Home Blog Page 15

ರೌಡಿಶೀಟರ್ ಜೊತೆ ಸೇರಿ ಕೊಲೆ ಕೇಸ್ ಮುಚ್ಚಿಹಾಕಲು ಇನ್​ಸ್ಪೆಕ್ಟರ್ ಪ್ಲಾನ್ ಆರೋಪ

0

ಬೆಂಗಳೂರು: ವರ್ತೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಯೋಗಾನಂದ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ರೌಡಿಶೀಟರ್ ಗ್ಯಾಂಗ್ ಜೊತೆ ಶಾಮೀಲಾಗಿ ಕೊಲೆ ಪ್ರಕರಣದ ತನಿಖೆಗೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪದಡಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

2024ರ ಸೆಪ್ಟೆಂಬರ್ 18ರಂದು ತಮಿಳುನಾಡಿನ ಬಾಗಲೂರಿನಲ್ಲಿ ನಡೆದ ರೇವಂತ್ ಹತ್ಯೆ ಪ್ರಕರಣದಲ್ಲಿ ಈ ಆರೋಪಗಳು ಕೇಳಿಬಂದಿವೆ. 24 ವರ್ಷದ ಎಲ್ ಎಲ್ ಬಿ ವಿದ್ಯಾರ್ಥಿ ರೇವಂತ್ ಅವರನ್ನು ರೌಡಿಶೀಟರ್ ರೇವಾ ಮತ್ತು ಗ್ಯಾಂಗ್ ಸದಸ್ಯರು ಭೀಕರವಾಗಿ ಹತ್ಯೆ ಮಾಡಿದ್ದರು.

ರೇವಂತ್ ತನ್ನ ಸ್ನೇಹಿತ ಸ್ಟಾಲಿನ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ದೂರು ದಾಖಲಿಸಲು ಸಹಕರಿಸಿದ್ದ. ಇದರಿಂದ ಕೋಪಗೊಂಡ ರೌಡಿಶೀಟರ್ ಗ್ಯಾಂಗ್, ರಾಜಿ ಮಾತುಕತೆ ನೆಪದಲ್ಲಿ ಕರೆಸಿ ಚಿಕ್ಕಪ್ಪನ ಎದುರೇ ರೇವಂತ್ ಅನ್ನು ಹತ್ಯೆ ಮಾಡಿತ್ತು ಎಂದು ಆರೋಪಿಸಲಾಗಿದೆ.

ಪ್ರಕರಣವನ್ನು ತಮಿಳುನಾಡು ಪೊಲೀಸರು ವರ್ಗಾವಣೆ ಮಾಡಿದ ಬಳಿಕ ತನಿಖೆ ನಡೆಸಿದ ವರ್ತೂರು ಪೊಲೀಸರು 90 ದಿನಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಪರಿಣಾಮವಾಗಿ ಜೈಲಿನಲ್ಲಿದ್ದ ಏಳು ಆರೋಪಿಗಳು ಸುಲಭವಾಗಿ ಜಾಮೀನು ಪಡೆದು ಹೊರಬಂದಿದ್ದಾರೆ.

ಜಾಮೀನಿನ ಷರತ್ತಿನಂತೆ ರೇವಾ ಪ್ರತಿದಿನ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಿತ್ತು. ಆದರೆ, ಇನ್ಸ್‌ಪೆಕ್ಟರ್ ಪ್ರಭಾವದಿಂದ ಪೊಲೀಸರೇ ಅಪಾರ್ಟ್‌ಮೆಂಟ್‌ಗೆ ತೆರಳಿ ಸಹಿ ಪಡೆಯುತ್ತಿದ್ದಾರೆ ಎಂಬ ಆರೋಪ ಸಂತ್ರಸ್ತ ಕುಟುಂಬ ಮಾಡಿದೆ. ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ಶಾಕ್: ಮಾನನಷ್ಟ ಪ್ರಕರಣದಲ್ಲಿ ಹಿನ್ನಡೆ

0

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮಾನನಷ್ಟ ಪ್ರಕರಣದಲ್ಲಿ ಹಿನ್ನಡೆ ಉಂಟಾಗಿದೆ. ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ದಾಖಲಿಸಿದ್ದ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ರೂಪಾ ಮೌದ್ಗಿಲ್ ಅವರು, ರೋಹಿಣಿ ಸಿಂಧೂರಿ ಮಾಧ್ಯಮಗಳ ಮುಂದೆ ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ 7ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಈ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ರೋಹಿಣಿ ಸಿಂಧೂರಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.

