Home Blog Page 13

ಪ್ರಾಣ ಕೊಟ್ಟರೂ ಭೂಮಿ ಬಿಡೋದಿಲ್ಲ!

ವಿಜಯಸಾಕ್ಷಿ ಸುದ್ದಿ, ಗದಗ: ನರಸಾಪುರ–ನಾಗಸಮುದ್ರ ಸರಹದ್ದಿನ ಫಲವತ್ತಾದ ಕೃಷಿಭೂಮಿಯನ್ನು ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಕರವೇ ಎಚ್. ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಎಂ.ಪಿ. ಪರ್ವತಗೌಡ್ರ ಮಾತನಾಡಿ, “ರೈತರ ವಿರೋಧದ ನಡುವೆಯೇ 250 ಎಕರೆಗಿಂತ ಹೆಚ್ಚು ಭೂಮಿಯನ್ನು ಕೆಐಎಡಿಬಿ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ” ಎಂದು ಹೇಳಿದರು.
ಈ ಹಿಂದೆ ಇದೇ ಭಾಗದಲ್ಲಿ 170 ಎಕರೆಗೂ ಅಧಿಕ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಬಳಿಕ ಚಿಕ್ಕೊಪ್ಪ–ನಾಗಸಮುದ್ರ ಮಧ್ಯದ ಸುಮಾರು 198 ಎಕರೆ ಭೂಮಿಯನ್ನು ಒಳಚರಂಡಿ ಶುದ್ಧೀಕರಣ ಘಟಕಕ್ಕಾಗಿ ವಶಪಡಿಸಿಕೊಳ್ಳಲಾಗಿದೆ. ಈಗ ಉಳಿದಿರುವ ಅಲ್ಪಭೂಮಿಯನ್ನೂ ಕಸಿದುಕೊಳ್ಳಲು ಮುಂದಾಗಿರುವುದರಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ–1966ರ ನಿಯಮಗಳನ್ನು ಉಲ್ಲಂಘಿಸಲಾಗಿದೆ. ರೈತರಿಗೆ ನೀಡಿರುವ ನೋಟಿಸ್‌ಗಳನ್ನು ಮುಂದಿನ 15 ದಿನಗಳೊಳಗೆ ಹಿಂಪಡೆಯಬೇಕು. ಜೊತೆಗೆ ರೈತರ ವಿರೋಧದ ನಡುವೆಯೇ ಫಲವತ್ತಾದ ಜಮೀನಿನಲ್ಲಿ ವಿಂಡ್ ಪ್ಯಾನ್ ಅಳವಡಿಸುವ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ರೈತ ಯಮನೂರಸಾಬ ನದಾಫ್ ಮಾತನಾಡಿ, “ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಸಿದುಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಕೈಗಾರಿಕಾ ಪ್ರದೇಶಗಳನ್ನು ಸಚಿವರ ಕ್ಷೇತ್ರದಲ್ಲೇ ಸ್ಥಾಪಿಸಲಿ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಗತಿಪರ ಹೋರಾಟಗಾರ ಶಾಂತಯ್ಯ ಮುತ್ತಿನಿಪೆಂಡಿಮಠ ಮಾತನಾಡಿ, “ಕೆಐಎಡಿಬಿ ಹಾಗೂ ವಿಂಡ್ ಪ್ಯಾನ್ ಕಂಪನಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣ ರದ್ದುಪಡಿಸಬೇಕು. ಇಲ್ಲದಿದ್ದರೆ ರೈತರು ಮತ್ತು ಗ್ರಾಮಸ್ಥರೊಂದಿಗೆ ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಸಂಚಾಲಕ ಬಸಯ್ಯ ಗುಡ್ಡಿಮಠ, ಸಂತೋಷ ಹಿರೇಮಠ, ಕುಮಾರಗೌಡ ಬರಮಗೌಡ್ರ, ಯಶವಂತ ಉಪ್ಪಾರ, ಗುರುಯ್ಯ, ಶಾಂತಯ್ಯ, ಶಿವರಾಜ್ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
“ಪ್ರಾಣ ಕೊಟ್ಟರೂ ಭೂಮಿ ಬಿಡುವುದಿಲ್ಲ. ನಮ್ಮ ಭೂಮಿಗೆ ಕೈ ಹಾಕಿದರೆ ರೈತರು ಸುಮ್ಮನಿರುವುದಿಲ್ಲ”
ಮಲ್ಲಿಕಾರ್ಜುನ ಕಿರೇಸೂರ,
ಕರವೇ ಗೌರವಾಧ್ಯಕ್ಷ

