Home Blog Page 14

ಯುವ ಸಂಕಲ್ಪದಿಂದಲೇ ನವ ಭಾರತ ನಿರ್ಮಾಣ ಸಾಧ್ಯ: ಕಿರಣ ರಾಮ್

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರು ತಮ್ಮ ಜ್ಞಾನ, ಪ್ರತಿಭೆ, ಶಕ್ತಿ ಹಾಗೂ ಸೃಜನಶೀಲತೆಯನ್ನು ದೇಶದ ಅಭಿವೃದ್ಧಿಗೆ ಸಮರ್ಪಿಸುವ ಸಂಕಲ್ಪ ಮಾಡಬೇಕು. ಯುವಕರಲ್ಲಿ ರಾಷ್ಟ್ರಪ್ರೇಮ, ಸಾಮಾಜಿಕ ಜವಾಬ್ದಾರಿ, ಸೇವಾ ಮನೋಭಾವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಮೂಲಕ ನವ ಭಾರತದ ನಿರ್ಮಾಣದ ಕನಸನ್ನು ನನಸಾಗಿಸಬಹುದು ಎಂದು ಶಿಕ್ಷಕ ಹಾಗೂ ವಾಗ್ಮಿ ಕಿರಣ ರಾಮ್ ಹೇಳಿದರು.

ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕದ 2026–27ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಾರತ ಅಪಾರ ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರವಾಗಿದೆ. ಈ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ವ್ಯಕ್ತಿತ್ವ ನಿರ್ಮಾಣದ ಜತೆಗೆ ರಾಷ್ಟ್ರ ನಿರ್ಮಾಣಕ್ಕೂ ಅಗತ್ಯವಾಗಿದೆ ಎಂದರು.

ಗುಣಮಟ್ಟದ ಶಿಕ್ಷಣದ ಜತೆಗೆ ಕೌಶಲ್ಯಾಭಿವೃದ್ಧಿ, ನವೋದ್ಯಮ, ಉದ್ಯಮಶೀಲತೆ, ತಂತ್ರಜ್ಞಾನ ಜ್ಞಾನ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಸೇವೆಯಲ್ಲಿ ಯುವಕರು ತೊಡಗಿಸಿಕೊಳ್ಳಬೇಕು. ಜ್ಞಾನ ಮತ್ತು ಪ್ರತಿಭೆಯನ್ನು ಸಮಾಜದ ಅಭಿವೃದ್ಧಿಗೆ ಬಳಸುವ ಮೂಲಕ ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ಮಾತನಾಡಿ, ಸ್ವಚ್ಛತೆ, ಪರಿಸರ ಸಂರಕ್ಷಣೆ, ರಕ್ತದಾನ, ಗ್ರಾಮೀಣ ಅಭಿವೃದ್ಧಿ, ಸಾಕ್ಷರತೆ, ಸಾಮಾಜಿಕ ಜಾಗೃತಿ, ರಾಷ್ಟ್ರೀಯ ಏಕತೆ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಎನ್‌ಎಸ್‌ಎಸ್ ಘಟಕವು ಯುವಕರಲ್ಲಿ ಸ್ವಯಂಸೇವಾ ಮನೋಭಾವ, ನಾಯಕತ್ವ, ಅನುಭವಾಧಾರಿತ ಕಲಿಕೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಲು ಉತ್ತಮ ವೇದಿಕೆಯಾಗಿದೆ. ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳ ಸಮನ್ವಯವೇ ಯುವ ಸಂಕಲ್ಪದ ಆಧಾರ. ಪ್ರಾಮಾಣಿಕತೆ, ಶಿಸ್ತು, ಸಮಯಪಾಲನೆ, ಪರಿಶ್ರಮ, ಸಹಬಾಳ್ವೆ, ಮಾನವೀಯತೆ ಹಾಗೂ ದೇಶಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಂಡ ಯುವಜನತೆ ಬಲಿಷ್ಠ ಸಮಾಜದ ನಿರ್ಮಾತೃಗಳಾಗುತ್ತಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಮಹಾವಿದ್ಯಾಲಯದ ಆಡಳಿತಾಧಿಕಾರಿ ಪ್ರೊ. ವಿಕ್ರಂ ಶಿರೋಳ್, ಪ್ರಥಮ ವರ್ಷದ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಯತ್ತಿನಹಳ್ಳಿ, ಪ್ರೊ. ದಯಾನಂದ ಬಡಿಗಣ್ಣವರ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ, ಪ್ರೊ. ಷಣ್ಮುಖ ಜಿ. ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಎನ್‌ಎಸ್‌ಎಸ್ ಘಟಕಕ್ಕೆ ಸ್ವಾಗತಿಸಲಾಯಿತು. ಸ್ವಯಂಸೇವಕರಾದ ಅಭಿಷೇಕ ಕಣವಿ, ಶ್ರೀಲಕ್ಷ್ಮಿ ಪಾಟೀಲ್, ಸ್ಮಿತಾ ದಳವಾಯಿ, ಅಕ್ಷತಾ ಹಡಪದ ಹಾಗೂ ಚೇತನ್ ಗಣೇಶ್ ಬನ್ನಿಮಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ನಾನು ಬದಲಾಗುತ್ತೇನೆ–ಸಮಾಜವನ್ನು ಬದಲಾಯಿಸುತ್ತೇನೆ ಎಂಬ ಸಂಕಲ್ಪದೊಂದಿಗೆ ಯುವಕರು ಮುನ್ನಡೆಯಬೇಕು. ತಮ್ಮ ಸಾಮರ್ಥ್ಯವನ್ನು ವೈಯಕ್ತಿಕ ಯಶಸ್ಸಿಗೆ ಮಾತ್ರ ಸೀಮಿತಗೊಳಿಸದೆ ಸಮಾಜದ ಒಳಿತಿಗೂ ಬಳಸಿದಾಗ ಯುವಶಕ್ತಿಯ ನಿಜವಾದ ಅರ್ಥ ಸಾರ್ಥಕವಾಗುತ್ತದೆ.
— ಕಿರಣ ರಾಮ್, ಶಿಕ್ಷಕ ಹಾಗೂ ವಾಗ್ಮಿ

