Home Blog Page 136

ದೇಶ ಕಾಯುವ ಯೋಧರು, ಚಿಕ್ಕ ಮಕ್ಕಳಿಂದ ಹಿಡಿದು ಎಲ್ರೂ ಪ್ರೀತಿ ಕೊಟ್ಟು, ಸಪೋರ್ಟ್ ಮಾಡಿದ್ದೀರಿ: ಗಿಲ್ಲಿ ನಟ

ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಅಭಿಮಾನಿಗಳ ಅಪಾರ ಪ್ರೀತಿಯಿಂದ ತುಂಬಿ ಹೋಗಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ದೇಶದ ನಾನಾ ಭಾಗಗಳಿಂದ ಹಾಗೂ ವಿದೇಶಗಳಿಂದ ಬಂದ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿದ ಅವರು, “ನಾನು ಬಿಗ್‌ಬಾಸ್ ಮನೆಯಲ್ಲಿದ್ದಾಗ ಹೊರಗೆ ಇಷ್ಟು ದೊಡ್ಡ ಮಟ್ಟದ ಸಪೋರ್ಟ್ ಸಿಗುತ್ತಿದೆ ಎಂಬುದನ್ನು ಕನಸಲ್ಲಿಯೂ ಅಂದುಕೊಂಡಿರಲಿಲ್ಲ. ಈಗ ಹೊರಗೆ ಬಂದು ನೋಡಿದ ಮೇಲೆ ಮನಸ್ಸು ತುಂಬಾ ಖುಷಿಯಾಗಿದೆ. ನಿಜಕ್ಕೂ ನಂಬೋದಕ್ಕೆ ಆಗುತ್ತಿಲ್ಲ” ಎಂದು ಹೇಳಿದ್ದಾರೆ.

ಅಭಿಮಾನಿಗಳ ಪ್ರೀತಿ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ವಿವರಿಸಿದ ಗಿಲ್ಲಿ ನಟ, ದೇಶ ಕಾಯುವ ಯೋಧರು ಕೂಡ ತಮ್ಮ ಪರವಾಗಿ ವಿಡಿಯೋ ಮಾಡಿ ಹರಸಿದ್ದಾರೆ. ಕನ್ನಡಿಗರು ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಸೇರಿದಂತೆ ಇತರೆ ರಾಜ್ಯದವರು ಮತ್ತು ವಿದೇಶದಲ್ಲಿರುವವರು ಸಹ ಬೆಂಬಲಿಸಿದ್ದಾರೆ. ಸಂಕ್ರಾಂತಿ ಹಬ್ಬದಲ್ಲಿ ರೈತರು ಹಸುಗಳ ಮೇಲೆ ತಮ್ಮ ಚಿತ್ರ ಬಿಡಿಸಿ ಪೋಸ್ಟ್ ಮಾಡಿದ್ದಾರೆ. ಆಟೋ ಚಾಲಕರು ಸ್ಟಿಕ್ಕರ್ ಅಂಟಿಸಿದ್ದಾರೆ. ಕೆಲವರು ತಮಗೆ ಪರಿಚಯವೂ ಇಲ್ಲದೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ನೀಡಿದ ಪ್ರೀತಿ ಮತ್ತು ಪ್ರೋತ್ಸಾಹವನ್ನು ಮರೆಯಲಾರೆ ಎಂದು ಹೇಳಿದ ಅವರು, ಎಲ್ಲಾ ಮೀಡಿಯಾಗಳಿಗೂ ಧನ್ಯವಾದ ಹೇಳಿದ್ದಾರೆ. “ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಟ್ರೋಲ್ ವಿಡಿಯೋ ಕೂಡ ನೋಡಿಲ್ಲ. ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ, ಅದನ್ನು ನಾನು ಜೀವಮಾನಪೂರ್ತಿ ಉಳಿಸಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದಾರೆ.

ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ: ರಿತ್ತಿ ಕುಟುಂಬಕ್ಕೆ ಸೈಟ್, ಉಚಿತ ಶಿಕ್ಷಣ, ಉದ್ಯೋಗ – ಲಕ್ಕುಂಡಿ ಗ್ರಾಪಂ ಮಹತ್ವದ ನಿರ್ಧಾರ

0

ಗದಗ: ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಪ್ರಾಮಾಣಿಕತೆಗೆ ಲಕ್ಕುಂಡಿ ಗ್ರಾಮ ಪಂಚಾಯತ್ ಮಾನವೀಯ ಸ್ಪಂದನೆ ನೀಡಿದೆ. ಸರ್ಕಾರಕ್ಕೆ ನಿಧಿಯನ್ನು ಪ್ರಾಮಾಣಿಕವಾಗಿ ಹಸ್ತಾಂತರಿಸಿದ ರಿತ್ತಿ ಕುಟುಂಬಕ್ಕೆ 30×40 ನಿವೇಶನ ನೀಡುವ ನಿರ್ಧಾರವನ್ನು ಗ್ರಾಪಂ ಕೈಗೊಂಡಿದೆ.

ಲಕ್ಕುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಚಪ್ಪ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಕುರಿತು ಅಧಿಕೃತ ಠರಾವು ಅಂಗೀಕರಿಸಲಾಯಿತು. ಬಡ ಕುಟುಂಬಕ್ಕೆ ನಿವೇಶನ ಹಾಗೂ ಮನೆ ದೊರಕಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ವರದಿಗಳು ಪ್ರಕಟವಾಗುತ್ತಿದ್ದವು. ಆ ವರದಿಗಳ ಫಲವಾಗಿ ಇದೀಗ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ. ಈ ವೇಳೆ ರಿತ್ತಿ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆಗೆ ಗ್ರಾಮ ಪಂಚಾಯತಿಯಿಂದ ಸೈಟ್ ಗಿಫ್ಟ್ ನೀಡಲಾಗಿದೆ ಎಂಬ ವಿಚಾರ ಕುಟುಂಬದಲ್ಲಿ ಅಪಾರ ಸಂತೋಷ ಮೂಡಿಸಿದೆ. ಪ್ರಜ್ವಲ್ ಹಾಗೂ ಅವರ ತಾಯಿ ಕಸ್ತೂರೆವ್ವ ರಿತ್ತಿ ಅವರು ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನೂ ವಿಶೇಷವಾಗಿ, ಜನವರಿ 26ರಂದು ಕುಟುಂಬಕ್ಕೆ ಅಧಿಕೃತವಾಗಿ ಜಾಗದ ಪ್ರಮಾಣ ಪತ್ರ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚಾಯತಿ ಮೂಲಗಳು ತಿಳಿಸಿವೆ.

ಈ ಪ್ರಕರಣವನ್ನು ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಕುಟುಂಬದ ಭವಿಷ್ಯ ಭದ್ರತೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಚಾಯತ್ ತಿಳಿಸಿದೆ. ಮುಂದೆ ಸಚಿವರು ಹಾಗೂ ಶಾಸಕರ ಅನುದಾನದಲ್ಲಿ ಮನೆ ನಿರ್ಮಿಸಿಕೊಡುವ ಭರವಸೆ ಕೂಡ ನೀಡಲಾಗಿದೆ.

ಇನ್ನಷ್ಟು ಆಶ್ವಾಸಕ ಬೆಳವಣಿಗೆಯಾಗಿ, ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ ಸೌಲಭ್ಯ ನೀಡುವುದಾಗಿ ಹಾಗೂ ತಾಯಿ ಗಂಗಮ್ಮ ಅವರಿಗೆ ಉದ್ಯೋಗ ಕಲ್ಪಿಸುವುದಾಗಿ ಪಂಚಾಯತ್ ಭರವಸೆ ನೀಡಿದೆ. ಈ ಕ್ರಮ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ.

ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆಯನ್ನು ಮಕ್ಕಳಿಗೆ ಮಾದರಿಯಾಗಿ ತೋರಿಸುವ ಉದ್ದೇಶದಿಂದ, ಗ್ರಾಮ ಪಂಚಾಯತ್ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಮದ ಎಲ್ಲಾ ಶಾಲೆ ಹಾಗೂ ಕಾಲೇಜುಗಳಲ್ಲಿ ಪ್ರಜ್ವಲ್ ರಿತ್ತಿ ಅವರ ಫೋಟೋ ಅಳವಡಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಪ್ರಜ್ವಲ್ ರಿತ್ತಿ ಅವರ ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯ ನಡೆ ಮಕ್ಕಳಲ್ಲಿ ಸದುಪಯೋಗಕಾರಿ ಮೌಲ್ಯಗಳನ್ನು ಬೆಳೆಸಲಿದೆ ಎಂಬ ನಂಬಿಕೆಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ. “ಈ ಫೋಟೋ ನೋಡಿ ಮಕ್ಕಳಲ್ಲೂ ಪ್ರಾಮಾಣಿಕತೆ ಬೆಳೆಸಲಿ” ಎಂಬ ಉದ್ದೇಶವೇ ಈ ನಿರ್ಧಾರದ ಮೂಲ ಕಾರಣ ಎಂದು ಗ್ರಾಮ ಪಂಚಾಯತ್ ಸದಸ್ಯರು ಹೇಳಿದ್ದಾರೆ.