ಇಂಧನ ದರ ಏರಿಕೆಗೆ ವೆಲ್ಫೇರ್ ಪಾರ್ಟಿ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ದರಗಳನ್ನು ನಿರಂತರವಾಗಿ ಏರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ತೀವ್ರವಾಗಿ ಖಂಡಿಸಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿರುವ ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್, ಇಂಧನ ದರ ಏರಿಕೆಯಿಂದ ಸಾಮಾನ್ಯ ಜನತೆ, ರೈತರು, ಕಾರ್ಮಿಕರು, ಸಾರಿಗೆ ಕ್ಷೇತ್ರ ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಭಾರೀ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಆರೋಪಿಸಿದರು.
ಕಳೆದ ಕೆಲ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹಲವು ಬಾರಿ ಹೆಚ್ಚಿಸಲಾಗಿದ್ದು, ಅನೇಕ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹7 ಕ್ಕೂ ಹೆಚ್ಚು ಹಾಗೂ ಡೀಸೆಲ್ ದರ ₹7.50 ರವರೆಗೆ ಏರಿಕೆಯಾಗಿದೆ. ಇತ್ತೀಚಿನ ಹೆಚ್ಚಳದಲ್ಲೇ ಪೆಟ್ರೋಲ್ ₹2.61 ಹಾಗೂ ಡೀಸೆಲ್ ₹2.71 ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ಹಾಗೂ ಗೃಹ ಬಳಕೆಯ LPG ಸಿಲಿಂಡರ್ ದರಗಳ ಏರಿಕೆಯಿಂದ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಜಾಗತಿಕ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ಜನರಿಗೆ ಅದರ ಪ್ರಯೋಜನ ತಲುಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.
ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ, ಕೃಷಿ ವೆಚ್ಚ, ಆಹಾರ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ರೈತರು, ದಿನಗೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು. ಕೇಂದ್ರದ ಅಬಕಾರಿ ಸುಂಕ ಮತ್ತು ರಾಜ್ಯದ VAT ತೆರಿಗೆ ಕಡಿತಗೊಳಿಸಬೇಕು. ಗೃಹ ಹಾಗೂ ವಾಣಿಜ್ಯ LPG ಸಿಲಿಂಡರ್ ದರ ಇಳಿಸಿ ಜನರಿಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜನವಿರೋಧಿ ಆರ್ಥಿಕ ನೀತಿಗಳ ವಿರುದ್ಧ ಪ್ರಜಾಸತ್ತಾತ್ಮಕ ಶಕ್ತಿಗಳು ಹಾಗೂ ನಾಗರಿಕ ಸಮಾಜ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ವೆಲ್ಫೇರ್ ಪಾರ್ಟಿ ಕರೆ ನೀಡಿದೆ.
 “ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳ ನಿರಂತರ ಏರಿಕೆ ಸಾಮಾನ್ಯ ಜನರ ಮೇಲಿನ ಆರ್ಥಿಕ ಶೋಷಣೆಯಾಗಿದೆ”
ತಾಹೇರ್ ಹುಸೇನ್ರಾ
ಜ್ಯಾಧ್ಯಕ್ಷ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ

ಜನರ ಯೋಜನೆಗಳೇ ಜಿಲ್ಲೆಯ ಅಭಿವೃದ್ಧಿಗೆ ದಿಕ್ಕು

ವಿಜಯಸಾಕ್ಷಿ ಸುದ್ದಿ, ಗದಗ: ಜನರಿಂದಲೇ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು. ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಆಡಳಿತ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಯೋಜನಾ ಸಮಿತಿ ರಚಿಸಲಾಗಿದ್ದು, ಇದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚಾಯತ್ ರಾಜ್ ಕಾನೂನು ಅನುಷ್ಠಾನಗೊಳಿಸುವಲ್ಲಿ ಗದಗ ಜಿಲ್ಲೆ ದಿಟ್ಟ ಹೆಜ್ಜೆ ಇಟ್ಟಿದೆ. ಗ್ರಾಮ ಮಟ್ಟದಲ್ಲೇ ಸಭೆಗಳನ್ನು ನಡೆಸಿ ಜನಾಭಿಪ್ರಾಯ ಸಂಗ್ರಹಿಸುವ ಮೂಲಕ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತಿದೆ. ಜನರ ಕಲ್ಯಾಣಕ್ಕಾಗಿ ಯೋಜನಾ ಸಮಿತಿ ಮಹತ್ವದ ಪಾತ್ರ ವಹಿಸಲಿದ್ದು, ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯ ಯೋಜನೆಗಳು ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಸಚಿವರು ಹೇಳಿದರು.
ಮುಂದಿನ ಆಯವ್ಯಯ ತಯಾರಿಕೆಗೆ ಜನರ ಅಭಿಪ್ರಾಯ ಮತ್ತು ಸ್ಥಳೀಯ ಅಗತ್ಯತೆಗಳು ಆಧಾರವಾಗಬೇಕು. ಜನರ ಆಲೋಚನೆಗಳಿಗೆ ಸ್ಪೂರ್ತಿ ತುಂಬುವ ಕಾರ್ಯ ಅತ್ಯಂತ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಲಕ್ಕುಂಡಿ ಐತಿಹಾಸಿಕ ಪ್ರದೇಶ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ವಿವಿಧ ನೂತನ ಸೌಲಭ್ಯಗಳೊಂದಿಗೆ ನಿರ್ಮಾಣವಾಗುತ್ತಿರುವ ಕೆ.ಎಚ್. ಪಾಟೀಲ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಹಲವು ಅಭಿವೃದ್ಧಿ ಯೋಜನೆಗಳ ಕುರಿತು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿಯಿಂದ ತಾಲೂಕು ಪಂಚಾಯಿತಿ, ಅಲ್ಲಿಂದ ಜಿಲ್ಲಾ ಪಂಚಾಯಿತಿ ಮಟ್ಟದವರೆಗೆ ಅಭಿವೃದ್ಧಿ ಯೋಜನೆಗಳನ್ನು ಸಂಗ್ರಹಿಸಿ ಅನುಷ್ಠಾನಗೊಳಿಸಿದಾಗ ಮಾತ್ರ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಎಲ್‌.ಡಿ. ಚಂದಾವರಿ, ಕೃಷ್ಣ ಪರಾಪೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
“ಜನರ ಪಾಲ್ಗೊಳ್ಳುವಿಕೆಯಿಂದ ರೂಪುಗೊಳ್ಳುವ ಯೋಜನೆಗಳೇ ಶಾಶ್ವತ ಅಭಿವೃದ್ಧಿಗೆ ಅಡಿಪಾಯ.”
ಡಾ. ಎಚ್‌.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
“ಗದಗ ದೇಶಕ್ಕೆ ಮಾದರಿ ಆಗಬೇಕು”
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಸಂವಿಧಾನದ ಆಶಯಗಳಿಗೆ ತಕ್ಕಂತೆ ಜನರ ಭಾವನೆಗಳನ್ನು ಅರಿತು ಜಿಲ್ಲಾ ಯೋಜನಾ ಸಮಿತಿ ಕಾರ್ಯನಿರ್ವಹಿಸಬೇಕು ಎಂದರು.
2027-28ನೇ ಸಾಲಿನ ಅಭಿವೃದ್ಧಿ ಯೋಜನೆಗಳು ಜನರಿಂದಲೇ ರೂಪುಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಗದಗ ಜಿಲ್ಲೆ ದೇಶದಲ್ಲೇ ಮಾದರಿಯಾಗಬೇಕು. ಆಗ ಮಾತ್ರ ಗ್ರಾಮರಾಜ್ಯ ಮತ್ತು ರಾಮರಾಜ್ಯದ ಕನಸು ಸಾಕಾರವಾಗುತ್ತದೆ ಎಂದು ಹೇಳಿದರು.

