Home Blog Page 15

ಶಾಸಕರು ಐಪಿಎಲ್ ಉಚಿತ ಟಿಕೆಟ್ ಕೇಳುವುದು ತಪ್ಪು: ಡಿ.ಕೆ. ಸುರೇಶ್

ಬೆಂಗಳೂರು: ಉಚಿತವಾಗಿ ಟಿಕೆಟ್ ಕೇಳಿರುವುದು ತಪ್ಪು. ಪಂದ್ಯ ವೀಕ್ಷಣೆ ಮಾಡುವ ಆಸೆ ಇರುವವರು ವೈಯಕ್ತಿಕವಾಗಿ ಹಣ ಕೊಟ್ಟು ಹೋಗಿ ನೋಡಲಿ. ಇದು ಉತ್ತಮವಾದುದು” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು.

ಶಾಸಕರಿಗೆ ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ಅದು ಮಹಾಪರಾಧ. ಐಪಿಎಲ್ ದುರ್ಘಟನೆ ಸಂದರ್ಭದಲ್ಲಿ ಅವರು ಯಾವ ರೀತಿ ವಾಗ್ದಾಳಿ ಮಾಡಿದ್ದರು, ಪದ ಬಳಸಿದ್ದರು ಎಂದು ತೆಗೆದು ನೋಡಲಿ.

ಮೊದಲಿನಿಂದಲೂ ಟಿಕೆಟ್ ನೀಡುತ್ತಾ ಬಂದಿದ್ದಾರೆ. ಇದನ್ನು ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರು ಕೂಡ ಐಪಿಎಲ್ ಟಿಕೆಟ್ ಪಡೆದಿದ್ದಾರೆ. ಐಪಿಎಲ್ ರಾಷ್ಟ್ರವನ್ನು ಪ್ರತಿನಿಧಿಸುವ ಪಂದ್ಯಾವಳಿ ಅಲ್ಲ. ವಾಣಿಜ್ಯ ಉದ್ದೇಶಿತ ಪಂದ್ಯಾವಳಿ. ಇವುಗಳ ಬಗ್ಗೆ ಜನಪ್ರತಿನಿಧಿಗಳು ಹೆಚ್ಚು ಗಮನಹರಿಸುವುದು ಒಳ್ಳೆಯದಲ್ಲ” ಎಂದು ಹೇಳಿದರು.

ಬೆಂಗಳೂರಿನ ನಾಲ್ಕು ಕಡೆ ಕ್ರೀಡಾಂಗಣಗಳನ್ನು ನಿರ್ಮಿಸಬೇಕು

ಚಿನ್ನಸ್ವಾಮಿ ಕ್ರೀಡಾಂಗಣ ಬೇರೆಡೆ ಸ್ಥಳಾಂತರ ಮಾಡಬೇಕು ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಈಗಾಗಲೇ ನಾನು ಆಯ್ಕೆ ಮಾಡಿ, ಸೂಚಿಸಿದ ಜಾಗದಲ್ಲಿ ಹೊಸ ಕ್ರೀಡಾಂಗಣ ಮಾಡಲು ಸರ್ಕಾರ ಮನ್ನಣೆ ನೀಡಿದೆ. ಸೂರ್ಯ ಸಿಟಿಯಲ್ಲಿ ಕ್ರೀಡಾಂಗಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ನಾನೇ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕ್ರೀಡಾಂಗಣ ಮಾಡಬೇಕು. ಕಂಠೀರವ ಕ್ರೀಡಾಂಗಣ, ಕೆಎಸ್ ಸಿಎ, ಫುಟ್ಬಾಲ್ ಕ್ರೀಡಾಂಗಣ ಹೊರತಾಗಿ ಬೇರೆ ಯಾವುದೇ ಕ್ರೀಡಾಂಗಣವಿಲ್ಲ.

