Home Blog Page 15

ಬದುಕಿನ ಅನುಭವಗಳಿಗೆ ಅಕ್ಷರರೂಪ ನೀಡಿದ ಸಾಹಿತಿ ಆಯ್ಕೆ ಕಮ್ಮಾರ

ಸಾಹಿತ್ಯವೆಂದರೆ ಕೇವಲ ಪದಗಳ ಜೋಡಣೆಯಲ್ಲ, ಅದು ಬದುಕಿನ ಅನುಭವಗಳ ಅಭಿವ್ಯಕ್ತಿ, ಸಮಾಜದ ನೋವು–ನಲಿವುಗಳ ಪ್ರತಿಬಿಂಬ ಹಾಗೂ ಮಾನವೀಯ ಮೌಲ್ಯಗಳ ಪ್ರತಿಷ್ಠಾಪನೆ. ಇಂತಹ ಸಾರ್ಥಕ ಸಾಹಿತ್ಯದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಸಾಹಿತಿ ಆಯ್ಕೆ ಕಮ್ಮಾರ ಅವರ ಬದುಕು–ಬರಹ ಗಮನಾರ್ಹವಾಗಿದೆ.

ಆಯ್ಕೆ ಕಮ್ಮಾರ ಅವರ ಸಾಹಿತ್ಯಯಾನವು ಬದುಕಿನ ನೆಲಮೂಲದ ಅನುಭವಗಳಿಂದ ರೂಪುಗೊಂಡಿದೆ. ಸುತ್ತಲಿನ ಸಮಾಜ, ಜನಜೀವನ, ಸಂಬಂಧಗಳ ಸೂಕ್ಷ್ಮತೆ, ಗ್ರಾಮೀಣ ಬದುಕಿನ ಸೊಗಡು, ಸಾಮಾಜಿಕ ಬದಲಾವಣೆಗಳು ಹಾಗೂ ಮಾನವೀಯ ಮೌಲ್ಯಗಳು ಅವರ ಬರಹಗಳಿಗೆ ಜೀವಂತಿಕೆಯನ್ನು ನೀಡಿವೆ. ಸಾಮಾನ್ಯರ ಬದುಕಿನ ಅಸಾಮಾನ್ಯ ಸಂಗತಿಗಳನ್ನು ಗುರುತಿಸಿ ಅವುಗಳಿಗೆ ಅಕ್ಷರರೂಪ ನೀಡುವ ಗುಣ ಅವರ ಸಾಹಿತ್ಯದ ವಿಶೇಷತೆಯಾಗಿದೆ.

ಸಾಹಿತಿಯೊಬ್ಬನಿಗೆ ಸಮಾಜದ ಬಗ್ಗೆ ಕಾಳಜಿ ಇರಬೇಕು. ಜನರ ಬದುಕಿನ ನೋವು–ನಲಿವುಗಳನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮ ಮನಸ್ಸು ಇರಬೇಕು. ಈ ಗುಣಗಳು ಆಯ್ಕೆ ಕಮ್ಮಾರ ಅವರ ಬರಹಗಳಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಅವರ ಬರಹಗಳು ಓದುಗರನ್ನು ಕೇವಲ ಮನರಂಜಿಸುವುದಷ್ಟೇ ಅಲ್ಲದೆ ಚಿಂತನೆಗೆ ಹಚ್ಚುತ್ತವೆ ಹಾಗೂ ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಪ್ರೇರೇಪಿಸುತ್ತವೆ.

ಅವರ ಸಾಹಿತ್ಯದಲ್ಲಿ ಭಾಷೆಯ ಸರಳತೆ ಮತ್ತು ಭಾವದ ಗಾಢತೆ ವಿಶೇಷವಾಗಿ ಗಮನ ಸೆಳೆಯುತ್ತದೆ. ಅಲಂಕಾರಿಕ ಭಾಷೆಯ ಹಿಂದೆ ಓಡದೆ, ಓದುಗರ ಮನಸ್ಸಿಗೆ ನೇರವಾಗಿ ತಲುಪುವ ರೀತಿಯಲ್ಲಿ ವಿಚಾರಗಳನ್ನು ಕಟ್ಟಿಕೊಡುವುದು ಅವರ ಬರಹದ ವೈಶಿಷ್ಟ್ಯವಾಗಿದೆ. ಸ್ಥಳೀಯ ಬದುಕಿನ ಭಾಷೆ, ಜನಪದೀಯ ಸಂವೇದನೆ ಹಾಗೂ ನಿತ್ಯಜೀವನದ ಅನುಭವಗಳು ಅವರ ಸಾಹಿತ್ಯಕ್ಕೆ ಸಹಜವಾದ ಸೊಗಡನ್ನು ನೀಡಿವೆ.

ನಾಲ್ಕು ದಶಕಗಳ ನಿಸ್ವಾರ್ಥ ಶಿಕ್ಷಣ ಸೇವೆ

ಆಯ್ಕೆ ಕಮ್ಮಾರ ಅವರ ಬದುಕು ಅವರ ಬರಹದಷ್ಟೇ ಪ್ರೇರಣಾದಾಯಕವಾಗಿದೆ. ಸಾಹಿತ್ಯದ ಮೇಲಿನ ಆಸಕ್ತಿ, ನಿರಂತರ ಓದು, ಸಮಾಜದ ಬಗ್ಗೆ ಇರುವ ಕಾಳಜಿ ಹಾಗೂ ಬರವಣಿಗೆಯ ಮೇಲಿನ ಶ್ರದ್ಧೆ ಅವರನ್ನು ಒಬ್ಬ ಸೃಜನಶೀಲ ಸಾಹಿತಿಯಾಗಿ ರೂಪಿಸಿವೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಪ್ರತಿಭೆಯ ಜೊತೆಗೆ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಅಧ್ಯಯನ ಅಗತ್ಯ. ಈ ಗುಣಗಳೇ ಅವರ ಸಾಹಿತ್ಯಿಕ ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.

ಸಾಹಿತ್ಯದ ಜೊತೆಗೆ ಅವರು ಶಿಕ್ಷಣ ಕ್ಷೇತ್ರದಲ್ಲಿಯೂ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ಗೃಹಪಾಠ ಶಿಕ್ಷಕರಾಗಿ ೪೦ ವರ್ಷಗಳ ಕಾಲ ಬಡ ಮಕ್ಕಳಿಗೆ ಉಚಿತವಾಗಿ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಷಯಗಳನ್ನು ಬೋಧಿಸಿರುವುದು ಅವರ ಬದುಕಿನ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ.