ಕೋಮು ಗೂಂಡಾಗಳ ಕೇಸ್ ವಾಪಸ್ ನಿರ್ಧಾರ ರದ್ದುಪಡಿಸಿ

ವಿಜಯಸಾಕ್ಷಿ ಸುದ್ದಿ, ಗದಗ: ಸಂಘ ಪರಿವಾರದ ಮುಖಂಡರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹುಯಿಲಗೋಳ ನಾರಾಯಣ ವೃತ್ತ (ಟಾಂಗಾಕೂಟ)ದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಪಿಐ ಗದಗ ಜಿಲ್ಲಾ ಅಧ್ಯಕ್ಷ ಬಿಲಾಲ್ ಗೋಕಾವಿ, “ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಆಂದೋಲ ಸ್ವಾಮಿ ಸೇರಿದಂತೆ ಕೋಮು ದ್ವೇಷ ಭಾಷಣ ಹಾಗೂ ಗಲಭೆ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಸರ್ಕಾರ ಕಾನೂನು ಸುವ್ಯವಸ್ಥೆಯ ಮೂಲ ತತ್ವಗಳ ಮೇಲೆಯೇ ದಾಳಿ ನಡೆಸಿದೆ” ಎಂದು ಆರೋಪಿಸಿದರು.
ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಗೆ ಕಾರಣವಾಗಿರುವವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಸಮಾಜಘಾತುಕ ಶಕ್ತಿಗಳಿಗೆ ಸರ್ಕಾರ ವಿಶೇಷ ರಿಯಾಯಿತಿ ನೀಡುತ್ತಿರುವುದು ಪ್ರಶ್ನಾರ್ಹ ಎಂದು ಅವರು ಹೇಳಿದರು.
ಅಮಾಯಕರು, ಕನ್ನಡಪರ ಹೋರಾಟಗಾರರು ಹಾಗೂ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಿರಂತರವಾಗಿ ಕೋಮು ಪ್ರಚೋದನೆ ಮಾಡುವವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಫಾನ್ ತರಫ್ದಾರ್ ಮಾತನಾಡಿ, “ಮುಸ್ಲಿಮರು, ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳಲ್ಲಿ ಸರ್ಕಾರ ಕಾನೂನು ಅಡಚಣೆ ನೆಪ ಹೇಳುತ್ತಿದೆ. ಆದರೆ ದ್ವೇಷ ಭಾಷಣ ಮಾಡುವವರ ಪ್ರಕರಣ ಹಿಂಪಡೆಯುವಾಗ ಯಾವುದೇ ಅಡ್ಡಿ ಕಾಣಿಸುತ್ತಿಲ್ಲ” ಎಂದು ಟೀಕಿಸಿದರು.
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಹುಬ್ಬಳ್ಳಿ ಪ್ರಕರಣಗಳಲ್ಲಿ ಅನೇಕ ಅಮಾಯಕ ಯುವಕರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಕುಟುಂಬಗಳ ನೋವು ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡ ಹಿದಾಯತುಲ್ಲಾ ಕಾಗದಗಾರ, ವಿಮೆನ್ ಇಂಡಿಯಾ ಮೂವ್ಮೆಂಟ್ ಪದಾಧಿಕಾರಿಗಳು, ಗದಗ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮುಸ್ತಾಕ್ ಹೊಸಮನಿ, ಕಾರ್ಯದರ್ಶಿ ಸಮೀರ್ ಕೊಟ್ಟೂರ್, ಇಬ್ರಾಹಿಂ ಕುಂದರಪಿ, ಫಯಾಜ್ ಚಿನ್ನೂರ್, ರಶೀದ್ ಕಟ್ಟಿಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.

77 ದಿನಗಳಲ್ಲೇ ತೀರ್ಪು..! ಬಾಲಕಿ ಹತ್ಯೆ ಪ್ರಕರಣದ ಅಪರಾಧಿಗೆ ಮರಣದಂಡನೆ

ಚೆನ್ನೈ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪೋಕ್ಸೋ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.

ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಧರ್ಮ ಮುನೀಶ್ವರನ್ ಎಂದು ಗುರುತಿಸಲಾಗಿದೆ. ಕೇವಲ 77 ದಿನಗಳಲ್ಲೇ ತನಿಖೆ ಹಾಗೂ ವಿಚಾರಣೆ ಪೂರ್ಣಗೊಂಡು ಕೋರ್ಟ್ ತೀರ್ಪು ಪ್ರಕಟಿಸಿದೆ.

ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಎರಡೂ ಆರೋಪಗಳಲ್ಲಿ ಅಪರಾಧಿ ಎಂದು ತೀರ್ಮಾನಿಸಿ ಪ್ರತ್ಯೇಕವಾಗಿ ಮರಣದಂಡನೆ ಶಿಕ್ಷೆ ವಿಧಿಸಿದೆ.

ವಿಲಾತಿಕುಲಂನ 12ನೇ ತರಗತಿಯ 17 ವರ್ಷದ ವಿದ್ಯಾರ್ಥಿನಿ ಈ ವರ್ಷದ ಮಾರ್ಚ್‌ನಲ್ಲಿ ನಾಪತ್ತೆಯಾಗಿದ್ದಳು. ನಂತರ ಆಕೆಯ ಶವ ಮನೆಯ ಸಮೀಪದ ಕುರುಚಲು ಪ್ರದೇಶದಲ್ಲಿ ಪತ್ತೆಯಾಗಿತ್ತು.

ಘಟನೆ ಬಳಿಕ ಪೊಲೀಸರು ತೀವ್ರ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣದ ತ್ವರಿತ ವಿಚಾರಣೆ ನಂತರ ಇದೀಗ ಗಂಭೀರ ಶಿಕ್ಷೆ ಪ್ರಕಟವಾಗಿದೆ.

“ಬದುಕಿದ್ದವರಿಗೇ ಡೆತ್ ಸರ್ಟಿಫಿಕೆಟ್!”- ಕೋಲಾರ ನಗರಸಭೆಯಲ್ಲಿ ನಕಲಿ ದಾಖಲೆಗಳ ದಂಧೆ ಶಂಕೆ; ಲೋಕಾಯುಕ್ತ ದಿಢೀರ್ ದಾಳಿ

ಕೋಲಾರ: ಜೀವಂತ ವ್ಯಕ್ತಿಗಳಿಗೆ ಮರಣ ಪ್ರಮಾಣ ಪತ್ರ ನೀಡಿರುವುದು ಸೇರಿದಂತೆ ಜನನ–ಮರಣ ದಾಖಲೆಗಳಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೋಲಾರ ನಗರಸಭೆ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.

ನಗರಸಭೆಯ ಆರೋಗ್ಯ ವಿಭಾಗದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಒಂದೇ ನೋಂದಣಿಯಲ್ಲಿ ಇಬ್ಬರು ಮಕ್ಕಳಿಗೆ ಜನನ ಪ್ರಮಾಣ ಪತ್ರ ನೀಡಿರುವುದು ಹಾಗೂ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಜನನವಾಗದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಜನನ ಪ್ರಮಾಣ ಪತ್ರ ವಿತರಿಸಿರುವ ಗಂಭೀರ ಆರೋಪಗಳ ಕುರಿತು ತನಿಖೆ ಆರಂಭಿಸಿದ್ದಾರೆ.

ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೋಲಾರ ಲೋಕಾಯುಕ್ತ ಎಸ್ಪಿ ಆಂಥೋಣಿ ಜಾನ್ ಸೂಚನೆ ಮೇರೆಗೆ ಇನ್ಸ್‌ಪೆಕ್ಟರ್ ಆಂಜಿನಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

ಈ ಕೆಟ್ಟ ಅಭ್ಯಾಸಗಳು ನಿಮ್ಮ ಗೌರವ ಹಾಳು ಮಾಡಬಹುದು: ಆಚಾರ್ಯ ಚಾಣಕ್ಯರ ಎಚ್ಚರಿಕೆ..!

ಸಮಾಜದಲ್ಲಿ ಹಣಕ್ಕಿಂತ ಗೌರವ ದೊಡ್ಡದು ಎಂದು ಹೇಳಲಾಗುತ್ತದೆ. ವ್ಯಕ್ತಿಯ ನಡವಳಿಕೆ, ಮಾತು ಹಾಗೂ ದೈನಂದಿನ ಅಭ್ಯಾಸಗಳೇ ಅವನ ವ್ಯಕ್ತಿತ್ವವನ್ನು ರೂಪಿಸುತ್ತವೆ.