 

ಆಡೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 48 ಗಂಟೆಗಳಲ್ಲಿ ಮನೆ ಕಳ್ಳತನ ಪ್ರಕರಣ ಭೇದಿಸಿದ ಖಾಕಿ ಪಡೆ

0

ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ನಡೆದ ಸುಮಾರು 14 ಲಕ್ಷ ರೂ ಮೌಲ್ಯದ ಮನೆ ಕಳ್ಳತನ ಪ್ರಕರಣವನ್ನು ಆಡೂರು ಠಾಣೆ ಪೊಲೀಸರು ಕೇವಲ 48 ಗಂಟೆಗಳಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಸೋಮಾಪುರ ಗ್ರಾಮದ ನಿವಾಸಿ 32 ವರ್ಷದ ಶರಣಪ್ಪ ದೊಡ್ಡಬಸಪ್ಪ ಮುದಿಯಪ್ಪನವರ ಎಂದು ಗುರುತಿಸಲಾಗಿದೆ. ಜ.19ರಂದು ಸೋಮವಾರ ರಾತ್ರಿ ಬಸವರಾಜ ಗೂಳಪ್ಪ ಪೂಜಾರ ಎಂಬುವವರ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಆರೋಪಿಯು, ಟ್ರಜರಿಯ ಬಾಗಿಲನ್ನು ಮುರಿದು, ಅದರಲ್ಲಿ ಇರಿಸಿದ್ದ 111.5 ಗ್ರಾಂ ಬಂಗಾರದ ಆಭರಣ ಮತ್ತು 310 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.

ಈ ಪ್ರಕರಣಕ್ಕೆ ಸಂಬಂಧಿಸಿ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಗೋಡಿ, ಎಎಸ್‌ಪಿ ಎಲ್.ವೈ. ಶಿರಕೋಳ, ಡಿವೈಎಸ್‌ಪಿ ಕೆ.ವಿ. ಗುರುಶಾಂತಪ್ಪ, ಹಾನಗಲ್ ಸಿಪಿಐ ಬಸವರಾಜ ಹಳಬಣ್ಣನವರ ಅವರ ಮಾರ್ಗದರ್ಶನದಲ್ಲಿ, ಆಡೂರು ಪಿಎಸ್‌ಐ ಶರಣಪ್ಪ ಹಂಡ್ರಗಲ್ ಮತ್ತು ಪೊಲೀಸ್ ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ ಚಿನ್ನದ ಸರ, ಉಂಗುರಗಳು, ಜುಮುಕಿ, ಹ್ಯಾಂಗಿಂಗ್ಸ್ ಸೇರಿದಂತೆ ಒಟ್ಟು ಸುಮಾರು ₹13,69,000 ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಎಂಟಿಸಿ ಬಸ್​​​​​​​​ನಲ್ಲಿ 6 ರೂ. ಬದಲು 60 ಸಾವಿರ ರೂ ಫೋನ್ ಪೇ ಮಾಡಿದ ಪ್ರಯಾಣಿಕ