ಇಷ್ಟು ದೊಡ್ಡ ಜನಸಂಖ್ಯೆ ಇರುವ ನಗರದಲ್ಲಿ ಯುವಕರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಬೇಕಾದರೆ ನಾಲ್ಕು ದಿಕ್ಕಿನಲ್ಲಿ ಕ್ರೀಡಾಂಗಣ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದೆ. ನಾನು ಲೋಕಸಭೆ ಸದಸ್ಯನಾಗಿದ್ದಾಗ, ನನ್ನದೇ ಕ್ಷೇತ್ರದ ಸೂರ್ಯ ಸಿಟಿಯಲ್ಲಿ 100 ಎಕರೆ ಮೀಸಲಿಡಬೇಕು ಎಂದು ಹೇಳಿದ್ದೆ. ನಂತರ ಅದನ್ನು ಮೀಸಲಿಟ್ಟು, ಯೋಜನೆ ಅನುಮೋದನೆ ಪಡೆಯಲಾಗಿತ್ತು. ಈ ಬಗ್ಗೆ ನಾನು ಸಚಿವರಾದ ಜಮೀರ್ ಅಹ್ಮದ್, ಅಧ್ಯಕ್ಷರಾದ ಶಿವಲಿಂಗೇಗೌಡರನ್ನು ಭೇಟಿ ಮಾಡಿ ನಾನು ಹಾಗೂ ಶಾಸಕರಾದ ಶಿವಣ್ಣ ಅವರು ಚರ್ಚೆ ಮಾಡಿದ್ದೆವು.

ಈಗ ಈ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ನೀಡಲಾಗಿದೆ. 50-60 ಎಕರೆ ಪ್ರದೇಶದಲ್ಲಿ ಅತ್ಯುತ್ತಮ ಕ್ರೀಡಾಂಗಣ ಆಗಲಿದೆ. ಬಿಡಿಎ ಮೂಲಕ ಶಿವರಾಮ ಕಾರಂತ ಬಡಾವಣೆಯಲ್ಲೂ ಕ್ರೀಡಾಂಗಣ ಮಾಡಬೇಕು ಎಂದು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಅಲ್ಲೂ 40 ಎಕರೆ ಮೀಸಲಿಡಲಾಗಿದೆ. ಬಿಡದಿಯಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಮೀಸಲಿಡಲು ಸಂಬಂಧಪಟ್ಟವರ ಜತೆ ಚರ್ಚೆ ಮಾಡುವೆ” ಎಂದು ತಿಳಿಸಿದರು.

ದ್ವಿಭಾಷಾ ನೀತಿ ತೀರ್ಮಾನ ಉತ್ತಮ:

ದ್ವಿಭಾಷಾ ನೀತಿ ತೀರ್ಮಾನದ ಬಗ್ಗೆ ಕೇಳಿದಾಗ, “ಮಕ್ಕಳ ಮೇಲೆ ಮೂರು ಭಾಷೆಗಳ ಕಲಿಕೆ ಒತ್ತಡ ಹಾಕಿದರೆ, ಅವರ ಕಲಿಗೆ ಹಾಗೂ ಗ್ರಹಿಕೆ ಕಡಿಮೆಯಾಗುತ್ತದೆ. ಈ ದೃಷ್ಟಿಯಿಂದ ಶಿಕ್ಷಕರು ಕೈಗೊಂಡಿರುವ ತೀರ್ಮಾನ ಉತ್ತಮವಾಗಿದೆ. ಮಕ್ಕಳು ಎರಡು ಭಾಷೆ ಕಡ್ಡಾಯವಾಗಿ ಕಲಿಯಬೇಕು ಎಂಬುದು ಉತ್ತಮ ನಿರ್ಧಾರ. ಮೂರು ಭಾಷೆ ಕಲಿಯುವುದು ಅವರವರ ವೈಯಕ್ತಿಕ ಅಭಿಲಾಷೆ” ಎಂದರು.

