Home Blog Page 14

ನರೇಗಾಗೆ ಗುಡ್‌ಬೈ..! ವಿಬಿ-ಜಿ ರಾಮ್ (ಜಿ)ಗೆ ಗದಗ ಜಿಲ್ಲೆ ಸಜ್ಜು

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಭದ್ರತೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ವಿಬಿ-ಜಿ ರಾಮ್ (ಜಿ) – ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ ಯೋಜನೆಗೆ ಗದಗ ಜಿಲ್ಲೆಯಲ್ಲಿ ಭರದ ಸಿದ್ಧತೆ ಆರಂಭವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಗೆ ಪರ್ಯಾಯವಾಗಿ ಜಾರಿಯಾಗುತ್ತಿರುವ ಈ ಯೋಜನೆ ಗ್ರಾಮೀಣ ಕಾರ್ಮಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಜಿಲ್ಲೆಯಲ್ಲಿ ಇದುವರೆಗೆ ನರೇಗಾ ಯೋಜನೆಯಡಿ ಸುಮಾರು 1.63 ಲಕ್ಷ ಕುಟುಂಬಗಳು ನೋಂದಾಯಿಸಿಕೊಂಡಿದ್ದು, ಅವುಗಳಲ್ಲಿ 1.13 ಲಕ್ಷ ಕುಟುಂಬಗಳು ಸಕ್ರಿಯವಾಗಿವೆ. ಆರಂಭಿಕ ಹಂತದಲ್ಲಿ ಈ ಸಕ್ರಿಯ ಕಾರ್ಮಿಕರಿಗೆ ಈಗಿರುವ ಜಾಬ್ ಕಾರ್ಡ್‌ಗಳ ಆಧಾರದಲ್ಲೇ ಕೆಲಸ ನೀಡಲಾಗುತ್ತದೆ. ಬಳಿಕ ಎಲ್ಲ ಅರ್ಹ ಕಾರ್ಮಿಕರಿಗೆ ‘ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್’ ವಿತರಿಸಲಾಗುತ್ತದೆ. ಇದುವರೆಗೆ ಯಾವುದೇ ಯೋಜನೆಯಲ್ಲಿ ನೋಂದಣಿಯಾಗದ ಗ್ರಾಮೀಣ ಕಾರ್ಮಿಕರು ಹಾಗೂ ಯುವಕರಿಗೂ ಹೊಸದಾಗಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ ಏಳು ತಾಲೂಕುಗಳ 122 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಯನ್ನು ಏಕಕಾಲದಲ್ಲಿ ಜಾರಿಗೊಳಿಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ. ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಆಯುಕ್ತಾಲಯದ ಮಾರ್ಗಸೂಚಿಯಂತೆ ಕ್ರಿಯಾ ಯೋಜನೆ ರೂಪಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ ₹382 ಕೂಲಿ ನಿಗದಿಯಾಗಿದ್ದು, ಇದು ಹಿಂದಿನ ಕೂಲಿಗಿಂತ ಹೆಚ್ಚಾಗಿದೆ. ಗ್ರಾಮದಲ್ಲಿಯೇ ಉದ್ಯೋಗ ಲಭ್ಯವಾಗುವುದರಿಂದ ಕೆಲಸಕ್ಕಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ.

ಹೊಸ ಯೋಜನೆಯಡಿ ಜಲ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಅಭಿವೃದ್ಧಿ, ಹವಾಮಾನ ಬದಲಾವಣೆಗೆ ಹೊಂದಿಕೊಂಡ ಕಾಮಗಾರಿಗಳು ಸೇರಿದಂತೆ 318 ಮಾದರಿಯ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮಸಭೆಯಲ್ಲಿ ಸಿದ್ಧವಾಗುವ ‘ವಿಕಸಿತ ಗ್ರಾಮ ಪಂಚಾಯಿತಿ ಪ್ಲಾನ್’ ಆಧಾರವಾಗಿ ಶಾಲೆ, ಅಂಗನವಾಡಿ, ಆಸ್ಪತ್ರೆ, ಹಾಲು ಉತ್ಪಾದಕರ ಡೈರಿ, ಧಾನ್ಯ ಸಂಗ್ರಹಣಾ ಘಟಕ, ಗ್ರಂಥಾಲಯ, ಸಮುದಾಯ ಗೋದಾಮು ಹಾಗೂ ಕಲ್ಯಾಣ ಮಂಟಪ ಸೇರಿದಂತೆ ಹಲವು ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಅನುದಾನ ನೀಡಲಿದ್ದು, ಯೋಜನೆ ಜಾರಿಯಾದ ಬಳಿಕ ಗ್ರಾಮೀಣ ಉದ್ಯೋಗ ಸೃಷ್ಟಿಯ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಹೊಸ ವೇಗ ಸಿಗುವ ನಿರೀಕ್ಷೆಯಿದೆ.

“ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಎಲ್ಲ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸುವ ಕೆಲಸ ನಡೆಯುತ್ತಿದ್ದು, ಸ್ಥಳೀಯ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸುವ ಗುರಿ ಹೊಂದಿದ್ದೇವೆ.”

– ಸಿ.ಆರ್. ಮುಂಡರಗಿ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಗದಗ

ರೈತನ ಕಣ್ಣೀರಿಗೆ ಕೊನೆಯೇ ಇಲ್ಲ!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಒಂದು ಕಡೆ ಮುಂಗಾರು ಮಳೆ ಕೈಕೊಟ್ಟು ಬೆಳೆ ಒಣಗುವ ಆತಂಕ, ಮತ್ತೊಂದೆಡೆ ಜಿಂಕೆಗಳ ಹಾವಳಿ, ಈಗ ಕುರಿಗಳ ಹಿಂಡಿನಿಂದಲೇ ಬೆಳೆ ಸಂಪೂರ್ಣ ನಾಶ. ಇಂತಹ ದುಸ್ಥಿತಿ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ರೈತನನ್ನು ಕಂಗಾಲಾಗಿಸಿದೆ.

ಗ್ರಾಮದ ರೈತ ಪ್ರಭುರಾಜ ರೇಣುಕಮಠ ಅವರು ಜಿಗಳೂರ ಗ್ರಾಮದ ಸರಹದ್ದಿನಲ್ಲಿರುವ ತಮ್ಮ ಒಂದು ಎಕರೆ ಜಮೀನಿನಲ್ಲಿ ಹೆಸರು ಬೆಳೆ ಬೆಳೆದಿದ್ದರು. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಕುರಿಗಳ ಹಿಂಡು ಹೊಲಕ್ಕೆ ನುಗ್ಗಿ ಇಡೀ ಬೆಳೆ ಮೇಯ್ದು ಹಾಕಿದ್ದು, ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಈ ವರ್ಷ ಮಳೆಯ ಕೊರತೆಯಿಂದಲೇ ರೈತರು ಸಂಕಷ್ಟದಲ್ಲಿದ್ದಾರೆ. ಸಾಲ-ಸೂಲ ಮಾಡಿ ಬಿತ್ತನೆ ನಡೆಸಿದ ಬೆಳೆಗಳು ಮಳೆ ಇಲ್ಲದೆ ಒಣಗುವ ಹಂತ ತಲುಪಿವೆ. ಇದರ ನಡುವೆ ಕುರಿಗಳಿಂದ ಬೆಳೆ ಹಾನಿಯಾಗಿರುವುದು ರೈತನ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ಜಕ್ಕಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮೀನುಗಳು ಗ್ರಾಮದಿಂದ 6ರಿಂದ 8 ಕಿಲೋಮೀಟರ್ ದೂರದಲ್ಲಿರುವುದರಿಂದ ಹೊರ ಜಿಲ್ಲೆಗಳಿಂದ ಬರುವ ಕುರಿಗಾಹಿಗಳು ಈ ಭಾಗದಲ್ಲಿ ಕುರಿ ಮೇಯಿಸುತ್ತಾರೆ. ಇದರಿಂದ ಕೃಷಿ ಜಮೀನುಗಳಿಗೆ ಆಗಾಗ ಹಾನಿಯಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಜಿಂಕೆಗಳ ಹಾವಳಿಯೂ ಹೆಚ್ಚಾಗಿದ್ದು, ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದು ತಿಳಿಸಿದ್ದಾರೆ.