ಕಡತದ ಹಿಂದೆ ಇರುವ ನೋವನ್ನು ಅರ್ಥಮಾಡಿಕೊಳ್ಳಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬುದನ್ನು ಅಕ್ಷರಶಃ ಪಾಲಿಸುವ ಮೂಲಕ ಸಾರ್ವಜನಿಕರೊಂದಿಗೆ ಸೌಜನ್ಯ, ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ವರ್ತಿಸಬೇಕು. ಜನರ ಸಮಸ್ಯೆಗಳನ್ನು ಕೇವಲ ಕಡತ, ಅರ್ಜಿ ಅಥವಾ ದಾಖಲೆಗಳಾಗಿ ನೋಡದೆ, ಅವುಗಳ ಹಿಂದೆ ಇರುವ ನೋವು, ಸಂಕಷ್ಟ ಹಾಗೂ ಅಗತ್ಯವನ್ನು ಅರ್ಥಮಾಡಿಕೊಂಡು ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕರೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸರ್ಕಾರಿ ಸೇವೆಯ ಮಹತ್ವ, ಅಧಿಕಾರಿಗಳ ಜವಾಬ್ದಾರಿ ಹಾಗೂ ಜನಸ್ನೇಹಿ ಆಡಳಿತದ ಅಗತ್ಯವನ್ನು ಒತ್ತಿ ಹೇಳಿದರು.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಐತಿಹಾಸಿಕ ಸಂದರ್ಭವನ್ನು ಸ್ಮರಿಸಿದ ಜಿಲ್ಲಾಧಿಕಾರಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶ ನಿರ್ಮಾಣಕ್ಕಾಗಿ ಅಂದಿನ ವಿದ್ವಾಂಸರು ಮತ್ತು ಪಂಡಿತರು ನೀಡಿದ ಸಲಹೆ-ಸೂಚನೆಗಳನ್ನು ನೆನಪಿಸಿಕೊಂಡರು.

ದೇಶ ನಿರ್ಮಾಣದ ಕಾರ್ಯದಲ್ಲಿ ದೇಶಭಕ್ತಿ, ಕರ್ತವ್ಯನಿಷ್ಠೆ ಹಾಗೂ ದೈವಬಲದ ಮೇಲಿನ ನಂಬಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ಸರ್ಕಾರಿ ನೌಕರಿ ದೊರೆಯುವುದು ಕೇವಲ ಉದ್ಯೋಗವಲ್ಲ, ಅದು ದೊಡ್ಡ ಅವಕಾಶದ ಜೊತೆಗೆ ಮಹತ್ವದ ಜವಾಬ್ದಾರಿಯಾಗಿದೆ. ಕೋಟ್ಯಂತರ ಜನಸಂಖ್ಯೆಯಲ್ಲಿ ಕೆಲವೇ ಲಕ್ಷ ಮಂದಿಗೆ ಸರ್ಕಾರಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಹೀಗಾಗಿ, ‘ಸಮಾಜ ನಮಗೆ ಏನು ಕೊಟ್ಟಿದೆ?’ ಎನ್ನುವುದಕ್ಕಿಂತ ‘ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ?’ ಎಂದು ಪ್ರತಿಯೊಬ್ಬ ಸರ್ಕಾರಿ ನೌಕರರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ತಮ್ಮ ಸಮಸ್ಯೆಗಳನ್ನು ಹೊತ್ತು ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಜನರೊಂದಿಗೆ ನಾಲ್ಕು ಹಿತನುಡಿಗಳನ್ನು ಆಡಿದರೂ ಅವರ ಅರ್ಧ ಸಮಸ್ಯೆ ಪರಿಹಾರವಾದಂತಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

“ಸಾರ್ವಜನಿಕರ ದೃಷ್ಟಿಯಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರನೂ ಸರ್ಕಾರದ ಪ್ರತಿನಿಧಿ. ನೌಕರರು ಮಾಡುವ ಸಣ್ಣ ಸಹಾಯವೂ ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ.” ಎಂದು ಅವರು ಹೇಳಿದರು.