ಬಿಜೆಪಿ ನಾಯಕರು ಈ ನಿರ್ಧಾರ ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಸರ್ಕಾರ ಯಾವುದೇ ತೀರ್ಮಾನ ಕೈಗೊಂಡರೂ ವಿರೋಧ ಮಾಡಬೇಕು ಎಂಬುದೊಂದೇ ಬಿಜೆಪಿ ನಾಯಕರ ಗುರಿ. ಅವರ ಕೇಂದ್ರ ನಾಯಕರನ್ನು ಮೆಚ್ಚಿಸಲು, ಮನವೊಲಿಸಲು ಹಿಂದಿ ಪರವಾಗಿರಬೇಕು. ಬಿಜೆಪಿ ನಾಯಕರು ತಮ್ಮ ಕೇಂದ್ರ ನಾಯಕರಿಗೆ ಕನ್ನಡವನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವಂತೆ ಮಾಡಬೇಕು ಎಂದು ಮನವರಿಕೆ ಮಾಡಬೇಕು” ಎಂದು ತಿಳಿಸಿದರು.

ತ್ರಿಭಾಷಾ ನೀತಿ ಜಾರಿಗೆ ತಂದಿದ್ದು ಕಾಂಗ್ರೆಸ್, ಈ ನಿರ್ಧಾರ ರಾಜಕೀಯವೇ ಎಂದು ಕೇಳಿದಾಗ, “ಅವತ್ತಿನ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಇಂದು ಗುಣಮಟ್ಟದ ಅಗತ್ಯವಿದ್ದು, ಎರಡು ಭಾಷೆಗಳಲ್ಲಿ ಕಲಿಕೆ ಆಗಬೇಕು. ಕನ್ನಡವನ್ನು ಪ್ರಧಾನ ಭಾಷೆಯಾಗಿಟ್ಟುಕೊಂಡು ಉಳಿದ ಮತ್ತೊಂದು ಭಾಷೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಇದು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರ” ಎಂದರು.

ವರ್ಷಪೂರ್ತಿ ಓದಿದ ಬಳಿಕ ಈಗ ಈ ನಿರ್ಧಾರ ಗೊಂದಲ ಮೂಡಿಸುವುದಿಲ್ಲವೇ ಎಂದು ಕೇಳಿದಾಗ, “ಬಹುತೇಕರು ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ಮಾಡಿದೆ” ಎಂದು ತಿಳಿಸಿದರು.

MS Dhoni: CSKಗೆ ಶಾಕ್ ಮೇಲೆ ಶಾಕ್: RCB ವಿರುದ್ಧದ ಪಂದ್ಯಕ್ಕೆ ಧೋನಿ ಅಲಭ್ಯ..!

0

ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ, ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಏಪ್ರಿಲ್ 5ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಆದರೆ ಈ ಪಂದ್ಯಕ್ಕೆ ಸಿಎಸ್‌ಕೆ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮಹೇಂದ್ರ ಸಿಂಗ್ ಧೋನಿ ಗಾಯದ ಕಾರಣದಿಂದ ಅಲಭ್ಯರಾಗಲಿದ್ದಾರೆ. ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ, ಇಂದಿನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನೂ ಮಿಸ್ ಮಾಡಲಿದ್ದಾರೆ.

ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮಾಹಿತಿ ಪ್ರಕಾರ, ಧೋನಿ ಕನಿಷ್ಠ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿದ್ದು, ಇದರಿಂದ ಅವರು ಸುಮಾರು 6 ಪಂದ್ಯಗಳಿಗೆ ಹೊರಗುಳಿಯುವ ಸಾಧ್ಯತೆ ಇದೆ. ಹೀಗಾಗಿ ಆರ್‌ಸಿಬಿ ವಿರುದ್ಧದ ಏಪ್ರಿಲ್ 5ರ ಪಂದ್ಯಕ್ಕೂ ಅವರು ಲಭ್ಯರಾಗುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.

