜಿ ವಿರುದ್ಧ ಎರಡು ವರ್ಷಗಳ ಹಿಂದೆ ಹನಿಟ್ರ್ಯಾಪ್ ಯತ್ನ ನಡೆದಿದ್ದು, ಆ ವೇಳೆ 6 ಕೋಟಿ ರೂ. ಬೇಡಿಕೆ ಇಟ್ಟಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೊಮ್ಮೆ ಬ್ಲ್ಯಾಕ್‌ಮೇಲ್ ಕಾಟ ಎದುರಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಸ್ವಾಮೀಜಿ ಕೋರ್ಟ್ ಮೊರೆ ಹೋಗಿದ್ದು, ತಮಗೆ ಸಂಬಂಧಿಸಿದ ಯಾವುದೇ ಫೋಟೋಗಳು ಅಥವಾ ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.

ಟೈರ್ ಸ್ಫೋಟದಿಂದ ಭೀಕರ ಅಪಘಾತ: ಟ್ರಕ್​ಗೆ ಡಿಕ್ಕಿ ಹೊಡೆದ ಬಸ್, ಮೂವರು ಸಾವು

0

ನಂದ್ಯಾಲ್: ಖಾಸಗಿ ಬಸ್ಸೊಂದು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ಜರುಗಿದೆ.

ಈ ಅಪಘಾತ ಬೆಳಗಿನ ಜಾವ 1.30 ರ ಸುಮಾರಿಗೆ ಸಂಭವಿಸಿದೆ. ಆಂಧ್ರಪ್ರದೇಶದ ನೆಲ್ಲೂರಿನಿಂದ ತೆಲಂಗಾಣದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಬಸ್‌ನ ಬಲಭಾಗದ ಟೈರ್ ಸ್ಫೋಟಗೊಂಡಿತ್ತು. ಇದರಿಂದ ಚಾಲಕನ ನಿಯಂತ್ರಣ ತಪ್ಪಿ, ಬಸ್ ರಸ್ತೆ ವಿಭಜಕವನ್ನು ದಾಟಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಬೈಕ್‌ಗಳನ್ನು ಸಾಗಿಸುತ್ತಿತ್ತು. ಡಿಕ್ಕಿಯ ತೀವ್ರತೆಯಿಂದ ಬಸ್ ಮತ್ತು ಲಾರಿ ಎರಡೂ ಬೆಂಕಿಗೆ ಆಹುತಿಯಾಗಿವೆ.

ಸ್ಥಳೀಯ ನಿವಾಸಿಗಳು, ಬಸ್ ಕ್ಲೀನರ್ ಹಾಗೂ ಕಂಡಕ್ಟರ್ ಕಿಟಕಿಗಳನ್ನು ಒಡೆದು ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಶ್ರಮಿಸಿದ್ದಾರೆ. ಆದರೂ ಬಸ್ ಚಾಲಕ, ಟ್ರಕ್ ಚಾಲಕ ಹಾಗೂ ಲಾರಿ ಕ್ಲೀನರ್ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಒಟ್ಟು 36 ಪ್ರಯಾಣಿಕರಲ್ಲಿ ನಾಲ್ವರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಆರ್ ಪುರದ ಬಜಾಜ್ ಶೋರೂಮ್‌ನಲ್ಲಿ ಭೀಕರ ಅಗ್ನಿ ಅವಘಡ!

0

ಬೆಂಗಳೂರು:- ಕೆ.ಆರ್ ಪುರದ ಟಿ.ಸಿ ಪಾಳ್ಯ ಸಿಗ್ನಲ್ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಜಾಜ್ ಶೋರೂಂಗೆ ಬೆಂಕಿ ಹೊತ್ತಿಕೊಂಡು 13 ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.

ನಿನ್ನೆ ರಾತ್ರಿ 9:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಳ್ತಿದ್ದಂತೆಯೇ ಶೋರೂಂ ಸಿಬ್ಬಂದಿ ಓಡಿ ಹೊರಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಶೋರೂಂನಲ್ಲಿದ್ದ 13 ಎಲೆಕ್ಟ್ರಿಕ್ ಬೈಕ್‌ಗಳು ಸುಟ್ಟು ಕರಕಲಾಗಿವೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸಿದ್ದಾರೆ.

ಹಾಸನ| ಶಾಲಾ ಬಾಲಕಿಯನ್ನು ಹಿಂಬಾಲಿಸಿದ್ದ ಅಪರಿಚಿತ ಅರೆಸ್ಟ್!