ಬೆಂಗಳೂರು: ಮೊಬೈಲ್ ಫೋನ್‌ನಲ್ಲಿ ಕೇವಲ ಒಂದು ಸಣ್ಣ ತಪ್ಪು, ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು 6 ರೂಪಾಯಿ ಟಿಕೆಟ್‌ಗೆ 60,000 ರೂಪಾಯಿ ಫೋನ್ ಪೇ ಮಾಡಿರುವ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಜ.14ರಂದು ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಾತ್ರಿ ಸಮಯ, ಕೆಲಸದ ಒತ್ತಡ ಅಥವಾ ಕೈ ತಪ್ಪಿನಿಂದಾಗಿ ಪ್ರಯಾಣಿಕರು 6 ರೂ ಪಾವತಿಸಬೇಕಾದಲ್ಲಿ 60,000 ರೂ ಫೋನ್ ಪೇ ಮಾಡಿದ್ದಾರೆ. ಈ ಮೊತ್ತ ಕಂಡು ಬಸ್ ಕಂಡಕ್ಟರ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರು ತಕ್ಷಣವೇ ತಮ್ಮ ತಪ್ಪನ್ನು ಕಂಡಕ್ಟರ್ ಗಮನಕ್ಕೆ ತಂದಿದ್ದಾರೆ. ನಂತರ ಬಸ್ ನಿರ್ವಾಹಕ ತನ್ನ ಖಾತೆ ಪರಿಶೀಲಿಸಿದಾಗ 62,316 ರೂ ಹಣ ಜಮಾ ಆಗಿರುವುದು ದೃಢಪಟ್ಟಿದೆ. ಈ ಹಣವನ್ನು ತಕ್ಷಣ ಮರಳಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದ ನಿರ್ವಾಹಕ, ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ, ಡಿಪೋ ಮ್ಯಾನೇಜರ್‌ನ ಸಂಪರ್ಕ ಸಂಖ್ಯೆಯನ್ನು ಪ್ರಯಾಣಿಕರಿಗೆ ನೀಡಿದ್ದಾರೆ.

ಹಣ ವಾಪಸ್ ಪಡೆಯಲು ಡಿಪೋಗೆ ಭೇಟಿ ನೀಡಿ ಪರಿಶೀಲನೆ ಬಳಿಕ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದ್ದು, ಇವತ್ತು ಅಥವಾ ನಾಳೆಯೊಳಗೆ ಹಣ ವಾಪಸ್ ಸಿಗಲಿದೆ ಎಂಬ ಭರವಸೆ ನೀಡಲಾಗಿದೆ. ಆದರೆ ಇನ್ನೂ ಹಣ ಪಾವತಿ ಆಗಿಲ್ಲ.

ಈ ಘಟನೆ ಡಿಜಿಟಲ್ ಪಾವತಿ ಮಾಡುವಾಗ ಎಷ್ಟು ಎಚ್ಚರ ಅಗತ್ಯವಿದೆ ಎಂಬುದಕ್ಕೆ ದೊಡ್ಡ ಪಾಠವಾಗಿದೆ. ಹಣ ಕಳುಹಿಸುವ ಮೊದಲು ಅಮೌಂಟ್ ಅನ್ನು ಎರಡು ಬಾರಿ ಪರಿಶೀಲಿಸಬೇಕು. ವಿಶೇಷವಾಗಿ ಬಸ್‌ನಲ್ಲಿ, ಜನದಟ್ಟಣೆಯಲ್ಲಿ ಅಥವಾ ಚಲನೆಯಲ್ಲಿರುವ ವೇಳೆ ಪಾವತಿ ಮಾಡುವಾಗ ಹೆಚ್ಚು ಜಾಗ್ರತೆ ಅಗತ್ಯವಾಗಿದೆ.

ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ: ಸಿದ್ದರಾಮಯ್ಯ ತೀವ್ರ ವಾಗ್ದಾಳಿ

0

ಬೆಂಗಳೂರು:- ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮಾಡಿದ್ದಾರೆ.

ರಾಜ್ಯಪಾಲರು ಅಧಿವೇಶನ ಆರಂಭಿಸಿ ಆರಂಭಿಕ ಸಾಲನ್ನು ಹೇಳಿ ಸದನದಿಂದ ಹೊರ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ. ರಾಜ್ಯ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣ ಓದದೇ ಸಂವಿಧಾನದ ವಿಧಿಯನ್ನ ಉಲ್ಲಂಘನೆ ಮಾಡಿದ್ದಾರೆ. ಯಾವುದೇ ಸರ್ಕಾರ ಬಂದಾಗ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ಆರ್ಟಿಕಲ್‌ 176(1), 163 ರ ಉಲ್ಲಂಘನೆ ಬಹಳ ಸ್ಪಷ್ಟವಾಗಿದೆ. ಈ ವಿಧಿಗಳ ಅನ್ವಯ ರಾಜ್ಯಪಾಲರು ತಾವು ತಯಾರು ಮಾಡಿದ ಭಾಷಣ ಓದುವಂತಿಲ್ಲ. ರಾಜ್ಯ ಸರ್ಕಾದ ಸಂಪುಟ ಸಿದ್ಧಪಡಿಸಿದ ಭಾಷಣವನ್ನ ಓದಲೇಬೇಕು ಎಂದು ಹೇಳಿದರು

