Home Blog Page 147

ದಶಕಗಳ ಕಾವೇರಿ ವಿವಾದಕ್ಕೆ ಹೊಸ ದಾರಿ? ಕರ್ನಾಟಕ, ತಮಿಳುನಾಡು ಸಿಎಂಗಳ ಮಹತ್ವದ ಮಾತುಕತೆ?

ಬೆಂಗಳೂರು: ಹಲವು ದಶಕಗಳಿಂದ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮುಂದುವರಿದಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಮೂಡಿದೆ.

ಕಾವೇರಿ ನೀರು ವಿವಾದ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನಡುವೆ ಮಾತುಕತೆ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಸಭೆ ನಡೆದರೆ, ಹಲವು ವರ್ಷಗಳ ಬಳಿಕ ಕಾವೇರಿ ಸೇರಿದಂತೆ ಉಭಯ ರಾಜ್ಯಗಳ ಪ್ರಮುಖ ವಿಚಾರಗಳ ಬಗ್ಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ನೇರವಾಗಿ ಚರ್ಚೆ ನಡೆಸಿದಂತಾಗಲಿದೆ.

ಮೂಲಗಳ ಪ್ರಕಾರ, ತಮಿಳುನಾಡು ಸರ್ಕಾರದಿಂದ ಸಭೆ ನಡೆಸುವ ಪ್ರಸ್ತಾವನೆ ಬಂದಿದ್ದು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಸ್ಟ್ 3ರಂದು ಬೆಂಗಳೂರಿನಲ್ಲಿ ಮಾತುಕತೆ ನಡೆಸುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಹ್ವಾನವನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಸ್ವೀಕರಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಯಾವೆಲ್ಲಾ ವಿಚಾರಗಳು ಚರ್ಚೆಗೆ ಬರಬಹುದು?

ಸಂಭಾವ್ಯ ಸಭೆಯಲ್ಲಿ ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆ, ಮಳೆ ಕೊರತೆಯ ಸಂದರ್ಭದಲ್ಲಿ ಕಾವೇರಿ ನೀರು ಹಂಚಿಕೆ ವ್ಯವಸ್ಥೆ, ಬೆಂಗಳೂರು–ಹೊಸೂರು ಮೆಟ್ರೋ ರೈಲು ಸಂಪರ್ಕ ಯೋಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇದೆ.

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ:

ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಒತ್ತು ನೀಡುತ್ತಿದ್ದು, ಈ ಯೋಜನೆಗೆ ತಮಿಳುನಾಡು ಹಲವು ವರ್ಷಗಳಿಂದ ವಿರೋಧ ವ್ಯಕ್ತಪಡಿಸುತ್ತಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲೂ ಎರಡೂ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ.

ಯಡಿಯೂರಪ್ಪ ಪ್ರಯತ್ನ ವಿಫಲವಾಗಿತ್ತು:

2021ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸುವಂತೆ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದರು. ಆದರೆ ಸ್ಟಾಲಿನ್ ಆ ಆಹ್ವಾನವನ್ನು ತಿರಸ್ಕರಿಸಿದ್ದರು.

ವಿಜಯ್ ನಿರ್ಧಾರದತ್ತ ಎಲ್ಲರ ಕಣ್ಣು:

ಇದುವರೆಗೆ ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ ಸರ್ಕಾರಗಳು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದೊಂದಿಗೆ ನೇರ ಮಾತುಕತೆಗೆ ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ಕಾವೇರಿ ವಿವಾದವನ್ನು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ಈಗಾಗಲೇ ಇತ್ಯರ್ಥಪಡಿಸಿವೆ ಎಂಬುದು ತಮಿಳುನಾಡಿನ ನಿಲುವಾಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಕರ್ನಾಟಕದ ಆಹ್ವಾನವನ್ನು ಒಪ್ಪಿಕೊಂಡರೆ, ಅದು ಕಾವೇರಿ ವಿವಾದದ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗುವ ಸಾಧ್ಯತೆ ಇದೆ. ಉಭಯ ರಾಜ್ಯಗಳ ಸಂಬಂಧದಲ್ಲಿ ಹೊಸ ಸಂವಾದಕ್ಕೆ ಇದು ದಾರಿ ಮಾಡಿಕೊಡಬಹುದೇ ಎಂಬ ಕುತೂಹಲ ಮೂಡಿದೆ.