ಆದರೆ ತಿಳಿದೋ ತಿಳಿಯದೆಯೋ ಬೆಳೆಸಿಕೊಳ್ಳುವ ಕೆಲವು ಕೆಟ್ಟ ಅಭ್ಯಾಸಗಳು ವ್ಯಕ್ತಿಯ ಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ ಎಂದು ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಎಚ್ಚರಿಸಿದ್ದಾರೆ.

ಅತಿಯಾಗಿ ಮಾತನಾಡುವುದು:

ಪ್ರತಿಯೊಂದು ವಿಷಯದಲ್ಲೂ ಅನಗತ್ಯವಾಗಿ ಮಾತನಾಡುವ ವ್ಯಕ್ತಿ ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಾನೆ ಎಂದು ಚಾಣಕ್ಯರು ಹೇಳಿದ್ದಾರೆ. ಹೆಚ್ಚು ಮಾತನಾಡುವುದರಿಂದ ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ವ್ಯಕ್ತಿಯ ಇಮೇಜ್‌ಗೆ ಹಾನಿಯಾಗಬಹುದು. ಹೀಗಾಗಿ ಎಲ್ಲಿ, ಹೇಗೆ ಮತ್ತು ಎಷ್ಟು ಮಾತನಾಡಬೇಕು ಎಂಬ ಅರಿವು ಅಗತ್ಯ.

ಕೋಪ ನಿಯಂತ್ರಣದ ಕೊರತೆ:

ಅತಿಯಾದ ಕೋಪ ಮನುಷ್ಯನ ದೊಡ್ಡ ಶತ್ರು ಎಂದು ಚಾಣಕ್ಯರು ಬಣ್ಣಿಸಿದ್ದಾರೆ. ಪದೇ ಪದೇ ಕೋಪಗೊಳ್ಳುವ ವ್ಯಕ್ತಿ ತನ್ನ ಮಾತು ಮತ್ತು ವರ್ತನೆಯಿಂದ ಇತರರ ಗೌರವ ಕಳೆದುಕೊಳ್ಳುತ್ತಾನೆ. ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಂತರ ವಿಷಾದಕ್ಕೆ ಕಾರಣವಾಗುತ್ತವೆ.

ದುರಾಸೆ ಮತ್ತು ಸ್ವಾರ್ಥ:

ಅತಿಯಾದ ದುರಾಸೆ ವ್ಯಕ್ತಿಯನ್ನು ನೈತಿಕತೆಯಿಂದ ದೂರ ಮಾಡುತ್ತದೆ. ಪ್ರತಿಯೊಂದು ಕೆಲಸವನ್ನೂ ಸ್ವಾರ್ಥದ ದೃಷ್ಟಿಯಿಂದ ಮಾಡುವವರ ಮೇಲೆ ಜನರು ನಂಬಿಕೆ ಇಡುವುದಿಲ್ಲ. ಇದರ ಪರಿಣಾಮವಾಗಿ ಗೌರವವೂ ಕಡಿಮೆಯಾಗುತ್ತದೆ.

ಸಮಯದ ಮಹತ್ವ ಅರಿಯದಿರುವುದು:

ಸಮಯಕ್ಕೆ ಬೆಲೆ ಕೊಡದ ವ್ಯಕ್ತಿಯನ್ನು ಇತರರು ಬೇಜವಾಬ್ದಾರಿ ಎಂದು ಪರಿಗಣಿಸುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದರಿಂದ ವಿಶ್ವಾಸ ಮತ್ತು ಗೌರವ ಸಿಗುತ್ತದೆ. ಕೆಲಸದಲ್ಲಿ ವಿಳಂಬ ಮಾಡಿದರೆ ವ್ಯಕ್ತಿಯ ವಿಶ್ವಾಸಾರ್ಹತೆ ಕುಸಿಯುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

ದುರಹಂಕಾರ:

ಅತಿಯಾದ ಹೆಮ್ಮೆ ಮತ್ತು ದುರಹಂಕಾರ ವ್ಯಕ್ತಿಯ ಪತನಕ್ಕೆ ಕಾರಣವಾಗುತ್ತದೆ. ದುರಹಂಕಾರ ಹೊಂದಿರುವ ವ್ಯಕ್ತಿಯನ್ನು ಸಮಾಜದಲ್ಲಿ ಹೆಚ್ಚು ಕಾಲ ಗೌರವಿಸುವುದಿಲ್ಲ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ನಕಾರಾತ್ಮಕ ಚಿಂತನೆ:

ಯಾವಾಗಲೂ ದೂರು ನೀಡುವುದು ಮತ್ತು ನಕಾರಾತ್ಮಕ ಚಿಂತನೆ ಹೊಂದಿರುವುದು ಕೂಡ ವ್ಯಕ್ತಿಯ ಖ್ಯಾತಿಗೆ ಧಕ್ಕೆ ತರುತ್ತದೆ. ಸದಾ ನಕಾರಾತ್ಮಕ ಯೋಚನೆ ಹೊಂದಿರುವವರಿಂದ ಜನ ದೂರವಾಗುತ್ತಾರೆ ಎಂದು ಚಾಣಕ್ಯರು ಹೇಳಿದ್ದಾರೆ.

ನಕಲಿ ಜನನ-ಮರಣ ಪ್ರಮಾಣಪತ್ರ ಆರೋಪ: ಕೋಲಾರ ನಗರಸಭೆ ಮೇಲೆ ಲೋಕಾಯುಕ್ತ ದಾಳಿ..!

ಕೋಲಾರ: ನಕಲಿ ದಾಖಲೆ ಸೃಷ್ಟಿಸಿ ಜನನ ಹಾಗೂ ಮರಣ ಪ್ರಮಾಣಪತ್ರ ವಿತರಣೆ ಆರೋಪದ ಹಿನ್ನೆಲೆ ಕೋಲಾರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದರು.

ನಗರಸಭೆಯ ಆರೋಗ್ಯ ವಿಭಾಗದಲ್ಲಿ ಅಕ್ರಮ ನಡೆದಿದೆ ಎಂಬ ಸಾರ್ವಜನಿಕರ ನಿರಂತರ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಜೀವಂತವಾಗಿರುವ ವ್ಯಕ್ತಿಗಳಿಗೆ ಮರಣ ಪ್ರಮಾಣಪತ್ರ ನೀಡಿರುವುದು, ಒಂದೇ ನೋಂದಣಿಯಲ್ಲಿ ಇಬ್ಬರು ಮಕ್ಕಳಿಗೆ ಜನನ ಪ್ರಮಾಣಪತ್ರ ವಿತರಿಸಿರುವುದು ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ.

ಇದೇ ವೇಳೆ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನಿಸದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಜನನ ಪ್ರಮಾಣಪತ್ರ ನೀಡಲಾಗುತ್ತಿದೆ ಎಂಬ ದೂರುಗಳೂ ಲೋಕಾಯುಕ್ತ ಕಚೇರಿಗೆ ತಲುಪಿದ್ದವು.

ಈ ಹಿನ್ನೆಲೆ ಕೋಲಾರ ಲೋಕಾಯುಕ್ತ ಎಸ್‌ಪಿ ಆಂಥೋನಿ ಜಾನ್ ಅವರ ಮಾರ್ಗದರ್ಶನದಲ್ಲಿ, ಪಿಐ ಆಂಜಿನಪ್ಪ  ನೇತೃತ್ವದ ತಂಡ ನಗರಸಭೆಯ ಆರೋಗ್ಯ ವಿಭಾಗದ ದಾಖಲೆಗಳನ್ನು ಪರಿಶೀಲಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“NEET-UG 2026 ಪೇಪರ್ ಲೀಕ್ ಕೇಸ್: ಸುಪ್ರೀಂ ಕೋರ್ಟ್‌ನಿಂದ NTAಗೆ ತೀವ್ರ ತರಾಟೆ!