ಸೌಹಾರ್ದದ ಸಂದೇಶ ಸಾರಿದ ಬಹುಮುಖ ಪ್ರತಿಭೆ

ಭಾವೈಕ್ಯತೆಯನ್ನೇ ಪ್ರೀತಿಸುವ ಆಯ್ಕೆ ಕಮ್ಮಾರ ಅವರು ಮಣಕವಾಡದ ಮಹಿಮಾ ಪುರುಷ ಶ್ರೀ ಗುರುಮೃತ್ಯುಂಜಯ ಅವರ ಹೆಸರಿನಲ್ಲಿ ‘ಸೌಹಾರ್ದ ಮಹಾಮನೆ ವೇದಿಕೆ’ಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ನಿರಂತರವಾಗಿ ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಅನೇಕ ನಾಟಕಗಳನ್ನು ರಚಿಸಿರುವ ಅವರು ನಟ ಹಾಗೂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಣಕವಾಡದ ಶ್ರೀ ಗುರುಮೃತ್ಯುಂಜಯ ಮಹಾಸ್ವಾಮಿಗಳನ್ನು ತಮ್ಮ ಆರಾಧ್ಯ ದೈವವಾಗಿಸಿಕೊಂಡಿರುವ ಅವರು, ಅವರ ಕುರಿತು ‘ಮಣಕವಾಡದ ಮಾಣಿಕ್ಯ’, ‘ಮಣಕವಾಡದ ಸಿರಿ’ ಹಾಗೂ ‘ಮೃತ್ಯುಂಜಯ ಮಹಾತ್ಮೆ’ ಎಂಬ ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ, ಮಣಕವಾಡದ ಮೃತ್ಯುಂಜಯ ಅಜ್ಜನ ಕುರಿತು ಭಾಮಿನಿ ಷಟ್ಪದಿ ಪುರಾಣ ರಚಿಸುವ ಸಿದ್ಧತೆಯಲ್ಲಿದ್ದಾರೆ.

ಪುಟ್ಟರಾಜ ಗುರುವರ್ಯರ ಕುರಿತು ‘ಭೂಲೋಕದ ಭಗವಂತ’, ‘ಮರೆಯಾದ ಧ್ರುವತಾರೆ’ ಹಾಗೂ ‘ಕೃತಪುರ ರತ್ನ’ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕೇನಕೊಪ್ಪದ ಚನ್ನವೀರಶರಣರ ಕುರಿತು ‘ಪರಂಜ್ಯೋತಿ’, ಸಿದ್ಧಗಂಗಾಶ್ರೀಗಳ ಕುರಿತು ‘ಮೇರುಪರ್ವತ’ ಸೇರಿದಂತೆ ೨೭ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಹೆಗ್ಗಳಿಕೆ ಅವರದ್ದಾಗಿದೆ.

ಪ್ರಶಸ್ತಿಗಳ ಬೆನ್ನತ್ತಿದ ಸಾಹಿತ್ಯ ಸಾಧನೆ

ಸಾಹಿತ್ಯ, ಶಿಕ್ಷಣ, ರಂಗಭೂಮಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಸಂತಕವಿ, ಸಾಮರಸ ಕವಿ, ಸದ್ಭಾವನಾ ಪ್ರಶಸ್ತಿ, ಬಂಗಾರಚುಕ್ಕಿ ಪ್ರಶಸ್ತಿ ಹಾಗೂ ಭಾವೈಕ್ಯ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.

ಸಾಹಿತ್ಯವು ಸಮಾಜಕ್ಕೆ ಕನ್ನಡಿ ಮಾತ್ರವಲ್ಲ, ದಾರಿದೀಪವೂ ಹೌದು. ಸಮಾಜದಲ್ಲಿನ ಅಸಮಾನತೆ, ಅಜ್ಞಾನ, ಮೌಢ್ಯ ಹಾಗೂ ಅನ್ಯಾಯಗಳ ಕುರಿತು ಚಿಂತಿಸುವಂತೆ ಮಾಡುವ ಶಕ್ತಿ ಸಾಹಿತ್ಯಕ್ಕಿದೆ. ಮಾನವೀಯತೆ, ಸಹಬಾಳ್ವೆ, ಪ್ರೀತಿ, ಸಹಾನುಭೂತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳನ್ನು ಬೆಳೆಸುವಲ್ಲಿ ಸಾಹಿತಿಯ ಪಾತ್ರ ಮಹತ್ವದ್ದಾಗಿದೆ. ಆಯ್ಕೆ ಕಮ್ಮಾರ ಅವರ ಬರಹಗಳು ಈ ಸಾಮಾಜಿಕ ಜವಾಬ್ದಾರಿಯ ನೆಲೆಯಲ್ಲಿಯೇ ಅರ್ಥಪೂರ್ಣವಾಗುತ್ತವೆ.

ವೇಗದ ತಂತ್ರಜ್ಞಾನ ಯುಗದಲ್ಲಿಯೂ ಹೊಸ ತಲೆಮಾರಿನ ಓದುಗರನ್ನು ಸಾಹಿತ್ಯದತ್ತ ಸೆಳೆಯುವುದು ಇಂದಿನ ಸಾಹಿತಿಗಳ ಮುಂದಿರುವ ದೊಡ್ಡ ಸವಾಲಾಗಿದೆ. ಓದುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು, ಬದುಕಿನ ವಾಸ್ತವತೆಗಳನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಬರಹಗಳು ಈ ಕಾರ್ಯಕ್ಕೆ ನೆರವಾಗುತ್ತವೆ. ಈ ದೃಷ್ಟಿಯಿಂದ ಆಯ್ಕೆ ಕಮ್ಮಾರ ಅವರ ಸಾಹಿತ್ಯಿಕ ಪ್ರಯತ್ನಗಳು ವಿಶೇಷ ಮಹತ್ವ ಪಡೆದುಕೊಳ್ಳುತ್ತವೆ.

ಒಟ್ಟಿನಲ್ಲಿ, ಆಯ್ಕೆ ಕಮ್ಮಾರ ಅವರ ಬದುಕು ಮತ್ತು ಬರಹಗಳು ಸಾಹಿತ್ಯವೆಂಬುದು ಬದುಕಿನಿಂದ ಹುಟ್ಟಿ ಮತ್ತೆ ಬದುಕನ್ನೇ ಶ್ರೀಮಂತಗೊಳಿಸುವ ಪ್ರಕ್ರಿಯೆ ಎಂಬುದನ್ನು ಸಾರುತ್ತವೆ. ಅವರ ಸಾಹಿತ್ಯಸೇವೆ ಇನ್ನಷ್ಟು ವಿಸ್ತಾರವಾಗಲಿ, ಹೊಸ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ದೊರೆಯಲಿ ಹಾಗೂ ಅವರ ಬರಹಗಳು ಮುಂದಿನ ಪೀಳಿಗೆಗೂ ಮೌಲ್ಯಯುತ ಸಂದೇಶ ನೀಡಲಿ ಎಂಬುದು ಸಾಹಿತ್ಯಾಸಕ್ತರ ಆಶಯವಾಗಿದೆ.