ಜನರ ಸಮಸ್ಯೆಗಳನ್ನು ಕೇವಲ ಕಡತ, ಅರ್ಜಿ ಅಥವಾ ದಾಖಲೆಗಳ ರೂಪದಲ್ಲಿ ನೋಡಬಾರದು. ಆ ಕಡತದ ಹಿಂದೆ ಒಬ್ಬ ವ್ಯಕ್ತಿಯ ನೋವು, ಸಂಕಷ್ಟ ಮತ್ತು ಅಗತ್ಯವಿರುತ್ತದೆ. ಅದನ್ನು ಅರ್ಥಮಾಡಿಕೊಂಡು ಮಾನವೀಯತೆಯಿಂದ ಸ್ಪಂದಿಸುವ ಮನೋಭಾವ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಇರಬೇಕು ಎಂದು ಸಿ.ಎನ್. ಶ್ರೀಧರ್ ಹೇಳಿದರು.

ಅಧಿಕಾರ ಮತ್ತು ಹುದ್ದೆಯನ್ನು ಜನಸೇವೆಗೆ ಬಳಸಿಕೊಳ್ಳಬೇಕು. ಜನರ ಸೇವೆ ಮಾಡುವ ಮೂಲಕ ಪುಣ್ಯ ಸಂಪಾದಿಸುವ ಅಪೂರ್ವ ಅವಕಾಶ ಸರ್ಕಾರಿ ಸೇವೆಯಲ್ಲಿದೆ. ಸಮಾಜದಿಂದ ಪಡೆಯುವುದಕ್ಕಿಂತ ಸಮಾಜಕ್ಕೆ ನೀಡುವುದರಲ್ಲಿ ಹೆಚ್ಚಿನ ಸಂತೃಪ್ತಿ ದೊರೆಯುತ್ತದೆ ಎಂದರು.

ದೇಶದ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕಾಗಿ ಪ್ರತಿಯೊಬ್ಬ ಸರ್ಕಾರಿ ನೌಕರರೂ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಸೌಜನ್ಯ ಮತ್ತು ಮಾನವೀಯತೆಯಿಂದ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.

ಜಿಲ್ಲಾಡಳಿತದ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಎಸ್.ಎಸ್. ಮುಂಡರಗಿ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ನಮ್ಮಲ್ಲಿ ಮನುಷ್ಯತ್ವ ತುಂಬಿದ್ದರೆ, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅದು ಪ್ರತಿಫಲಿಸುತ್ತದೆ. ಸರ್ಕಾರ ನಮಗೆ ನೀಡಿರುವ ಅಧಿಕಾರವನ್ನು ಸಮಾಜಕ್ಕೆ ಮರುಪಾವತಿ ಮಾಡುವ ಸೇವಾ ಮನೋಭಾವದಿಂದ ಬಳಸಿಕೊಳ್ಳೋಣ.
— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಬಿಜೆಪಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗದಗ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಜೀವನವನ್ನೇ ತ್ಯಾಗ ಮಾಡಿ ಬಲಿದಾನಗೈದಿದ್ದಾರೆ. ಅಂತಹ ಮಹನೀಯರ ತ್ಯಾಗ, ಬಲಿದಾನದಿಂದಲೇ ನಮಗೆ ಸ್ವಾತಂತ್ರ್ಯ ದೊರೆತಿದೆ. ಇಂದು ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮುಖಂಡರಾದ ಎಂ.ಎಸ್. ಕರೀಗೌಡ್ರ, ಲಿಂಗರಾಜ ಪಾಟೀಲ, ಸುರೇಶ ಮರಳಪ್ಪನವರ, ಅಶೋಕ ನವಲಗುಂದ, ಜಗನ್ನಾಥಸಾ ಭಾಂಡಗೆ, ಬಿ.ಎಚ್. ಲದ್ವಾ, ಎಂ.ಎಂ. ಹಿರೇಮಠ, ಸಿದ್ದು ಪಲ್ಲೇದ, ವಿಜಯಕುಮಾರ ಗಡ್ಡಿ, ರವಿ ದಂಡಿನ, ಸುಧೀರ ಕಾಟಿಗರ, ಶಂಕರ ಕಾಕಿ, ಸಂತೋಷ ಅಕ್ಕಿ, ನಿಂಗಪ್ಪ ಹುಗ್ಗಿ, ಸುಭಾಸ ಸುಂಕದ, ಮಂಜುನಾಥ ಹಳ್ಳೂರಮಠ, ಕೆ.ಪಿ. ಕೋಟಿಗೌಡ್ರ, ಅನೀಲ ಅಬ್ಬಿಗೇರಿ, ಶಿವು ಹಿರೇಮನಿಪಾಟೀಲ, ಪ್ರಶಾಂತ ನಾಯ್ಕರ, ದೇವಪ್ಪ ಗೊಟೂರ, ಅಮರನಾಥ ಬೆಟಗೇರಿ, ರಮೇಶ ಸಜ್ಜಗಾರ, ಮಾದವ ಗಣಾಚಾರಿ, ಕಿರಣ ಭೂಮಾ, ಜಯಶ್ರೀ ಉಗಲಾಟದ, ನಿರ್ಮಲಾ ಕೊಳ್ಳಿ, ಸ್ವಾತಿ ಅಕ್ಕಿ, ವಂದನಾ ವರ್ಣೇಕರ, ಶಾರದಾ ಸಜ್ಜನರ, ಅಶ್ವೀನಿ ಜಗತಾಪ್, ಪದ್ಮನಿ ಮುತ್ತಲದಿನ್ನಿ, ಮೇಘಾ ಕೊಟ್ಟೂರ, ಪ್ರೀತಿ ಶಿವಪ್ಪನಮಠ, ರವಿ ಮಾನ್ವಿ, ಅಕ್ಕಮ್ಮ ವಸ್ತçದ, ವಿನೋದ ಹಂಸನೂರ, ಮಂಜುನಾಥ ಪಟ್ಟಣಶೆಟ್ಟಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