ಕುರಿಗಾರರು ಬೆಳೆ ಇರುವ ಜಮೀನುಗಳಿಗೆ ಕುರಿಗಳನ್ನು ನುಗ್ಗಿಸದಂತೆ ಎಚ್ಚರಿಕೆ ವಹಿಸಬೇಕು. ರೈತರ ಶ್ರಮಕ್ಕೆ ಗೌರವ ನೀಡಿ ಜಾನುವಾರುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಬೆಳೆ ಹಾನಿಯಿಂದ ಉಂಟಾದ ನಷ್ಟಕ್ಕೆ ಸಂಬಂಧಿಸಿದ ಇಲಾಖೆ ಪರಿಹಾರ ಒದಗಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ರೈತ ಪ್ರಭುರಾಜ ರೇಣುಕಮಠ ಆಗ್ರಹಿಸಿದ್ದಾರೆ.

“ತಿಂಗಳುಗಟ್ಟಲೆ ಶ್ರಮಪಟ್ಟು ಬೆಳೆದ ಹೆಸರು ಬೆಳೆ ಕೆಲವೇ ನಿಮಿಷಗಳಲ್ಲಿ ಕುರಿಗಳು ಮೇಯ್ದು ಹಾಕಿವೆ. ಒಂದು ಕಡೆ ಮಳೆ ಇಲ್ಲ, ಮತ್ತೊಂದು ಕಡೆ ವನ್ಯಜೀವಿಗಳ ಹಾವಳಿ, ಈಗ ಕುರಿಗಳ ಕಾಟ. ರೈತ ಬದುಕುವುದಾದರೂ ಹೇಗೆ?”

– ಪ್ರಭುರಾಜ ರೇಣುಕಮಠ, ರೈತ

ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ: ರೈತರಿಗೆ ಶಾಸಕ ಡಾ. ಚಂದ್ರು ಲಮಾಣಿ ಹೊಸ ಸಂದೇಶ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಆಧುನಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪರಿಚಯಿಸಿರುವ ನ್ಯಾನೋ ಯೂರಿಯಾ ಗೊಬ್ಬರದ ಸಮರ್ಪಕ ಬಳಕೆಯಿಂದ ರೈತರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ತಾಲೂಕಿನ ಸೂರಣಗಿ ಗ್ರಾಮದ ವಿಎಸ್‌ಎಸ್ ಬ್ಯಾಂಕ್ ವತಿಯಿಂದ ರೈತ ಬಸವರಾಜ ಸಾಸಲವಾಡ ಅವರ ಜೋಳದ ಹೊಲದಲ್ಲಿ ಆಯೋಜಿಸಿದ್ದ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಂಪ್ರದಾಯಿಕ ಹರಳು ರೂಪದ ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾವನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದು, ಕಡಿಮೆ ಪ್ರಮಾಣದಲ್ಲಿಯೇ ಉತ್ತಮ ಫಲಿತಾಂಶ ನೀಡುವ ಸಾಮರ್ಥ್ಯ ಇದಕ್ಕಿದೆ. ಇದರಿಂದ ಗೊಬ್ಬರ ಬಳಕೆ ಕಡಿಮೆಯಾಗುವುದರ ಜೊತೆಗೆ ಸಾಗಣೆ ಮತ್ತು ಸಿಂಪರಣೆ ಸುಲಭವಾಗಲಿದೆ. ಡ್ರೋನ್ ತಂತ್ರಜ್ಞಾನದ ಬಳಕೆಯಿಂದ ಸಮಯ ಹಾಗೂ ಕಾರ್ಮಿಕ ವೆಚ್ಚವೂ ಗಣನೀಯವಾಗಿ ಉಳಿತಾಯವಾಗುತ್ತದೆ ಎಂದು ಹೇಳಿದರು.