ನೀಟ್ ವಿವಾದ: ಸರ್ಕಾರದ ಜೊತೆ ಮಾತುಕತೆಗೆ CJP ಸಿದ್ಧ; ಇಂದು ನಡೆಯಲಿದೆ ಮಹತ್ವದ ಸಭೆ!

0

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳ ನಡುವೆ ಇಂದು ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ.

ಸರ್ಕಾರದೊಂದಿಗೆ ತಟಸ್ಥ ಸ್ಥಳದಲ್ಲಿ ಚರ್ಚೆ ನಡೆಸುವಂತೆ ಸಿಜೆಪಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ, ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, “ಸರ್ಕಾರದೊಂದಿಗೆ ಚರ್ಚೆಗೆ ನಮ್ಮನ್ನು ಆಹ್ವಾನಿಸಲಾಗಿದೆ. ನಮ್ಮ ಮನವಿಯಂತೆ ತಟಸ್ಥ ಸ್ಥಳದಲ್ಲಿ ಸಭೆ ನಡೆಸಲು ಸರ್ಕಾರ ಒಪ್ಪಿಕೊಂಡಿರುವುದು ಸಂತಸ ತಂದಿದೆ. ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾವನ್ನು ಸಭೆಯ ಸ್ಥಳವಾಗಿ ಆಯ್ಕೆ ಮಾಡಲಾಗಿದೆ” ಎಂದು ಹೇಳಿದರು.

ಸಿಜೆಪಿ ವಕ್ತಾರೆ ವೈಷ್ಣವಿ ಗೌರ್ ಮಾತನಾಡಿ, “ನಾವು ಮೊದಲಿನಿಂದಲೂ ಮುಂದಿಟ್ಟಿರುವ ನಾಲ್ಕು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಿದ್ದೇವೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ, ನಿರಪರಾಧಿ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಚರ್ಚಿಸಲಾಗುವುದು” ಎಂದು ತಿಳಿಸಿದ್ದಾರೆ.

ಈ ಹಿಂದೆ ಜುಲೈ 20ರಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸರ್ಕಾರದ ಪರವಾಗಿ ಸಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಸಿಜೆಪಿ ಪ್ರತಿನಿಧಿಗಳಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ಜೆ.ಪಿ. ನಡ್ಡಾ ಅವರ ಅಧಿಕೃತ ನಿವಾಸದಲ್ಲಿ ಭೇಟಿ ನೀಡಿ ತಮ್ಮ ಬೇಡಿಕೆಗಳ ಪತ್ರವನ್ನು ಸಲ್ಲಿಸಿದ್ದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸೇರಿದಂತೆ ಹಲವು ವಿಚಾರಗಳನ್ನು ಖಂಡಿಸಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳ ನಡುವೆ ನಡೆಯುತ್ತಿರುವ ಈ ಸಭೆ ಮಹತ್ವ ಪಡೆದುಕೊಂಡಿದೆ. ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಚರ್ಚೆಯ ಫಲಿತಾಂಶದ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.

ಆಷಾಢ ಶುಕ್ರವಾರದ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಮೈಸೂರಿನ ತಾಯಿ ಚಾಮುಂಡಿ!

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿದೆ.

ಇಂದು ತಾಯಿ ಚಾಮುಂಡಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು, ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದಾರೆ.

ಆಷಾಢ ಶುಕ್ರವಾರದ ವಿಶೇಷ ಸಂದರ್ಭದಲ್ಲಿ ಚಾಮುಂಡಿ ದೇವಾಲಯವನ್ನು ವಿವಿಧ ಬಗೆಯ ಹೂವಿನ ಮಾಲೆಗಳಿಂದ ಅಲಂಕರಿಸಲಾಗಿದೆ. ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆಯುತ್ತಿದ್ದಾರೆ.