ಇದು ವರ್ಷದ ಮೊದಲ ಜಂಟಿ ಅಧಿವೇಶನ, ಜೊತೆಗೆ ವಿಶೇಷ ಅಧಿವೇಶನವೂ ಕೂಡ ಹೌದು. ಏಕೆಂದ್ರೆ, ಕೇಂದ್ರ ಸರ್ಕಾರ ನರೇಗಾ ರದ್ದು ಮಾಡಿ ವಿಬಿಜಿರಾಮ್‌ಜಿ ಕಾಯ್ದೆಯನ್ನ ಹೊಸದಾಗಿ ಕೇಂದ್ರ ಸರ್ಕಾರ ಮಾಡಿದೆ. ಇದಕ್ಕೆ ನಮ್ಮ ಸರ್ಕಾರದಿಂದ ತೀವ್ರ ವಿರೋಧ ಇದೆ. ಮಹಾತ್ಮ ಗಾಂಧಿ ಹೆಸರು ತೆಗೆದಿರೋದಕ್ಕೆ ನಮ್ಮ ವಿರೋಧ ಇದೆ. 20 ವರ್ಷಗಳ ಹಿಂದೆ ಅಂದ್ರೆ 2005 ರಲ್ಲಿ ದಿ. ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನ ನಿರ್ದೇಶನಗಳಲ್ಲಿ ಇರುವಂತೆ ರೈಟ್‌ ಟು ವರ್ಕ್‌, ರೈಟ್‌ ಟು ಫುಡ್‌, ರೈಟ್‌ ಟು ಎಜುಕೇಶನ್‌,‌ ಆರ್‌ಟಿಐ ಕಾಯ್ದೆಗಳನ್ನ ಜಾರಿಗೆ ತಂದರು.

ಕೆಲಸದ ಹಕ್ಕು ಹಳ್ಳಿಯಲ್ಲಿರುವ ಬಡವರಿಗೆ ಕನಿಷ್ಠ 100 ದಿನಗಳ ಉದ್ಯೋಗ ಕೊಡಬೇಕು ಎನ್ನುವಂತಹದ್ದು. ಇದರಲ್ಲಿ ಮಹಿಳೆಯರು, ಸಣ್ಣ ರೈತರಿಗೆ ಅನುಕೂಲವಾಗುತ್ತಿತ್ತು. 53% ಮಹಿಳೆಯರು 28% ದಲಿತರಿದ್ದಾರೆ. ಇವರಿಗೆ ಉದ್ಯೋಗ ಕೊಡ್ತೀವಿ ಅಂತ ಖಾತ್ರಿ ಇಲ್ಲ. ಹಾಗಾಗಿ ಅವರು ಕೇಳಿದ ಜಾಗದಲ್ಲಿ, ಸಣ್ಣ ರೈತರು ಜಮೀಮಿನುಗಳಲ್ಲೇ ಕೆಲಸ ಮಾಡಿಕೊಳ್ಳಲು ಅವಕಾಶ ಇತ್ತು, 365 ದಿನಗಳಲ್ಲಿ ಯಾವಾಗ ಕೆಲಸ ಕೇಳಿದ್ರೂ ಕೆಲಸ ಕೊಡಬಹುದಿತ್ತು. ಆದ್ರೆ ವಿಬಿಜಿರಾಮ್‌ಜಿ ಕಾಯ್ದೆ ಅನ್ವಯ ಕೇಂದ್ರ ಸರ್ಕಾರ ಎಲ್ಲಿ ಹೇಳುತ್ತದೋ ಅಲ್ಲಿ ಕೆಲಸ ಮಾಡಬೇಕು. ಜೊತೆಗೆ ಆಕ್ಷನ್‌ ಪ್ಲ್ಯಾನ್‌ ಮಾಡುವುದು ಆಯಾ ಪಂಚಾಯ್ತಿಗಳು, ಇದನ್ನ ಜಿರಾಮ್‌ಜಿ ಕಾಯ್ದೆಯಲ್ಲಿ ತೆಗೆದುಹಾಕಲಾಗಿದೆ ಎಂದು ಕಿಡಿ ಕಾರಿದರು.