ಸೆಪ್ಟೆಂಬರ್ ೫ರಂದು ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಆಯ್ಕೆ ಕಮ್ಮಾರ ಅವರ ಕುರಿತು ಆಯೋಜಿಸಿರುವ ‘ಬದುಕು–ಬರಹ’ ಕಾರ್ಯಕ್ರಮ ಅತ್ಯಂತ ಸ್ತುತ್ಯಾರ್ಹವಾಗಿದೆ. ಸಾಹಿತ್ಯದ ಪಯಣದಲ್ಲಿ ಅವರು ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಲಿ, ಕನ್ನಡ ನಾಡು–ನುಡಿಯ ಸೇವೆಯಲ್ಲಿ ಅವರ ಲೇಖನಿ ನಿರಂತರವಾಗಿ ಸಾಗಲಿ ಎಂದು ಹಾರೈಸೋಣ.

ಪ್ರೊ. ಶ್ರೀಶೈಲ ಬಡಿಗೇರ

ಪುಟಾಣಿ ಮಕ್ಕಳೊಂದಿಗೆ ಬೆರೆತು ನಲಿದ ಮುಪ್ಪಿನ ಬಸವಲಿಂಗ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪುಟಾಣಿ ಮಕ್ಕಳ ನಡುವೆ ಕುಳಿತು ಅವರ ಮಾತುಗಳನ್ನು ಆಲಿಸಿ, ಮುಗ್ಧ ನಗುವಿಗೆ ಮನಸಾರೆ ನಕ್ಕು, ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದ ಹಾಲಕೆರೆಯ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಆತ್ಮೀಯ ಕ್ಷಣಗಳು ಸಮೀಪದ ನಿಡಗುಂದಿಕೊಪ್ಪದ ಶ್ರೀಮಠದ ಆವರಣದಲ್ಲಿ ವಿಶೇಷ ಗಮನ ಸೆಳೆದವು.

ನಿಡಗುಂದಿಕೊಪ್ಪದ ಶ್ರೀಮಠಕ್ಕೆ ಆಗಮಿಸಿದ್ದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಪೀಠಾಧಿಪತಿ ಅಭಿನವ ಚನ್ನಬಸವ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆಯುತ್ತಿರುವ ಶ್ರೀ ಚನ್ನಚೇತನ ಗುರುಕುಲ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕೆಲಕಾಲ ಆತ್ಮೀಯವಾಗಿ ಬೆರೆತರು.

ಶಾಲೆಗೆ ಶ್ರೀಗಳು ಆಗಮಿಸುತ್ತಿದ್ದಂತೆ ಪುಟಾಣಿ ಮಕ್ಕಳು ಕುತೂಹಲದಿಂದ ಅವರ ಸುತ್ತ ಸೇರಿದರು. ಮಕ್ಕಳೊಂದಿಗೆ ಸಂವಾದ ನಡೆಸಿದ ಶ್ರೀಗಳು, ಅವರ ಮುಗ್ಧ ಮಾತುಗಳನ್ನು ಆಲಿಸಿ, ಪ್ರತಿಭೆ ಹಾಗೂ ಚುರುಕುತನ ಕಂಡು ಸಂತಸಪಟ್ಟರು.

“ವಿದ್ಯೆ ಕಲಿಯುವುದಷ್ಟೇ ಶಿಕ್ಷಣವಲ್ಲ, ಸಂಸ್ಕಾರ, ಶಿಸ್ತು ಹಾಗೂ ಉತ್ತಮ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ಶಿಕ್ಷಣಕ್ಕೆ ನಿಜವಾದ ಅರ್ಥ ಬರುತ್ತದೆ” ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಶ್ರೀಗಳು, ಉತ್ತಮವಾಗಿ ಓದಿ ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಿ ಬೆಳೆಯುವಂತೆ ಆಶೀರ್ವದಿಸಿದರು.

ಮಕ್ಕಳೊಂದಿಗೆ ಶ್ರೀಗಳು ಬೆರೆತ ಕ್ಷಣಗಳು ಶಾಲಾ ಆವರಣದಲ್ಲಿ ವಿಶೇಷ ಸಂತಸ ಮೂಡಿಸಿದವು. ತಮ್ಮ ನಡುವೆ ಕುಳಿತು ಪ್ರೀತಿಯಿಂದ ಮಾತನಾಡಿದ ಶ್ರೀಗಳ ಸರಳತೆ ಕಂಡು ಪುಟಾಣಿ ಮಕ್ಕಳು ಹರ್ಷಗೊಂಡರು. ಶ್ರೀಗಳ ಸಾನ್ನಿಧ್ಯದಿಂದ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹವೂ ಮೂಡಿತು.

ನಿಡಗುಂದಿಕೊಪ್ಪದ ಶ್ರೀಮಠದ ಪೀಠಾಧಿಪತಿ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಶ್ರೀ ಚನ್ನಚೇತನ ಗುರುಕುಲ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಹಾಗೂ ವಿವಿಧ ಆಯಾಮಗಳನ್ನು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳಿಗೆ ಪರಿಚಯಿಸಿದರು.

ಶಾಲೆಯ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭವನ್ನು ಸ್ಮರಿಸಿದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಶಾಲೆಯು ಉತ್ತರೋತ್ತರ ಅಭಿವೃದ್ಧಿ ಕಾಣಲಿ. ಇಲ್ಲಿ ಕಲಿಯುವ ಮಕ್ಕಳ ಭವಿಷ್ಯ ಉಜ್ವಲವಾಗಲಿ. ಶ್ರೀ ಚನ್ನಬಸವೇಶ್ವರ ಹಾಗೂ ಶ್ರೀ ಅನ್ನದಾನೇಶ್ವರರ ಆಶೀರ್ವಾದ ಸದಾಕಾಲ ಶಾಲೆಯ ಮೇಲಿರಲಿ ಎಂದು ಹಾರೈಸಿದರು.

ಮಕ್ಕಳ ನಡುವೆ ಕೆಲಕಾಲ ಕಳೆದ ಶ್ರೀಗಳ ಆತ್ಮೀಯ ಭೇಟಿ ಗುರು-ಶಿಷ್ಯರ ಸಂಬಂಧಕ್ಕೆ ಮಮತೆಯ ಸ್ಪರ್ಶ ನೀಡಿದಂತಿತ್ತು. ಶ್ರೀಗಳ ಆಶೀರ್ವಾದ ಹಾಗೂ ಪುಟಾಣಿ ಮಕ್ಕಳ ಮುಗ್ಧ ನಗು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮನದಲ್ಲಿ ಬಹುಕಾಲ ಉಳಿಯುವ ಸ್ಮರಣೀಯ ಕ್ಷಣಗಳಾದವು.

ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

200 ಮೀಟರ್ ಓಟದಲ್ಲಿ ಭಾಗ್ಯಶ್ರೀ ಪ್ರಥಮ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಹೊಸಹಳ್ಳಿ ಗ್ರಾಮದ ಬೂದಿಶ್ವರ ವಿದ್ಯಾಪೀಠದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ ಈರಪ್ಪ ಕುಲಕರ್ಣಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.