ನ್ಯಾನೋ ಯೂರಿಯಾದ ಸರಿಯಾದ ಬಳಕೆ, ಸಿಂಪರಣೆಯ ಹಂತಗಳು ಹಾಗೂ ಅದರ ಪ್ರಯೋಜನಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ನಿರಂತರ ಜಾಗೃತಿ ಮೂಡಿಸಬೇಕು. ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ಉತ್ಪಾದಕತೆ ಹೆಚ್ಚುವುದರ ಜೊತೆಗೆ ಕೃಷಿಯೂ ಹೆಚ್ಚು ಲಾಭದಾಯಕವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷೆ ಶಶಿಕಲಾ ಸಾಸಲವಾಡ, ನಿರ್ದೇಶಕರಾದ ಬಸವರಾಜ ಚಕ್ರಸಾಲಿ, ನಾಗರಾಜ ಹಾವಳಕೇರಿ, ವೀರೇಶ ಸಾಸಲವಾಡ, ಸಚಿನ್ ಮೇಲ್ಮುರಿ, ತುಕಾರಾಮ ಲಮಾಣಿ, ಬಸವರಾಜ ಕರಡಿಕೊಪ್ಪ, ಅರುಣ ಕಳ್ಳಿಹಾಳ, ಕುಮಾರ ಬೆಟಗೇರಿ, ಮಲ್ಲಿಕಾರ್ಜುನ ಶೀರನಹಳ್ಳಿ, ಫಕ್ಕೀರೇಶ ಕುರುಬರ, ಅಪ್ಪಣ್ಣ ಬಲಿಗಾರ, ಈರಣ್ಣ ಶೀರನಹಳ್ಳಿ ಸೇರಿದಂತೆ ಬ್ಯಾಂಕಿನ ಪದಾಧಿಕಾರಿಗಳು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

“ಡ್ರೋನ್ ತಂತ್ರಜ್ಞಾನ ಮತ್ತು ನ್ಯಾನೋ ಯೂರಿಯಾ ಬಳಕೆಯಿಂದ ರೈತರ ವೆಚ್ಚ ಕಡಿಮೆಯಾಗಿ ಕೃಷಿ ಹೆಚ್ಚು ಲಾಭದಾಯಕವಾಗಲಿದೆ.”

— ಡಾ. ಚಂದ್ರು ಲಮಾಣಿ, ಶಾಸಕ

ಬೇರೆ ಮದುವೆಗೆ ಒಪ್ಪಿದ ಪ್ರೇಯಸಿ: ಯುವತಿಗೆ ಚಾಕು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ!

ಬೆಂಗಳೂರು: ಮೂರು ವರ್ಷಗಳ ಪ್ರೀತಿಯನ್ನು ತೊರೆದು ಬೇರೆ ಮದುವೆಗೆ ಒಪ್ಪಿಗೆ ಸೂಚಿಸಿದ್ದ ಪ್ರೇಯಸಿಗೆ ಯುವಕನೊಬ್ಬ ಚಾಕುವಿನಿಂದ ಇರಿದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ನರಸಾಪುರ ಮೂಲದ ನವಾಜ್‌ ಎಂಬ ಯುವಕ, ಪಶ್ಚಿಮ ಬಂಗಾಳ ಮೂಲದ ನಂದಿನಿ ದಾಸ್‌ ಎಂಬ ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಆದರೆ ಇವರ ಪ್ರೀತಿಗೆ ಯುವತಿಯ ಮನೆಯವರು ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ, ನಂದಿನಿ ದಾಸ್‌ ನವಾಜ್‌ನಿಂದ ದೂರವಾಗಿ ಬೇರೆ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಕೋಪಗೊಂಡ ನವಾಜ್‌ ಯಾರೂ ಇಲ್ಲದ ವೇಳೆ ಯುವತಿಯ ಮನೆಗೆ ತೆರಳಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಬಳಿಕ ಆರೋಪಿ ನವಾಜ್‌ ಕೂಡ ತನ್ನ ಕತ್ತಿಗೆ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡ ಇಬ್ಬರನ್ನೂ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ವರ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

37 ವರ್ಷಗಳ ಬಳಿಕ ಒಂದಾದ ಗೆಳೆಯರು..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲಿ ಬೆಸೆಯುವ ಸ್ನೇಹ ಜೀವನದ ಅತ್ಯಂತ ಅಮೂಲ್ಯ ಬಾಂಧವ್ಯವಾಗಿದ್ದು, ವರ್ಷಗಳು ಕಳೆದರೂ ಆ ಗೆಳೆತನದ ನೆನಪು ಎಂದಿಗೂ ಮಾಸುವುದಿಲ್ಲ ಎಂದು ಲಕ್ಷ್ಮೇಶ್ವರ ಎಪಿಎಂಸಿ ಮಾಜಿ ಅಧ್ಯಕ್ಷ ಬಸಣ್ಣ ಬೆಟಗೇರಿ ಹೇಳಿದರು.

ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಪುರಸಭೆ ಉಮಾ ವಿದ್ಯಾಲಯದ 1987-88ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿರುವ ಹಳೆಯ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಇತರ ಸಂಘಟನೆಗಳಿಗೂ ಮಾದರಿಯಾಗಿದೆ. ಹಳೆಯ ವಿದ್ಯಾರ್ಥಿಗಳ ಸಂಘಗಳು ಕೇವಲ ಸ್ನೇಹಮಿಲನಕ್ಕೆ ಸೀಮಿತವಾಗದೆ ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಘಟಿತ ಪ್ರಯತ್ನದಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ. ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವುದು ಅವರಲ್ಲಿ ಮತ್ತಷ್ಟು ಸಾಧನೆ ಮಾಡುವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಬಸಣ್ಣ ಹೊಳಲಾಪುರ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಿವಣ್ಣ ಬೆಟಗೇರಿ, ಸುರೇಶ ಜಗ್ಗಲ, ಶೇಖಣ್ಣ ಕಾಳೆ, ಗೆಳೆಯರ ಬಳಗದ ಅಧ್ಯಕ್ಷ ಬೀರಪ್ಪ ಕಾಳೆ, ಉಪಾಧ್ಯಕ್ಷ ಮಹಾಂತೇಶ ಪಡಿಗೇರಿ ಸೇರಿದಂತೆ ಬಳಗದ ಸದಸ್ಯರು, ಹಿರಿಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಹಳೆಯ ವಿದ್ಯಾರ್ಥಿಗಳ ಸಂಘಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದರೆ ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಲು ಸಾಧ್ಯ.”

— ಬಸಣ್ಣ ಬೆಟಗೇರಿ

ಭೂಕುಸಿತ ಭೀತಿ: ಸಕಲೇಶಪುರ ಆನೆಮಹಲ್‌ ನಿವಾಸಿಗಳಲ್ಲಿ ಆತಂಕ!

ಹಾಸನ: ಮಳೆಗಾಲ ಆರಂಭವಾಗುತ್ತಿದ್ದಂತೆ ಸಕಲೇಶಪುರ ತಾಲೂಕಿನಲ್ಲಿ ಭೂಕುಸಿತದ ಆತಂಕ ಮತ್ತೆ ಎದುರಾಗಿದೆ.

ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೂದುರಂತಗಳ ಹಿನ್ನೆಲೆಯಲ್ಲಿ, ಸಕಲೇಶಪುರದ ಆನೆಮಹಲ್‌ ಪ್ರದೇಶದ ಹತ್ತಾರು ಕುಟುಂಬಗಳು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಈ ಭಾಗದಲ್ಲಿ ಭೂಕುಸಿತದ ಅಪಾಯ ಎದುರಾಗುತ್ತಿದ್ದು, ಕಳೆದ ವರ್ಷ ಜಿಲ್ಲಾಡಳಿತವು ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಳೆ ಹೆಚ್ಚಾದ ಸಂದರ್ಭದಲ್ಲಿ ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಆದರೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸದೆ ಎಲ್ಲಿಗೆ ತೆರಳಬೇಕು ಎಂದು ಆನೆಮಹಲ್‌ ನಿವಾಸಿಗಳು ಪ್ರಶ್ನಿಸಿದ್ದಾರೆ.

ಮಳೆಗಾಲದಲ್ಲಿ ಜೀವಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಮುಂದಿನ 3 ದಿನ ಭಾರೀ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ ಮೂರು ದಿನಗಳ ಕಾಲ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ವಿಜ್ಞಾನಿ ಡಾ. ಲತಾ ಅವರ ಮಾಹಿತಿ ಪ್ರಕಾರ, ಕರಾವಳಿ ಜಿಲ್ಲೆಗಳು, ಹಾಸನ, ಶಿವಮೊಗ್ಗ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಈ ಭಾಗಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮೂರು ದಿನಗಳ ಬಳಿಕ ಈ ಭಾಗಗಳಲ್ಲಿ ಮಳೆಯ ಪ್ರಮಾಣ ಹಂತ ಹಂತವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.

ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇರಲಿದೆ. ಮುಂದಿನ 10 ದಿನಗಳ ಕಾಲ ಈ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆ ಬಂದರೂ ಪ್ರಮಾಣ ಕಡಿಮೆ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Rain Safety Tips: ಮಳೆಗಾಲದಲ್ಲಿ ಕರೆಂಟ್‌ ಶಾಕ್‌ನಿಂದ ಸುರಕ್ಷಿತವಾಗಿರಲು ಏನು ಮಾಡಬೇಕು?

ಮಳೆಗಾಲದಲ್ಲಿ ಸಿಡಿಲು, ಪ್ರವಾಹದಂತಹ ಪ್ರಕೃತಿ ವಿಕೋಪಗಳ ಜತೆಗೆ ಮನೆಗಳಲ್ಲಿ ವಿದ್ಯುತ್‌ ಶಾಕ್‌ ಮತ್ತು ಶಾರ್ಟ್‌ ಸರ್ಕ್ಯೂಟ್‌ ಘಟನೆಗಳೂ ಹೆಚ್ಚಾಗುತ್ತವೆ.

ಸ್ವಿಚ್‌ಬೋರ್ಡ್‌, ಫ್ರಿಡ್ಜ್‌, ವಾಷಿಂಗ್‌ ಮಷಿನ್‌ ಸೇರಿದಂತೆ ವಿದ್ಯುತ್‌ ಉಪಕರಣಗಳನ್ನು ಬಳಸುವಾಗ ಸ್ವಲ್ಪ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಮಳೆಯ ನೀರು ಗೋಡೆಗಳು ಹಾಗೂ ಸ್ವಿಚ್‌ಬೋರ್ಡ್‌ಗಳಿಗೆ ತಾಕುವುದು, ಅರ್ಥಿಂಗ್‌ ವ್ಯವಸ್ಥೆ ದೋಷಪೂರಿತವಾಗಿರುವುದು ಅಥವಾ ಒದ್ದೆ ಕೈಯಲ್ಲಿ ವಿದ್ಯುತ್‌ ಉಪಕರಣಗಳನ್ನು ಮುಟ್ಟುವುದು ವಿದ್ಯುತ್‌ ಶಾಕ್‌ಗೆ ಪ್ರಮುಖ ಕಾರಣಗಳಾಗಿವೆ. ಇಂತಹ ಸಮಸ್ಯೆಗಳು ಕಂಡುಬಂದರೆ ತಕ್ಷಣವೇ ಅರ್ಹ ಎಲೆಕ್ಟ್ರಿಷಿಯನ್‌ ಮೂಲಕ ದುರಸ್ತಿ ಮಾಡಿಸಿಕೊಳ್ಳುವುದು ಅಗತ್ಯ.

ಮನೆಯ ಅರ್ಥಿಂಗ್‌ ವ್ಯವಸ್ಥೆಯನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯ. ಅರ್ಥಿಂಗ್‌ ಸರಿಯಾಗಿದ್ದರೆ ಹೆಚ್ಚುವರಿ ವಿದ್ಯುತ್‌ ಸುರಕ್ಷಿತವಾಗಿ ನೆಲಕ್ಕೆ ಹರಿದು ಅಪಾಯ ತಪ್ಪುತ್ತದೆ. ಅರ್ಥಿಂಗ್‌ನಲ್ಲಿ ದೋಷವಿದ್ದರೆ ವಿದ್ಯುತ್‌ ಉಪಕರಣಗಳಲ್ಲಿ ವಿದ್ಯುತ್‌ ಸೋರಿಕೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ವಿದ್ಯುತ್‌ ಉಪಕರಣಗಳನ್ನು ಬಳಸುವಾಗ ಒದ್ದೆ ಕೈಗಳಿಂದ ಮುಟ್ಟಬಾರದು. ಐಎಸ್‌ಐ (ISI) ಗುಣಮಟ್ಟದ ವಿದ್ಯುತ್‌ ಉಪಕರಣಗಳನ್ನೇ ಬಳಸಬೇಕು. ವೈರ್‌ ಹಾನಿಗೊಳಗಾದ ಅಥವಾ ದೋಷವಿರುವ ಉಪಕರಣಗಳನ್ನು ಮಳೆಗಾಲದಲ್ಲಿ ಬಳಸುವುದನ್ನು ಸಂಪೂರ್ಣವಾಗಿ ತಪ್ಪಿಸುವುದು ಸುರಕ್ಷಿತ.