ಅಧಿವೇಶನದ ಆರಂಭದ ದಿನವೇ ಗದ್ದಲ: ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು?

0

ಬೆಂಗಳೂರು, ಜನವರಿ 22: ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನದ ಆರಂಭವೇ ಗದ್ದಲ, ಘೋಷಣೆ, ಎಳೆದಾಟ ಮತ್ತು ಹೈಡ್ರಾಮಾದಿಂದ ಸುದ್ದಿಯಾಯ್ತು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಒಂದೇ ವಾಕ್ಯದಲ್ಲಿ ಭಾಷಣ ಮುಗಿಸಿ ಸದನದಿಂದ ಹೊರಟ ಕ್ಷಣದಿಂದಲೇ ರಾಜಕೀಯ ವಾತಾವರಣ ಉದ್ವಿಗ್ನಗೊಂಡಿತು.

ರಾಜ್ಯಪಾಲರು ಹೊರಟಾಗ ಕಾಂಗ್ರೆಸ್ ನಾಯಕರು ಸದನದೊಳಗೆ ಘೋಷಣೆಗಳನ್ನು ಕೂಗುತ್ತಿದ್ದರು. ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಐವಾನ್ ಡಿಸೋಜಾ ಹಾಗೂ ಶಾಸಕರಾದ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಹೆಚ್.ಸಿ. ಬಾಲಕೃಷ್ಣ ಈ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ತೀವ್ರಗೊಂಡಾಗ ಮಾರ್ಷಲ್ಗಳು ಬಿ.ಕೆ. ಹರಿಪ್ರಸಾದ್ ಅವರನ್ನು ಬಲವಂತವಾಗಿ ಪಕ್ಕಕ್ಕೆ ಎಳೆದೊಯ್ಯುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ. ಇದರಿಂದ ಕೋಪಗೊಂಡ ಹರಿಪ್ರಸಾದ್ ಹಾಗೂ ಹೆಚ್.ಸಿ. ಬಾಲಕೃಷ್ಣ ಮತ್ತೆ ಹಿಂದಿರುಗಿ ಮಾರ್ಷಲ್ ಹಿಡಿದು ಎಳೆದಾಡಿದ್ದು, ಸದನದೊಳಗೆ ಗದ್ದಲ ಮತ್ತಷ್ಟು ಉಗ್ರಗೊಂಡಿತು.

ಈ ಗೊಂದಲದ ನಡುವೆ ಬಿ.ಕೆ. ಹರಿಪ್ರಸಾದ್ ಅವರ ಬಟ್ಟೆ ಹರಿದಿದ್ದು, “ಬಿಜೆಪಿಯವರೇ ಬಟ್ಟೆ ಎಳೆದು ಹರಿಸಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ಈ ಸಂಪೂರ್ಣ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಜಾಪ್ರಭುತ್ವವನ್ನ ಶಿಥಿಲಗೊಳಿಸುವ ಕೆಲಸ ‘ಕೇಂದ್ರ’ ಮಾಡ್ತಿದೆ; ಸಚಿವ ರಾಮಲಿಂಗಾ ರೆಡ್ಡಿ

0

ರಾಮನಗರ:- ಪ್ರಜಾಪ್ರಭುತ್ವವನ್ನ ಶಿಥಿಲಗೊಳಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಪಾಲರನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಅಧಿವೇಶನದಲ್ಲಿ ಕೇವಲ 5 ನಿಮಿಷ ಏನೋ ಓದಿ ಹೋಗಿದ್ದಾರೆ. ಸ್ವಲ್ಪ ಗೊಂದಲ ಆಯ್ತು, ರಾಮನಗರದಲ್ಲಿ ಮೀಟಿಂಗ್ ಇದ್ದ ಕಾರಣ ನಾನು ಈ ಕಡೆ ಬಂದೆ. ಸ್ವಾತಂತ್ರ‍್ಯ ಬಂದಾಗಲಿಂದಲೂ ಅಧಿಕಾರದಲ್ಲಿರೋ ಸರ್ಕಾರ ರೆಡಿ ಮಾಡಿಕೊಡುವ ಭಾಷಣವನ್ನೇ ರಾಜ್ಯ ಪಾಲರು ಓದುತ್ತಾರೆ. ಎಲ್ಲಾ ರಾಜ್ಯಗಳಲ್ಲೂ ಈ ಸಂಪ್ರದಾಯ ಇದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನ ಶಿಥಿಲಗೊಳಿಸುವ ಕೆಲಸ ಮಾಡುತ್ತಿದೆ. ಗವರ್ನರ್ ಕೂಡಾ ಕಾನೂನು ಚೌಕಟ್ಟಿನಲ್ಲಿ ಅವರ ಕೆಲಸ ಮಾಡಬೇಕು ಎಂದರು.