ಭಾಗ್ಯಶ್ರೀ ಅವರ ಸಾಧನೆಗೆ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಮಡಿವಾಳರ, ಸದಸ್ಯರು, ಮುಖ್ಯಾಧ್ಯಾಪಕಿ ಎಸ್.ಎಂ. ಆದಿ, ಶಿಕ್ಷಕರಾದ ಡಿ.ಎಸ್. ತಳವಾರ, ಎನ್.ಆರ್. ಕಮತ, ಕೆ.ವೈ. ಕಣಕಿಕೊಪ್ಪ, ರೇಷ್ಮಾ ಉಳಾಗಡ್ಡಿ ಹಾಗೂ ಗ್ರಾಮದ ಹಿರಿಯರು ಅಭಿನಂದಿಸಿದ್ದಾರೆ.

ತ್ಯಾಜ್ಯ ವಿಲೇವಾರಿಗೆ ಕೆಜಿಗೆ 5ರೂ. ಶುಲ್ಕ! ಕೋಳಿ ಅಂಗಡಿ ವ್ಯಾಪಾರಿಗಳಿಂದ ವಿರೋಧ

0

ಬೆಂಗಳೂರು: ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಕೋಳಿ ತ್ಯಾಜ್ಯ ವಿಲೇವಾರಿಗೆ ಪ್ರತಿ ಕೆಜಿಗೆ ₹5 ಶುಲ್ಕ ವಿಧಿಸುವ ನಿರ್ಧಾರಕ್ಕೆ ಕೋಳಿ ಮಾಂಸ ಮತ್ತು ಮೊಟ್ಟೆ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದ್ದು, GBA-BSWML ವಿರುದ್ಧ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕೋಳಿ ತ್ಯಾಜ್ಯವನ್ನು ವ್ಯಾಪಾರಸ್ಥರಿಂದ ಹಣ ಪಡೆದು ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿತ್ತು. ಇದೀಗ ಏಕಾಏಕಿ ತ್ಯಾಜ್ಯ ವಿಲೇವಾರಿಗೆ ವ್ಯಾಪಾರಿಗಳೇ ಪ್ರತಿ ಕೆಜಿಗೆ ₹5 ಶುಲ್ಕ ಪಾವತಿಸಬೇಕು ಎಂದು ಸೂಚಿಸಿರುವುದು ಅವೈಜ್ಞಾನಿಕ ಹಾಗೂ ಅನ್ಯಾಯದ ಕ್ರಮ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.

ಹೆಚ್ಚುವರಿ ಶುಲ್ಕ ವಿಧಿಸಿದರೆ ಈಗಾಗಲೇ ವಿವಿಧ ವೆಚ್ಚಗಳ ನಡುವೆ ವ್ಯಾಪಾರ ನಡೆಸುತ್ತಿರುವವರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ. ಈ ಶುಲ್ಕದ ಹೊರೆಯನ್ನು ಅಂತಿಮವಾಗಿ ಗ್ರಾಹಕರ ಮೇಲೆಯೇ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

‘ಯಾವುದೇ ಕಾರಣಕ್ಕೂ ನಾವು ಶುಲ್ಕ ಪಾವತಿಸುವುದಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದು, ತಕ್ಷಣ ಶುಲ್ಕ ವಿಧಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಕೋಳಿ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಕಲ್ಪಿಸಬೇಕು. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವ್ಯಾಪಾರಸ್ಥರ ಸಮಸ್ಯೆ ಬಗೆಹರಿಸಬೇಕು ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.

ಕೂಲಿಕಾರರಿಗೆ ಕೆಲಸದ ಕೊರತೆ: ಕಂದಕ ಬದು ಕಾಮಗಾರಿ ಮುಂದುವರಿಸಲು ಸಿಎಂಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಅಳಲು ಆಲಿಸಿ ಬರ ಪರಿಸ್ಥಿತಿಯ ಅವಲೋಕನಕ್ಕಾಗಿ ಮಂಗಳವಾರ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾಲೂಕಿನ ಕುರ್ತಕೋಟಿ ಗ್ರಾಮದ ವಿಬಿಜಿ ರಾಮ್‌ಜಿ ಕೂಲಿಕಾರರೊಂದಿಗೆ ಸಂವಾದ ನಡೆಸಿದರು.

ಈ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಮುದಾಯ ಕಂದಕ ಬದು ಕಾಮಗಾರಿಗೆ ಅವಕಾಶವಿತ್ತು. ಈಗ ಜಾರಿಯಾಗಿರುವ ‘ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ)’ ಯೋಜನೆಯಲ್ಲಿಯೂ ಈ ಕಾಮಗಾರಿಯನ್ನು ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದು ಕೂಲಿಕಾರರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಕೂಲಿ ಕೆಲಸದ ಕೊರತೆಯಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಅವರು ವಿವರಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪಣ್ಣ ಇನಾಮತಿ ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಿಸಿಕೊಳ್ಳುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚುವುದರ ಜತೆಗೆ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುವುದನ್ನು ತಡೆಯಬಹುದು. ಮಳೆಯ ಹೆಚ್ಚುವರಿ ನೀರನ್ನು ಸಂರಕ್ಷಿಸುವ ಮೂಲಕ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದು ಕಂದಕ ಬದು ಕಾಮಗಾರಿಯ ಉಪಯುಕ್ತತೆಯನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದ್ದು, ಇನ್ನಷ್ಟು ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕರಾದ ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ಎನ್.ಎಚ್. ಕೋನರೆಡ್ಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಚ್.ಎಸ್. ಜಿನಗಿ, ಸಹಾಯಕ ನಿರ್ದೇಶಕ ಕುಮಾರ ಪೂಜಾರ, ಗ್ರಾಪಂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಕೌಸ್ತುಭ’ ಚಿತ್ರದ ಫಸ್ಟ್ ಲುಕ್ ರಿಲೀಸ್

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ನಟ ಪ್ರಮೋದ್ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಬಹುನಿರೀಕ್ಷಿತ ‘ಕೌಸ್ತುಭ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಹೊಸ ಲುಕ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಈಗಾಗಲೇ ಹಲವು ಪೋಷಕ, ಖಳ ಹಾಗೂ ಪ್ರಧಾನ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರಮೋದ್ ಶೆಟ್ಟಿ ಅವರು ‘ಕೌಸ್ತುಭ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟರ ಸಾಲಿಗೆ ಸೇರುವ ಭರವಸೆ ಇದೆ ಎಂದು ಚಿತ್ರದ ನಿರ್ದೇಶಕ ಸಿದ್ದು ವಜ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

‘ಕೌಸ್ತುಭ’ ಒಂದು ಪತ್ತೇದಾರಿ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಕಥೆಯ ಹಲವು ಪ್ರಮುಖ ಅಂಶಗಳನ್ನು ಈಗಲೇ ಬಹಿರಂಗಪಡಿಸುವುದು ಸಾಧ್ಯವಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಆದರೆ, ಚಿತ್ರದಲ್ಲಿನ ಪೊಲೀಸ್ ಪಾತ್ರ ಹಾಗೂ ಕ್ಲೈಮ್ಯಾಕ್ಸ್ ವಿಭಿನ್ನವಾಗಿರಲಿದೆ ಎಂದು ನಾಯಕ ನಟ ಪ್ರಮೋದ್ ಶೆಟ್ಟಿ ಹೇಳಿದ್ದಾರೆ.

