ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಯೋಗೇಶ ದ್ಯಾಮಪ್ಪ ಕುರಹಟ್ಟಿ ಅವರು ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಮನವಿ ಸಲ್ಲಿಸಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಯೋಗೇಶ ಕುರಹಟ್ಟಿ ಅವರು ಹಿಂದಿ ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ, ಕಂದಾಯ ಇಲಾಖೆಯ ಇತರ ಎಲ್ಲಾ ಸಿಬ್ಬಂದಿಗೆ ವೇತನ ಪಾವತಿಯಾಗಿದ್ದರೂ, ತಮಗೆ ಮಾತ್ರ ಎರಡು ತಿಂಗಳಿಂದ ವೇತನ ನೀಡಿಲ್ಲ ಎಂದು ಉಲ್ಲೇಖಿಸಿದ್ದಾರೆ. ವೇತನ ಇಲ್ಲದ ಕಾರಣ ತಮ್ಮ ವೃದ್ಧ ತಾಯಿಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ಹೇಳಿದ್ದಾರೆ.
ಮುಂಡರಗಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಬಾಡಿಗೆಯನ್ನೂ ಕಟ್ಟಲು ಸಾಧ್ಯವಾಗಿಲ್ಲ. ದಿನಚರಿ ಸಲ್ಲಿಕೆ ಹಾಗೂ ಕಂದಾಯ ನಿರೀಕ್ಷಕರಿಗೆ ವರದಿ ನೀಡಿದ್ದರೂ ಸಹ ವೇತನ ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ.
“ನನ್ನ ಜವಾಬ್ದಾರಿ ನಿಭಾಯಿಸಲು ಆಗುತ್ತಿಲ್ಲ”
ಪತ್ರದಲ್ಲಿ ಅವರು, “ತಾಯಿಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲ. ವೇತನ ಇಲ್ಲದೆ ಬದುಕು ಬಹಳ ಕಷ್ಟಕರವಾಗಿದೆ. ನನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಆಗದ ಸ್ಥಿತಿಗೆ ತಲುಪಿದ್ದೇನೆ” ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಇಲಾಖೆಯ ಎಲ್ಲ ಉದ್ಯೋಗಿಗಳ ವೇತನ ಪಾವತಿಯಾಗಿದ್ದರೂ ತಮಗೆ ಮಾತ್ರ ವೇತನ ತಡೆಹಿಡಿಯಲಾಗಿದೆ ಎಂಬುದು ಅನುಮಾನಗಳಿಗೆ ಕಾರಣವಾಗಿದ್ದು, ಇದೀಗ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