ರಾಜ್ಯಪಾಲರು ಸ್ವತಂತ್ರವಾಗಿ ಕೆಲಸ ಮಾಡಲು ಬಿಜೆಪಿ ಬಿಡುತ್ತಿಲ್ಲ. ಕೇಂದ್ರಕ್ಕೆ ತಕ್ಕಂತೆ ರಾಜ್ಯ ಬಿಜೆಪಿಯೂ ತಾಳ ಹಾಕುತ್ತಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಬಿಜೆಪಿಯವರು ಸುಳ್ಳುಗಾರರು, ಅವರಿಗೆ ಕಾನೂನು, ಸಂವಿಧಾನದ ಅರಿವಿಲ್ಲ. ರಾಜ್ಯಪಾಲರು ಸಂವಿಧಾನಕ್ಕಿಂತ ದೊಡ್ಡವರಲ್ಲ. ಅವರು ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಸರ್ಕಾರದ ಭಾಷಣ ಓದದೇ ಹೋಗಿರೋದು ತಪ್ಪು. ಹಿಂದೆಯೂ ರಾಜ್ಯಪಾಲರ ವಿರುದ್ಧ ಬಿಜೆಪಿ ಘೋಷಣೆ ಕೂಗಿದ್ದರು. ಸ್ಪೀಕರ್ ವಿರುದ್ಧ ಘೋಷಣೆ ಕೂಗಿ ಪತ್ರ ಎಸೆದಿದ್ದರು. ಇಂತಹ ಬಿಜೆಪಿಯವರಿಂದ ನಾವು ನೀತಿ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.

ಗದಗ| ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಐತಿಹಾಸಿಕ ಲಕ್ಕುಂಡಿಯಲ್ಲಿ ಜಮೀನು ಬೆಲೆ ದುಬಾರಿ!

0

ಗದಗ:- ಚಿನ್ನದ ನಿಧಿ ಪತ್ತೆ ಹಾಗೂ ಸರ್ಕಾರದ ಉತ್ಖನನ ಕಾರ್ಯ ಆರಂಭವಾದ ಬಳಿಕ ಐತಿಹಾಸಿಕ ಲಕ್ಕುಂಡಿಯಲ್ಲಿ ಜನರ ಬದುಕು ಬಂಗಾರವಾಗಿದ್ದು, ಜಮೀನಿನ ಬೆಲೆಗಳು ಆಕಾಶಕ್ಕೇರಿವೆ.

ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿರುವ ಜಮೀನುಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದು, ಈ ಹಿಂದೆ ಎಕರೆಗೆ 30–40 ಲಕ್ಷ ರೂಪಾಯಿಗಳಷ್ಟಿದ್ದ ಜಮೀನಿನ ಬೆಲೆ ಇದೀಗ ಒಂದು ಕೋಟಿಗೆ ಏರಿಕೆಯಾಗಿದೆ. ಇದರಿಂದ ರೈತರ ಜಮೀನುಗಳಿಗೆ ಭಾರೀ ಡಿಮ್ಯಾಂಡ್ ಕಂಡುಬಂದಿದೆ.

ಉತ್ಖನನ ಕಾರ್ಯದಲ್ಲಿ ಇದುವರೆಗೆ ಅನೇಕ ಅಪರೂಪದ ಹಾಗೂ ಪ್ರಾಚೀನ ವಸ್ತುಗಳು ಪತ್ತೆಯಾಗಿದ್ದು, ಈ ಬೆಳವಣಿಗೆಗಳು ಭೂಮಿಯ ಬೆಲೆ ಏರಿಕೆಗೆ ಕಾರಣವಾಗಿವೆ. ಜನವರಿ 10ರಂದು ಲಕ್ಕುಂಡಿಯಲ್ಲಿ ಮನೆಗೆ ಪಾಯ ತೋಡುವ ವೇಳೆ ಬಂಗಾರದ ನಿಧಿ ಪತ್ತೆಯಾದ ನಂತರ ಲಕ್ಕುಂಡಿ ಹಲವು ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.