ಇದುವರೆಗೆ ತಮ್ಮ ಹಲವು ಪಾತ್ರಗಳಲ್ಲಿ ಹಾಸ್ಯದ ಛಾಯೆಯನ್ನೂ ಪ್ರದರ್ಶಿಸಿದ್ದ ಪ್ರಮೋದ್ ಶೆಟ್ಟಿ, ಈ ಚಿತ್ರದಲ್ಲಿ ‘ಚಾಣಕ್ಯ’ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಸಾಹಸ ದೃಶ್ಯಗಳಿದ್ದು, ಇದು ಪ್ರಮೋದ್ ಶೆಟ್ಟಿ ನಾಯಕ ನಟರಾಗಿ ಅಭಿನಯಿಸುತ್ತಿರುವ ಮೊದಲ ಕಮರ್ಷಿಯಲ್ ಚಿತ್ರವಾಗಿದೆ.

ನಿರ್ದೇಶಕ ಸಿದ್ದು ವಜ್ರಪ್ಪ ಅವರಿಗೆ ಇದು ಎರಡನೇ ಚಿತ್ರವಾಗಿದೆ. ಕಳೆದ ವರ್ಷ ಪ್ರಯೋಗಾತ್ಮಕ ಚಿತ್ರವೊಂದನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಅವರು, ಇದೀಗ ‘ಕೌಸ್ತುಭ’ ಚಿತ್ರದ ಮೂಲಕ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಚಿತ್ರದ ಈಗಾಗಲೇ ಸುಮಾರು ಶೇ.60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಹಾಡನ್ನು ನಿರ್ದೇಶಕ ಸಿದ್ದು ವಜ್ರಪ್ಪ ಅವರೇ ರಚಿಸಿದ್ದಾರೆ. ಮತ್ತೊಂದು ಗೀತೆಯನ್ನು ಪ್ರಶಾಂತ್ ಬಾಗೂರು ಬರೆದಿದ್ದಾರೆ. ನಾಯಕನ ಪ್ರವೇಶಕ್ಕಾಗಿ ವಿಶೇಷ ಹಾಡೊಂದನ್ನು ಸಿದ್ಧಪಡಿಸಲಾಗುತ್ತಿದ್ದು, ಒಂದು ಗೀತೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಲಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ಡಾಸ್ ಮೋಡ್ ಸಂಗೀತ ನಿರ್ದೇಶನವಿದೆ.

ಚಿತ್ರದಲ್ಲಿ ಹಿರಿಯ ನಟ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ, ರವಿಶಂಕರ್ ಗೌಡ, ಕಿರುತೆರೆ ನಟಿ ವಿದ್ಯಾ, ಕಡ್ಡಿಪುಡಿ ಚಂದ್ರು ಸೇರಿದಂತೆ ದೊಡ್ಡ ತಾರಾಗಣವೇ ಇದೆ. ‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರಕ್ಕೆ ಅರವಿಂದ್ ರಾಜ್ ಸಂಕಲನ, ದಿಲೀಪ್ ಎಂ. ರಾಜ್ ಸಾಹಸ ನಿರ್ದೇಶನವಿದೆ. ಎವಿಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಾಜೇಶ್ ಧನಪಾಲ್ ಬಂಡವಾಳ ಹೂಡಿದ್ದಾರೆ. ಚಿತ್ರದ ಪ್ರಚಾರ ಕಾರ್ಯವನ್ನು ಪಿಆರ್‌ಒ ರಮಿತ್ ಏಲಕ್ಕಿ, ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ ಹಂಡಿಗಿ ನಿರ್ವಹಿಸುತ್ತಿದ್ದಾರೆ.

ನಗರದ ಮಧ್ಯಭಾಗದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ಬೇಡ: ವಿಶ್ವನಾಥ ಖಾನಾಪೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದ ಮಧ್ಯಭಾಗದಲ್ಲಿರುವ 35 ಎಕರೆ ವಿಶಾಲವಾದ ವಕಾರಸಾಲು ಜಾಗದಲ್ಲಿ ಪಿಪಿಪಿ ಮಾದರಿಯ ಬೃಹತ್ ವಾಣಿಜ್ಯ ಸಂಕೀರ್ಣ ಹಾಗೂ ಅಂತರರಾಷ್ಟ್ರೀಯ ಮಟ್ಟದ ಬಿಸಿನೆಸ್ ಸೆಂಟರ್ ನಿರ್ಮಿಸುವ ಬದಲು, ಈ ಯೋಜನೆಯನ್ನು ನಗರದ ಹೊರವಲಯದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹಿಸಿದ್ದಾರೆ.

ಈಗಾಗಲೇ ಸಂಬಂಧಪಟ್ಟ ಪ್ರಾಧಿಕಾರ ರಚನೆಯಾಗಿದ್ದು, ಬೆಂಗಳೂರು ಹಾಗೂ ಗದಗದಲ್ಲಿ ನಡೆದ ಸಭೆಗಳಲ್ಲಿ ಯೋಜನೆ ಕುರಿತು ಚರ್ಚೆ ಹಾಗೂ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಬೃಹತ್ ವಾಣಿಜ್ಯ ಸಂಕೀರ್ಣವನ್ನು ನಗರದ ಮಧ್ಯಭಾಗದಲ್ಲಿ ನಿರ್ಮಿಸುವುದು ಸೂಕ್ತವಲ್ಲ. ನಗರದ ಹೊರವಲಯದಲ್ಲಿ ವಿಶಾಲ ಪ್ರದೇಶವನ್ನು ಗುರುತಿಸಿ ಅಲ್ಲಿ ಪಿಪಿಪಿ ಮಾದರಿಯಲ್ಲಿ ಆಧುನಿಕ ಬಿಸಿನೆಸ್ ಸೆಂಟರ್ ನಿರ್ಮಿಸಬೇಕು ಎಂದು ಅವರು ಜಿಲ್ಲಾಡಳಿತ ಹಾಗೂ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