ಆಷಾಢ ಮಾಸದ ಮೊದಲ ಶುಕ್ರವಾರದಂದು ತಾಯಿ ಚಾಮುಂಡಿಗೆ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಇದೀಗ ಎರಡನೇ ಶುಕ್ರವಾರದಂದು ಲಕ್ಷ್ಮೀ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.

ಭಕ್ತರ ಹೆಚ್ಚಿನ ಸಂಖ್ಯೆಯ ಆಗಮನ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ವಿಶೇಷ ವ್ಯವಸ್ಥೆಗಳನ್ನು ಕೈಗೊಂಡಿದೆ. 2 ಸಾವಿರ ರೂಪಾಯಿ ಮೌಲ್ಯದ ವಿಶೇಷ ಟಿಕೆಟ್ ಪಡೆದ ಭಕ್ತರಿಗೆ ನೇರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿಐಪಿ ಭಕ್ತರಿಗೆ ಮುಂಜಾನೆ 5.30ರಿಂದ ಬೆಳಗ್ಗೆ 10 ಗಂಟೆಯವರೆಗೆ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದೆ.

ಕ್ಯಾಂಟರ್–ರಾಯಲ್ ಎನ್‌ಫೀಲ್ಡ್ ನಡುವೆ ಭೀಕರ ಡಿಕ್ಕಿ; ಇಬ್ಬರು ಯುವಕರು ಸ್ಥಳದಲ್ಲೇ ಸಾವು!

ಕೋಲಾರ: ಕ್ಯಾಂಟರ್ ವಾಹನ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದೇವಾಲಯಕ್ಕೆ ತೆರಳುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಗೇಟ್ ಸಮೀಪ ನಡೆದಿದೆ.

ಮೃತರನ್ನು ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದ ಶಶಿ (25) ಹಾಗೂ ಬೆಂಗಳೂರು ನೆಲಮಂಗಲ ಮೂಲದ ತನುಷ್ (25) ಎಂದು ಗುರುತಿಸಲಾಗಿದೆ.

ಇಬ್ಬರೂ ಶುಕ್ರವಾರ ಬೆಳಗ್ಗೆ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಆಂಧ್ರ ಪ್ರದೇಶದ ಕಾಣಿಪಾಕಂ ಗಣಪತಿ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ಕ್ಯಾಂಟರ್ ವಾಹನದೊಂದಿಗೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್‌ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಕುರಿತು ತನಿಖೆ ಮುಂದುವರಿದಿದೆ.

ನಂದಿನಿ ತುಪ್ಪ, ಬೆಣ್ಣೆ ದರ ಏರಿಕೆ; ಗ್ರಾಹಕರ ಜೇಬಿಗೆ ಮತ್ತೆ ಬಿತ್ತು ಹೊರೆ!

ಬೆಂಗಳೂರು: ರಾಜ್ಯದ ಗ್ರಾಹಕರಿಗೆ ಮತ್ತೊಂದು ದರ ಏರಿಕೆ ಬಿಸಿ ತಟ್ಟಿದೆ.

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಂದಿನಿ ಬ್ರ್ಯಾಂಡ್‌ನ ತುಪ್ಪ ಮತ್ತು ಬೆಣ್ಣೆ ದರವನ್ನು ಹೆಚ್ಚಳ ಮಾಡಿದ್ದು, ಪರಿಷ್ಕೃತ ದರಗಳು ನಾಳೆಯಿಂದ ಜಾರಿಗೆ ಬರಲಿವೆ.

ಹೊಸ ದರದ ಪ್ರಕಾರ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ ₹15 ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ ₹22 ಹೆಚ್ಚಳವಾಗಿದೆ. ಇದರಿಂದ ದಿನನಿತ್ಯದ ಬಳಕೆಯ ಹಾಲಿನ ಉತ್ಪನ್ನಗಳ ಖರೀದಿ ಗ್ರಾಹಕರಿಗೆ ಮತ್ತಷ್ಟು ದುಬಾರಿಯಾಗಲಿದೆ.