ಪ್ರಸ್ತುತ ಸರ್ಕಾರದ ವತಿಯಿಂದ ಉತ್ಖನನ ಕಾರ್ಯ ಮುಂದುವರಿದಿದ್ದು, ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆ ತ್ರಿ ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್ ಮಾಲೀಕರು ಲಕ್ಕುಂಡಿಯಲ್ಲಿ ಭೂಮಿ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಪರಿಣಾಮವಾಗಿ, ಎರಡು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ಲಕ್ಕುಂಡಿಯ ಜಮೀನಿನ ಬೆಲೆ ಎರಡು ರಿಂದ ಮೂರು ಪಟ್ಟು ಹೆಚ್ಚಾಗಿದೆ ಎಂದು ರೈತರು ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಅಗೌರವ; ಕಾಂಗ್ರೆಸ್ ನಡೆ ಗೂಂಡಾಗಿರಿ- ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ

0

ಬೆಂಗಳೂರು:- ವಿಧಾನಸಭೆಯ ವಿಶೇಷ ಅಧಿವೇಶನದ ವೇಳೆ ಭಾಷಣ ಮುಗಿಸಿ ಹೊರಟ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಶಾಸಕರು ಅಡ್ಡಗಟ್ಟಿರುವುದನ್ನು ಖಂಡಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಇದನ್ನು ‘ಕರಾಳ ದಿನ’ ಎಂದು ಕರೆದಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಸಂವಿಧಾನ ಪ್ರಕಾರ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಿ ಧನ್ಯವಾದ ಸಲ್ಲಿಸಿ ಹೊರಟಿದ್ದು ತಪ್ಪೇನೂ ಇಲ್ಲ. ರಾಜ್ಯಪಾಲರಿಗೆ ಭಾಷಣವನ್ನು ಓದದೇ ಹೊರಡುವ ಅಧಿಕಾರವೂ ಸಂವಿಧಾನದಲ್ಲೇ ಇದೆ. ಕಾಂಗ್ರೆಸ್ ಶಾಸಕರು ಅಗೌರವ ತೋರಿದ್ದು ಗೂಂಡಾಗಿರಿ ಎಂದು ಆರೋಪಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅಶೋಕ್, ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ನೀಡುವುದಾಗಿ ತಿಳಿಸಿದರು. ಲೋಕಭವನವನ್ನು ಕಾಂಗ್ರೆಸ್ ಭವನವನ್ನಾಗಿಸಲು ‘ಕೈ’ ಸರ್ಕಾರ ಹೊರಟಿದ್ದು, ಹೈಕಮಾಂಡ್ ನಾಯಕರನ್ನು ಮೆಚ್ಚಿಸುವ ಕುತಂತ್ರ ಇದಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲು!

0

ಪುತ್ತೂರು: ಖಾಸಗಿ ಕಾಲೇಜು ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣ ನೀಡಿದ್ದ ಆರೋಪದ ಮೂಲಕ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಹಾಗೂ ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಪ್ರಭಾಕರ್ ಭಟ್ ವಿರುದ್ಧ ಪುತ್ತೂರು ನಿವಾಸಿ ಮತ್ತು ಕಾಂಗ್ರೆಸ್ ಮುಖಂಡ ಅಮಳ ರಾಮಚಂದ್ರ ದೂರು ನೀಡಿದ್ದು, ಮಾನವ ಬಂಧುತ್ವ ವೇದಿಕೆಯ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದೆ. ಭಾಷಣವನ್ನು ಪ್ರಸಾರ ಮಾಡಿದ ‘ವಿಕಸನ ಟಿವಿ’ ಯೂಟ್ಯೂಬ್ ಚಾನಲ್ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಜನವರಿ 12 ರಂದು ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಎದುರಿನಲ್ಲಿ ವಿವಾದಾತ್ಮಕ ಭಾಷಣ ನಡೆದಿದೆ ಎಂಬ ಆರೋಪ ಇದೆ. ದಾಖಲಾಗಿರುವ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆ (IPC) ಅಡಿ ಗಂಭೀರ ಸೆಕ್ಷನ್‌ಗಳು 196, 299, 302, 353(2), 3(5) ಒಳಗೊಂಡಿವೆ.

error: Content is protected !!