‘ಗದಗ ಉತ್ಸವ’ ಉತ್ಪನ್ನ, ಉದ್ಯಮ ಸಾಮರ್ಥ್ಯದ ಕನ್ನಡಿ: ಜಿ.ಕೆ. ಆದಪ್ಪಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ‘ಗದಗ ಉತ್ಸವ’ ಕೇವಲ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವಲ್ಲ. ಇದು ಗದಗ, ರಾಜ್ಯ ಹಾಗೂ ಅಂತರ್‌ರಾಜ್ಯದ ಉತ್ಪನ್ನಗಳು ಮತ್ತು ಉದ್ಯಮಗಳ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಹಾಗೂ ಅವುಗಳಿಗೆ ಮಾರುಕಟ್ಟೆ ಒದಗಿಸುವ ವೇದಿಕೆಯಾಗಿದೆ ಎಂದು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜಿ.ಕೆ. ಆದಪ್ಪಗೌಡ್ರ ಹೇಳಿದರು.

ನಗರದ ಎ.ಪಿ.ಎಂ.ಸಿ. ಯಾರ್ಡ್‌ನ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಆ.14ರಿಂದ 18ರವರೆಗೆ ನಡೆಯಲಿರುವ ‘ಗದಗ ಉತ್ಸವ-2026’ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶುಕ್ರವಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಹಾಗೂ ಕೃಷಿ ಉತ್ಪನ್ನಗಳ ಪ್ರಮುಖ ಮಾರುಕಟ್ಟೆಯಾಗಿರುವ ಗದಗ ಜಿಲ್ಲೆ ಇದೀಗ ವೇಗವಾಗಿ ಉದ್ಯಮೀಕರಣದತ್ತ ಸಾಗುತ್ತಿದೆ. ಪ್ರಮುಖ ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿರುವ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಹೆಚ್ಚಾಗುವ ಎಲ್ಲ ಅವಕಾಶಗಳಿವೆ ಎಂದರು.

ಗದಗ ಜಿಲ್ಲೆಯಲ್ಲಿ ಉಗ್ರಾಣ, ಶೀತಲ ಸರಕು ಸಂಗ್ರಹಣಾ ಘಟಕ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ರಫ್ತು ಘಟಕಗಳನ್ನು ಸ್ಥಾಪಿಸಲು ಪೂರಕ ವಾತಾವರಣವಿದೆ. ಇಂತಹ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಜಿಲ್ಲೆಯ ತಲಾ ಆದಾಯ ಹಾಗೂ ಉದ್ಯೋಗ ಸೃಷ್ಟಿ ಹೆಚ್ಚಲಿದೆ ಎಂದು ಹೇಳಿದರು.

ಯುವಕರು ಉದ್ಯೋಗ ಅರಸಿ ಹೋಗುವವರಾಗದೆ, ಉದ್ಯೋಗ ನೀಡುವ ಉದ್ಯಮಿಗಳಾಗಬೇಕು. ಸಣ್ಣ, ಅತಿ ಸಣ್ಣ ಹಾಗೂ ಗುಡಿ ಕೈಗಾರಿಕೆಗಳಿಗೆ ಜಿಲ್ಲೆಯಲ್ಲಿ ಅಪಾರ ಅವಕಾಶಗಳಿವೆ ಎಂದು ಕರೆ ನೀಡಿದರು.

ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಭೂಮಿಯ ಹೆಚ್ಚಿನ ಬೆಲೆ ಹಾಗೂ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರ ರಿಯಾಯಿತಿ ದರದಲ್ಲಿ ಕೈಗಾರಿಕಾ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಬೇಕು. ಜಿಲ್ಲೆಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಿದರೆ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಒತ್ತಾಯಿಸಿದರು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಸರ್ಕಾರದ ಸಹಯೋಗದಲ್ಲಿ ಶಾಶ್ವತ ವಸ್ತು ಪ್ರದರ್ಶನ ಕೇಂದ್ರ ನಿರ್ಮಿಸಲು ಮುಂದಾದರೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ವರ್ಷದಿಂದ ವರ್ಷಕ್ಕೆ ‘ಗದಗ ಉತ್ಸವ’ದ ವ್ಯಾಪ್ತಿ ಹಾಗೂ ವೈಭವ ಹೆಚ್ಚುತ್ತಿರುವುದು ಶ್ಲಾಘನೀಯ. ಇಂತಹ ಮೇಳಗಳಿಂದ ಸ್ಥಳೀಯ ಕೈಗಾರಿಕೆಗಳು, ಉತ್ಪನ್ನಗಳು ಮತ್ತು ಉದ್ಯಮಿಗಳು ಬೆಳೆಯಲು ಉತ್ತಮ ಅವಕಾಶ ದೊರೆಯುತ್ತದೆ ಎಂದರು.

ಗದಗದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಅನನ್ಯ: ಸಚಿವ ಬಸವರಾಜ ರಾಯರಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಜಿಲ್ಲೆಯ ಸ್ವಾತಂತ್ರ್ಯ ಸೇನಾನಿಗಳ ಪಾತ್ರ ಅನನ್ಯವಾಗಿದ್ದು, ಅವರ ತ್ಯಾಗ ಮತ್ತು ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು ಉನ್ನತ ಶಿಕ್ಷಣ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಗದಗ ಪರಿಸರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಇತಿಹಾಸ ರೋಚಕವಾಗಿದೆ. 1857ರಿಂದಲೇ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಕೊಂಡಿತ್ತು. ನರಗುಂದದ ಬಾಬಾಸಾಹೇಬ, ಮುಂಡರಗಿಯ ಭೀಮರಾವ್, ಡಂಬಳದ ಕೆಂಚನಗೌಡ್ರ, ಅನಂತರಾವ್ ಜಾಲಿಹಾಳ, ಡಾ. ವಾಸುದೇವರಾವ್ ಉಮಚಗಿ, ಬೆಟಗೇರಿಯ ತ್ರಿಮಲ್ಲೆ, ಮಳೇಕರ, ಜಯರಾಮಾಚಾರ್ಯ ಮಳಗಿ, ಡಂಬಳದ ಶ್ರೀನಿವಾಸರಾವ್ ಕಳ್ಳಿ, ತಿಪ್ಪಣ್ಣ ಶಾಸ್ತ್ರಿ, ಅಂದಾನಪ್ಪ ದೊಡ್ಡಮೇಟಿ, ಕೌತಾಳ ವೀರಪ್ಪ, ಕೆ.ಎಚ್. ಪಾಟೀಲ ಸೇರಿದಂತೆ ಅಸಂಖ್ಯಾತ ಹೋರಾಟಗಾರರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.

ದೇಶಭಕ್ತ ಮೈಲಾರ ಮಹದೇವಪ್ಪ ಅವರ ನೇತೃತ್ವದಲ್ಲಿ ಕೋಗನೂರು, ಶಿಗ್ಲಿ, ಹೆಬ್ಬಾಳ, ನಾಗರಮಡುವು, ವರವಿ, ಹೊಸೂರು, ಅಂಕಲಿ ಸೇರಿದಂತೆ ಹಲವು ಗ್ರಾಮಗಳ ಹೋರಾಟಗಾರರು ಚಳವಳಿಯಲ್ಲಿ ಧುಮುಕಿ ಅಪಾರ ತ್ಯಾಗ ಮಾಡಿದ್ದಾರೆ. 1942ರ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿಯೂ ಗದಗ ಜಿಲ್ಲೆ ಸಂಪೂರ್ಣವಾಗಿ ತೊಡಗಿಸಿಕೊಂಡಿತ್ತು. ಡಾ. ಬಿ.ಜಿ. ಹುಲಗಿ, ಶಂಕ್ರಪ್ಪ ಗುಡ್ಡದ, ಇಸ್ಮಾಯಿಲ ಸಾಹೇಬ, ಕಲ್ಲೂರ ರಾಮಾಚಾರಿ, ವೆಂಕಟೇಶ ಮಾಗಡಿ, ಕೋಗನೂರ ನಿಂಗಪ್ಪ ಸೇರಿದಂತೆ ಅನೇಕರು ಕಠಿಣ ಶಿಕ್ಷೆ ಅನುಭವಿಸಿದರು ಎಂದು ಸ್ಮರಿಸಿದರು.