ಸದ್ಯ ನಂದಿನಿ ತುಪ್ಪ ಪ್ರತಿ ಕೆಜಿಗೆ ₹700 ದರದಲ್ಲಿದ್ದು, ನಾಳೆಯಿಂದ ₹715ಕ್ಕೆ ಮಾರಾಟವಾಗಲಿದೆ. ಇದೇ ವೇಳೆ ಬೆಣ್ಣೆಯ ದರದಲ್ಲೂ ಏರಿಕೆ ಮಾಡಲಾಗಿದ್ದು, ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕಾಗಿದೆ ಎಂದು ಕೆಎಂಎಫ್ ತಿಳಿಸಿದೆ.

ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವತಿಯಿಂದ ಈ ದರ ಪರಿಷ್ಕರಣೆ ಮಾಡಲಾಗಿದ್ದು, ರಾಜ್ಯದ ಎಲ್ಲಾ ಕೆಎಂಎಫ್ ಮಳಿಗೆಗಳಲ್ಲೂ ಹೊಸ ದರ ಅನ್ವಯವಾಗಲಿದೆ.

ಹಾಲು ಉತ್ಪನ್ನಗಳ ಬೆಲೆ ಏರಿಕೆಯ ಪರಿಣಾಮ ಕೇವಲ ಮನೆ ಬಳಕೆದಾರರಿಗಷ್ಟೇ ಸೀಮಿತವಾಗದೆ, ಹೋಟೆಲ್ ಹಾಗೂ ಆಹಾರ ಉದ್ಯಮದ ಮೇಲೂ ಬೀರುವ ಸಾಧ್ಯತೆ ಇದೆ. ತುಪ್ಪ ಮತ್ತು ಬೆಣ್ಣೆ ಬಳಕೆ ಮಾಡುವ ವ್ಯಾಪಾರಿಗಳಿಗೆ ಹೆಚ್ಚುವರಿ ವೆಚ್ಚದ ಹೊರೆ ಎದುರಾಗುವ ನಿರೀಕ್ಷೆ ಇದೆ.

ಕಚ್ಚಾ ವಸ್ತುಗಳ ಬೆಲೆ, ಉತ್ಪಾದನಾ ವೆಚ್ಚ ಹಾಗೂ ಮಾರುಕಟ್ಟೆ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ. ಆದರೆ ಸತತ ಬೆಲೆ ಏರಿಕೆಗಳಿಂದ ಗ್ರಾಹಕರ ಮಾಸಿಕ ಖರ್ಚಿನ ಮೇಲೂ ಪರಿಣಾಮ ಬೀರುವಂತಾಗಿದೆ.

ಕಾಫಿನಾಡಲ್ಲಿ ಮತ್ತೆ ಮಳೆ ಅಬ್ಬರ; ಕಳಸ ಬಸ್ ನಿಲ್ದಾಣಕ್ಕೆ ನುಗ್ಗಿದ ನೀರು!

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ಸುತ್ತಮುತ್ತ ಮತ್ತೆ ಮಳೆ ಚುರುಕು ಪಡೆದಿದೆ.

ಭಾರೀ ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದಿದ್ದು, ಕಳಸ ಬಸ್ ನಿಲ್ದಾಣಕ್ಕೂ ನೀರು ನುಗ್ಗಿದೆ.

ಬುಧವಾರದಿಂದ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಹಲವು ಕಡೆಗಳಲ್ಲಿ ಮಳೆ ನೀರಿನಿಂದ ಸಮಸ್ಯೆ ಎದುರಾಗಿದೆ. ಆದರೆ ಮಳೆಯ ಆಗಮನದಿಂದ ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ.

ಜುಲೈ ಕೊನೆಯ ಹಂತಕ್ಕೆ ಬಂದರೂ ಮಲೆನಾಡಿನ ಹಲವು ಕೆರೆ-ಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಆಗಸ್ಟ್ ತಿಂಗಳಲ್ಲಾದರೂ ಉತ್ತಮ ಮಳೆಯಾಗಲಿ ಎಂದು ರೈತರು ಹಾಗೂ ಗ್ರಾಮಸ್ಥರು ಕಾತರದಿಂದ ಆಕಾಶದತ್ತ ನೋಡುತ್ತಿದ್ದಾರೆ.