ಇದಕ್ಕೂ ಮೊದಲು ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ನಂತರ ಪ್ರಕರಣ ಸುಪ್ರೀಂ ಕೋರ್ಟ್ ತನಕ ತೆರಳಿ, ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಲಾಗಿತ್ತು. 2023ರ ಫೆಬ್ರವರಿ 19ರಂದು ನೀಡಿದ ಹೇಳಿಕೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಆರೋಪಗಳಿವೆ ಎಂದು ರೂಪಾ ದೂರಿನಲ್ಲಿ ಉಲ್ಲೇಖಿಸಿದ್ದರು.

ಆ ಹೇಳಿಕೆಯನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ಸುಮಾರು 1.8 ಲಕ್ಷ ಮಂದಿ ವೀಕ್ಷಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹೇಳಿಕೆಯ ಪರಿಣಾಮವಾಗಿ ತಮಗೆ ವರ್ಗಾವಣೆ ಆಗಿದ್ದು, ಆರು ತಿಂಗಳ ಕಾಲ ಹುದ್ದೆ ರಹಿತ ಸ್ಥಿತಿ ಉಂಟಾಯಿತು ಹಾಗೂ ಕುಟುಂಬ ಸದಸ್ಯರು ಮಾನಸಿಕ ಯಾತನೆ ಅನುಭವಿಸಿದ್ದಾರೆ ಎಂದು ಆರೋಪಿಸಿ ಮಾನನಷ್ಟ ಪ್ರಕರಣ ದಾಖಲಿಸಲಾಗಿತ್ತು.

ಜಾತಿಧರ್ಮಗಳನ್ನು ಮೀರಿ ಮಾನವೀಯತೆಯಿಂದ ಸೇವೆ ಸಲ್ಲಿಸಿ: ಆರೋಗ್ಯ ಸಿಬ್ಬಂದಿಗೆ ಸಿಎಂ ಸಿದ್ದರಾಮಯ್ಯ ಕಿವಿ ಮಾತು

0

ಬೆಂಗಳೂರು: ವೈದ್ಯಕೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು. ಆರೋಗ್ಯ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಜಾತಿಧರ್ಮಗಳ ಬೇಧಗಳನ್ನು ಮೀರಿ,ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅಭಯ ಹಸ್ತ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ವೃಂದಗಳ ನೇಮಕಾತಿ ಆದೇಶಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜೀವ ಉಳಿಸುವ ಸಾರ್ಥಕ ವೃತ್ತಿ
ಇಂದು 1000 ಜನರಿಗೆ ನೇಮಕಾತಿ ಆದೇಶಗಳನ್ನು ಪಡೆದು ಆರೋಗ್ಯ ಇಲಾಖೆಗೆ ಸೇರ್ಪಡೆಯಾಗಿರುವುದು ಸಂತೋಷದ ವಿಷಯ. ಇದು ಕೇವಲ ವೃತ್ತಿಯಲ್ಲ, ಜೀವ ಉಳಿಸುವ ಹಾಗೂ ರೋಗ ತಡೆಯುವ ಸಾರ್ಥಕ ಕಾರ್ಯವನ್ನೊಳಗೊಂಡಿದೆ ಎಂದರು.

ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ
ನಮ್ಮ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಖಾಲಿ ಹುದ್ದೇಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದೆ. ನೇಮಕಾತಿಯಲ್ಲಿದ್ದ ಹಲವು ಸಮಸ್ಯೆಗಳನ್ನು ಬಗೆಹರಿಸಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದ್ದು,

ಇಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡುತ್ತದೆ. 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿದ್ದು, ಇವುಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದರು.