ಧೋನಿ ಗೈರು ಇರುವ ಹಿನ್ನೆಲೆ, ಚೆನ್ನೈ ತಂಡದಲ್ಲಿ ವಿಕೆಟ್ ಕೀಪರ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ನಿರ್ವಹಿಸಲಿದ್ದಾರೆ. ಅವರು ಸಿಎಸ್‌ಕೆ ಪರ ವಿಕೆಟ್ ಕೀಪರ್-ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಧೋನಿ ಸಂಪೂರ್ಣ ಫಿಟ್ ಆಗಿದ್ದರೆ, ಏಪ್ರಿಲ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್, ಸ್ಪೆನ್ಸರ್ ಜಾನ್ಸನ್.

ಲಂಚ ಕೇಳಿದ ಕಮರ್ಷಿಯಲ್ ಟ್ಯಾಕ್ಸ್ ಆಡಿಟ್ ಡಿಸಿ ಭರತ್ ಹೆಗಡೆ ಲೋಕಾ ಬಲೆಗೆ!

ಹುಬ್ಬಳ್ಳಿ: GST ಬಾಕಿ ವಿಚಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಆಡಿಟ್ ವಿಭಾಗದ ಡೆಪ್ಯುಟಿ ಕಮಿಷನರ್ ಭರತ್ ಹೆಗಡೆ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ.

ಪೆಟ್ರೋಲ್ ಬಂಕ್ ಮಾಲೀಕರೊಬ್ಬರಿಂದ ಬಂದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ಭರತ್ ಹೆಗಡೆ ಅವರು ವಿಶ್ವನಾಥ್ ನಾಯಕ್ ಎಂಬ ವ್ಯಾಪಾರಿಗೆ ಸುಮಾರು 60 ಲಕ್ಷ ರೂಪಾಯಿ ಜಿಎಸ್ಟಿ ಬಾಕಿ ಪಾವತಿಸಬೇಕೆಂದು ನೋಟಿಸ್ ನೀಡಿದ್ದು, ಪ್ರಕರಣವನ್ನು ಸುಗಮಗೊಳಿಸಲು ಲಂಚ ಕೇಳಿದ್ದರೆಂದು ಆರೋಪಿಸಲಾಗಿದೆ.

ಕುರಿತು ವಿಶ್ವನಾಥ್ ನಾಯಕ್ ಲೋಕಾಯುಕ್ತ ಕಚೇರಿಗೆ ದೂರು ನೀಡಿದ ಬಳಿಕ, ಎಸ್ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ವಿಶೇಷ ತಂಡ ಟ್ರ್ಯಾಪ್ ಕಾರ್ಯಾಚರಣೆ ರೂಪಿಸಿತು. ಗುರುವಾರ ಬೆಳಗ್ಗೆ ಸುಮಾರು 11:30 ವೇಳೆಗೆ ಹುಬ್ಬಳ್ಳಿ ನವನಗರದಲ್ಲಿರುವ ಕಚೇರಿಯಲ್ಲಿ ದಾಳಿ ನಡೆಸಿ ಭರತ್ ಹೆಗಡೆಯನ್ನು ಬಲೆಗೆ ಬೀಳಿಸಲಾಯಿತು. ಘಟನೆ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Nitish Kumar: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ MLC ಸ್ಥಾನಕ್ಕೆ ರಾಜೀನಾಮೆ

0

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರ್ಚ್ 16ರಂದು ರಾಜ್ಯಸಭೆಗೆ ಆಯ್ಕೆಯಾದ ಬಳಿಕ, ನಿಯಮಾನುಸಾರ 14 ದಿನಗಳೊಳಗೆ ಒಂದು ಹುದ್ದೆಯನ್ನು ತ್ಯಜಿಸಬೇಕಾಗಿದ್ದು, ಅದರಂತೆ ಅವರು ಇಂದು ರಾಜೀನಾಮೆ ಸಲ್ಲಿಸಿದರು. ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ವಿಧಾನಪರಿಷತ್ ಅಧ್ಯಕ್ಷ ಅವಧೇಶ್ ನಾರಾಯಣ್ ಸಿಂಗ್ ಅವರಿಗೆ ರಾಜೀನಾಮೆ ನೀಡಿದ್ದಾರೆ.

ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಅವರು ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಬಿಹಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಹೊಸ ಮುಖ್ಯಮಂತ್ರಿ ನೇಮಕ ಹಾಗೂ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುವ ನಿರೀಕ್ಷೆ ಇದೆ. ಬಿಜೆಪಿ ಅಥವಾ ಜೆಡಿಯು ಪಕ್ಷಗಳಿಂದ ಇನ್ನೂ ಅಧಿಕೃತ ಘೋಷಣೆ ಆಗಿಲ್ಲದಿದ್ದರೂ, ನಿತೀಶ್ ಕುಮಾರ್ ಅವರ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಬರಬಹುದೆಂಬ ಸೂಚನೆಗಳು ಲಭ್ಯವಾಗಿವೆ.

ಈ ನಡುವೆ, ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಜೊತೆಗೆ, ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಉಪಮುಖ್ಯಮಂತ್ರಿಯಾಗುವ ಸಾಧ್ಯತೆಯೂ ಚರ್ಚೆಯಲ್ಲಿದೆ.

ಸಂವಿಧಾನದ ಪ್ರಕಾರ, ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡು ಸದನಗಳ ಸದಸ್ಯತ್ವವನ್ನು ಹೊಂದಲು ಅವಕಾಶವಿಲ್ಲ. ಈ ಕಾರಣದಿಂದ ನಿತೀಶ್ ಕುಮಾರ್ ಅವರು ವಿಧಾನಪರಿಷತ್ ಸದಸ್ಯತ್ವವನ್ನು ತ್ಯಜಿಸಿದ್ದಾರೆ.

ಪ್ರೇಯಸಿಯನ್ನು ಕೊಂದು ದೇಹವನ್ನು ಕತ್ತರಿಸಿ ಫ್ರಿಡ್ಜ್ʼ​​ನಲ್ಲಿಟ್ಟ ನೌಕಾಪಡೆ ಸಿಬ್ಬಂದಿ!

0

ವಿಶಾಖಪಟ್ಟಣಂ: ನೌಕಾಪಡೆಯ ಸಿಬ್ಬಂದಿಯೊಬ್ಬನು ತನ್ನ ಪ್ರೇಯಸಿಯನ್ನು ಕೊಲೆ ಮಾಡಿ, ದೇಹವನ್ನು ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿದ ಹೃದಯ ಕಲುಕುವ ಘಟನೆ ನಡೆದಿದೆ.

ಆರೋಪಿಯನ್ನು ಚಿಂತಾದ ರವೀಂದ್ರ (35) ಎಂದು ಗುರುತಿಸಲಾಗಿದ್ದು, ರವೀಂದ್ರ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಎಂದು ತಿಳಿದುಬಂದಿದೆ. ಮೃತಳನ್ನು ಮೌನಿಕಾ (29) ಎಂದು ಗುರುತಿಸಲಾಗಿದೆ.

ಪತ್ನಿ ತವರು ಮನೆಗೆ ತೆರಳಿದ್ದ ಸಂದರ್ಭದಲ್ಲಿ ರವೀಂದ್ರ ತನ್ನ ಪ್ರೇಯಸಿ ಮೌನಿಕಾಳನ್ನು ಮನೆಗೆ ಕರೆಸಿಕೊಂಡಿದ್ದಾನೆ. ಕೆಲವು ಸಮಯ ಒಟ್ಟಿಗೆ ಕಳೆದ ಬಳಿಕ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಕೋಪದ ಆವೇಶದಲ್ಲಿ ರವೀಂದ್ರ ಮೌನಿಕಾಳನ್ನು ಕೊಲೆ ಮಾಡಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಆತ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಕೆಲವು ಭಾಗಗಳನ್ನು ಚೀಲದಲ್ಲಿ ತುಂಬಿ ವಿಲೇವಾರಿ ಮಾಡಿದ್ದಾನೆ. ಉಳಿದ ಭಾಗಗಳನ್ನು ಮನೆಯಲ್ಲಿರುವ ಫ್ರಿಡ್ಜ್‌ನಲ್ಲಿ ಇರಿಸಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