ಮಳೆಯ ಕೊರತೆಯಿಂದ ಆತಂಕದಲ್ಲಿದ್ದ ರೈತರಿಗೆ ಇದೀಗ ಸುರಿಯುತ್ತಿರುವ ಮಳೆ ಕೊಂಚ ನೆಮ್ಮದಿ ತಂದಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಮಲೆನಾಡಿನ ಜನರಿದ್ದಾರೆ.

“ಮನ್ ಕಿ ಬಾತ್ ಅಲ್ಲ, ಯುವಕರ ದಿಲ್ ಕಿ ಬಾತ್ ಕೇಳಿ”; ಕೇಂದ್ರಕ್ಕೆ AAP ನಾಯಕನ ತಿರುಗೇಟು!

0

ಗದಗ: ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಜಲಫಿರಂಗಿ ಹಾಗೂ ಆಶ್ರುವಾಯು ಪ್ರಯೋಗ ನಡೆಸಿರುವುದು ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಆಮ್ ಆದ್ಮಿ ಪಕ್ಷದ ಗದಗ ಜಿಲ್ಲಾಧ್ಯಕ್ಷ ಡಾ. ದಾದಾಪೀರ ಕಲೆಗಾರ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೀಟ್ ಪರೀಕ್ಷೆಯ ಅಕ್ರಮಗಳಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದು, ನ್ಯಾಯಯುತ ತನಿಖೆ ಮತ್ತು ಕ್ರಮಕ್ಕಾಗಿ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಬಲಪ್ರಯೋಗ ನಡೆಸಿರುವುದು ಖಂಡನೀಯ ಎಂದು ಹೇಳಿದರು.

ಚುನಾವಣೆಗೂ ಮುನ್ನ ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದು ಹಾಗೂ ಕಪ್ಪುಹಣವನ್ನು ದೇಶಕ್ಕೆ ತರುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಯುವ ಸಮುದಾಯದ ಸಮಸ್ಯೆಗಳನ್ನು ಆಲಿಸುವ ಬದಲು ದಮನಕಾರಿ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು.

“ಪ್ರಧಾನಿ ನರೇಂದ್ರ ಮೋದಿಯವರು ‘ಮನ್ ಕಿ ಬಾತ್’ ಮಾತ್ರವಲ್ಲ, ದೇಶದ ಯುವಕರ ‘ದಿಲ್ ಕಿ ಬಾತ್’ ಕೂಡ ಕೇಳಬೇಕು” ಎಂದು ಅವರು ಆಗ್ರಹಿಸಿದರು.

ನೀಟ್ ಪರೀಕ್ಷೆ ವಿವಾದ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮೂಡಿರುವ ಆತಂಕ ನಿವಾರಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಘಟನೆಯ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಪ್ರತಿಭಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಸಮರ್ಪಕ ಚಿಕಿತ್ಸೆ ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಡಾ. ದಾದಾಪೀರ ಕಲೆಗಾರ ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ‘ಮನ್ ಕಿ ಬಾತ್’ ಮಾತ್ರವಲ್ಲ, ದೇಶದ ಯುವಕರ ‘ದಿಲ್ ಕಿ ಬಾತ್’ ಕೂಡ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನೀಟ್ ವಿವಾದದಿಂದ ವಿದ್ಯಾರ್ಥಿಗಳಲ್ಲಿ ಮೂಡಿರುವ ಆತಂಕ ನಿವಾರಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಘಟನೆಯ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ಪ್ರತಿಭಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಗದಗ ಪೊಲೀಸರ ಖಡಕ್ ಆ್ಯಕ್ಷನ್; ನಾಲ್ವರು ಕುಖ್ಯಾತ ಆರೋಪಿಗಳಿಗೆ ಗಡಿಪಾರು ಶಿಕ್ಷೆ!