ಭ್ರಷ್ಠಾಚಾರ ತಡೆಯಲು ಕೌನ್ಸೆಲಿಂಗ್ ಪ್ರಕ್ರಿಯೆ
ಈ ಎಲ್ಲ ನೇಮಕಾತಿಗಳನ್ನು ಕೌನ್ಸೆಲಿಂಗ್ ಮೂಲಕ ಮಾಡುತ್ತಿದ್ದು, ಭ್ರಷ್ಠಚಾರ ತಡೆಯಲು ಸಾಧ್ಯವಾಗುತ್ತಿದೆ. 5700 ಹುದ್ದೆಗಳನ್ನು ವೈದ್ಯರನ್ನು ಸೇರಿದಂತೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಠಾಚಾರವನ್ನು ತಡೆಯುವುದು ಸರ್ಕಾರದ ಆಶಯ. ವರ್ಗಾವಣೆ ಏಜೆಂಟ್ ಗಳ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ನೌಕರರು ಇದಕ್ಕೆ ಬಲಿಯಾಗಬಾರದು ಎಂದರು.

ರೋಗತಡೆಗಟ್ಟುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು
ವೈದ್ಯಕೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು. ಆರೋಗ್ಯ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಜಾತಿಧರ್ಮಗಳ ಬೇಧಗಳನ್ನು ಮೀರಿ,ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಮುಖ್ಯ. ರೋಗಿಗಳಿಗೆ ಚಿಕಿತ್ಸೆಯ ಸಂದರ್ಭದಲ್ಲಿ ಬೇಕಾಗುವ ರಕ್ತವನ್ನು ಪಡೆಯಲು ಯಾವುದೇ ಜಾತಿಧರ್ಮಗಳನ್ನು ಪರಿಗಣಿಸುವುದಿಲ್ಲ.

ಆದರೆ ಜನರು ಗುಣಮುಖರಾದಂತಹ ತಕ್ಷಣ ಪುನ: ಜಾತಿಧರ್ಮಗಳ ಸುಳಿಯಲ್ಲಿ ಬೀಳುತ್ತಾರೆ. ರೋಗ ತಡೆಗಟ್ಟುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ದಿಸೆಯಲ್ಲಿ ಆರೋಗ್ಯ ಇಲಾಖೆ ಕಾರ್ಯತತ್ಪರರಾಗಬೇಕು. ರಾಜ್ಯದ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಸರ್ಕಾರ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಎರಡು ಸಮುದಾಯದ ನಡುವೆ ಉದ್ವಿಗ್ನತೆ

0

ಕಲಬುರಗಿ: ಜಿಲ್ಲೆಯ ರಾವೂರ್ ಗ್ರಾಮದಲ್ಲಿ ಶಿವಾಜಿ ಜಯಂತಿ ಆಚರಣೆ ವೇಳೆ ಉದ್ವಿಗ್ನತೆ ತಲೆದೋರಿದ್ದು, ಎರಡು ಸಮುದಾಯಗಳ ನಡುವೆ ಗುದ್ದಾಟ ನಡೆದಿದೆ.

ಗೋಕುಲ ನಗರದಲ್ಲಿನ ಗಣೇಶ್ ಕಟ್ಟೆಯ ಮೇಲೆ ಶಿವಾಜಿ ಮಹಾರಾಜರ ಭಾವಚಿತ್ರ ಇಟ್ಟು ಸಂಭ್ರಮಾಚರಣೆ ನಡೆಯುತ್ತಿತ್ತು. ಡಿಜೆ ಸೌಂಡ್‌ ಜೋರಾಗಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ. ಮಾತಿನ ಚಕಮಕಿ ಕಲ್ಲು-ಕಟ್ಟಿಗೆ ದಾಳಿಗೆ ತಿರುಗಿ, ಮೂರ್ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಘಟನೆ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಬಳಿಕ ಹಿರಿಯರ ಮಧ್ಯಸ್ಥಿಕೆಯಲ್ಲಿ ಎರಡು ಸಮುದಾಯಗಳ ನಡುವೆ ಸಂಧಾನ ನಡೆದಿದ್ದು, ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

ಘಟನೆ ಗ್ರಾಮದಲ್ಲಿ ಕ್ಷಣಿಕ ಉದ್ವಿಗ್ನತೆಯನ್ನು ಉಂಟುಮಾಡಿದರೂ, ಇದೀಗ ಪರಿಸ್ಥಿತಿ ಶಾಂತಿಯುತವಾಗಿದೆ.