ಪ್ಲಗ್‌ಗಳನ್ನು ಸಾಕೆಟ್‌ಗೆ ಅಳವಡಿಸುವಾಗ ಮೊದಲು ಪ್ಲಗ್‌ ಹಾಕಿ ಬಳಿಕ ಸ್ವಿಚ್‌ ಆನ್‌ ಮಾಡಬೇಕು. ಪ್ಲಗ್‌ ತೆಗೆದುಹಾಕುವಾಗ ವೈರ್‌ ಎಳೆಯದೆ ಪ್ಲಗ್‌ನನ್ನೇ ಹಿಡಿದು ತೆಗೆಯಬೇಕು. ಮಕ್ಕಳ ಕೈಗೆ ಸಿಗುವ ಸ್ಥಳದಲ್ಲಿರುವ ಸಾಕೆಟ್‌ಗಳನ್ನು ಸುರಕ್ಷತಾ ಕವರ್‌ಗಳಿಂದ ಮುಚ್ಚಿಡುವುದು ಉತ್ತಮ.

ಗೀಸರ್‌, ಫ್ರಿಡ್ಜ್‌, ವಾಷಿಂಗ್‌ ಮಷಿನ್‌ ಸೇರಿದಂತೆ ಹೆಚ್ಚಿನ ವಿದ್ಯುತ್‌ ಬಳಕೆಯ ಉಪಕರಣಗಳಿಗೆ ಸುರಕ್ಷತಾ ಪ್ಲಗ್‌ಗಳನ್ನು ಅಳವಡಿಸಬೇಕು. ಯಾವುದೇ ವಿದ್ಯುತ್‌ ಸಾಧನವನ್ನು ಬಳಸುವಾಗ ರಬ್ಬರ್‌ ಬೂಟ್‌ ಅಥವಾ ಒಣ ಚಪ್ಪಲಿ ಧರಿಸುವುದು ಹಾಗೂ ದುರಸ್ತಿ ವೇಳೆ ರಬ್ಬರ್‌ ಗ್ಲೌಸ್‌ ಬಳಸುವುದು ಸುರಕ್ಷತೆಗೆ ನೆರವಾಗುತ್ತದೆ.

ಅಲ್ಲದೆ, ನೀರಿನ ನಲ್ಲಿಗಳು ಅಥವಾ ನೀರು ಸೋರಿಕೆಯಿರುವ ಸ್ಥಳಗಳ ಸಮೀಪ ವಿದ್ಯುತ್‌ ಸಾಧನಗಳನ್ನು ಇಡದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಮಳೆಗಾಲದಲ್ಲಿ ವಿದ್ಯುತ್‌ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಅಪಾಯಗಳನ್ನು ಬಹುತೇಕ ತಪ್ಪಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ರಂಗಭೂಮಿಯಿಂದ ಬೆಳ್ಳಿತೆರೆಗೆ ಇಶಾ ಲಂಕೇಶ್: ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಹೊಸ ಸಿನಿಮಾ ಘೋಷಣೆ

ಬೆಂಗಳೂರು: ಪಿ. ಲಂಕೇಶ್ ಕುಟುಂಬದಿಂದ ಮತ್ತೊಬ್ಬ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್, ನಿರ್ದೇಶಕ ಪ್ರೀತಂ ಗುಬ್ಬಿ ಅವರ ಹೊಸ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲಿದ್ದಾರೆ.

ನವಿಶಾ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ ಶಿವರಾಜ್ ಕನಗನಪಲ್ಲಿ ಬಂಡವಾಳ ಹೂಡುತ್ತಿದ್ದು, ಇದು ಸಂಸ್ಥೆಯ ಎರಡನೇ ಸಿನಿಮಾ. ಚಿತ್ರದ ಶೀರ್ಷಿಕೆಯನ್ನು ಇನ್ನೂ ಬಹಿರಂಗಪಡಿಸದ ಚಿತ್ರತಂಡ, ಸದ್ಯ ನಾಯಕಿಯಾಗಿ ಇಶಾ ಲಂಕೇಶ್ ಅವರನ್ನು ಅಧಿಕೃತವಾಗಿ ಪರಿಚಯಿಸಿದೆ.

ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆ ಸಾಬೀತುಪಡಿಸಿರುವ ಇಶಾ, ನಟನೆಯ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಮೊದಲ ಸಿನಿಮಾದಲ್ಲೇ ಪ್ರೀತಂ ಗುಬ್ಬಿಯಂತಹ ಯಶಸ್ವಿ ನಿರ್ದೇಶಕರ ಜೊತೆ ಕೈಜೋಡಿಸಿರುವುದು ಗಮನ ಸೆಳೆದಿದೆ.

ಪಿ. ಲಂಕೇಶ್ ಅವರ ಮೊಮ್ಮಗಳು ಎಂಬ ಹಿನ್ನೆಲೆಯೊಂದಿಗೆ ಚಿತ್ರರಂಗಕ್ಕೆ ಬರುತ್ತಿರುವ ಇಶಾ ಲಂಕೇಶ್ ಮೇಲೆ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿದ್ದು, ಚಿತ್ರದ ಉಳಿದ ಕಲಾವಿದರು ಹಾಗೂ ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ.

ವಯನಾಡು ಭೂಕುಸಿತ ದುರಂತ; ಮೃತರ ಸಂಖ್ಯೆ 6ಕ್ಕೆ ಏರಿಕೆ, ತೀವ್ರಗೊಂಡ ಶೋಧ ಕಾರ್ಯಾಚರಣೆ

ವಯನಾಡು: ಕೇರಳದ ವಯನಾಡು ಜಿಲ್ಲೆಯ ಕಳ್ಳಾಡಿ ಬಳಿ ಸಂಭವಿಸಿದ ಭೀಕರ ಭೂಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಬುಧವಾರ (ಜು.9) ರಕ್ಷಣಾ ಸಿಬ್ಬಂದಿ ಇನ್ನೂ ಮೂರು ಮೃತದೇಹಗಳನ್ನು ಹೊರತೆಗೆದಿದ್ದು, ಒಟ್ಟು ಮೃತರ ಸಂಖ್ಯೆ 6ಕ್ಕೆ ತಲುಪಿದೆ.

ಕೇರಳ ಸಚಿವರಾದ ಎ.ಪಿ. ಅನಿಲ್ ಕುಮಾರ್ ಹಾಗೂ ಟಿ. ಸಿದ್ದಿಕ್ ಮಾಹಿತಿ ನೀಡಿದ್ದು, ಶೋಧ ಕಾರ್ಯಾಚರಣೆಯ ಮೊದಲ ವಲಯದಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು, ಮತ್ತೊಂದು ಶವ ದುರಂತ ಸ್ಥಳದ ಸಮೀಪದ ನದಿಯಲ್ಲಿ ಪತ್ತೆಯಾಗಿದೆ. ಮೂರನೇ ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರಿದಿದೆ. ವಲಯ 1, ವಲಯ 2 ಹಾಗೂ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ಅಜರುದ್ದೀನ್ ಅನ್ಸಾರಿ, ಹಿಮಾಚಲ ಪ್ರದೇಶದ ರಾಹುಲ್ ಶರ್ಮಾ ಹಾಗೂ ಬಿಹಾರದ ಮೊಹಮ್ಮದ್ ಇಮ್ರಾನ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ವೈತಿರಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ.

ಇದಕ್ಕೂ ಮುನ್ನ ದುರಂತ ಕುರಿತು ಪ್ರತಿಕ್ರಿಯಿಸಿದ್ದ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, ನಾಪತ್ತೆಯಾದವರ ಪತ್ತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ ಎಂದು ತಿಳಿಸಿದ್ದರು. ದುರಂತದಲ್ಲಿ ಗಾಯಗೊಂಡಿದ್ದ 10 ಮಂದಿಯಲ್ಲಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ನಾಲ್ವರ ಸ್ಥಿತಿ ಸ್ಥಿರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರಲ್ಲಿ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.