0

ಗದಗ: ವರ್ಷಗಳಿಂದ ಗಲಭೆ, ಜಾತಿ ನಿಂದನೆ, ಮಹಿಳೆಯರ ಮೇಲಿನ ದೌರ್ಜನ್ಯ, ಜೂಜಾಟ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಜೀವ ಬೆದರಿಕೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ನಾಲ್ವರು ಕುಖ್ಯಾತ ಆರೋಪಿಗಳ ವಿರುದ್ಧ ಗದಗ ಜಿಲ್ಲಾ ಪೊಲೀಸ್ ಇಲಾಖೆ ಖಡಕ್ ಕ್ರಮ ಕೈಗೊಂಡಿದೆ.

ಸಮಾಜದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಕಾರಣಕ್ಕೆ ನಾಲ್ವರು ಆರೋಪಿಗಳನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡುವಂತೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವರದಿ, ಆರೋಪಿಗಳ ಅಪರಾಧ ಹಿನ್ನೆಲೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸಮಾಜವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದೆ.

ಗಡಿಪಾರು ಆದ ಆರೋಪಿಗಳ ವಿವರ:

ಹರೀಶ ಮೀರಪ್ಪ ಹೊಸಮನಿ (ಗದಗ):
ಈತನ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ನಿಂದನೆ, ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ.

ಕ್ರೈಂ ನಂ. 51/2024ರಲ್ಲಿ ಐಪಿಸಿ ಕಲಂ 323, 354, 504, 506, 34 ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕ್ರೈಂ ನಂ. 10/2025ರಲ್ಲಿ ಬಿಎನ್‌ಎಸ್ ಕಲಂ 189(2), 191(1), 352, 351(1), 190 ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ನಾಗರಾಜ ಅಂದಪ್ಪ ಉಕ್ಕಲಿ (ಮುಂಡರಗಿ):
ಜೂಜಾಟವನ್ನೇ ದಂಧೆಯಾಗಿ ಮಾಡಿಕೊಂಡಿದ್ದ ಈತನ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 78(3) ಅಡಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಕ್ರೈಂ ನಂ. 31/2023, ಕ್ರೈಂ ನಂ. 167/2023 ಹಾಗೂ ಕ್ರೈಂ ನಂ. 186/2024ರಲ್ಲಿ ಪ್ರಕರಣಗಳು ದಾಖಲಾಗಿವೆ.

ಮುತ್ತಪ್ಪ ಹನುಮಂತಪ್ಪ ಲಕ್ಕಲಕಟ್ಟಿ (ಗಜೇಂದ್ರಗಡ):
ಗಲಭೆ, ಮಾರಾಮಾರಿ, ಅಪಾಯಕಾರಿ ಆಯುಧಗಳಿಂದ ಹಲ್ಲೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ದರೋಡೆ ಯತ್ನ, ವಂಚನೆ ಹಾಗೂ ಜೀವ ಬೆದರಿಕೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ.

ಕ್ರೈಂ ನಂ. 19/2012ರಲ್ಲಿ ಐಪಿಸಿ ಕಲಂ 143, 147, 148, 323, 326, 353, 504, 149 ಹಾಗೂ ಕರ್ನಾಟಕ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕ್ರೈಂ ನಂ. 146/2015ರಲ್ಲಿ ಐಪಿಸಿ ಕಲಂ 341, 393, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರೈಂ ನಂ. 19/2026ರಲ್ಲಿ ಬಿಎನ್‌ಎಸ್-2023ರ ಕಲಂ 318(3), 318(4), 319(2), 322, 336(2), 336(3), 340(2), 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿದಾನಂದ ವಿರೂಪಾಕ್ಷಪ್ಪ ಗೋಟೂರ (ಬೆಟಗೇರಿ):
ಜೂಜಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿದ್ದ ಈತನ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 78(3) ಅಡಿಯಲ್ಲಿ ಐದು ಪ್ರಕರಣಗಳು ದಾಖಲಾಗಿವೆ.