0

ಹಾಸನ: ಶಾಲೆಯಿಂದ ಮನೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಆತಂಕ ಸೃಷ್ಟಿಸಿದ್ದ ಅಪರಿಚಿತನನ್ನು ಹಾಸನ ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಕೋಲಾರ ಜಿಲ್ಲೆಯ ದಂಡಿಹಳ್ಳಿ ಹೋಬಳಿಯ ಪ್ರಸನ್ನ (38) ಎಂದು ಗುರುತಿಸಲಾಗಿದೆ. ಜ.17ರಂದು ಹಾಸನ ನಗರದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದ ಬಾಲಕಿಯನ್ನು ಆರೋಪಿಯು ಹಿಂಬಾಲಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಬಾಲಕಿ ಭಯಭೀತಳಾಗಿ ಓಡೋಡಿ ಮನೆ ಸೇರಿಕೊಂಡಿದ್ದಾಳೆ. ಆದರೆ ಅಷ್ಟರಲ್ಲೇ ನಿಲ್ಲದ ಆರೋಪಿ, ಬಾಲಕಿ ಮನೆಗೆ ತಲುಪಿದ ಬಳಿಕವೂ ಅಲ್ಲಿಂದ ತೆರಳದೆ, ಮನೆಯ ಗೇಟ್ ಹೊರಗೆ ನಿಂತು ಒಳಗೆ ಇಣುಕಿನೋಡಿ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಪಾಲಕರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿತ್ತು.
ಘಟನೆ ಸಂಬಂಧ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು, ಘಟನೆ ನಡೆದ ಮೂರು ದಿನಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಘಟನೆಯಿಂದಾಗಿ ಮಕ್ಕಳ ಸುರಕ್ಷತೆ ಕುರಿತಾಗಿ ಪೋಷಕರು ಗಂಭೀರ ಚಿಂತನೆ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೊಸಕೋಟೆ–ದೇವನಹಳ್ಳಿ ಹೆದ್ದಾರಿಯಲ್ಲಿ ವೀಲಿಂಗ್ ಹಾವಳಿ: ಸಾರ್ವಜನಿಕರ ಜೀವಕ್ಕೆ ಅಪಾಯ!

0

ಹೊಸಕೋಟೆ: ಹೊಸಕೋಟೆ–ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ವೀಲಿಂಗ್ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಸುರಕ್ಷೆಗೆ ಭಾರಿ ಆತಂಕ ಮೂಡಿಸಿದೆ.

ಬೈಕ್‌ಗಳ ನಂಬರ್ ಪ್ಲೇಟ್‌ಗಳನ್ನು ಕಳಚಿಕೊಂಡು ರಸ್ತೆಗಿಳಿಯುತ್ತಿರುವ ಪುಂಡರು, ಗುಂಪು ಗುಂಪಾಗಿ ಬಂದು ರಾಷ್ಟ್ರೀಯ ಹೆದ್ದಾರಿಗಳಲ್ಲೇ ವೀಲಿಂಗ್ ನಡೆಸುತ್ತಿರುವುದು ಕಂಡುಬಂದಿದೆ. ಹೊಸಕೋಟೆ ತಾಲ್ಲೂಕಿನ ನೂತನ ಚೆನ್ನೈ ಎಕ್ಸ್‌ಪ್ರೆಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಯುವಕರು ಗುಂಪಾಗಿ ಸೇರಿ ಪುಂಡಾಟ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಹೊರವಲಯದಲ್ಲಿ ಹೆದ್ದಾರಿಗಳ ಸಂಖ್ಯೆ ಹೆಚ್ಚಿರುವುದರಿಂದ ಇಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು, ವಾಹನ ಸಂಚಾರ ಮಾಡುವ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ವೀಲಿಂಗ್ ಮಾಡುವ ವೇಳೆ ವೇಗವಾಗಿ ಬೈಕ್‌ಗಳನ್ನು ಚಲಾಯಿಸುವುದರಿಂದ ಅಪಘಾತದ ಭೀತಿ ಹೆಚ್ಚಿದ್ದು, ಪ್ರಯಾಣಿಕರು ಮತ್ತು ಚಾಲಕರು ಭಯಭೀತರಾಗಿದ್ದಾರೆ.

ಈ ಘಟನೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಭಿಷೇಕ್–ರಿಂಕು ಸ್ಫೋಟಕ ಬ್ಯಾಟಿಂಗ್: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ 48 ರನ್‌ಗಳ ಭರ್ಜರಿ ಗೆಲುವು!

0

ನಾಗಪುರ: ಅಭಿಷೇಕ್‌ ಶರ್ಮಾ ಮತ್ತು ರಿಂಕು ಸಿಂಗ್‌ ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಭಾರತ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 48 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. 27 ರನ್‌ಗಳಾಗುವಷ್ಟರಲ್ಲಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್‌ ಕಿಶನ್‌ ಔಟಾದರು. ಬಳಿಕ ಅಭಿಷೇಕ್‌ ಶರ್ಮಾ ಮತ್ತು ನಾಯಕ ಸೂರ್ಯಕುಮಾರ್‌ ಯಾದವ್‌ ಮೂರನೇ ವಿಕೆಟ್‌ಗೆ 47 ಎಸೆತಗಳಲ್ಲಿ 99 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು.