35 ಎಕರೆ ಜಾಗದ ಬಗ್ಗೆ ಪುನರ್ ಪರಿಶೀಲನೆಗೆ ಆಗ್ರಹ

ನಗರದ ಮಧ್ಯಭಾಗದಲ್ಲಿರುವ 35 ಎಕರೆ ವಿಶಾಲ ಜಾಗವನ್ನು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಹಾಗೂ ನಗರಸಭೆ ಪುನರ್ ಪರಿಶೀಲನೆ ಮಾಡಬೇಕು. ಈ ಜಾಗವನ್ನು ನಗರಸಭೆಗೆ ಹಸ್ತಾಂತರಿಸಿ, ಈ ಹಿಂದೆ ಇಲ್ಲಿಯೇ ವ್ಯಾಪಾರ ನಡೆಸುತ್ತಿದ್ದ ಹಳೆಯ ವ್ಯಾಪಾರಸ್ಥರಿಗೆ ಆದ್ಯತೆ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ನಗರದ ಈ ಭಾಗವು ಹಲವು ದಶಕಗಳಿಂದ ಪ್ರಮುಖ ವ್ಯಾಪಾರ-ವಹಿವಾಟಿನ ಕೇಂದ್ರವಾಗಿತ್ತು. ಇಲ್ಲಿ ಸಿಮೆಂಟ್, ಕಬ್ಬಿಣ, ಗೊಬ್ಬರ, ಬೇಳೆಕಾಳು, ಹಾರ್ಡ್‌ವೇರ್, ಸಗಟು ಕಿರಾಣಿ, ಕಾಳುಕಡಿ, ವಾಹನಗಳ ಬಿಡಿಭಾಗಗಳ ಅಂಗಡಿಗಳು, ಗ್ಯಾರೇಜ್‌ಗಳು, ಶಾಮಿಯಾನ ಹಾಗೂ ಕೃಷಿಗೆ ಅಗತ್ಯವಿರುವ ವಿವಿಧ ವಾಣಿಜ್ಯ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದವು.

ಆದರೆ ದಿಢೀರನೆ ಕಟ್ಟಡಗಳನ್ನು ತೆರವುಗೊಳಿಸಿದ್ದರಿಂದ ಹಲವು ಹಳೆಯ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ವ್ಯಾಪಾರ-ವಹಿವಾಟನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಹಿಂದೆ ಅಲ್ಲಿಯೇ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರ ಪ್ರತ್ಯೇಕ ಸಭೆ ಕರೆದು ಅವರ ಅಭಿಪ್ರಾಯ ಪಡೆದು, ಅವರಿಗೆ ಮರಳಿ ವ್ಯಾಪಾರ ನಡೆಸಲು ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.

ಹಳೆಯ ವ್ಯಾಪಾರಸ್ಥರನ್ನು ಕಡೆಗಣಿಸಬೇಡಿ

ನಗರದ ಹಳೆಯ ವ್ಯಾಪಾರಸ್ಥರ ಸಭೆ ನಡೆಸದೆ ಅಥವಾ ಅವರ ಸಮಗ್ರ ಅಭಿಪ್ರಾಯ ಪಡೆಯದೆ ಏಕಪಕ್ಷೀಯ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ವಿಶೇಷವಾಗಿ ಈ ಹಿಂದೆ ಆ ಪ್ರದೇಶದಲ್ಲಿ ವ್ಯಾಪಾರ ಮಳಿಗೆಗಳನ್ನು ಹೊಂದಿರದವರನ್ನು ಸಭೆಯಲ್ಲಿ ಸೇರಿಸಿಕೊಂಡು ಒಮ್ಮತದ ನಿರ್ಣಯ ಕೈಗೊಂಡಿರುವುದು ಸರಿಯಲ್ಲ ಎಂದು ಜಿಲ್ಲಾ ವಿಕಾಸ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.

ಮೊದಲು ಅಲ್ಲಿ ವ್ಯಾಪಾರ ನಡೆಸುತ್ತಿದ್ದ ಎಲ್ಲ ವ್ಯಾಪಾರಸ್ಥರ ಸಭೆ ಆಯೋಜಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಮರಳಿ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ನೀಡುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಹೊರವಲಯದಲ್ಲಿ ಬಿಸಿನೆಸ್ ಸೆಂಟರ್‌ಗೆ ಹೆಚ್ಚಿನ ಅವಕಾಶ

ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ವಿಶೇಷ ಅನುದಾನ ತಂದು, ನಗರದ ಹೊರವಲಯದಲ್ಲಿ ವಿಶಾಲ ಪ್ರದೇಶದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ಹಾಗೂ ಬಿಸಿನೆಸ್ ಸೆಂಟರ್ ನಿರ್ಮಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಗಲಿದೆ ಎಂದು ವಿಶ್ವನಾಥ ಖಾನಾಪೂರ ಅಭಿಪ್ರಾಯಪಟ್ಟಿದ್ದಾರೆ.

ನಗರದ ಹೊರವಲಯದಲ್ಲಿ ಯೋಜನೆ ನಿರ್ಮಾಣವಾದರೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಸುಗಮ ಸಂಚಾರ, ದೊಡ್ಡ ಪ್ರಮಾಣದ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ದೊರೆಯಲಿದೆ. ಅಲ್ಲದೆ ಬಾಗಲಕೋಟೆ, ಕೊಪ್ಪಳ ಹಾಗೂ ಧಾರವಾಡ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ಜನರೂ ಸುಲಭವಾಗಿ ಆಗಮಿಸಿ ವ್ಯಾಪಾರ-ವಹಿವಾಟು ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಇದರಿಂದ ಗದಗ ಜಿಲ್ಲೆಯ ವ್ಯಾಪಾರ ವ್ಯವಸ್ಥೆಗೆ ಹೊಸ ಗುರುತು ದೊರೆಯುವುದರ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ನಗರದ ಮಧ್ಯಭಾಗದಲ್ಲಿ ಜನಸಾಮಾನ್ಯರ ವ್ಯಾಪಾರಕ್ಕೆ ಆದ್ಯತೆ