ಕ್ರೈಂ ನಂ. 96/2020, 17/2021, 73/2023, 101/2023 ಹಾಗೂ 23/2024ರಲ್ಲಿ ಪ್ರಕರಣಗಳು ದಾಖಲಾಗಿವೆ.

ಪೊಲೀಸರ ಖಡಕ್ ಸಂದೇಶ:

ಜಿಲ್ಲೆಯಲ್ಲಿ ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುವವರ ವಿರುದ್ಧ ಯಾವುದೇ ಮನ್ನಣೆ ನೀಡುವುದಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಮುಂದೆಯೂ ಇದೇ ರೀತಿಯ ಕಠಿಣ ಕ್ರಮ ಮುಂದುವರಿಸಲಾಗುವುದು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

“ಇದು ದ್ವಿಮುಖ ನೀತಿ” NEET ಪ್ರತಿಭಟನೆ ಕುರಿತು ರಾಹುಲ್ ಗಾಂಧಿ ವಿರುದ್ಧ ಜೋಶಿ ವಾಗ್ದಾಳಿ

0

ನವದೆಹಲಿ/ಬೆಂಗಳೂರು: NEET ಪರೀಕ್ಷೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಕೆಪಿಎಸ್ಸಿ ಅಕ್ರಮಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪರೀಕ್ಷೆಗಳ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು. NEET ವಿವಾದದ ಕುರಿತು ಸಂಸತ್ತಿನಲ್ಲಿ ಮುಕ್ತ ಹಾಗೂ ಸತ್ಯಾಧಾರಿತ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದ ಅವರು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.

“ಕರ್ನಾಟಕದಲ್ಲಿ KPSC ಬಗ್ಗೆ ರಾಹುಲ್ ಗಾಂಧಿ ಏಕೆ ಮೌನ?”

NEET ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದಲ್ಲಿ KPSC ಸಂಬಂಧಿತ ಆರೋಪಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಜೋಶಿ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಸುಮಾರು 2.7 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. KPSC ಅಧ್ಯಕ್ಷರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಈ ವಿಚಾರವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಆದರೂ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪರವಾಗಿ ಮಾತನಾಡಲಿಲ್ಲ ಎಂದು ಆರೋಪಿಸಿದರು.

NEET ಪ್ರಕರಣದಲ್ಲಿ ಸರ್ಕಾರದ ಕ್ರಮ ಸಮರ್ಥನೆ:

NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸರ್ಕಾರ ಯಾವುದೇ ನೆಪ ಹೇಳಿ ಹಿಂದೆ ಸರಿದಿಲ್ಲ. ಪ್ರಕರಣ ಸಂಬಂಧ ಈಗಾಗಲೇ 14 ಮಂದಿಯನ್ನು ಬಂಧಿಸಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಕಠಿಣ ಕಾನೂನು ಜಾರಿಗೆ ತರಲಾಗಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ಪರೀಕ್ಷಾ ಮಾಫಿಯಾಗೆ 10 ವರ್ಷ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸುವ ನಿಯಮಗಳನ್ನು ಜಾರಿಗೆ ತರಲಾಗಿದೆ. ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

“NEET ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆ ನಡೆಸಲಾಗಿದೆ”

ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯ ಬೆಳಕಿಗೆ ಬಂದ ತಕ್ಷಣ ಸರ್ಕಾರ NEET ಪರೀಕ್ಷೆಯನ್ನು ರದ್ದುಗೊಳಿಸಿ, ಬಳಿಕ ಪಾರದರ್ಶಕವಾಗಿ ಮರು ಪರೀಕ್ಷೆ ನಡೆಸಿದೆ. ಫಲಿತಾಂಶವನ್ನೂ ಶೀಘ್ರವಾಗಿ ಪ್ರಕಟಿಸಲಾಗಿದೆ ಎಂದು ಜೋಶಿ ಹೇಳಿದರು.