2021ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ರವೀಂದ್ರ ಮತ್ತು ಮೌನಿಕಾ ಪರಿಚಯವಾಗಿ ಸ್ನೇಹ ಬೆಳೆಸಿಕೊಂಡಿದ್ದರು. ಮೌನಿಕಾ ತನ್ನಿಂದ ಹಣ ಪಡೆದು, ಸಂಬಂಧವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂಬ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಆರೋಪಿಯು ಪೊಲೀಸರಿಗೆ ಹೇಳಿದ್ದಾನೆ.

ಘಟನೆ ಬಳಿಕ ರವೀಂದ್ರ ಸ್ವಯಂವಾಗಿ ಪೊಲೀಸ್ ಠಾಣೆಗೆ ತೆರಳಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮನೆಯಲ್ಲಿ ಹಾಗೂ ಫ್ರಿಡ್ಜ್‌ನಲ್ಲಿ ದೇಹದ ತುಂಡುಗಳನ್ನು ಪತ್ತೆ ಹಚ್ಚಿದ್ದಾರೆ. ಆದರೆ ಮೌನಿಕಾಳ ತಲೆ ಕಾಣೆಯಾಗಿದ್ದು, ಅದನ್ನು ಬೇರೆಡೆ ವಿಲೇವಾರಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಾಣೆಯಾದ ದೇಹದ ಭಾಗಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಒಣಗಿದ ದಾಸವಾಳ ಹೂ ನುಂಗಿದ ಪರಿಣಾಮ ಉಸಿರುಗಟ್ಟಿ 6 ತಿಂಗಳ ಮಗು ಸಾವು!

ಮೈಸೂರು: ಒಣಗಿದ ದಾಸವಾಳ ಹೂವನ್ನು ನುಂಗಿದ ಪರಿಣಾಮ ಉಸಿರುಗಟ್ಟಿ ಆರು ತಿಂಗಳ ಮಗು ಸಾವನ್ನಪ್ಪಿದ ದಾರುಣ ಘಟನೆ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.

ಮೃತ ಮಗುವನ್ನು ಚಿನ್ಮಯಿಗೌಡ (6 ತಿಂಗಳು) ಎಂದು ಗುರುತಿಸಲಾಗಿದೆ. ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರನಾಗಿದ್ದ ಮಗು ಮನೆಯಲ್ಲೇ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮನೆಯ ಹೊಸಲಿನಲ್ಲಿ ಪೂಜೆಗೆ ಇಡಲಾಗಿದ್ದ ದಾಸವಾಳ ಹೂವಿನ ತುಂಡನ್ನು ಮಗು ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ಅಣ್ಣ ಕಿತ್ತುಕೊಳ್ಳಬಹುದು ಎಂಬ ಭಯದಿಂದ ಮಗು ಅದನ್ನು ನುಂಗಿದ್ದು, ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದೆ.

ತಕ್ಷಣವೇ ಮಗುವನ್ನು ಹನಗೋಡು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಜನರಿಗೆ ಶಾಕ್ ಮೇಲೆ ಶಾಕ್: ಪೆಟ್ರೋಲ್ ₹6, ಡೀಸೆಲ್ ₹7 ಏರಿಕೆ!

ಬೆಂಗಳೂರು: ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಬಗ್ಗೆ ವದಂತಿಗಳು ಹರಿದಾಡುತ್ತಿರುವ ನಡುವೆಯೇ, ಶೆಲ್ ಪೆಟ್ರೋಲ್ ಬಂಕ್ಗಳು ಇಂಧನ ದರ ಹೆಚ್ಚಿಸಿ ಜನತೆಗೆ ಶಾಕ್ ನೀಡಿವೆ.