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್‌ಗೆ ಫೆ.26ರವರೆಗೆ ನ್ಯಾಯಾಂಗ ಬಂಧನ

0

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರನ್ನು ಫೆ.26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ಕೋರ್ಟ್ ಆದೇಶ ಹೊರಡಿಸಿದೆ.

ಸಿಐಡಿ ಅಧಿಕಾರಿಗಳು ಬೈರತಿ ಬಸವರಾಜ್ ಅವರನ್ನು ಬಂಧಿಸಿ 7 ದಿನಗಳ ಕಾಲ ಕಸ್ಟಡಿಯಲ್ಲಿ ವಿಚಾರಣೆ ನಡೆಸಿ, ಇಂದು 42ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ವಿಚಾರಣೆ ವೇಳೆ ಬೈರತಿ ಬಸವರಾಜ್ ಪರ ವಕೀಲರು, ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸೋಮವಾರದವರೆಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ಸಿಐಡಿ ಪರ ವಕೀಲ ಅಶೋಕ್ ನಾಯಕ್ ವಾದ ಮಂಡಿಸಿ, ಜಯದೇವ ಆಸ್ಪತ್ರೆ ವರದಿಯಲ್ಲಿ ಗಂಭೀರ ಸಮಸ್ಯೆ ಇಲ್ಲವೆಂದು ಉಲ್ಲೇಖಿಸಲಾಗಿದೆ. ಆದ್ದರಿಂದ ಜೈಲಿನಲ್ಲಿಯೇ ಅಗತ್ಯ ಚಿಕಿತ್ಸೆ ನೀಡಬಹುದು ಎಂದು ಕೋರ್ಟ್‌ಗೆ ತಿಳಿಸಿದರು.

ಕೋರ್ಟ್ ಆದೇಶದಂತೆ ಬೈರತಿ ಬಸವರಾಜ್ ಅವರನ್ನು ಫೆ.26ರವರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಜೊತೆಗೆ ಜಯದೇವ ಆಸ್ಪತ್ರೆ ಸೂಚಿಸಿದ ಆಹಾರ ಕ್ರಮವನ್ನು ಜೈಲಿನಲ್ಲಿ ಮುಂದುವರಿಸಲು ನ್ಯಾಯಾಲಯ ಸೂಚನೆ ನೀಡಿದೆ.

ಚಾಕೊಲೇಟ್ ಆಸೆ ತೋರಿಸಿ ಮೂವರು ಅಪ್ರಾಪ್ತೆಯರಿಗೆ ಕಿರುಕುಳ: 64 ವರ್ಷದ ವೃದ್ಧ ಬಂಧನ

0

ಬೆಂಗಳೂರು: ಚಾಕೊಲೇಟ್ ಆಸೆ ತೋರಿಸಿ ಮೂವರು ಅಪ್ರಾಪ್ತೆಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ 64 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೋಷಕರು ಬೆಳಗ್ಗೆ 8:30ಕ್ಕೆ ಮಕ್ಕಳನ್ನು ಶಾಲೆಗೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಶಾಲೆ 10 ಗಂಟೆಗೆ ಆರಂಭವಾಗುತ್ತಿದ್ದರೂ, ಮಕ್ಕಳು ಮುಂಚಿತವಾಗಿಯೇ ಶಾಲೆ ಸಮೀಪ ಬರುತ್ತಿರುವುದನ್ನು ಗಮನಿಸಿದ್ದ ವೃದ್ಧ, ಚಾಕೊಲೇಟ್ ನೀಡಿ ಆಮಿಷವಿಟ್ಟು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಶುಕ್ರವಾರ ಎರಡನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಬಳಿಕ ಆಕೆ ಮನೆಯಲ್ಲಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ನಂತರ ವಿಚಾರಣೆ ನಡೆಸಿದಾಗ ಮೂವರು ಬಾಲಕಿಯರಿಗೆ ಕಿರುಕುಳ ನೀಡಿರುವುದು ಬಹಿರಂಗವಾಗಿದೆ.

ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಮಕ್ಕಳ ಸುರಕ್ಷತೆ ಕುರಿತು ಪೋಷಕರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಅನಧಿಕೃತ ಪಾರ್ಟಿಗಳಿಗೆ ಬ್ರೇಕ್ ಹಾಕಲು ಪೊಲೀಸ್ ದಾಳಿ – ರೆಸಾರ್ಟ್ ಮಾಲೀಕರ ವಿರುದ್ಧ ಕಠಿಣ ಕ್ರಮ

0

ಕೊಪ್ಪಳ: ಜಿಲ್ಲೆಯಲ್ಲಿ ವಿದೇಶಿಗರ ಅಕ್ರಮ ಪಾರ್ಟಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಗಂಗಾವತಿ ಸಮೀಪದ ತುಂಗಭದ್ರಾ ನದಿ ತೀರದಲ್ಲಿ ಫೆಬ್ರವರಿ 16ರಂದು ನಡೆದ ಪಾರ್ಟಿಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಲಾಗಿದೆ.

ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿಜೆ ವ್ಯವಸ್ಥೆ ಮಾಡಿ, ತೆರೆದ ಜಾಗದಲ್ಲಿ ಪಾರ್ಟಿ ನಡೆಸಲಾಗಿದೆ. ‘ದಿ ಹಂಪಿ ಕೆಫೆ’ ರೆಸಾರ್ಟ್ ಮಾಲೀಕ ಪಿಯೂಷ್ ಹಾಗೂ ವ್ಯವಸ್ಥಾಪಕರ ವಿರುದ್ಧ ಕೆಪಿ ಕಾಯ್ದೆಯಡಿ ಕೇಸ್ ದಾಖಲಾಗಿದೆ.

ಎಸ್‌ಪಿ ರಾಮ್ ಅರಸಿದ್ದಿ ನೇತೃತ್ವದಲ್ಲಿ ತನಿಖೆ ವೇಗ ಪಡೆದುಕೊಂಡಿದ್ದು, ವಿಶೇಷ ತಂಡ ರಚಿಸಿ ಭಾಗವಹಿಸಿದ್ದವರ ವಿವರ ಸಂಗ್ರಹಿಸಲಾಗುತ್ತಿದೆ. ಜಿಲ್ಲಾಡಳಿತವೂ ಟಾಸ್ಕ್ ಫೋರ್ಸ್ ರಚಿಸಿ ಪರಿಶೀಲನೆ ಆರಂಭಿಸಿದೆ.

ದೂರುಗಳ ನಡುವೆಯೂ ಅನಧಿಕೃತ ಪಾರ್ಟಿಗಳು ಮರುಕಳಿಸುತ್ತಿರುವುದು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ.

ದಾಳಿಗೆ ಸಂಚು! ದೆಹಲಿಯಲ್ಲಿ ಹೈ ಅಲರ್ಟ್ – ಕೆಂಪು ಕೋಟೆ, ಪ್ರಮುಖ ಧಾರ್ಮಿಕ ತಾಣಗಳಲ್ಲಿ ಬಿಗಿ ಭದ್ರತೆ

0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಮತ್ತು ಪಾರಂಪರಿಕ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಭಯೋತ್ಪಾದಕ ದಾಳಿ ಸಂಭವಿಸುವ ಸಾಧ್ಯತೆ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಂಚು ರೂಪಿಸಿದೆ ಎನ್ನಲಾಗಿದೆ. ಐಇಡಿ ದಾಳಿ ಸಾಧ್ಯತೆ ಕುರಿತು ಎಚ್ಚರಿಕೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಕೆಂಪು ಕೋಟೆ ಸುತ್ತಮುತ್ತ, ಚಾಂದಿನಿ ಚೌಕ್ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ವಿಶೇಷವಾಗಿ ದೇವಸ್ಥಾನಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಗುಪ್ತಚರ ಇಲಾಖೆ ಮಾಹಿತಿ ಪರಿಶೀಲನೆ ನಡೆಸುತ್ತಿದ್ದು, ಕೇಂದ್ರ ಸಂಸ್ಥೆಗಳು ಮತ್ತು ದೆಹಲಿ ಪೊಲೀಸರು ನಿಕಟ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ, ವಾಹನ ತಪಾಸಣೆ, ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಹಾಗೂ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕಪಡದೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕೊಲೆ ಶಂಕೆಯಿಂದ ಕುಟುಂಬ ಮಿಲನದವರೆಗೆ: ಹಾಸನದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಅಂತ್ಯ

0

ಹಾಸನ: ಹಾಸನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಅಂತಿಮವಾಗಿ ಕುಟುಂಬ ಮಿಲನದ ತಿರುವು ಸಿಕ್ಕಿದೆ. ಪ್ರಿಯಾಂಕ ನಾಪತ್ತೆಯಾಗಿದ್ದ ವೇಳೆ ಕಲ್ಕೆರೆ ಕೆರೆ ಬಳಿ ಆಕೆಯ ವಸ್ತುಗಳು ಪತ್ತೆಯಾಗಿದ್ದರಿಂದ ಕೊಲೆ ಶಂಕೆ ಉಂಟಾಗಿತ್ತು.