ಸಾಹಿತ್ಯ–ಸಂಸ್ಕೃತಿಯ ಶ್ರೀಮಂತ ಪರಂಪರೆ

ಗದಗ ಜಿಲ್ಲೆ ಸ್ವಾತಂತ್ರ್ಯ ಹೋರಾಟ ಮಾತ್ರವಲ್ಲದೆ ಸಾಹಿತ್ಯ, ಸಂಗೀತ, ಸಂಸ್ಕೃತಿ ಕ್ಷೇತ್ರದಲ್ಲಿಯೂ ಅಪಾರ ಕೊಡುಗೆ ನೀಡಿದೆ. ಪಂಪ, ನಾಗವರ್ಮ, ಕುಮಾರವ್ಯಾಸ, ಚಾಮರಸ, ಮುಕ್ತಾಯಕ್ಕರಿಂದ ಹಿಡಿದು ಕೀರ್ತಿನಾಥ ಕುರ್ತಕೋಟಿ, ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ, ಎನ್.ಕೆ. ಕುಲಕರ್ಣಿ, ಮಾಧವ ಕುಲಕರ್ಣಿ, ಎಚ್.ಎನ್. ಹೂಗಾರ, ರಾಜಶೇಖರ ಭೂಸನೂರಮಠ, ಭಾರತರತ್ನ ಪಂಡಿತ ಭೀಮಸೇನ ಜೋಶಿ, ಪಂಚಾಕ್ಷರಿ ಗವಾಯಿಗಳು, ಡಾ. ಪುಟ್ಟರಾಜ ಕವಿ ಗವಾಯಿಗಳು ಹಾಗೂ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರೆಗೆ ಜಿಲ್ಲೆಯ ಸಾಧಕರ ಪರಂಪರೆ ದೊಡ್ಡದಾಗಿದೆ ಎಂದರು.

ರಾಜ್ಯ ಸರ್ಕಾರ ವಿವಿಧ ಹಂತಗಳಲ್ಲಿ ಸುಮಾರು ₹1.20 ಲಕ್ಷ ಕೋಟಿ ಮೊತ್ತದ ಸಬ್ಸಿಡಿ ನೀಡುತ್ತಿದೆ. ರಾಜ್ಯದ ಸುಮಾರು 36.10 ಲಕ್ಷ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ₹5 ಲಕ್ಷದವರೆಗೆ ಸಾಲ ವಿತರಿಸಲಾಗುತ್ತಿದೆ ಎಂದರು.

ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವುದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಜಿಲ್ಲೆಯ ಹೆಮ್ಮೆಯಾಗಿದ್ದು, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಶಿಕ್ಷಣ, ಸಂಶೋಧನೆ ಮತ್ತು ತರಬೇತಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ನೈಸರ್ಗಿಕ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಬಸವರಾಜ ರಾಯರಡ್ಡಿ ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಡಾ. ಎಚ್.ಕೆ. ಪಾಟೀಲ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ್ ಕೆ., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಗದಗ ಜಿಲ್ಲೆಯ ಸ್ವಾತಂತ್ರ್ಯ ಸೇನಾನಿಗಳ ಹೋರಾಟ ಮತ್ತು ತ್ಯಾಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.”

ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು

‘ನಾನು ಎಲ್ಲಿ ಸೈಲೆಂಟ್ ಆಗಿದ್ದೇನೆ?’; ಟೀಕಾಕಾರರಿಗೆ ಸಿದ್ದರಾಮಯ್ಯ ತಿರುಗೇಟು!

0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಬೆನ್ನಲ್ಲೇ, ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. “ನಾನೀಗ ಮುಖ್ಯಮಂತ್ರಿ ಅಲ್ಲ, ಹಾಗಾಗಿ ಹೆಚ್ಚು ಮಾತನಾಡುತ್ತಿಲ್ಲ ಅಷ್ಟೇ” ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ನಾನು ಎಲ್ಲಿ ಸೈಲೆಂಟ್ ಆಗಿದ್ದೇನೆ? ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ್ದೇನೆ. ನಿನ್ನೆ ಅಧಿವೇಶನದಲ್ಲಿ ಭಾಗಿಯಾಗಿದ್ದೇನೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೇನೆ. ಆದರೆ ಹೆಚ್ಚು ಮಾತನಾಡುತ್ತಿಲ್ಲ ಅಷ್ಟೇ” ಎಂದು ಹೇಳಿದರು.

“ನಾನೀಗ ಮುಖ್ಯಮಂತ್ರಿ ಅಲ್ಲ. ಹಾಗಾಗಿ ಜವಾಬ್ದಾರಿ ಇಲ್ಲ” ಎಂದು ಹೇಳುವ ಮೂಲಕ ತಾವು ಮೌನವಾಗಿರುವುದಕ್ಕೆ ಕಾರಣವನ್ನು ಸಿದ್ದರಾಮಯ್ಯ ವಿವರಿಸಿದರು.

ಇನ್ನು ಮಹಿಳಾ ಕೋಟಾ ಭರ್ತಿಯಾಗಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆಯೂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. “ಮಹಿಳಾ ಕೋಟಾ ಭರ್ತಿಯಾಗಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಾರೆ. ಈ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಅವರ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶವನ್ನೇ ನೀಡಿಲ್ಲ” ಎಂದು ಟೀಕಿಸಿದರು.

ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ತಾವು ಹೇಳಿರುವುದಾಗಿ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.

ಅಹಿಂದ ಚಳುವಳಿ ಕುರಿತು ಮಾತನಾಡಿದ ಸಿದ್ದರಾಮಯ್ಯ, ಅಹಿಂದ ಚಳುವಳಿ ನಡೆಯುತ್ತಿದೆ. ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ 25ನೇ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಾಗಿ ತಿಳಿಸಿದರು.

ಸಾರ್ವಜನಿಕ ಸೇವೆಯನ್ನು ಪ್ರಾಮಾಣಿಕತೆ, ಶ್ರದ್ಧೆಯಿಂದ ನಿರ್ವಹಿಸುವ ಸಂಕಲ್ಪ ಮಾಡೋಣ: ಶ್ರೀಧರ್ ಚಿನಗುಂಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ: ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಸರ್ಕಾರಿ ನೌಕರರಾದ ನಾವು ಸಾರ್ವಜನಿಕ ಸೇವೆಯನ್ನು ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ನಿರ್ವಹಿಸುವುದರ ಜತೆಗೆ ದೀನದಲಿತರು ಹಾಗೂ ದುರ್ಬಲ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದರು.

ಸಹಾಯಕ ನಿರ್ದೇಶಕ (ಅಕ್ಷರ ದಾಸೋಹ) ಎಂ.ಎಸ್. ಅಸುಂಡಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ ನಾಯಕರ ಕೊಡುಗೆಯನ್ನು ನೆನಪಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ಬಳಿಕ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ **‘ನಶಾ ಮುಕ್ತ ಭಾರತ’**ಕ್ಕಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ್, ಸಹಾಯಕ ನಿರ್ದೇಶಕ (ಅಕ್ಷರ ದಾಸೋಹ) ಎಂ.ಎಸ್. ಅಸುಂಡಿ, ಯೋಜನಾಧಿಕಾರಿ ಎಂ.ಎಂ. ನಿಟ್ಟಾಲಿ, ತಾಲೂಕು ಪಂಚಾಯಿತಿ ಕಚೇರಿ ಸಿಬ್ಬಂದಿ, ವ್ಹಿಬಿಜಿರಾಮ್ ಸಿಬ್ಬಂದಿ, ಎನ್‌ಆರ್‌ಎಂಎಂ ಹಾಗೂ ವಿಆರ್‌ಡಬ್ಲ್ಯೂ ಸಿಬ್ಬಂದಿ ಉಪಸ್ಥಿತರಿದ್ದರು.

ಹಳ್ಳಿಯಿಂದ ದಿಲ್ಲಿವರೆಗೂ ಕೊಂಡಾಡುವ ನಾಯಕ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಹಳ್ಳಿಯಿಂದ ದಿಲ್ಲಿವರೆಗೂ ಪರಿಚಿತರಾಗಿರುವ, ಪ್ರಭಾವಿ ರಾಜಕಾರಣಿ ಹಾಗೂ ಪರಿಶುದ್ಧ ಸೇವಕರೆಂದು ಗುರುತಿಸಿಕೊಂಡಿರುವ ಶಾಸಕ, ಮಾಜಿ ಸಚಿವ ಎಚ್.ಕೆ. ಪಾಟೀಲ ಅವರ 73ನೇ ಜನ್ಮದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ನೋಟು ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ತಾಜುದ್ದೀನ್ ಕಿಂಡ್ರಿ, ಇಂದಿರಾ ಗಾಂಧಿ ಅವರ ಕಾಲದಿಂದ ಇಂದಿನ ರಾಹುಲ್ ಗಾಂಧಿ ಅವರವರೆಗೆ ರಾಷ್ಟ್ರ ಮಟ್ಟದ ನಾಯಕರೊಂದಿಗೆ ಪರಿಚಯ ಹೊಂದಿರುವ ಎಚ್.ಕೆ. ಪಾಟೀಲ ಅವರು ಗದಗ ಕ್ಷೇತ್ರ ಮಾತ್ರವಲ್ಲದೆ ರಾಜ್ಯದ ಅಭಿವೃದ್ಧಿಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹುಲಕೋಟಿಯ ಹುಲಿ ಎಂದೇ ಖ್ಯಾತರಾಗಿರುವ ಅವರು ಜನಪರ ಕಾಳಜಿ ಹಾಗೂ ಸೇವಾ ಮನೋಭಾವದಿಂದ ರಾಜಕೀಯ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು.