ನವದೆಹಲಿ: NEET-UG 2026 ಪರೀಕ್ಷೆಯಲ್ಲಿ ಪೇಪರ್ ಲೀಕ್ ಆರೋಪಗಳು ಮತ್ತೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ವಿರುದ್ಧ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ. 2024ರ ಹಿಂದಿನ ಪ್ರಕರಣದಲ್ಲಿ ನೀಡಿದ್ದ ನಿರ್ದೇಶನಗಳನ್ನೇ ಪಾಲಿಸದಿರುವುದು ದುಃಖಕರ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರ ವಿಭಾಗೀಯ ಪೀಠವು ಕೇಂದ್ರ ಸರ್ಕಾರ ಹಾಗೂ NTAಗೆ ನೋಟಿಸ್ ಜಾರಿ ಮಾಡಿದ್ದು, ಯುನೈಟೆಡ್ ಡಾಕ್ಟರ್ಸ್ ಫ್ರಂಟ್ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

ಅರ್ಜಿದಾರರು NTAಯನ್ನು ವಿಸರ್ಜನೆಗೊಳಿಸಿ, ಮುಂದಿನ ಪರೀಕ್ಷೆಗಳನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಸ್ವಾಯತ್ತ ಪರೀಕ್ಷಾ ಸಂಸ್ಥೆ ರಚನೆಗೂ ಬೇಡಿಕೆ ಇಡಲಾಗಿದೆ.

ಇದಲ್ಲದೆ 2024ರಲ್ಲಿ ನೀಡಿದ ನಿರ್ದೇಶನಗಳು ಮತ್ತು ಕಮಿಟಿ ಶಿಫಾರಸುಗಳನ್ನು ಹೇಗೆ ಅನುಷ್ಠಾನಗೊಳಿಸಲಾಗಿದೆ ಎಂಬ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ NTAಗೆ ಸೂಚಿಸಿದೆ.

ಈ ಪ್ರಕರಣವು ದೇಶದ ವೈದ್ಯಕೀಯ ಪ್ರವೇಶ ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ಭದ್ರತೆ ಕುರಿತು ಮತ್ತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

‘ಮೇಕೆದಾಟು ನಿಲ್ಲಿಸಿ!’: ಡಿಕೆಶಿ ಹೇಳಿಕೆಗೆ ತಮಿಳುನಾಡಿನಲ್ಲಿ ಎಮರ್ಜೆನ್ಸಿ ಮೀಟಿಂಗ್; ವಿಜಯ್ ಸರ್ಕಾರದಿಂದ ಲೀಗಲ್ ವಾರ್ ಘೋಷಣೆ

ಚೆನ್ನೈ: ಮೇಕೆದಾಟು ಯೋಜನೆಗೆ ಶೀಘ್ರವೇ ಗುದ್ದಲಿ ಪೂಜೆ ನಡೆಯಲಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಜೋಸೆಫ್ ವಿಜಯ್ ತುರ್ತು ಸಭೆ ನಡೆಸಿ, “ಕರ್ನಾಟಕ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಜಾರಿಗೊಳಿಸಬಾರದು” ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಚೆನ್ನೈನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಾವೇರಿ ಜಲವಿವಾದ, ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆ ಕುರಿತ ಕಾನೂನು ಅಂಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕಾನೂನು ತಜ್ಞರು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ಇತ್ತೀಚಿನ ಬೆಳವಣಿಗೆಗಳನ್ನು ಮುಖ್ಯಮಂತ್ರಿಗೆ ವಿವರಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ವಿಜಯ್, ತಮಿಳುನಾಡಿನ ನೀರಾವರಿ ಹಕ್ಕುಗಳನ್ನು ರಕ್ಷಿಸುವಲ್ಲಿ ಯಾವುದೇ ರೀತಿಯ ಸಡಿಲಿಕೆ ಬೇಡ ಎಂದು ಸೂಚಿಸಿದ್ದು, ಮೇಕೆದಾಟು ವಿರುದ್ಧದ ಕಾನೂನು ಹೋರಾಟವನ್ನು ವೇಗಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕರ್ನಾಟಕ ಸರ್ಕಾರ ಯೋಜನೆಗೆ ವೇಗ ನೀಡಲು ಮುಂದಾಗಿರುವ ಸಮಯದಲ್ಲೇ ತಮಿಳುನಾಡು ಸರ್ಕಾರ ಕಠಿಣ ನಿಲುವು ತಾಳಿರುವುದು ಕಾವೇರಿ ವಿವಾದವನ್ನು ಮತ್ತೆ ರಾಜಕೀಯ ಮತ್ತು ಕಾನೂನು ಸಮರದ ಕೇಂದ್ರಬಿಂದುವಾಗಿಸಿದೆ.

error: Content is protected !!