ಆದರೆ ತನಿಖೆಯಲ್ಲಿ ಆಕೆ ಪ್ರಿಯಕರ ಡೇವಿಡ್ ಜೊತೆ ತೆರಳಿ ನಾಟಕೀಯ ಸನ್ನಿವೇಶ ಸೃಷ್ಟಿಸಿದ್ದುದು ಬೆಳಕಿಗೆ ಬಂತು. ಡೇವಿಡ್ ವಾಸವಿದ್ದ ಮನೆಯಲ್ಲಿ ಆಕೆ ಜೀವಂತವಾಗಿ ಪತ್ತೆಯಾದಳು.

ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಾಂತ್ವಾನ ಕೇಂದ್ರದಲ್ಲಿ ಪತಿ ರುದ್ರೇಶ್ ಹಾಗೂ ಪ್ರಿಯಾಂಕ ನಡುವೆ ಮುಕ್ತ ಮಾತುಕತೆ ನಡೆಯಿತು. ಮೊದಲಿಗೆ ಗಂಡನ ಜೊತೆ ಹೋಗಲು ನಿರಾಕರಿಸಿದ್ದ ಪ್ರಿಯಾಂಕ, ನಂತರ ತನ್ನ ತಪ್ಪಿನ ಅರಿವಿನಿಂದ ಕುಟುಂಬದ ಹಿತದೃಷ್ಟಿಯಿಂದ ಗಂಡನ ಜೊತೆ ಬದುಕಲು ಒಪ್ಪಿಗೆ ನೀಡಿದ್ದಾಳೆ.

ಕುಟುಂಬ ಮೌಲ್ಯಗಳಿಗೆ ಆದ್ಯತೆ ನೀಡಿದ ನಿರ್ಧಾರದಿಂದ ಸಂಚಲನ ಮೂಡಿಸಿದ್ದ ಪ್ರಕರಣಕ್ಕೆ ಕೊನೆಗೂ ತೆರೆಬಿದ್ದಿದೆ.

2023ರ ಗ್ರೆನೇಡ್ ಪತ್ತೆ ಪ್ರಕರಣ: ಮೋಸ್ಟ್ ವಾಂಟೆಡ್ ಶಂಕಿತ ಉಗ್ರ NIA ಬಲೆಗೆ!

0

ಬೆಂಗಳೂರು: 2023ರ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ್ಟ್ ವಾಂಟೆಡ್ ಶಂಕಿತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಅರ್ಷದ್ ಖಾನ್ ಎಂದು ಗುರುತಿಸಲಾಗಿದೆ. ಈತ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ರೂವಾರಿ ಜುನೈದ್ ಅಹ್ಮದ್‌ನ ಆಪ್ತ ಸ್ನೇಹಿತನಾಗಿದ್ದಾನೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಈ ಹಿಂದೆ ಸಿಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅರ್ಷದ್ ಖಾನ್‌ನ್ನು ಶಂಕೆ ಮೇರೆಗೆ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದನು. ಪ್ರಕರಣ ಎನ್‌ಐಎಗೆ ವರ್ಗಾವಣೆಯಾದ ಬಳಿಕ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಪರಿಣಾಮವಾಗಿ ಶಂಕಿತನ ವಿರುದ್ಧ ಪ್ರೊಕ್ಲಮೇಷನ್ ಜಾರಿಗೊಳಿಸಲಾಗಿತ್ತು.

ಇದೀಗ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ರೂವಾರಿ ಜುನೈದ್ ಅಹ್ಮದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಬಂಧಿತ ಅರ್ಷದ್ ಖಾನ್‌ನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

error: Content is protected !!