ಸೂರ್ಯಕುಮಾರ್‌ ಯಾದವ್‌ 32 ರನ್‌ (22 ಎಸೆತ, 4 ಬೌಂಡರಿ, 1 ಸಿಕ್ಸ್‌) ಮತ್ತು ಹಾರ್ದಿಕ್‌ ಪಾಂಡ್ಯ 25 ರನ್‌ (16 ಎಸೆತ, 3 ಬೌಂಡರಿ, 1 ಸಿಕ್ಸ್‌) ಗಳಿಸಿ ಔಟಾದರು. ಆದರೆ ಅಭಿಷೇಕ್‌ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿ 35 ಎಸೆತಗಳಲ್ಲಿ 84 ರನ್‌ (5 ಬೌಂಡರಿ, 8 ಸಿಕ್ಸ್‌) ಚಚ್ಚಿದರು. 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು ನಂತರದ 15 ಎಸೆತಗಳಲ್ಲಿ 34 ರನ್‌ ಸೇರಿಸಿದರು. ಕೊನೆಯಲ್ಲಿ ರಿಂಕು ಸಿಂಗ್‌ ಅಜೇಯ 44 ರನ್‌ (20 ಎಸೆತ, 4 ಬೌಂಡರಿ, 3 ಸಿಕ್ಸ್‌) ಗಳಿಸಿ ತಂಡದ ಮೊತ್ತವನ್ನು 7 ವಿಕೆಟ್‌ ನಷ್ಟಕ್ಕೆ 238 ರನ್‌ಗಳಿಗೆ ಏರಿಸಿದರು.

239 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಆರಂಭದಲ್ಲೇ 1 ರನ್‌ಗೆ 2 ವಿಕೆಟ್‌ ಕಳೆದುಕೊಂಡಿತು. ಆದರೂ ಗ್ಲೆನ್‌ ಫಿಲಿಪ್ಸ್‌ ಮತ್ತು ಮಾರ್ಕ್‌ ಚಾಪ್‌ಮನ್‌ ಹೋರಾಟ ನೀಡಿದರು. ಫಿಲಿಪ್ಸ್‌ 78 ರನ್‌ (40 ಎಸೆತ, 4 ಬೌಂಡರಿ, 6 ಸಿಕ್ಸ್‌) ಹಾಗೂ ಚಾಪ್‌ಮನ್‌ 39 ರನ್‌ (24 ಎಸೆತ, 4 ಬೌಂಡರಿ, 2 ಸಿಕ್ಸ್‌) ಹೊಡೆದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 190 ರನ್‌ಗಳಿಗೆ ಸೀಮಿತವಾಯಿತು. ಕ್ರಮೇಣ ಭಾರತ ಗೆದ್ದು ಬೀಗಿದೆ.

ಬೆಂಗಳೂರು| ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ; ಏರ್ಪೋರ್ಟ್ ಸಿಬ್ಬಂದಿ ಅರೆಸ್ಟ್

0

ಬೆಂಗಳೂರು:- ಭದ್ರತಾ ತಪಾಸಣೆಯ ಹೆಸರಿನಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಯೇ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಘಟನೆ ಬೆನ್ನಲ್ಲೇ ದೂರು ಆಧರಿಸಿ ಆರೋಪಿ ಅಪಾನ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಟಿಕೆಟ್ ಪರಿಶೀಲನೆ ವೇಳೆ ಮಹಿಳೆಯ ಬ್ಯಾಗ್‌ನಿಂದ ಬೀಪ್ ಸೌಂಡ್ ಬರುತ್ತಿದೆ ಎಂದು ಹೇಳಿದ ಅಪಾನ್ ಅಹ್ಮದ್, ಪ್ರತ್ಯೇಕವಾಗಿ ತಪಾಸಣೆ ನಡೆಸಬೇಕೆಂದು ತಿಳಿಸಿದ್ದಾನೆ. ಚೆಕಿಂಗ್ ಕೌಂಟರ್‌ಗೆ ಹೋದರೆ ವಿಮಾನಕ್ಕೆ ತಡವಾಗುತ್ತದೆ ಎಂದು ನಂಬಿಸಿ, ಮಹಿಳೆಯನ್ನು ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತಪಾಸಣೆ ನೆಪದಲ್ಲಿ ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ, ಬಲವಂತವಾಗಿ ತಬ್ಬಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಮಹಿಳೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟರಲ್ಲಿ ಆರೋಪಿಯು, ‘ಓಕೆ ಥ್ಯಾಂಕ್ ಯು’ ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದಾನೆ. ಬಳಿಕ ವಿದೇಶಿ ಮಹಿಳೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ದೂರು ನೀಡಿದ್ದು, ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ವಿದೇಶಿ ಮಹಿಳೆಯ ದೂರಿನ ಮೇರೆಗೆ ಕೆಂಪೇಗೌಡ ಏರ್‌ಪೋರ್ಟ್ ಠಾಣೆ ಪೊಲೀಸರು ಅಪಾನ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಂಧನವಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

error: Content is protected !!