ಗದಗ ನಗರವು ಸೀಮಿತ ವಿಸ್ತೀರ್ಣ ಹೊಂದಿದ್ದು, ನಗರದ ಮಧ್ಯಭಾಗದಲ್ಲಿ ಕಡಿಮೆ ಅಂತರದಲ್ಲಿಯೇ ಪ್ರಮುಖ ವಾಣಿಜ್ಯ ಪ್ರದೇಶಗಳು ನೆಲೆಗೊಂಡಿವೆ. ಹೀಗಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ದೈನಂದಿನ ಅಗತ್ಯ ವಸ್ತುಗಳು ಸುಲಭವಾಗಿ ದೊರೆಯುವಂತಹ ಮಾರುಕಟ್ಟೆ ಹಾಗೂ ವ್ಯಾಪಾರ ಮಳಿಗೆಗಳನ್ನು ನಗರದೊಳಗೆ ಉಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ನಗರದ ಜನಸಾಮಾನ್ಯರಿಗೆ ಅನುಕೂಲವಾಗುವ ಸಣ್ಣ ಮತ್ತು ಮಧ್ಯಮ ವ್ಯಾಪಾರ ಮಳಿಗೆಗಳಿಗೆ ನಗರದ ಮಧ್ಯಭಾಗದಲ್ಲಿಯೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಬೃಹತ್ ಪ್ರಮಾಣದ ಪಿಪಿಪಿ ಯೋಜನೆ ಹಾಗೂ ಅಂತರರಾಷ್ಟ್ರೀಯ ಮಟ್ಟದ ಬಿಸಿನೆಸ್ ಸೆಂಟರ್‌ಗಳನ್ನು ನಗರದ ಹೊರವಲಯದಲ್ಲಿ ನಿರ್ಮಿಸುವ ಮೂಲಕ ನಗರ ಸಂಚಾರದ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಈ ಕುರಿತು ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ನೇತೃತ್ವದಲ್ಲಿ ಪ್ರಭು ಜಂಗಮನಿ, ಬಸವರಾಜ ದೇಗುಲ, ಮಲ್ಲಿಕಾರ್ಜುನ ಕುರ್ತಕೋಟಿ, ಪರಶುರಾಮ ನರಗುಂದ, ರಾಜು ನರಗುಂದ, ಆನಂದ ಕಬಾಡಿ, ರಾಜು ಮೇರವಾಡೆ ಸೇರಿದಂತೆ ಹಲವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಬೃಹತ್ ಪಿಪಿಪಿ ಮಾದರಿಯ ವಾಣಿಜ್ಯ ಸಂಕೀರ್ಣ ಹಾಗೂ ಬಿಸಿನೆಸ್ ಸೆಂಟರ್ ನಗರದ ಹೊರವಲಯದಲ್ಲಿ ನಿರ್ಮಿಸಿದರೆ ಸುಗಮ ಸಂಚಾರ, ವಿಶಾಲ ಪಾರ್ಕಿಂಗ್ ಮತ್ತು ದೊಡ್ಡ ಪ್ರಮಾಣದ ವ್ಯಾಪಾರಕ್ಕೆ ಅನುಕೂಲವಾಗಲಿದೆ. ನಗರದ ಮಧ್ಯಭಾಗದಲ್ಲಿರುವ ಜಾಗದಲ್ಲಿ ಈ ಹಿಂದೆ ವ್ಯಾಪಾರ ನಡೆಸುತ್ತಿದ್ದ ಹಳೆಯ ವ್ಯಾಪಾರಸ್ಥರಿಗೆ ಆದ್ಯತೆ ನೀಡಿ, ಅವರ ಬದುಕು ಮತ್ತು ವ್ಯಾಪಾರ-ವಹಿವಾಟಿಗೆ ಸೂಕ್ತ ರಕ್ಷಣೆ ನೀಡಬೇಕು.

— ವಿಶ್ವನಾಥ ಖಾನಾಪೂರ, ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

ಪ್ರಕಲ್ಪ ಶಾಲೆಯಲ್ಲಿ ಗುಂಪು ಮಟ್ಟದ ಕ್ರೀಡಾಕೂಟದ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆನಂದ ಆಶ್ರಮ ರಸ್ತೆಯ ಈಶ್ವರ ಬಡಾವಣೆಯಲ್ಲಿರುವ ಪ್ರಕಲ್ಪ ಹೈಯರ್ ಪ್ರೈಮರಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಗುಂಪು ಮಟ್ಟದ ಕ್ರೀಡಾಕೂಟವನ್ನು ಉತ್ಸಾಹ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು.

ಶಾಲೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಎಸ್.ವಿ. ಹುಬ್ಬಳ್ಳಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಅತ್ಯಗತ್ಯವಾಗಿದ್ದು, ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಾಬ್ದಾರಿ, ತಂಡದ ಮನೋಭಾವ ಹಾಗೂ ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಬೆಳೆಸುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಪಿ.ಎಸ್. ಹುಬ್ಬಳ್ಳಿ, ಮಾರ್ಗದರ್ಶಕಿ ಶ್ರೀಮತಿ ಎಸ್.ಎಸ್. ಹುಬ್ಬಳ್ಳಿ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮುಕ್ತಾ ಭಜಂತ್ರಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪ್ರವೀಣಾ ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಲೆಮನ್ ಅಂಡ್ ಸ್ಪೂನ್ ರೇಸ್, ಗೋಣಿಚೀಲ ಜಿಗಿತ, ೧೦೦ ಮೀಟರ್ ಮತ್ತು ೨೦೦ ಮೀಟರ್ ಓಟ, ಕಬಡ್ಡಿ, ಖೋ-ಖೋ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಶಾಲಾ ಮೈದಾನದಲ್ಲಿ ಕ್ರೀಡೋತ್ಸವದ ಸಂಭ್ರಮ ಮನೆ ಮಾಡಿತ್ತು.

ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರಿತು.

ನರೇಗಲ್ಲದಲ್ಲಿ ಕಲುಷಿತ ನೀರು ಪೂರೈಕೆ: ನೀರಿನಲ್ಲಿ ಕೀಟಗಳು, ಜನರಲ್ಲಿ ಆತಂಕ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣ ಪಂಚಾಯಿತಿಯಿಂದ ನರೇಗಲ್ಲ ಪಟ್ಟಣ ಸೇರಿದಂತೆ ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ ಹಾಗೂ ಮಲ್ಲಾಪೂರ ಗ್ರಾಮಗಳಿಗೆ ಪ್ರತಿನಿತ್ಯ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರು ಕಲುಷಿತಗೊಂಡಿದ್ದು, ಕೆಂಪು ಬಣ್ಣದ ಕೊಳಕು ನೀರಿನಲ್ಲಿ ಸಣ್ಣ ಸಣ್ಣ ಕೀಟಗಳು ಕಾಣಸಿಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಕಳೆದ ಒಂದು ವಾರದಿಂದ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು ಮಾಡಲಾಗುತ್ತಿದ್ದು, ಸಾರ್ವಜನಿಕರು ಪಟ್ಟಣ ಪಂಚಾಯಿತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಳಕು ನೀರಿನಿಂದ ಮನೆಗಳಲ್ಲಿರುವ ನೀರು ಶುದ್ಧೀಕರಣ ಫಿಲ್ಟರ್‌ಗಳೇ ಹಾಳಾಗುತ್ತಿವೆ. ಫಿಲ್ಟರ್‌ಗಳನ್ನೇ ಹಾಳು ಮಾಡುವಷ್ಟು ಕಲುಷಿತ ನೀರು ಸರಬರಾಜಾಗುತ್ತಿದ್ದರೆ, ಯಾವುದೇ ಫಿಲ್ಟರ್ ವ್ಯವಸ್ಥೆ ಇಲ್ಲದೆ ಇದೇ ನೀರನ್ನು ಕುಡಿಯುವ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

ನೀರಿನಲ್ಲಿ ಬಾಲಹುಳು ಸೇರಿದಂತೆ ಸಣ್ಣ ಸಣ್ಣ ಕೀಟಗಳು ಕಾಣಸಿಗುತ್ತಿದ್ದು, ಜೀವಭಯದಲ್ಲೇ ನೀರು ಕುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಗುಣಮಟ್ಟವನ್ನು ತಕ್ಷಣವೇ ಪರಿಶೀಲಿಸಿ, ಕಲುಷಿತ ನೀರು ಸರಬರಾಜಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜಿಗಳೂರು ಸಮೀಪ ನಿರ್ಮಿಸಿರುವ ನೀರು ಶುದ್ಧೀಕರಣ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನವೂ ಸಾರ್ವಜನಿಕರಲ್ಲಿ ಮೂಡಿದೆ. ಕಲುಷಿತ ನೀರು ಸರಬರಾಜಾಗುತ್ತಿರುವುದಕ್ಕೆ ಹೊಣೆ ಯಾರು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಟ್ಟಣದ ಜನರಿಗೆ ಕನಿಷ್ಠ ಮೂಲಸೌಕರ್ಯವನ್ನೇ ಸಮರ್ಪಕವಾಗಿ ಒದಗಿಸಲು ಸಾಧ್ಯವಾಗದಿದ್ದರೆ, ಇನ್ನುಳಿದ ಅಭಿವೃದ್ಧಿ ಕಾರ್ಯಗಳನ್ನು ಯಾವ ರೀತಿ ಕೈಗೊಳ್ಳುತ್ತಾರೆ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