2014ರಿಂದ ನರೇಂದ್ರ ಮೋದಿ ಸರ್ಕಾರ ಯುವಕರಿಗೆ ಅರ್ಹತೆ ಆಧಾರದ ಮೇಲೆ ಅವಕಾಶ ಸಿಗುವಂತೆ ಕ್ರಮ ಕೈಗೊಂಡಿದೆ. ವೈದ್ಯಕೀಯ ಶಿಕ್ಷಣದಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಹಾಗೂ AIIMS ಸಂಸ್ಥೆಗಳ ಸಂಖ್ಯೆಯನ್ನೂ ವಿಸ್ತರಿಸಲಾಗಿದೆ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಮುಂದುವರಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.

ಬರ ನಿರ್ವಹಣೆಗೆ ಸರ್ಕಾರ ಸಂಪೂರ್ಣ ಸಜ್ಜು; ಶಾಸಕರಿಗೆ ₹1 ಕೋಟಿ, ಜಿಲ್ಲೆಗಳಿಗೆ ₹5 ಕೋಟಿ ಅನುದಾನ: ಡಿಸಿಎಂ ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದ್ದು, ಅಗತ್ಯ ಅನುದಾನದ ಕೊರತೆಯಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ನಿರ್ವಹಣೆಗೆ ಈಗಾಗಲೇ ಪ್ರತಿ ಶಾಸಕರಿಗೆ ₹1 ಕೋಟಿ ನೀಡಲು ಸರ್ಕಾರ ತೀರ್ಮಾನಿಸಿದೆ. ಜೊತೆಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ರಾಜ್ಯದ ಪ್ರತಿ ಜಿಲ್ಲೆಗೆ ₹5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಇದರೊಂದಿಗೆ ವಿವಿಧ ಪಿಡಿ (PD) ಖಾತೆಗಳಲ್ಲಿ ಈಗಾಗಲೇ ₹329 ಕೋಟಿ ಲಭ್ಯವಿದ್ದು, ಸರ್ಕಾರಕ್ಕೆ ಯಾವುದೇ ಹಣಕಾಸಿನ ಕೊರತೆಯಿಲ್ಲ. ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಡಿಸಿಎಂ ಪರಮೇಶ್ವರ್ ಮಾತನಾಡಿ, ಮೈಸೂರು ಹಾಗೂ ಬೆಂಗಳೂರು ವಿಭಾಗಗಳ ಬರ ಪರಿಸ್ಥಿತಿಯ ಪ್ರಗತಿ ಪರಿಶೀಲನೆ ಇನ್ನೂ ಬಾಕಿಯಿದೆ. ಜುಲೈ 25ರಂದು ಮುಖ್ಯಮಂತ್ರಿ ಅವರೊಂದಿಗೆ ಬೆಂಗಳೂರು ವಿಭಾಗದ ಪರಿಶೀಲನಾ ಸಭೆ ನಡೆಸಲಾಗುವುದು. ಬಳಿಕ ಮೈಸೂರು ವಿಭಾಗದಲ್ಲೂ ಸಭೆ ನಡೆಸಿ, ರಾಜ್ಯದ ಪರಿಸ್ಥಿತಿಯ ಸಮಗ್ರ ಚಿತ್ರಣ ಪಡೆದು ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೈತರು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಬರದಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಅವರು ಭರವಸೆ ನೀಡಿದರು.

ಉದ್ಯೋಗದ ಕೊರತೆಯಿಂದ ಗ್ರಾಮೀಣ ಪ್ರದೇಶದ ಜನರು ಗುಳೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಸಿಇಒ) ವಿಬಿ-ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ತಕ್ಷಣ ಉದ್ಯೋಗಾವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು. ಕಾಮಗಾರಿಗಳನ್ನು ಕೂಡಲೇ ಆರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರದ ನೆರವು ಕುರಿತು ಪ್ರತಿಕ್ರಿಯಿಸಿದ ಅವರು, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ನೆರವು ಕೋರಲಾಗಿದೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಮನವಿಯನ್ನು ಸ್ವೀಕರಿಸುವ ಸಾಧ್ಯತೆ ಇದ್ದು, ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದ ಬಳಿಕ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.