ಎಚ್.ಕೆ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುವ ಮೂಲಕ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಮೀದ್ ಮುಜಾವರ್, ಹೈದರಾಲಿ ಖವಾಸ, ಮುನ್ನಾ ಡಾಲಾಯತ್, ದಾವುದ ಜಮಾಲಸಾಬನವರ, ದಾವಲಸಾಬ, ಲಕ್ಷ್ಮೇಶ್ವರದ ಹಿರಿಯರಾದ ಹಸನಸಾಬ್ ಶೇಖ್, ಎ.ಎ. ಖಾಜಿ, ಲಾಲಾಶಪೀರ್ ಮಕಾಂದರ್, ಫಕೃಸಾಬ್ ಅಣ್ಣಿಗೇರಿ, ಖಲಂದರ್ ಗಾಡಿ, ಅಷ್ಪಾಕ್ ನದ್ದಿಮುಲ್ಲಾ, ಜೀಲಾನಿ ಶೇಖ್, ಮಕ್ತುಮಸಾಬ ನದಾಫ್, ಮಾಬುಲಿ ದುರ್ಗಿಗುಡಿ, ದಾವಲ್ ರಾಮಗಿರಿ, ಇಮಾಮಜಾಫರ್, ಲಾಡಸಾಬನವರ ಖಾನ್, ಲಾದಮ್ಮನವರ ಹುಸೇನ್, ಅಕ್ಕಿ ಜಾಫರ್, ಭದ್ರಾಪೂರ್ ಸೇರಿದಂತೆ ಶಾಲಾ ಮುಖ್ಯೋಪಾಧ್ಯಾಯರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ರಾಣಿ ಚೆನ್ನಮ್ಮ ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ದೇಸಾಯಿ ನಿಧನ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಣಿ ಚೆನ್ನಮ್ಮ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಗದುಗಿನ ಹಿರಿಯ ಸಾಮಾಜಿಕ ಧುರೀಣ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಲ್ಲಿಕಾರ್ಜುನ ಬಸಪ್ಪ ದೇಸಾಯಿ (80) ಅವರು ಶನಿವಾರ ಸಂಜೆ 4.30ಕ್ಕೆ ನಿಧನರಾದರು.

ಅಖಿಲ ಕರ್ನಾಟಕ ವೀರರಾಣಿ ಕಿತ್ತೂರು ಚೆನ್ನಮ್ಮ ಸರ್ವಧರ್ಮ ಸಮಾಜ ಸೇವಾ ಸಂಸ್ಥೆ (ರಿ.)ಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಎಂ.ಬಿ. ದೇಸಾಯಿ ಅವರು, ಗದಗ ಜಿಲ್ಲೆಯಾದ್ಯಂತ ಸಮಾಜ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಗದುಗಿನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ವಿಜಯೋತ್ಸವ ಆಚರಣೆ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮಳ ಕಂಚಿನ ಪುತ್ಥಳಿ ಸ್ಥಾಪನೆಗೆ ಮುಂದಾಳತ್ವ ವಹಿಸಿ ಹೋರಾಟ ನಡೆಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಆ.16ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಗೌರಿಬಿದನೂರು ಬಳಿ ಚಲಿಸುತ್ತಿದ್ದ KSRTC ಬಸ್‌ಗೆ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

0

ಚಿಕ್ಕಬಳ್ಳಾಪುರ: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸರ್ಕಾರಿ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಂ.ಗೊಲ್ಲಹಳ್ಳಿ ಗ್ರಾಮದ ಬಳಿ ನಡೆದಿದೆ.

ಗೌರಿಬಿದನೂರು ಕೆಎಸ್‌ಆರ್‌ಟಿಸಿ ಘಟಕಕ್ಕೆ ಸೇರಿದ ಬಸ್‌ ನಗರದಿಂದ ಮರಿಪಡಿಗು ಗ್ರಾಮದತ್ತ ತೆರಳುತ್ತಿತ್ತು. ಎಂ.ಗೊಲ್ಲಹಳ್ಳಿ ಗ್ರಾಮದ ಸಮೀಪ ಬರುತ್ತಿದ್ದ ವೇಳೆ ಬಸ್‌ನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಸಮಯಪ್ರಜ್ಞೆ ಮೆರೆದು ತಕ್ಷಣ ಬಸ್‌ ಅನ್ನು ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ಬಳಿಕ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಹೀಗಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ್ದು, ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ನೋಡನೋಡುತ್ತಿದ್ದಂತೆ ಬೆಂಕಿ ಬಸ್‌ನ ವಿವಿಧ ಭಾಗಗಳಿಗೆ ವ್ಯಾಪಿಸಿದ್ದು, ಬಹುತೇಕ ಬಸ್‌ ಸಂಪೂರ್ಣವಾಗಿ ಸುಟ್ಟುಹೋಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬಸ್‌ಗೆ ಭಾರೀ ಪ್ರಮಾಣದ ಹಾನಿಯಾಗಿತ್ತು.

ಘಟನೆಗೆ ನಿಖರ ಕಾರಣ ಏನು ಎಂಬುದರ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ತಾಂತ್ರಿಕ ಪರಿಶೀಲನೆ ಬಳಿಕ ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬರಬೇಕಿದೆ.

ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಸರ್ಕಾರಿ ಬಸ್‌ಗಳ ತಾಂತ್ರಿಕ ತಪಾಸಣೆ ಹಾಗೂ ನಿರ್ವಹಣೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.