ಪಟ್ಟಣದಲ್ಲಿ 24×7 ಕುಡಿಯುವ ನೀರು ಸರಬರಾಜು ಯೋಜನೆ ನೆನೆಗುದಿಗೆ ಬಿದ್ದು ವರ್ಷಗಳೇ ಕಳೆದಿವೆ. ನೀರು ಸರಬರಾಜು ಯೋಜನೆಗಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ರಸ್ತೆಗಳನ್ನು ಅಗೆದು ಹಾಕಲಾಗಿದ್ದು, ರಸ್ತೆಗಳು ಗುಂಡಿಮಯವಾಗಿವೆ ಎಂಬ ಆರೋಪವೂ ಕೇಳಿಬಂದಿದೆ.

ಕುಡಿಯುವ ನೀರಿನ ಸಮಸ್ಯೆ ಹಾಗೂ ರಸ್ತೆ ಗುಂಡಿಗಳ ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ, ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನರೇಗಲ್ಲ ಪಟ್ಟಣ ಪಂಚಾಯಿತಿಯ ನೀರು ಸರಬರಾಜು ಸಿಬ್ಬಂದಿ ಶಂಕ್ರಪ್ಪ ದೊಡ್ಡಣ್ಣವರ, ಜಿಗಳೂರು ಕೆರೆಯಲ್ಲಿ ನೀರಿನ ಅಭಾವ ಎದುರಾಗಿದ್ದು, ಕೆರೆಯ ತಳಮಟ್ಟದ ನೀರನ್ನು ಸರಬರಾಜು ಮಾಡುತ್ತಿರುವುದರಿಂದ ನೀರು ಕಲುಷಿತಗೊಂಡಿದೆ. ಕೆರೆಗೆ ಸಮರ್ಪಕವಾಗಿ ನೀರು ಬಂದ ತಕ್ಷಣ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಪಟ್ಟಣ ಪಂಚಾಯಿತಿಯಿಂದ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ನೀರಿನಲ್ಲಿ ಬಾಲಹುಳು ಸೇರಿದಂತೆ ಸಣ್ಣ ಸಣ್ಣ ಕೀಟಗಳು ಕಾಣಸಿಗುತ್ತಿವೆ. ಜೀವಭಯದಲ್ಲೇ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಗುಣಮಟ್ಟವನ್ನು ತಕ್ಷಣ ಪರಿಶೀಲಿಸಿ, ಕಲುಷಿತ ನೀರು ಸರಬರಾಜಾಗದಂತೆ ಕ್ರಮ ಕೈಗೊಳ್ಳಬೇಕು.

— ಅನೀತಾ ವೈದ್ಯಮಠ, ನಿವಾಸಿ, ನರೇಗಲ್ಲ

ತಂಬಾಕು ನಿಯಂತ್ರಣಕ್ಕೆ ಗದಗ ಜಿಲ್ಲೆಯಲ್ಲಿ ಮತ್ತಷ್ಟು ಕಠಿಣ ಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಾದ್ಯಂತ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-೨೦೦೩ರ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ತಂಬಾಕು ನಿಯಂತ್ರಣ ಹಾಗೂ ಜಾಗೃತಿ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಸಭೆಗೆ ಸ್ವಾಗತಿಸಿದರು. ಜಿಲ್ಲಾ ಕಾರ್ಯಕ್ರಮಾಧಿಕಾರಿ ಹಾಗೂ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಥೋಡ್ ಅವರು ಜಿಲ್ಲೆಯಲ್ಲಿನ ತಂಬಾಕು ನಿಯಂತ್ರಣ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಎಪ್ರಿಲ್ ೨೦೨೬ರಿಂದ ಇಲ್ಲಿಯವರೆಗೆ ಜಿಲ್ಲೆಯ ೬೧ ಶಾಲಾ-ಕಾಲೇಜುಗಳಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಕೋಟ್ಪಾ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ೨೫ ದಾಳಿ ನಡೆಸಿ, ೧೮೦ ಪ್ರಕರಣ ದಾಖಲಿಸಿ, ರೂ. ೮೪,೯೫೦ ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ೧,೪೪೦ ತಂಬಾಕು ವ್ಯಸನಿಗಳಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ. ಸಮುದಾಯ ಮಟ್ಟದಲ್ಲಿಯೂ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸಭೆಯಲ್ಲಿ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ತಂಬಾಕು ಮಾರಾಟ ಹಾಗೂ ಬಳಕೆಯನ್ನು ಕಟ್ಟುನಿಟ್ಟಾಗಿ ತಡೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು, ಕಾನೂನುಬಾಹಿರ ತಂಬಾಕು ಜಾಹೀರಾತುಗಳಿಗೆ ಕಡಿವಾಣ ಹಾಕುವುದು ಹಾಗೂ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತವಾಗಿಸಲು ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.

ತಂಬಾಕು ಮಾರಾಟಗಾರರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯಬೇಕು. ಅಂಗಡಿಕಾರರು ಹಾಗೂ ಸಾರ್ವಜನಿಕ ಸ್ಥಳಗಳ ಮಾಲೀಕರು ತಂಬಾಕು ನಿಷೇಧ ಮತ್ತು ೨೧ ವರ್ಷದೊಳಗಿನವರಿಗೆ ತಂಬಾಕು ಮಾರಾಟ ನಿಷೇಧ ಕುರಿತ ನಾಮಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಯಿತು. ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ ಹಾಗೂ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳುವಂತೆಯೂ ಸೂಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ಹೋಟೆಲ್ ಮಾಲೀಕರ ಸಂಘದ ಪ್ರತಿನಿಧಿಗಳು ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿ ಉಪಸ್ಥಿತರಿದ್ದರು.

ತಂಬಾಕು ವ್ಯಸನದಿಂದ ವ್ಯಕ್ತಿಯ ಆರೋಗ್ಯದ ಜತೆಗೆ ಕುಟುಂಬ ಮತ್ತು ಸಮಾಜದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಎಲ್ಲ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸಿ ಗದಗ ಜಿಲ್ಲೆಯನ್ನು ತಂಬಾಕು ಮುಕ್ತ ಹಾಗೂ ಆರೋಗ್ಯಯುತ ಜಿಲ್ಲೆಯನ್ನಾಗಿ ರೂಪಿಸಬೇಕು.

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