ಈಗಾಗಲೇ ನಯಾರ ಬಂಕ್ಗಳಲ್ಲಿ ದರ ಏರಿಕೆಯಾದ ಬಳಿಕ, ಶೆಲ್ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಸಿದೆ. ಕಳೆದ 15 ದಿನಗಳಲ್ಲಿ ಇದು ಮೂರನೇ ಬಾರಿ ದರ ಹೆಚ್ಚಳವಾಗಿದೆ.

ಇತ್ತೀಚಿನ ಏರಿಕೆಯಲ್ಲಿ, ಪ್ರತಿ ಲೀಟರ್ ಪೆಟ್ರೋಲ್ಗೆ 6 ರೂಪಾಯಿ ಮತ್ತು ಡೀಸೆಲ್ಗೆ 7 ರೂಪಾಯಿ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಸಾಮಾನ್ಯ ಪೆಟ್ರೋಲ್ ದರವು 112 ರೂಪಾಯಿಗೆ ಏರಿಕೆಯಾಗಿದೆ. ಪ್ರೀಮಿಯಂ ಪೆಟ್ರೋಲ್ ದರವು ಲೀಟರ್ಗೆ 122.42 ರೂಪಾಯಿಗೆ ತಲುಪಿದೆ.

ಅದೇ ರೀತಿ, ಸಾಮಾನ್ಯ ಡೀಸೆಲ್ ದರವು 98 ರೂಪಾಯಿಗೆ ಏರಿಕೆಯಾದರೆ, ಪ್ರೀಮಿಯಂ ಡೀಸೆಲ್ ದರ ಲೀಟರ್ಗೆ 108.50 ರೂಪಾಯಿಗೆ ಹೆಚ್ಚಾಗಿದೆ.

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಇಂಧನ ದರ ಏರಿಕೆಯೂ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ವರದಕ್ಷಿಣೆ ಕಿರುಕುಳ ಆರೋಪ: ರಾಯಚೂರಿನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು!

0

ರಾಯಚೂರು: ನಗರದ ಐಬಿ ರಸ್ತೆಯ ಮನೆಯಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಸಂಬಂಧ ಪತಿಯ ಮನೆಯವರೇ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಮೃತಳನ್ನು ವಿದ್ಯಾ (30) ಎಂದು ಗುರುತಿಸಲಾಗಿದೆ. ಪತಿ ಮಂಜುನಾಥ ಹಾಗೂ ಆತನ ಕುಟುಂಬದವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ, ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿದ್ಯಾಳನ್ನು 2023 ಡಿಸೆಂಬರ್ನಲ್ಲಿ ಮಂಜುನಾಥನೊಂದಿಗೆ ವಿವಾಹ ಮಾಡಲಾಗಿತ್ತು. ಮದುವೆ ವೇಳೆ ವರದಕ್ಷಿಣೆಯಾಗಿ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ನೀಡಲಾಗಿತ್ತು. ಮದುವೆಯ ಬಳಿಕ ವಿದ್ಯಾ ರಾಯಚೂರಿನ ಪ್ರಾದೇಶಿಕ ವಿಜ್ಞಾನ ಸಂಸ್ಥೆಯಲ್ಲಿ ಪ್ರೋಗ್ರಾಂ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು.

ವಿವಾಹದ ಕೆಲವೇ ತಿಂಗಳ ನಂತರ ಪತಿ ಮದ್ಯಪಾನ ಮಾಡಿ ಹಲ್ಲೆ ಮಾಡುತ್ತಿದ್ದಾನೆ ಎಂದು ವಿದ್ಯಾ ತನ್ನ ಪೋಷಕರಿಗೆ ತಿಳಿಸಿದ್ದಳು. ಜೊತೆಗೆ, ತಾನು ಸಂಪಾದಿಸುವ ಹಣವನ್ನು ತವರು ಮನೆಗೆ ನೀಡಬಾರದು ಎಂದು ಒತ್ತಡ ಹಾಕುತ್ತಿದ್ದನು ಹಾಗೂ ಇನ್ನಷ್ಟು ಬಂಗಾರ ತರಲು ಒತ್ತಾಯಿಸುತ್ತಿದ್ದನು ಎಂಬ ಆರೋಪವೂ ಕೇಳಿಬಂದಿದೆ.

ಮಾರ್ಚ್ 29ರಂದು ಮಧ್ಯಾಹ್ನ ತಂದೆ ಮಗಳ ಕಚೇರಿಗೆ ಭೇಟಿ ನೀಡಿ ಮಾತನಾಡಿಸಿಕೊಂಡು ಬಂದಿದ್ದರು. ಆದರೆ ಅದೇ ದಿನ ಸಂಜೆ ಮಗಳ ಆತ್ಮಹತ್ಯೆ ಬಗ್ಗೆ ಪತಿ ಮಾಹಿತಿ ನೀಡಿದ್ದಾನೆ.

ಪೋಷಕರು ಮನೆಗೆ ತೆರಳಿ ನೋಡಿದಾಗ, ವಿದ್ಯಾಳ ಮೃತದೇಹ ಹಾಲ್ನಲ್ಲಿ ಇಡಲಾಗಿತ್ತು. ಇದರಿಂದ ಸಂಶಯ ವ್ಯಕ್ತಪಡಿಸಿದ ಅವರು, ಪತಿ ಮತ್ತು ಕುಟುಂಬದವರ ವಿರುದ್ಧ ಕೊಲೆ ಆರೋಪ ಮಾಡಿ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣವನ್ನು ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮಹಿಳೆಯರ ಒಳಉಡುಪು ಕಳ್ಳತನ: ಕೊಪ್ಪಳದಲ್ಲೊಬ್ಬ ವಿಕೃತ ಕಾಮಿ!

ಕೊಪ್ಪಳ: ಕೊಪ್ಪಳದ ಗಂಗಾವತಿಯಲ್ಲಿ ಮನೆಯ ಗೋಡೆ ಹಾರಿ ವಿಕೃತ ಕಾಮಿಯೊಬ್ಬ ಮಹಿಳೆಯರ ಒಳಉಡುಪನ್ನು ಕಳ್ಳತನ ಮಾಡಿರುವ ಘಟನೆ ಜರುಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಮನೆಯ ಗೋಡೆ ಹಾರಿ ವಿಕೃತ ಕಾಮಿ ಮಹಿಳೆಯರ ಒಳ ಉಡುಪು ಕಳ್ಳತನ ಮಾಡಿದ್ದಾನೆ. ಮಹಿಳೆಯರ ಒಳಉಡುಪು ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಂಗವಾತಿಯ ಸಿಬಿಎಸ್ ಬಡಾವಣೆಯ ಸುತ್ತಮುತ್ತ ಮಹಿಳೆಯರ ಒಳ ಉಡುಪು ಕಳ್ಳತನವಾಗಿದೆ. ಇದರಿಂದಾಗಿ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ.

ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ವಿಕೃತ ಕಾಮಿಗಾಗಿ ಶೋಧ ಕೈಗೊಂಡಿದ್ದಾರೆ.

ನಿಯಂತ್ರಣ ತಪ್ಪಿ ಕನ್ಸ್ಟ್ರಕ್ಷನ್ ಲಾರಿಗೆ ಬೈಕ್ ಡಿಕ್ಕಿ: ಸವಾರ Spot Death!

ಬೆಂಗಳೂರು: ಮುಂದೆ ಹೋಗುತ್ತಿದ್ದ ಕನ್ಸ್ಟ್ರಕ್ಷನ್ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಫ್ಲೈ ಓವರ್ ಮೇಲೆ ಜರುಗಿದೆ.

ದೇವನಹಳ್ಳಿ ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಬೈಕ್ ಸವಾರ ವೇಗವಾಗಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ಕನ್ಸ್ಟ್ರಕ್ಷನ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.

ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ಜರುಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!